Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಎಚ್ಡಿಕೆ ಶೋಕ, ಭಾವಜೀವಿಗಳ ಕಣ್ಣೀರ ಲೋಕ

Wednesday, 18.07.2018, 3:03 AM       No Comments

| ರಾಘವೇಂದ್ರ ಗಣಪತಿ

ವಿಧಿಯಾಟವೇನು ಬಲ್ಲವರು ಯಾರು

ಮುಂದೇನು ಎಂದು ಹೇಳುವರು ಯಾರು

ಬರುವುದು ಬರಲೆಂದು ನಗುನಗುತ ಬಾಳದೆ

ನಿರಾಸೆ ವಿಷಾದ ಇದೇಕೆ ಇದೇಕೆ

ಕಣ್ಣೀರ ಧಾರೆ ಇದೇಕೆ ಇದೇಕೆ

ಯಾರೂ ಅಳಬಾರದು. ಎಲ್ಲೆಲ್ಲೂ ಸಂತೋಷ ತುಂಬಿರಬೇಕು ಎನ್ನುವುದು ಆದರ್ಶಮಯ ಕಲ್ಪನೆ. ಆದರೆ, ಲೋಕವೆಂದ ಮೇಲೆ ಶೋಕ ತಪ್ಪಿದ್ದಲ್ಲ. ಬೇಕೋ ಬೇಡವೋ, ಸರಿಯೋ ತಪ್ಪೋ… ಅಳು ಸಹ ಜೀವನದ ಒಂದು ಭಾಗ.

ಅಳುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತದೆ ವೈದ್ಯವಿಜ್ಞಾನ. ಕಣ್ಣೀರು ಹೊರಹಾಕುವುದರಿಂದ ಭಾರವಾದ ಮನಸ್ಸು, ಹೃದಯ ಹಗುರವಾಗುತ್ತದೆ.. ಒತ್ತಡ ಶಮನವಾಗುತ್ತದೆ.. ಇತ್ಯಾದಿ ಇತ್ಯಾದಿ. ಆದರೂ, ಸಾರ್ವಜನಿಕವಾಗಿ ಅಳುವಿಕೆ ಕುರಿತ ಟೀಕೆ, ಜಿಜ್ಞಾಸೆಗಳು ಇಂದು ನಿನ್ನೆಯದಲ್ಲ.

ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಕಣ್ಣೀರ ದೃಶ್ಯ, ಚರ್ಚೆ. ರಷ್ಯಾದಲ್ಲಿ ಸತತ ತಿಂಗಳ ಕಾಲ ಕಣ್ಣೀರ ಪ್ರವಾಹ ಹರಿಯಿತು. ಫಿಫಾ ವಿಶ್ವಕಪ್ ಫುಟ್​ಬಾಲ್​ನಲ್ಲಿ ಫ್ರಾನ್ಸ್ ದಿಗ್ವಿಜಯದ ಕೇಕೆ ಹಾಕಿದರೆ, ಕಣದಲ್ಲಿದ್ದ ಉಳಿದ 31 ತಂಡಗಳ ಆಟಗಾರರು ಮೈದಾನದಲ್ಲಿ ಕಣ್ಣೀರು ಹಾಕಿದರು. ಆಯಾ ತಂಡಗಳ ಲಕ್ಷಾಂತರ ಅಭಿಮಾನಿಗಳೂ ಕಣ್ಣೀರಿಟ್ಟರು. ಮಹಾ ಫೈನಲ್ ಪಂದ್ಯದ ಬಳಿಕ ವಿಜೇತ ಫ್ರಾನ್ಸ್​ನ

ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಮೈದಾನದಲ್ಲಿ ಅಳುತ್ತಿದ್ದ ಕ್ರೋವೇಷಿಯಾ ತಂಡದ ನಾಯಕ ಲೂಕಾ ಮ್ಯಾಡ್ರಿಡ್​ರ ಪುಟ್ಟ ಮಕ್ಕಳನ್ನು ಸಂತೈಸಿದ ದೃಶ್ಯ ಜಗತ್ತಿನ ಗಮನ ಸೆಳೆಯಿತು. ಒಟ್ಟಾರೆ ಫುಟ್​ಬಾಲ್ ಟೂರ್ನಿಯ ಆರಂಭಿಕ ಪಂದ್ಯದಿಂದ ಫೈನಲ್​ನ ಮುಕ್ತಾಯದವರೆಗೆ ಆ ದೇಶದಲ್ಲಿ ಸುರಿದ ಅಭಿಮಾನದ, ಆನಂದದ, ವಿಷಾದದ, ದುಃಖದ ಕಣ್ಣೀರು ಒಂದು ನದಿಯಷ್ಟು.

