ದಾದಾಗಿರಿಯ ಮೆಲುಕು ಹಾಗೂ ವಿರಾಟ್ ಸತ್ವಪರೀಕ್ಷೆ

| ರಾಘವೇಂದ್ರ ಗಣಪತಿ

ಬದುಕು ಕೆಲವೊಮ್ಮೆ ನಮ್ಮನ್ನು ಅಯೋಮಯ ಸ್ಥಿತಿಯಲ್ಲಿ ನಿಲ್ಲಿಸಿಬಿಡುತ್ತದೆ. ಮುಂದೇನು ಮಾಡಬೇಕು? ಯಾವ ದಾರಿ? ಎತ್ತ ಪಯಣ? ಗಮ್ಯದ ಹಾದಿಯಲ್ಲಿ ಇದೇ ಡೆಡ್ ಎಂಡ್ ಆಗಿರಬಹುದೇ? ಇನ್ನೂ ಮುಂದೆ ಸಾಗಿದರೆ ಏನಿರಬಹುದು? ಇಷ್ಟಕ್ಕೇ ನಿಲ್ಲಿಸುವುದು ತೃಪ್ತಿಯೋ? ಹಿಂಜರಿಕೆಯೋ? ಇನ್ನೂ ಬೇಕೆಂದು ಮುಂದೆ ಹೆಜ್ಜೆ ಹಾಕುವುದು ಅತೃಪ್ತಿಯೋ? ಮಹತ್ವಾಕಾಂಕ್ಷೆಯೋ?

ಅದು 2003ರ ಏಕದಿನ ವಿಶ್ವಕಪ್ ನಂತರದ ದಿನಗಳು. ಆಗ ಟೀಮ್ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿಯನ್ನು ಇಂಥ ಸಂದಿಗ್ಧ ಕಾಡಿತ್ತು.

ಭಾರತ 2003ರ ವಿಶ್ವಕಪ್ ಫೈನಲ್​ನಲ್ಲಿ ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ಎಡವುವವರೆಗೆ ಚಾಂಪಿಯನ್ನರಿಗೆ ತಕ್ಕ ಆಟವಾಡಿತ್ತು. ಅದಕ್ಕೆ ಮುನ್ನ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್​ನಲ್ಲಿ ನ್ಯಾಟ್​ವೆಸ್ಟ್ ಸರಣಿ ಜಯಿಸಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲೂ ಟ್ರೋಫಿ ಹಂಚಿಕೊಂಡಿತ್ತು. ಓರ್ವ ನಾಯಕನಾಗಿ ಇಷ್ಟಕ್ಕೆ ತೃಪ್ತಿ ಪಡಬೇಕೋ ಅಥವಾ ಇನ್ನೂ ಹೆಚ್ಚಿನ ಉತ್ತುಂಗದ ಕನಸು ಕಾಣಬೇಕೋ ಎಂಬ ತುಮುಲ ಆ ದಿನಗಳಲ್ಲಿ ದಾದಾ ಮನಸ್ಸಿನಲ್ಲಿತ್ತು.

ಅವರ ಆಲೋಚನೆಗೆ ಉತ್ತರವೋ ಎಂಬಂತೆ ಆ ವರ್ಷಾಂತ್ಯದಲ್ಲಿ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ನಿಗದಿಯಾಗಿತ್ತು. ಕಾಂಗರೂಗಳನ್ನು ಸೋಲಿಸುವುದು ಕಡುಕಷ್ಟ, ಅದರಲ್ಲೂ ತವರಿನಲ್ಲಿ ಅಸಂಭವ ಎನ್ನುವುದು ಯಾವತ್ತಿಗೂ ನಿಜ. ಭಾರತವಂತೂ ಆ ನೆಲದಲ್ಲಿ ಒಂದೂ ಸರಣಿ ಗೆದ್ದಿರಲಿಲ್ಲ. ಓರ್ವ ನಾಯಕನಾಗಿ ರಣತಂತ್ರ ಏನಿರಬೇಕು? ಗೆದ್ದರೆ ಯುದ್ಧ, ಸೋತರೆ ಪಂದ್ಯ ಎಂಬ ಮನೋಭಾವದಿಂದ ಆಕ್ರಮಣಕಾರಿಯಾಗಿ ಆರ್ಭಟಿಸಬೇಕೇ ಎಂಬ ಎರಡು ಆಯ್ಕೆಗಳು ಗಂಗೂಲಿ ಮುಂದಿದ್ದವು. ಅವರು ಆಯ್ಕೆ ಮಾಡಿಕೊಂಡಿದ್ದು 2ನೇ ಆಯ್ಕೆಯನ್ನು. ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ತಂಡಕ್ಕೆ ಅವರ ನೆಲದಲ್ಲೇ ಸೆಡ್ಡು ಹೊಡೆಯಬೇಕು ಎಂಬ ಸಾಹಸಿ ಕಲ್ಪನೆ ಗಂಗೂಲಿ ತಲೆಯಲ್ಲಿ ಗಟ್ಟಿಯಾಗಿ ಬಿಟ್ಟಿತ್ತು.

