Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಸೋತು ಗೆದ್ದ ಕ್ರಿಕೆಟಿಗನ ಸಂಯಮದ ಕಥನ

Wednesday, 11.04.2018, 3:04 AM       No Comments

| ರಾಘವೇಂದ್ರ ಗಣಪತಿ

ದಿನೇಶ್ ಮಿತಭಾಷಿ. ಅನಗತ್ಯ ಹೇಳಿಕೆ, ವಿವಾದಗಳಲ್ಲಿ ಯಾವತ್ತೂ ಅವರು ಸಿಲುಕಿಕೊಂಡವರಲ್ಲ. ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲೂ ಅವರು ಮಾಜಿ ಪತ್ನಿಯ ಬಗ್ಗೆಯಾಗಲೀ, ಜೊತೆ ಆಟಗಾರನ ಬಗ್ಗೆಯಾಗಲೀ ಒಂದೂ ಕೆಟ್ಟ ಮಾತು ಆಡಲಿಲ್ಲ. ಗೌರವಾನ್ವಿತ ಮೌನ ವಹಿಸಿ, ಆಟದ ಕಡೆಗೆ ಗಮನ ಹರಿಸಿದರು.

ಗೆದ್ದೇ ಗೆಲ್ಲುವೆ ಒಂದು ದಿನ

ಗೆಲ್ಲಲೇಬೇಕು ಒಳ್ಳೆತನ..

ಒಳ್ಳೆಯವರು, ಒಳ್ಳೆತನ ಗೆಲ್ಲಬೇಕು ಎನ್ನುವುದು ಆದರ್ಶ ವಿಚಾರ. ಆದರೆ, ಅನೇಕ ಬಾರಿ ನಮ್ಮ ತಪ್ಪಿಲ್ಲದಿದ್ದರೂ ಸೋಲಿನ ಬದಿ ನಿಲ್ಲಬೇಕಾಗುತ್ತದೆ. ಬದುಕಿನ ಪಾಠಶಾಲೆಯಲ್ಲಿ ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂಥ ಸಂದರ್ಭಗಳು ಅನೇಕ. ಆದರೆ, ಅಂಥ ಸನ್ನಿವೇಶಗಳಿಂದ ನಾವು ಕಲಿಯುವ ಪಾಠಗಳು ಜೀವನಪೂರ್ತಿ ನಮ್ಮ ಕೈಹಿಡಿಯುತ್ತವೆ.

ಕೆಡುಕು ಯಾವಾಗಲೂ ಶರವೇಗದಲ್ಲಿ ಘಟಿಸುವಂಥದ್ದು. ಒಂದು ತಪು್ಪ, ಒಂದು ಅನಾಹುತ, ಅವಘಡ ಸಂಭವಿಸುವುದಕ್ಕೆ ಕ್ಷಣದ ಮೈಮರೆವು ಸಾಕು. ಆದರೆ, ಯಶಸ್ಸು ಯಾವಾಗಲೂ ನಿಧಾನ. ಯಶಸ್ಸಿನ ವಿಚಾರದಲ್ಲಿ ತಾಳಿದವನಷ್ಟೇ ಬಾಳಿಯಾನು.

ಕ್ರಿಕೆಟ್ ಮೈದಾನದಲ್ಲಿ ಹಾಗೂ ಬದುಕಿನ ಹೋರಾಟದಲ್ಲಿ ಸೋತು ಸೋತು, ಇನ್ನೇನು ಮುಗಿದೇ ಹೋಯಿತು ಎಂಬ ಹಂತದಲ್ಲೂ ತಾಳ್ಮೆಗೆಡದೆ 14 ವರ್ಷಗಳ ಹೋರಾಟದ ಬಳಿಕ ಇದೀಗ ಯಶಸ್ಸು ಕಾಣುತ್ತಿರುವ ರೋಚಕ ಕಥೆಯೊಂದರ ಕಥಾನಾಯಕ ದಿನೇಶ್ ಕಾರ್ತಿಕ್. ಹಾಲಿ ಐಪಿಎಲ್​ನಲ್ಲಿ ಕೋಲ್ಕತ್ತ ನೈಟ್​ರೈಡರ್ಸ್ ತಂಡದ ನಾಯಕ.