ಕಳೆದ ಶುಕ್ರವಾರ ಫಿನ್ಲೆಂಡ್​ನಲ್ಲಿ ನಡೆದ 20 ವಯೋಮಿತಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 400 ಮೀ. ಓಟದ ಸ್ವರ್ಣ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ನವತಾರೆ ಹಿಮಾ ದಾಸ್, ರಾಷ್ಟ್ರಗೀತೆಯ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಅದೊಂದು ರಾಷ್ಟ್ರಪ್ರೇಮದ ಉತ್ತುಂಗ ಕ್ಷಣವಾಗಿತ್ತು. ದೇಶದ ಅಥ್ಲೆಟಿಕ್ಸ್ ಭಾಗ್ಯೋದಯದ ರೂವಾರಿ ಎಂದೇ ಬಿಂಬಿತವಾಗುತ್ತಿರುವ ಹಿಮಾ ಜೊತೆ ಕ್ರೀಡಾಭಿಮಾನಿಗಳೆಲ್ಲರ ಕಣ್ಣು ಆ ಕ್ಷಣದಲ್ಲಿ ತೇವವಾಗಿತ್ತು. 400 ಮೀ. ಫೈನಲ್​ನಲ್ಲಿ ಹಿಮಾ ಓಟದ, ಗೆಲುವಿನ ನಂತರ ತ್ರಿವರ್ಣ ಭಾವುಟಕ್ಕಾಗಿ ಆಕೆಯ ಹುಡುಕಾಟದ, ಪದಕ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಗೀತೆ ಕೇಳುತ್ತ ಭಾವುಕರಾಗಿ ಆನಂದಭಾಷ್ಪ ಸುರಿಸಿದ ಅಮೃತಕ್ಷಣಗಳ ವೀಡಿಯೋ ನೋಡುವಾಗ ಈಗಲೂ ನಮಗೆ ಅರಿವಿಲ್ಲದೆ ಕಣ್ಣಂಚಿನಲ್ಲಿ ರೋಮಾಂಚನದ ಕಣ್ಣೀರು ಜಿನುಗಿರುತ್ತದೆ.

ಹಿಮಾ ಆನಂದಾಶ್ರುವಿನ ಧನ್ಯತೆಯ ಕ್ಷಣಗಳನ್ನು ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಸುದ್ದಿಯಾಗಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಕಣ್ಣೀರಿನ ಪ್ರಹಸನ. ಕಳೆದ ಎರಡು ತಿಂಗಳಿಂದ ಮೈತ್ರಿ ಸರ್ಕಾರದ ಬಂಡಿಯನ್ನು ಸಮತೋಲನದಲ್ಲಿ ಮುನ್ನಡೆಸಲು ಹರಸಾಹಸ ಪಡುತ್ತಿರುವ ಎಚ್ಡಿಕೆ, ತಮ್ಮದೇ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮನದ ಅಳಲನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ವಿಷಕಂಠನ ಹೋಲಿಕೆ ಮಾಡಿಕೊಂಡು ಕಣ್ಣೀರು ಸುರಿಸಿದ್ದರು.