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ನಿಗದಿಯಾಗಿದ್ದು ಡಿಸೆಂಬರ್​ನಲ್ಲಿ. ಆದರೆ, ದಾದಾ ತಂಡದ ಜತೆಗಾರರ ಗಮನಕ್ಕೂ ಬರದಂತೆ ಏಕಾಂಗಿಯಾಗಿ ಜುಲೈನಲ್ಲೇ 7 ದಿನಗಳ ಆಸ್ಟ್ರೇಲಿಯಾ ಪ್ರವಾಸ ಮಾಡಿಬರಲು ನಿಶ್ಚಯಿಸಿದ್ದರು. ತಂಡದೊಂದಿಗೆ ತೆರಳುವ ಮುನ್ನ ತಾವೊಬ್ಬರೇ ಹೋಗಿ ಆ ದೇಶವನ್ನು, ಅಲ್ಲಿನ ವಾತಾವರಣವನ್ನು, ಅಲ್ಲಿನ ಕ್ರಿಕೆಟ್ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲಿನ ವಾತಾವರಣದಲ್ಲಿ ಏಕಾಏಕಿ ಎದುರಾಗುವ ಸವಾಲುಗಳಿಗೆ ಕಕ್ಕಾಬಿಕ್ಕಿ ಆಗುವ ಬದಲು ತಾವೇ ಆಸ್ಟ್ರೇಲಿಯನ್ನರನ್ನು ತಬ್ಬಿಬ್ಬಾಗಿಸಬೇಕು ಎನ್ನುವುದು ಅವರ ಚಿಂತನೆಯಾಗಿತ್ತು. ಈ ಹೊತ್ತಲ್ಲಿ ತಮಗೆ ನೆರವಾಗಬಲ್ಲವರು ಯಾರೆಂಬ ಪ್ರಶ್ನೆಗೆ ಉತ್ತರವಾಗಿ ಗೋಚರಿಸಿದ್ದು ಗ್ರೆಗ್ ಚಾಪೆಲ್. ದೂರವಾಣಿ ಮೂಲಕ ಸಂರ್ಪಸಿದ ಗಂಗೂಲಿ ಕೋರಿಕೆಗೆ ಗ್ರೆಗ್ ಕೂಡ ಖುಷಿಯಿಂದ ಒಪ್ಪಿಕೊಂಡರು. 7 ದಿನಗಳ ರಹಸ್ಯ ಪ್ರವಾಸ ಭಾರತದಲ್ಲಿ ಆಗಿನ ಬಿಸಿಸಿಐ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಹಾಗೂ ಕೋಚ್ ಜಾನ್ ರೈಟ್ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ.