ವೃತ್ತಿಜೀವನದಲ್ಲಿ 14 ವರ್ಷ ಕಾಲ ಮಣ್ಣುಹೊತ್ತ ಬಳಿಕವೂ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ದಿನೇಶ್ ಕಾರ್ತಿಕ್ ಯಾರೆಂಬ ಪ್ರಶ್ನಾರ್ಥಕ ಚಿಹ್ನೆ ಇತ್ತೀಚಿನವರೆಗೂ ಇತ್ತು. ಆದರೆ, ಶ್ರೀಲಂಕಾದಲ್ಲಿ ನಡೆದ ಟಿ20 ತ್ರಿಕೋನ ಸರಣಿಯ ಒಂದು ಫೈನಲ್ ಪಂದ್ಯ ಅಥವಾ ಆ ಒಂದು ಎಸೆತ ಶಾಶ್ವತವಾಗಿ ದಿನೇಶ್​ರನ್ನು ಕ್ರಿಕೆಟ್​ನ ಅವಿಸ್ಮರಣೀಯ ಸಾಧಕರ ಯಾದಿಗೆ ಸೇರಿಸಿತು. ಪಂದ್ಯದ ಕೊಟ್ಟಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಸರಣಿ ಗೆದ್ದುಕೊಟ್ಟ ಮೊದಲ ಭಾರತೀಯ ಎಂಬ ಹಿರಿಮೆ ಅವರ ಹೆಸರಿನ ಜೊತೆಗಿನ್ನು ಶಾಶ್ವತ.

ದೊಡ್ಡ ಸುನಾಮಿಯೊಂದು ಬಂದಾಗ ಅಡ್ಡ ಸಿಕ್ಕಿದ್ದೆಲ್ಲ ನಾಮಾವಶೇಷವಾಗುತ್ತದೆ. ಭಾರತೀಯ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಬ ಅದ್ಭುತ ಆಟಗಾರ ಸುನಾಮಿಯ ರೂಪದಲ್ಲಿ ಆವರಿಸಿಕೊಂಡ ಸಂದರ್ಭದಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ನಷ್ಟವಾಗಿದ್ದು ತಮಿಳುನಾಡಿನ ವಿಕೆಟ್ಕೀಪರ್ – ಬ್ಯಾಟ್ಸ್​ಮನ್ ದಿನೇಶ್ ಕಾರ್ತೀಕ್​ಗೆ. ಬಹುಶಃ ಧೋನಿ ಪ್ರವರ್ಧಮಾನದ ಸುವರ್ಣಯುಗಕ್ಕಿಂತ ಬೇರೆ ಕಾಲಘಟ್ಟದಲ್ಲಿ ಹೊರಹೊಮ್ಮಿದ್ದರೆ ದಿನೇಶ್ ಯಶಸ್ಸಿಗಾಗಿ ಇಷ್ಟೊಂದು ಕಾಯಬೇಕಾಗುತ್ತಿರಲಿಲ್ಲವೇನೋ.

ಹಾಗೆ ನೋಡಿದರೆ, ಧೋನಿಗಿಂತ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರು ದಿನೇಶ್ ಕಾರ್ತಿಕ್. ಪಾರ್ಥಿವ್ ಪಟೇಲ್ ಸತತವಾಗಿ ವಿಫಲರಾಗುತ್ತಿದ್ದ, ಪರ್ಯಾಯ ಆಯ್ಕೆಗಳು ಸೀಮಿತವಾಗಿದ್ದ ಕಾಲದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ (2004ರ ಸೆಪ್ಟೆಂಬರ್) ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ದಿನೇಶ್, ಲಾರ್ಡ್ಸ್​ನಲ್ಲಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲೇ ಇಂಗ್ಲೆಂಡ್​ನ ನಾಯಕ ಮೈಕೆಲ್ ವಾನ್​ರನ್ನು ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದ ರೀತಿ ಅದ್ಭುತವೆಂಬ ಪ್ರಶಂಸೆಗೆ ಪಾತ್ರವಾಗಿತ್ತು. ಆದರೂ, ತಂಡದ ಖಾಯಂ ಸದಸ್ಯರಾಗುವುದಕ್ಕೆ ಇದಿಷ್ಟೇ ಸಾಕಾಗಿರಲಿಲ್ಲ.