ರಾಜಕಾರಣಿಗಳು ಕಣ್ಣೀರು ಸುರಿಸುವುದು ಹೊಸ ಸಂಗತಿಯೇನೂ ಅಲ್ಲ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು, ಜನಸಮೂಹದ ನಡುವೆ ಅನೇಕಾನೇಕ ಜನನಾಯಕರು ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಿದ್ದರು. ಫಲಿತಾಂಶ ಬಂದ ಬಳಿಕ ಸೋತ ಅನೇಕ ಅಭ್ಯರ್ಥಿಗಳು ಸಾರ್ವಜನಿಕವಾಗಿ ಅತ್ತುಕರೆದರು. ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾದ ಸಂದರ್ಭದಲ್ಲಿ, ಮೈತ್ರಿ ಸರ್ಕಾರದ ಸಂಪುಟ ರಚನೆ ಸಂದರ್ಭದಲ್ಲಿ ಕಣ್ಣೀರ ಕೋಡಿಯೇ ಹರಿಯಿತು. ಕೋಲಾರದಲ್ಲಿ ಕೆ.ಸಿ. ವ್ಯಾಲಿ ಉದ್ಘಾಟನೆ ಸಂದರ್ಭದಲ್ಲಿ ಸ್ಪೀಕರ್ ರಮೇಶ್​ಕುಮಾರ್ ಧನ್ಯತೆಯಿಂದ ಕಣ್ಣೀರು ಹಾಕಿದ್ದನ್ನೂ ಎಲ್ಲರೂ ನೋಡಿದರು. ಇದೀಗ ಎಚ್ಡಿಕೆ ಸರದಿ. ಆದರೆ, ಹಿಂದಿನ ಎಲ್ಲ ಕಣ್ಣೀರುಗಳು ಅಲ್ಲಲ್ಲೇ ಮರೆತುಹೋದರೆ, ಈ ಪ್ರಕರಣ ಮಾತ್ರ ರಾಜಕೀಯದ ಒಳಸುಳಿಗಳಿಗೆ ಸಿಲುಕಿ ಗಂಗಾ ಪ್ರವಾಹದಂತೆ ಹರಿಯುತ್ತಲೇ ಇದೆ.

ಅಳುವ ಗಂಡಸನ್ನು ನಂಬಬಾರದು ಎನ್ನುವುದೊಂದು ಗಾದೆ. ಹಾಗೆಂದು, ಗಂಡಸು ಅಳಲೇಬಾರದು ಎಂದೇನೂ ಅಲ್ಲ. ಏಕೆಂದರೆ, ಕಣ್ಣೀರಿಗೆ ಲಿಂಗಭೇದವಿಲ್ಲ. ಅಂತಃಕರಣದಿಂದ ಬರುವ ಅಳು ನೈಸರ್ಗಿಕ. ಅದು ಸಮಯ-ಸಂದರ್ಭ ಅವಲಂಬಿತ. ದುಃಖ, ಸಂತೋಷ ಎರಡೂ ಸಂದರ್ಭಗಳಲ್ಲಿ ಕಣ್ತುಂಬಿಕೊಳ್ಳುವುದು, ಭಾವುಕರಾಗುವುದು ಪ್ರತಿಯೊಬ್ಬರಿಗೂ ಅನುಭವಕ್ಕೆ ಬರುವಂಥದ್ದು. ಮಕ್ಕಳು ಬೆಳೆಯುವ ಸಂದರ್ಭದಲ್ಲಿ ಅವರ ಒಂದೊಂದು ಅಭಿವ್ಯಕ್ತಿಯೂ ಪಾಲಕರಲ್ಲಿ ಆನಂದದ ಕಣ್ಣೀರು ತರಿಸುತ್ತದೆ. ಒಂದು ಒಳ್ಳೆಯ ಸಂಗೀತ ಕೇಳುವಾಗ, ಸಿನಿಮಾ ನೋಡುವಾಗ ಅಥವಾ ಸಾರ್ವಜನಿಕ ಕ್ರೌರ್ಯ, ದುರಂತಕ್ಕೆ ಸಾಕ್ಷಿಯಾದಾಗಲೂ ನಮಗೆ ಅರಿವಿಲ್ಲದಂತೆ ಕಣ್ಣೀರು ಬಂದೇ ಇರುತ್ತದೆ. ಹಾಗಾಗಿ ಅಳುವುದು ತಪ್ಪಲ್ಲವೇ ಅಲ್ಲ.