ಯೋಜನೆಯಂತೆ ಸಿಡ್ನಿಗೆ ತಲುಪಿದ ಗಂಗೂಲಿ ಗ್ರೆಗ್ ಜೊತೆ ಬೆಳ್ಳಂಬೆಳಗ್ಗೆ ಸಿಡ್ನಿ ಮೈದಾನಕ್ಕೆ ತೆರಳಿ ಪಿಚ್​ನ ಮಧ್ಯಭಾಗದಲ್ಲಿ ನಿಂತು ಪಂದ್ಯದ ಸನ್ನಿವೇಶ ಕಲ್ಪಿಸಿಕೊಳ್ಳುತ್ತಿದ್ದರು. ಜಹೀರ್ ಖಾನ್​ರ ಸ್ವಿಂಗ್ ಆದ ಎಸೆತವನ್ನು ಮ್ಯಾಥ್ಯೂ ಹೇಡನ್ ಎಡ್ಜ್ ಮಾಡಿ, ಸ್ಲಿಪ್​ನಲ್ಲಿ ದ್ರಾವಿಡ್ ಕ್ಯಾಚ್ ಹಿಡಿದಂತೆ ಊಹಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಫೀಲ್ಡಿಂಗ್ ನಿಯೋಜಿಸುವುದಕ್ಕೂ, ಆಸೀಸ್​ನಲ್ಲಿ ನಿಯೋಜಿಸುವುದಕ್ಕೂ ಇರುವ ವ್ಯತ್ಯಾಸ ಅವರಿಗೆ ಅರ್ಥವಾಗುತ್ತಿತ್ತು. ಇಲ್ಲಿನ ಶೀತಲ, ಮೈಮರಗಟ್ಟುವ ವಾತಾವರಣದಲ್ಲಿ, ವೇಗದ ಬೌಲರ್​ಗಳಿಗೆ ಸ್ವರ್ಗಸದೃಶವಾದ ಪಿಚ್​ನಲ್ಲಿ ಬೌಲರ್​ಗಳ ಕೈಯಿಂದ ಸಿಡಿದು, ಗಾಳಿಯನ್ನು ಸೀಳಿಕೊಂಡು ಪಿಚ್​ನ ಗಟ್ಟಿ ಪದರಕ್ಕೆ ಅಪ್ಪಳಿಸಿ ಪುಟಿಯುವ ಚೆಂಡು ಬ್ಯಾಟ್ಸ್​ಮನ್ ಬ್ಯಾಟಿನ ಅಂಚಿಗೆ ಸವರಿ ವೇಗ ಹೆಚ್ಚಿಸಿಕೊಂಡಾಗ ಅಥವಾ ಕಳೆದುಕೊಂಡಾಗ ಫೀಲ್ಡರ್​ಗಳು ಎಷ್ಟು ದೂರದಲ್ಲಿ ನಿಂತರೆ ಕ್ಯಾಚ್ ಸುಲಭವಾಗಿ ಹಿಡಿಯಲು ಸಾಧ್ಯ ಎಂಬ ಅಂಕಗಣಿತ-ರೇಖಾಗಣಿತ ಅವರ ತಲೆಯಲ್ಲಿ ಓಡುತ್ತಿತ್ತು.

ಹಿಂದಿನೆಲ್ಲ ಆಸೀಸ್ ಪ್ರವಾಸಗಳಲ್ಲಿ ಭಾರತೀಯ ಆಟಗಾರರನ್ನು ಕಾಡಿಸಿದ್ದು ಸಹ ಅಲ್ಲಿನ ದೊಡ್ಡದೊಡ್ಡ ಕ್ರೀಡಾಂಗಣಗಳು, ಪಿಚ್​ನಿಂದ ಮೈಲುದೂರದಲ್ಲಿರುವ ಬೌಂಡರಿ ಗೆರೆಗಳು. ಇನ್ನು ಆಸೀಸ್ ಬ್ಯಾಟ್ಸ್​ಮನ್​ಗಳಿಂದ ನಮ್ಮ ಬೌಲರ್​ಗಳು ನಿರ್ದಯವಾಗಿ ಬೌಂಡರಿ ಚಚ್ಚಿಸಿಕೊಳ್ಳುವುದಕ್ಕೆ ಹಾಗೂ ಫೀಲ್ಡರ್​ಗಳು ಕ್ಯಾಚ್ ಕೈಚೆಲ್ಲುವುದಕ್ಕೆ ನಿಖರ ಫೀಲ್ಡಿಂಗ್ ನಿಯೋಜನೆ ಸಾಧ್ಯವಾಗದೇ ಇರುವುದೇ ಕಾರಣವಾಗಿತ್ತು. ಇಂಥ ಎಲ್ಲ ಸವಾಲುಗಳಿಗೆ ಬೇರೆ ಎಲ್ಲರಿಗಿಂತ ಮುಂಚಿತವಾಗಿ ಸಜ್ಜುಗೊಳ್ಳಬೇಕು ಎನ್ನುವುದು ದಾದಾ ಇರಾದೆಯಾಗಿತ್ತು. ಅದೇ ಆಲೋಚನೆ ಅವರನ್ನು ಸಿಡ್ನಿಗೆ, ಗ್ರೆಗ್ ಚಾಪೆಲ್ ಬಳಿಗೆ ಕರೆದುಕೊಂಡು ಹೋಗಿತ್ತು. ದಿನದ ಯಾವ ಅವಧಿ ಬ್ಯಾಟಿಂಗ್​ಗೆ ಅತ್ಯಂತ ಕಠಿಣ? ಆಸೀಸ್​ನ ಯಾವ ಮೈದಾನದಲ್ಲಿ ಇಬ್ಬರು ಸ್ಪಿನ್ನರ್​ಗಳನ್ನು ಆಡಿಸಬಹುದು? ಯಾವ ತುದಿಯಿಂದ ಸ್ಪಿನ್ನರ್​ಗಳನ್ನು ದಾಳಿಗಿಳಿಸುವುದು ಸೂಕ್ತ? ಆಯತಾಕಾರದ ಅಡಿಲೇಡ್ ಮೈದಾನದಲ್ಲಿ ಸೂಕ್ತ ಫೀಲ್ಡಿಂಗ್ ಪ್ಲೇಸ್​ವೆುಂಟ್ ಯಾವುದು? ಸಿಡ್ನಿ ಕ್ರೀಡಾಂಗಣದಲ್ಲಿ ಸೂಕ್ತ ಬೌಲಿಂಗ್ ಕಾಂಬಿನೇಷನ್ ಯಾವುದು? ಇತ್ಯಾದಿ ಪ್ರಶ್ನೆ-ಸವಾಲುಗಳಿಗೆ ಗ್ರೆಗ್ ಜತೆಗಿನ 7 ದಿನಗಳ ತರಬೇತಿ ಸಜ್ಜುಗೊಳಿಸಿತು. ಈ ವಾತಾವರಣ ಹೊಸದಲ್ಲ ಎಂಬ ಒಂದು ಭಾವನೆಯೇ ಅವರಲ್ಲಿನ ಆಶಾವಾದವನ್ನು ಬೆಚ್ಚಗಾಗಿಸಿತ್ತು.