ವಿಕೆಟ್ಕೀಪಿಂಗ್​ನಲ್ಲಿ ದಿನೇಶ್ ನೈಪುಣ್ಯ ಮೆಚ್ಚುವಂತಿದ್ದರೂ, ಬ್ಯಾಟಿಂಗ್​ನಲ್ಲಿ ಧೋನಿಯ ಸ್ಪೋಟಕತೆ, ಮಾಂತ್ರಿಕತೆ ಎರಡೂ ಇರಲಿಲ್ಲ. ಹಾಗಾಗಿ ಆಟದಲ್ಲಿ ಸುಧಾರಣೆ ಮಾಡಿಕೊಳ್ಳುತ್ತ, ಸಂದರ್ಭಕ್ಕಾಗಿ ಕಾಯುವುದನ್ನು ಬಿಟ್ಟು ಬೇರೆ ಆಯ್ಕೆಯೂ ಇರಲಿಲ್ಲ. ಅಷ್ಟಾಗಿಯೂ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತ ಸತತ 14 ವರ್ಷ ಚಾಲ್ತಿಯ ಕ್ರಿಕೆಟಿಗನಾಗಿ ಉಳಿದುಕೊಳ್ಳುವುದೂ ದೊಡ್ಡ ಸಾಧನೆಯೇ. ಅದಕ್ಕೀಗ ಫಲ ಸಿಗುತ್ತಿದೆ. ಓರ್ವ ಬ್ಯಾಟ್ಸ್​ಮನ್ ಆಗಿ ಟೆಕ್ನಿಕ್, ಟೈಮಿಂಗ್ ಎಲ್ಲದರಲ್ಲಿ ಬದಲಾವಣೆ ಮಾಡಿಕೊಂಡಿರುವ, ಪಂದ್ಯದಿಂದ ಪಂದ್ಯಕ್ಕೆ ಅನುಭವದಿಂದ ಆಕ್ರಮಣಶೀಲತೆ ಹೆಚ್ಚಿಸಿಕೊಳ್ಳುತ್ತಿರುವ ಅವರು ಹಂತಹಂತವಾಗಿ ವಿದಾಯದೆಡೆಗೆ ಹೆಜ್ಜೆ ಹಾಕುತ್ತಿರುವ ಧೋನಿ ಗೈರು ತುಂಬುವ ನಿಟ್ಟಿನಲ್ಲಿ ದಾಪುಗಾಲನ್ನಿಡುತ್ತಿದ್ದಾರೆ.

ದಿನೇಶ್ ವೃತ್ತಿಜೀವನದ ಒಂದು ಉತ್ತಮ ಸಂಗತಿಯೆಂದರೆ, ಧೋನಿಯ ಅಪರಿಮಿತ ಯಶಸ್ಸಿನ ಬಳಿಕ ತಮ್ಮ ಅವಕಾಶದ ಬಾಗಿಲು ಮುಚ್ಚಿಯೇ ಹೋಯಿತೆಂದು ಪರಿತಪಿಸಲಿಲ್ಲ. ಬದಲಿಗೆ ತಮ್ಮ ಬ್ಯಾಟಿಂಗ್​ನಲ್ಲಿ ಸುಧಾರಣೆ ಮಾಡಿಕೊಂಡು ತಜ್ಞ ಬ್ಯಾಟ್ಸ್​ಮನ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನ ನಡೆಸಿದರು. ದೇಶಿ ಕ್ರಿಕೆಟ್​ನಲ್ಲಿ ನಿರಂತರವಾಗಿ ಉತ್ತಮ ರನ್ ಗಳಿಸಿದ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯೂ ಆದರು. ತಂಡದ ಆಡುವ ಅಗತ್ಯಕ್ಕನುಸಾರವಾಗಿ ಕ್ರಮಾಂಕ ಬದಲಾವಣೆಯ ಪ್ರಯೋಗಗಳಿಗೂ ಒಡ್ಡಿಕೊಂಡರು. ಇದರ ಪರಿಣಾಮವಾಗಿ 4, 5, 6 ಎಲ್ಲ ಕ್ರಮಾಂಕಗಳಲ್ಲೂ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡರು. 2007ರಲ್ಲಿ ಭಾರತ ತಂಡ ಸೆಹ್ವಾಗ್, ಗಂಭೀರ್ ಗೈರಿನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ವಾಸಿಂ ಜಾಫರ್ ಜೊತೆ ದಿನೇಶ್ ಇನಿಂಗ್ಸ್ ಆರಂಭಿಸಿದ್ದು ವಿಶೇಷ. ಈ ಸರಣಿಯಲ್ಲಿ ಅವರು ತಂಡದ ಪರ ಗರಿಷ್ಠ 263 ರನ್ ಬಾರಿಸಿದ್ದರು.