ಆದರೆ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಅಳು, ನಗು, ಹಾಸ್ಯ, ಆಕ್ರೋಶಗಳನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಜನನಾಯಕರು ಶೋಷಿತರ,

ದುಃಖಿತರ ಕಣ್ಣೀರು ಒರೆಸುವವರಾಗಬೇಕು. ಸಮಾಜವನ್ನು ಕಣ್ಣು ಕಾಯುವ ರೆಪ್ಪೆಗಳಂತೆ ಜನನಾಯಕರು ನೋಡಿಕೊಳ್ಳಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ. ಇದಕ್ಕೆ ವ್ಯತಿರಿಕ್ತವಾಗಿ ಸಾರ್ವಜನಿಕರ ಕಣ್ಣೀರು ಹಾಕಿಸುವ ಖಳನಾಯಕರೇ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ನಾಯಕರು ಸ್ವತಃ ಕಣ್ಣೀರು ಹಾಕಿದಾಗ ಪ್ರಶ್ನೆಗಳು, ಟೀಕೆಗಳೇಳುವುದು ಸಹಜ. ಆದರೆ, ಒಂದಂತೂ ಸತ್ಯ. ಜನಸೇವಕರಾಗಿ ಲೋಕಸಮರ್ಪಣೆ ಮಾಡಿಕೊಂಡಿರುವವರಿಗೆ ವ್ಯಕ್ತಿಗತ ಆಸೆ-ಆಕಾಂಕ್ಷೆ, ಸುಖ-ದುಃಖ, ರಾಗ-ದ್ವೇಷಗಳನ್ನು ಮೀರಿನಿಲ್ಲುವ ಸಂಯಮವಿರಬೇಕು. ಹಿಂದೆಲ್ಲ, ಶಿವಾಜಿ, ರಜಪೂತ ಸಾಮ್ರಾಟರು, ಇನ್ನೂ ಅನೇಕ ರಾಜ-ಮಹಾರಾಜರು ಎಂಥ ಕಠಿಣ ಸಂದರ್ಭಗಳಲ್ಲೂ ಕಣ್ಣೀರು ಹಾಕುತ್ತಿರಲಿಲ್ಲ. ರಾಜನಾದವನು ಅಳಬಾರದು. ಎಂಥ ಶೋಕವೇ ಆದರೂ, ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂಬ ಸಂಯಮದ ಕಟ್ಟೆ ಹಾಕಿಕೊಂಡಿರುತ್ತಿದ್ದರು.

ಮುಖ್ಯಮಂತ್ರಿ ಸಿಂಹಾಸನವೆಂದರೆ ಅದೇನು ಸುಖದ ಸುಪ್ಪತ್ತಿಗೆಯಲ್ಲ. ಅದರಲ್ಲೂ ಮೈತ್ರಿ ಸರ್ಕಾರ ನಡೆಸುವುದು ಹೂವಿನ ಹಾದಿಯೂ ಅಲ್ಲ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ಮುಖ್ಯಮಂತ್ರಿಗಳೇ ಐದು ವರ್ಷ ಕಾಯಂ ಅಲ್ಲ ಎಂದ ಮೇಲೆ 37+79 ರಾಜಕೀಯ ದಾಂಪತ್ಯದ ಸರ್ಕಾರ ತಂತಿಯ ಮೇಲಿನ ನಡಿಗೆ ಎನ್ನುವುದು ಗೊತ್ತಿರುವ ವಿಚಾರವೇ. ಈ ಎಲ್ಲ ಸವಾಲುಗಳಿಗೆ ಸಿದ್ಧರಾಗಿಯೇ ಸರ್ಕಾರ ರಚಿಸಿರುವ ಕುಮಾರಸ್ವಾಮಿ ಎರಡೇ ತಿಂಗಳಲ್ಲಿ ಕಣ್ಣೀರು ಹಾಕಿರುವುದರ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರಗಳು, ಸಂದೇಶಗಳು ಇರುವುದೂ ನಿಜ. ಎಚ್ಡಿಕೆ ಸಹಜವಾಗಿ ಕಣ್ಣೀರು ಸುರಿಸಿದ್ದರೂ, ಅದರಿಂದ ಅವರ ಪಕ್ಷಕ್ಕೆ, ಕಾಂಗ್ರೆಸ್​ಗೆ ಹಾಗೂ ಪ್ರತಿಪಕ್ಷ ಬಿಜೆಪಿಗೆ ಹಲವು ಲಾಭನಷ್ಟದ ವಿಚಾರಗಳಿವೆ.