ಕೊನೆಗೂ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಕಾಲಿಟ್ಟಾಗ ತಂಡವೆಲ್ಲ ಹೊಸ ವಾತಾವರಣದಲ್ಲಿ ಕುತೂಹಲ ತಣಿಸಿಕೊಳ್ಳುತ್ತಿದ್ದರೆ, ನಾಯಕ ಗಂಗೂಲಿ ಎದುರಾಳಿಗಳ ಪ್ರತೀ ತಂತ್ರಕ್ಕೆ ಮುಂಚಿತವಾಗಿ ತಾವೇ ಸೆಡ್ಡುಹೊಡೆಯುವ ಮನೋಬಲದಿಂದ ಸಜ್ಜಾಗಿದ್ದರು. ದಾದಾ ಅಪೇಕ್ಷೆಯಂತೆ ತಂಡ ಹದಿನೈದು ದಿನ ಮುಂಚಿತವಾಗಿ ಪ್ರವಾಸ ಆಗಮಿಸಿ, ಮೊದಲ ಟೆಸ್ಟ್​ಗೆ ಮುನ್ನ ಮೂರು ಅಭ್ಯಾಸ ಪಂದ್ಯ ಆಡಿತ್ತು. ಪರ್ತ್​ನಂಥ ನರಕಸದೃಶ ಪಿಚ್​ನಲ್ಲಿ ಕಹಿ ಅನುಭವ ಹೊಂದಿದ್ದ ಭಾರತಕ್ಕೆ ಬ್ರಿಸ್ಬೆನ್ ಸಹ ಕಬ್ಬಿಣದ ಕಡಲೆ ಆಗಲಿದೆ ಎಂಬ ಭಾವನೆ ಇತ್ತು. ಆದರೆ, ಏನಾಶ್ಚರ್ಯ, ಶ್ರೇಷ್ಠ ನಾಯಕ ಸ್ಟೀವ್ ವಾ ಅವರ ವಿದಾಯ ಸರಣಿಯಲ್ಲಿ ಭಾರತೀಯರನ್ನು ಹೊಸಕಿಹಾಕುವ ಆತಿಥೇಯರ ಕನಸು ದೊಡ್ಡ ಭ್ರಮೆಯಾಗಿತ್ತು. ಆರಂಭದ ದಿನವೇ ಗಂಗೂಲಿ ಕಾಂಗರೂಗಳ ಆತ್ಮವಿಶ್ವಾಸದ ಬಲೂನಿಗೆ ಸೂಜಿ ಚುಚ್ಚಿದ್ದರು. ಮೊದಲ ಟೆಸ್ಟ್​ನಲ್ಲೇ ದಾದಾ ಭರ್ಜರಿ ಶತಕ ಬಾರಿಸಿದ್ದರು. ಇವರ ಬಾಹುಬಲಿ ಬ್ಯಾಟಿಂಗ್ ಎದುರು ಆಸೀಸ್ ಬೌಲರ್​ಗಳು ದಂಗಾಗಿದ್ದರು. ಇತ್ತ ಭಾರತೀಯರಿಗೂ ನಿರೀಕ್ಷೆ ಇರಲಿಲ್ಲ. ಇಂಗ್ಲೆಂಡ್​ನ ಲಾರ್ಡ್ಸ್