ಒಟ್ಟಾರೆ ಗರಿಷ್ಠ ಪುನರಾಗಮನ-ಅರ್ಧಚಂದ್ರಗಳ ಏರಿಳಿತಗಳಿಂದ ಸಾಗಿದ ವೃತ್ತಿಜೀವನದಲ್ಲಿ ದಿನೇಶ್ ಕಾರ್ತಿಕ್ ಗುರಿಸಾಧನೆ ಕಡೆಗಿನ ಬದ್ಧತೆ ಹಾಗೂ ಆಸಕ್ತಿ ಕಳೆದುಕೊಳ್ಳದೆ ಇರುವುದೇ ಒಂದೂವರೆ ದಶಕದ ನಂತರವೂ ಪ್ರಸ್ತುತತೆ ಉಳಿಸಿಕೊಳ್ಳುವಂತೆ ಮಾಡಿದೆ. ಈ ಹಿಂದೆ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಸಹಿತ ಹಲವು ತಂಡಗಳ ಪರ ಆಡಿರುವ ದಿನೇಶ್ ಈ ಬಾರಿ ಕೋಲ್ಕತ್ತ ನೈಟ್​ರೈಡರ್ಸ್ ತಂಡದ ನಾಯಕರಾಗಿ ಹೊಸ ಅನುಭವಕ್ಕೆ ಸಜ್ಜಾಗಿದ್ದಾರೆ.

ದಿನೇಶ್ ಕಾರ್ತಿಕ್ ವೃತ್ತಿಜೀವನದ ಏಳುಬೀಳುಗಳ ನಡುವೆ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಏರುಪೇರು ಕಂಡವರು. ಮೊದಲ ವಿವಾಹ ಅವರ ಪಾಲಿಗೆ ಕಹಿಯಾಗಿತ್ತು. ಬಾಲ್ಯದ ಗೆಳತಿಯನ್ನೇ ಇಷ್ಟಪಟ್ಟು ಅವರು ವಿವಾಹವಾದರೂ, ದಾಂಪತ್ಯ ಹೆಚ್ಚು ದಿನ ಬಾಳಲಿಲ್ಲ. ಒಂದೆರಡು ವರ್ಷಗಳಲ್ಲೇ ದಿನೇಶ್​ಗೆ ವಿಚ್ಛೇದನ ನೀಡಿದ ಮೊದಲ ಪತ್ನಿ ನಿಖಿತಾ, ತಮಿಳುನಾಡು ಹಾಗೂ ಭಾರತ ತಂಡದಲ್ಲಿ ದಿನೇಶ್​ರ ಜೊತೆ ಆಟಗಾರರಾದ ಮುರಳಿ ವಿಜಯ್ರನ್ನು ವಿವಾಹವಾದರು. ಕ್ರಿಕೆಟ್ ಹಾಗೂ ಬದುಕು ಎರಡೂ ಕಡೆ ಸೋತಿದ್ದ ದಿನೇಶ್ ಪಾಲಿಗೆ ಆ ದಿನಗಳು ಅತ್ಯಂತ ಕರಾಳ. ಆದರೆ, ಅವರ ಸಂಯಮ ಹಾಗೂ ಸಮಚಿತ್ತದಿಂದಾಗಿ ಆಟದಿಂದ ವಿಮುಖರಾಗದೆ ಉಳಿಯುವುದು ಸಾಧ್ಯವಾಯಿತು. ಗಳಿಸಿಕೊಳ್ಳುವುದು, ಉಳಿಸಿಕೊಳ್ಳುವುದು, ಕಳೆದುಕೊಳ್ಳುವುದು, ಮತ್ತೆ ಪಡೆದುಕೊಳ್ಳುವುದು ಇದೆಲ್ಲವೂ ಜಗದ ನಿಯಮ. ದಿನೇಶ್ ವಿಷಯದಲ್ಲೂ ಇದು ನಿಜವಾಯಿತು. ಮುಂದಿನ ದಿನಗಳಲ್ಲಿ ಅವರು ಭಾರತದ ಅಗ್ರಮಾನ್ಯ ಸ್ಕಾ್ವಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು. ಸೌಂದರ್ಯದಲ್ಲಿ ಯಾವ ಬಾಲಿವುಡ್ ತಾರೆಗೂ ಕಡಿಮೆ ಇಲ್ಲದ ದೀಪಿಕಾ, ಸ್ಕಾ್ವಷ್ ಆಟದಲ್ಲಿ ಜೋಷ್ನಾ ಚಿನ್ನಪ್ಪ ಜೊತೆಗೂಡಿ ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಮೆರೆಸಿದವರು. ತಮಿಳುನಾಡಿನವರೇ ಆದ ಈ ತರುಣಿಯನ್ನು ವಿವಾಹವಾದ ಬಳಿಕ ದಿನೇಶ್ ಬದುಕಿಗೂ ಸಹ ಸಮತೋಲನ ಲಭಿಸಿತೆಂದೇ ಹೇಳಬೇಕು. ವಿವಾಹಾನಂತರ ದಿನೇಶ್-ದೀಪಿಕಾ ಇಬ್ಬರೂ ತಮ್ಮತಮ್ಮ ಕ್ರೀಡೆಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸಿದರು. ಸದ್ಯ ದೀಪಿಕಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ದಿನೇಶ್ ವೃತ್ತಿಜೀವನದ ಇನ್ನೊಂದು ಒಳ್ಳೆಯ ಅಂಶವೆಂದರೆ, ಅವರು ಮಿತಭಾಷಿ. ಅನಗತ್ಯ ಹೇಳಿಕೆ, ವಿವಾದಗಳಲ್ಲಿ ಯಾವತ್ತೂ ಅವರು ಸಿಲುಕಿಕೊಂಡವರಲ್ಲ. ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲೂ ಅವರು ತಮ್ಮ ಮಾಜಿ ಪತ್ನಿಯ ಬಗ್ಗೆಯಾಗಲೀ, ಜೊತೆ ಆಟಗಾರನ ಬಗ್ಗೆಯಾಗಲೀ ಒಂದೂ ಕೆಟ್ಟ ಮಾತು ಆಡಲಿಲ್ಲ. ಗೌರವಾನ್ವಿತ ಮೌನ ವಹಿಸಿ, ಆಟದ ಕಡೆಗೆ ಗಮನ ಹರಿಸಿದರು.