ಇನ್ನು ಜಗತ್ತಿನಲ್ಲಿ ರಾಜಕೀಯ ನಾಯಕರು ಕಣ್ಣೀರು ಸುರಿಸುವುದು ಹೊಸ ವಿದ್ಯಮಾನವೂ ಅಲ್ಲ. ಬರಾಕ್ ಒಬಾಮ ಸತತ ಎರಡು ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ ಗಟ್ಟಿಗ. ಒಬಾಮ ಮುಖದಲ್ಲಿ ಸಾಮಾನ್ಯವಾಗಿ ಭಾವನೆಗಳ ಗೆರೆ ಗುರುತಿಸುವುದು ಕಷ್ಟ. ಆದರೆ, ಅವರೂ ಅನೇಕ ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಿದೆ. ಶಾಲೆಯೊಂದರಲ್ಲಿ ನಡೆದ ಶೂಟೌಟ್​ನಿಂದ 20 ಮಕ್ಕಳು ಸಾವನ್ನಪ್ಪಿದ ಶೋಕಸಂದರ್ಭದಲ್ಲಿ ಗನ್ ಲೈಸೆನ್ಸ್ ನಿಯಮ ಬಿಗಿಗೊಳಿಸುವ ನಿರ್ಧಾರ ಪ್ರಕಟಿಸಿದ ಒಬಾಮ ಮೃತ ಮಕ್ಕಳನ್ನು ನೆನಪಿಸಿಕೊಂಡು ಧಾರಾಕಾರವಾಗಿ ಕಣ್ಣೀರು ಸುರಿಸಿದ್ದರು. ಇರಾಕ್​ನಲ್ಲಿ ಮಡಿದ ಅಮೆರಿಕ ಸೈನಿಕರ ಸಲುವಾಗಿ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅತ್ತಿದ್ದರು. ಇಂಗ್ಲೆಂಡ್​ನ ರಾಣಿ 2ನೇ ಎಲಿಜಬೆಥ್, ಬ್ರೆಜಿಲ್​ನ ಅಧ್ಯಕ್ಷರಾಗಿದ್ದ ಲೂಯಿಸ್ ಇನಾಸಿಯೊ ಲೂಲ ಡ ಸಿಲ್ವ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಮೊನ್ನೆ ವಿಶ್ವಕಪ್​ನಲ್ಲಿ ಸೋತ ಸಂದರ್ಭದಲ್ಲಿ ಕ್ರೋವೇಷಿಯಾ ಅಧ್ಯಕ್ಷೆ ಕೊಲಿಂದ ಗ್ರಾಬಾರ್ ಅತ್ತಿದ್ದನ್ನು ಎಲ್ಲರೂ ಕಂಡಿದ್ದಾರೆ.

ಕೆಲ ವರ್ಷ ಕೆಳಗೆ ಉತ್ತರ ಕೊರಿಯಾದ ಮಾಜಿ ಸರ್ವಾಧಿಕಾರಿ ಕಿಂ ಜಾಂಗ್ -ಇಲ್ ನಿಧನರಾದಾಗ ಇಡೀ ರಾಷ್ಟ್ರ ಶೋಕಾಚರಣೆ ಮಾಡಿತ್ತು. ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಂತೂ ಜನ ರಸ್ತೆಯುದ್ದಕ್ಕೂ ಸಾಲುಗಟ್ಟಿನಿಂತು ಕಣ್ಣೀರು ಹಾಕಿದ್ದರು. ವಿಚಿತ್ರವೆಂದರೆ, ಆ ಸಂದರ್ಭದಲ್ಲಿ ಜನರೆಲ್ಲರೂ ಅಳುವುದು ಕಡ್ಡಾಯವಾಗಿತ್ತು! ಶೋಕಾಚರಣೆ ಸಂದರ್ಭದಲ್ಲಿ ಅಳದೇ ನಿಂತವರನ್ನು ಬಂಧಿಸಿ 6 ತಿಂಗಳು ಜೈಲಿಗಟ್ಟಿದ್ದೂ ಆಗಿತ್ತು!