ನಲ್ಲಿ ಚೊಚ್ಚಲ ಟೆಸ್ಟ್​ನಲ್ಲೇ ಶತಕ ಸಿಡಿಸಿದ್ದರೂ, ಆಸೀಸ್ ನೆಲದಲ್ಲಿ ಗಂಗೂಲಿಯಿಂದ ಇಂಥ ಮಹೋನ್ನತ ಇನಿಂಗ್ಸ್​ನ ಕಲ್ಪನೆಯೂ ಯಾರಿಗೂ ಇರಲಿಲ್ಲ. ಆ ಇಡೀ ಪ್ರವಾಸಕ್ಕೆ ದಾದಾ ಶತಕ ದಿಕ್ಸೂಚಿಯಾಯಿತು. ಭಾರತದ ಈ ತಂಡ ಸುಲಭದ ತುತ್ತಲ್ಲ ಎಂಬ ಸಂದೇಶ ಆತಿಥೇಯರಿಗೆ ರವಾನೆಯಾಯಿತು. ದಾದಾ ಆಟದ ಸ್ಪೂರ್ತಿಯಿಂದ ಉಳಿದ ಆಟಗಾರರೂ ಉತ್ತೇಜಿತರಾಗಿದ್ದರು. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ರಾಹುಲ್ ದ್ರಾವಿಡ್ ಅವಿಸ್ಮರಣೀಯ ಇನಿಂಗ್ಸ್ ಆಡಿದರು. ಅಜಿತ್ ಅಗರ್ಕರ್ ಜೀವಮಾನ ಶ್ರೇಷ್ಠ ಬೌಲಿಂಗ್ ನಡೆಸಿದರು. ಭಾರತ ಐತಿಹಾಸಿಕ ಟೆಸ್ಟ್ ಗೆಲುವೊಂದನ್ನು ದಾಖಲಿಸಿತು. ಆಸ್ಟ್ರೇಲಿಯಾ ತಂಡ ಮೊದಲ ಬಾರಿ ಭಾರತದ ವಿರುದ್ಧ ತವರಿನಲ್ಲಿ ಸರಣಿ ಹಿನ್ನಡೆ ಅನುಭವಿಸಿ ಕಂಗಾಲಾಗಿತ್ತು. ಮೆಲ್ಬೋರ್ನ್​ನ 3ನೇ ಟೆಸ್ಟ್​ನಲ್ಲಿ ಕಾಂಗರೂ ತಿರುಗೇಟು ನೀಡಿತಾದರೂ, ಭಾರತದ ಹೋರಾಟ ಮುಗಿದಿರಲಿಲ್ಲ. ಮೊದಲ ಮೂರು ಟೆಸ್ಟ್​ಗಳಲ್ಲಿ ತಣ್ಣಗಿದ್ದ ಸಚಿನ್ ತೆಂಡುಲ್ಕರ್ ಸಿಡ್ನಿ ಟೆಸ್ಟ್​ನಲ್ಲಿ ಜ್ವಾಲಾಮುಖಿಯಂತೆ ಸ್ಪೋಟಿಸಿದರು. ಅವರ ಮ್ಯಾರಥಾನ್ ದ್ವಿಶತಕ ಶ್ರೇಷ್ಠ ಇನಿಂಗ್ಸ್​ಗಳಲ್ಲೊಂದಾಗಿತ್ತು. ಸ್ಟೀವ್ ವಾರ ವಿದಾಯ ಟೆಸ್ಟ್​ನಲ್ಲಿ ಆಸೀಸ್ ಸೋಲಿನ ಅಂಚಿನಲ್ಲಿತ್ತು. ಭಾರತ ಸರಣಿ ದಿಗ್ವಿಜಯದ ಹೊಸ್ತಿಲಲ್ಲಿತ್ತು. ಕೊನೆಗೂ ಸ್ಟೀವ್ ವಾ ಜೀವಮಾನದ ಇನಿಂಗ್ಸ್ ಆಡುವ ಮೂಲಕ ಮುಜುಗರದಿಂದ ಪಾರಾದರು. ಟೆಸ್ಟ್ ಡ್ರಾಗೊಂಡಿತ್ತು. ಸರಣಿ ಡ್ರಾಗೊಂಡಿತ್ತು. ಭಾರತ ನೈತಿಕ/ ಮಾನಸಿಕ ಗೆಲುವು ದಾಖಲಿಸಿತ್ತು. ಪತ್ರಕರ್ತ ಗೌತಮ್ ಭಟ್ಟಾಚಾರ್ಯ ನೆರವಿನಿಂದ ಗಂಗೂಲಿ ಬರೆದಿರುವ ತಮ್ಮ ಆತ್ಮಕಥೆ ‘ಎ ಸೆಂಚುರಿ ಈಸ್ ನಾಟ್ ಎನಫ್’ ದಾದಾ ಒಳಗಿನ ಚಾಣಾಕ್ಷ ಕ್ರಿಕೆಟಿಗ, ಚಾಣಕ್ಯ ತಂತ್ರಗಾರನ ಪರಿಚಯವನ್ನು ಮಾಡಿಸುತ್ತದೆ. ಟೆಸ್ಟ್ ರ್ಯಾಂಕಿಂಗ್​ನಲ್ಲಿ ವಿಶ್ವ ನಂ.1 ವಿರಾಟ್ ಕೊಹ್ಲಿ ನಾಯಕತ್ವದ ನಂ.1 ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿರುವ ಈ ಹೊತ್ತಿನಲ್ಲಿ ಗಂಗೂಲಿ ಆತ್ಮಕಥೆಯ ಪುಟಗಳು ಯುವಪಡೆಗೆ ದಿಕ್ಸೂಚಿಯಾಗಬಲ್ಲ ಗಟ್ಟಿತನ ಹೊಂದಿವೆ.