32ನೇ ವಯಸ್ಸಿನಲ್ಲೂ ಭಾರತ ತಂಡಕ್ಕೆ ಪುನರಾಗಮನಗೈದು, ಐಪಿಎಲ್​ನಲ್ಲೂ ಬಹುಬೇಡಿಕೆ ಉಳಿಸಿಕೊಂಡಿರುವ ದಿನೇಶ್​ಗೆ ತಾವು ಸಾಗಿ ಬಂದ ಹಾದಿಯ ಬಗ್ಗೆ ಸಮಾಧಾನವಿದೆ, ಇನ್ನಷ್ಟು ಸಾಧಿಸುವ ತುಡಿತವೂ ಇದೆ. ವೃತ್ತಿಜೀವನದ ಹಾದಿಯಲ್ಲಿ ಮಾಗದರ್ಶನ ನೀಡಿದ ಅನೇಕ ಹಿರಿಯರ ಬಗ್ಗೆ ಗೌರವವಿದೆ. ‘ಓರ್ವ ಬ್ಯಾಟ್ಸ್​ಮನ್ ಆಗಿ ನೀವು ಗಳಿಸುವ 50, 100 ರನ್​ಗಳು ಮುಖ್ಯವಲ್ಲ, ನೀವು ಗಳಿಸುವ ರನ್​ಗಳು ತಂಡದ ಗೆಲುವಿಗೆಷ್ಟು ನಿರ್ಣಾಯಕವಾಗಿದ್ದವು ಎನ್ನುವುದಷ್ಟೇ ಮುಖ್ಯ. ಆ ಅಂಶ ನೆನಪಲ್ಲಿಡಿ’ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದ ಕಿವಿಮಾತನ್ನು ನೆನಪಿನಲ್ಲಿಟ್ಟುಕೊಂಡಿರುವ ದಿನೇಶ್, ಕಳೆದ ಹದಿನಾಲ್ಕು ವರ್ಷಗಳಿಗಿಂತ, ಮುಂದಿನ ಒಂದೆರಡು ವರ್ಷಗಳಲ್ಲಿ ಜೀವಮಾನಪೂರ್ತಿ ನೆನಪಿನಲ್ಲುಳಿಯುವ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ. ಆಲ್ ದಿ ಬೆಸ್ಟ್ ದಿನೇಶ್…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top