ಇನ್ನು ಕೆಲವು ವರ್ಷ ಕೆಳಗೆ ತಮಿಳುನಾಡಿನಲ್ಲಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಅಧಿಕಾರ ಕಳೆದುಕೊಂಡಾಗ, ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪನ್ನೀರ್​ಸೆಲ್ವಂ ಕಣ್ಣೀರು ಹಾಕುತ್ತಲೇ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಮಾತ್ರವಲ್ಲ, ಮಂತ್ರಿಮಂಡಲದ ಸಚಿವರೆಲ್ಲರೂ ಅಳುತ್ತಲೇ ಪ್ರಮಾಣವಚನ ಸ್ವೀಕರಿಸಿದ್ದರು! ಕ್ರೀಡೆಯಲ್ಲಿ ಮೊನ್ನೆ ಹಿಮಾ ದಾಸ್ ಅತ್ತ ಹಾಗೆ, ಟೆನಿಸ್ ದಂತಕಥೆ ರೋಜರ್ ಫೆಡರರ್, ಪ್ರತೀ ಗ್ರಾಂಡ್​ಸ್ಲಾಂ ಗೆದ್ದ ಸಂದರ್ಭದಲ್ಲೂ ಭಾವಾವೇಶ ಹತ್ತಿಕ್ಕಲಾಗದೆ ಕಣ್ಣೀರು ಹಾಕಿದ್ದಾರೆ. ಸಚಿನ್ ತೆಂಡುಲ್ಕರ್ ನಿವೃತ್ತಿಯಾದ ದಿನ ಅವರ ಅಭಿಮಾನಿಗಳು ಸುರಿಸಿದ ಕಣ್ಣೀರಿಗೆ ಲೆಕ್ಕವಿಲ್ಲ. ಇನ್ನು ಶ್ರೀಶಾಂತ್ ಮೈದಾನದಲ್ಲಿ ರೋದಿಸಿದ ವಿವಾದದ್ದು ಬೇರೆಯೇ ಕಥೆ.

ಒಟ್ಟಾರೆ ಹೇಳುವುದಾದರೆ, ಸಂದರ್ಭಾನುಸಾರ ಅತ್ತು ಹಗುರಾಗುವುದರಲ್ಲಿ ತಪ್ಪೇನಿಲ್ಲ. ಆದರೆ, ಆ ಕಣ್ಣೀರು ಅಂತಃಕರಣದಿಂದ ಬಂದಿರಬೇಕಷ್ಟೇ. ಯಾವುದೋ ಉದ್ದೇಶದಿಂದ ಹಾಕುವ ಕಣ್ಣೀರು ಹಾಗೂ ನಮ್ಮ ವರ್ತನೆಯಿಂದ ಬೇರೆಯವರ ಕಣ್ಣೀರಿಗೆ ಕಾರಣವಾಗುವುದು ಎರಡೂ ಅನರ್ಥಕಾರಿ. ಲೇಖನದ ಆರಂಭದಲ್ಲಿ ಉಲ್ಲೇಖಿಸಿದ, ಡಾ. ರಾಜ್​ಕುಮಾರ್ ಸಿರಿಕಂಠದಲ್ಲಿ ಲೋಕಪ್ರಿಯವಾದ ಹೊಸಬೆಳಕು ಚಿತ್ರದ ಸಾರ್ವಕಾಲಿಕ ಶ್ರೇಷ್ಠ ಶೋಕಗೀತೆಯ ತಾತ್ಪರ್ಯವೂ ಅದೇ… ವಿಧಿಯಾಟ ಏನೆಂದು ಬಲ್ಲವರು, ಮುಂದೇನು ಎಂದು ತಿಳಿದವರು ಯಾರೂ ಇಲ್ಲ. ಬರುವುದೆಲ್ಲವೂ ಬರಲಿ ಎಂದು ನಗುನಗುತ ಬಾಳದೆ, ನಿರಾಸೆ, ವಿಷಾದ ಪಡುವುದರಲ್ಲೂ ಅರ್ಥವಿಲ್ಲ.

Leave a Reply

Your email address will not be published. Required fields are marked *

Back To Top