ಇನ್ನೇನು ನಾಳೆಯಿಂದ ಅಡಿಲೇಡ್​ನಲ್ಲಿ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ಮನೋಬಲದಲ್ಲಿ ಭಾರತೀಯ ತಂಡದಲ್ಲಿರುವ ಆಸೀಸ್ ಆಟಗಾರನಂತಿರುವ, ವಿರಾಟ್ ಕೊಹ್ಲಿ ತಂಡದ ಮೇಲೆ ಆಶಾವಾದ ಇರಿಸಿಕೊಳ್ಳುವುದಕ್ಕೆ ಸಾಕಷ್ಟು ಕಾರಣಗಳಿವೆ. ವಿರಾಟ್ ನಾಯಕರಾದ ಮೇಲೆ ತಂಡ ಅಪರಿಮಿತ ಯಶಸ್ಸು ಕಂಡಿದ್ದರೂ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ನಂಥ ಪ್ರತಿಕೂಲ ಸನ್ನಿವೇಶದಲ್ಲಿ ದೊಡ್ಡ ಯಶಸ್ಸು ಸಾಧ್ಯವಾಗಿಲ್ಲ. ಆದರೆ, ಆ ಚಿತ್ರಣ ಬದಲಾಯಿಸುವುದಕ್ಕೆ ಹಾಲಿ ಕಾಂಗರೂ ಪ್ರವಾಸ ಉತ್ತಮ ಅವಕಾಶ. ಒಂದು ಅನುಕೂಲವೆಂದರೆ, ಹಿಂದೆ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಮಾಡಿದ ಪ್ರವಾಸ ಸಂದರ್ಭದ ಆಸ್ಟ್ರೇಲಿಯಾ ತಂಡಗಳಿಗೆ ಹೋಲಿಸಿದರೆ, ಈಗಿನ ಆತಿಥೇಯ ತಂಡ ಎಳಸು, ಅನನುಭವಿ ಹಾಗೂ ಸಂಕ್ರಮಣ ಕಾಲಘಟ್ಟದಲ್ಲಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ಚೆಂಡು ವಿರೂಪ ಹಗರಣ, ಅದರಿಂದಾದ ಅವಮಾನ, ತಂಡದ ನಾಯಕ, ಉಪನಾಯಕ, ಕೋಚ್, ಕ್ರಿಕೆಟ್ ಆಸ್ಟ್ರೇಲಿಯಾ ಪ್ರಮುಖರ ರಾಜೀನಾಮೆ ಪ್ರಹಸನಗಳಿಂದ ಆಟಗಾರರು ಪೂರ್ಣಪ್ರಮಾಣದಲ್ಲಿ ಹೊರಬಂದಿಲ್ಲ. ಹಾಗಾಗಿ ತವರಿನಲ್ಲಿ ಭಾರತದಂಥ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಗೆಲುವು ಸಾಧಿಸಿದರೆ, ಆ ದೇಶ ಮತ್ತೆ ಕ್ರಿಕೆಟ್ ಘನತೆಯ ಹಾದಿಗೆ ಮರಳುವ ಅವಕಾಶವಿದೆ.

ಇತ್ತ ಭಾರತ ತಂಡದಲ್ಲಿರುವ ಏಕೈಕ ಟ್ರಂಪ್​ಕಾರ್ಡ್ ನಾಯಕ ವಿರಾಟ್ ಕೊಹ್ಲಿ ಮಾತ್ರ. ಕಾಂಗರೂಗಳು ಹೆದರುತ್ತಿರುವುದು ಹಾಗೂ ಅವರೆಲ್ಲ ಗಮನ ಕೇಂದ್ರೀಕೃತ ಆಗಿರುವುದೂ ವಿರಾಟ್ ಸುತ್ತಲೇ. 2014-15ರಲ್ಲಿ ಭಾರತ ಧೋನಿ ನಾಯಕತ್ವದಲ್ಲಿ ಕಾಂಗರೂ ಪ್ರವಾಸ ಕೈಗೊಂಡಿದ್ದಾಗ ವಿರಾಟ್ 8 ಇನಿಂಗ್ಸ್​ಗಳಿಂದ ದಾಖಲೆ 692 ರನ್ ಚಚ್ಚಿದ್ದರು. ಅಡಿಲೇಡ್​ನಲ್ಲೇ ನಡೆದ ಮೊದಲ ಟೆಸ್ಟ್​ನಲ್ಲಿ 115 ಮತ್ತು 141 ರನ್​ಗಳ ದ್ವಿವಳಿ ಶತಕ ಭಾರತಕ್ಕೆ ಪ್ರಸಿದ್ಧ ಗೆಲುವು ತಂದುಕೊಟ್ಟಿತು. ಈವರೆಗೆ ಆಸೀಸ್ ನೆಲದಲ್ಲಿ ಅವರು 8 ಟೆಸ್ಟ್​ಗಳ 16 ಇನಿಂಗ್ಸ್​ಗಳಿಂದ 62 ಸರಾಸರಿಯಲ್ಲಿ 992 ರನ್ ಬಾರಿಸಿದ್ದಾರೆ. 5 ಶತಕ, 2 ಅರ್ಧ ಶತಕ ಒಳಗೊಂಡ ಅವರ ಆಟ ಈ ಟೆಸ್ಟ್ ಸರಣಿಗೆ ಮುನ್ನ ತಂಡದ ಜೊತೆಗಾರರಿಗೆ ಆತ್ಮವಿಶ್ವಾಸ ತಂದುಕೊಡಲು ಸಾಕು.

ಹಾಲಿ ತಂಡದಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ತಂಡದ ವೇಗಿಗಳು ಕೆಲವು ಬ್ಯಾಟ್ಸ್​ಮನ್​ಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆಸ್ಟ್ರೇಲಿಯಾ ಪಂದ್ಯವೆಂದರೆ ಮೈದಾನದ ಆಟಕ್ಕಿಂತ ತೀವ್ರತರವಾದ ಹೋರಾಟ ಮನೋನೆಲೆಯಲ್ಲಿ ನಡೆಯುತ್ತಿರುತ್ತದೆ. ಸ್ಟೀವ್ ವಾರನ್ನು ಟಾಸ್​ಗೆ ಕಾಯಿಸುವ ಮೂಲಕ ಗಂಗೂಲಿ ಹಿಂದೆ ಮಾನಸಿಕ ಪೆಟ್ಟುಕೊಟ್ಟಿದ್ದರು. ಮೊನ್ನೆ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಬಮುಡ ತೊಟ್ಟು ಟಾಸ್​ಗೆ ತೆರಳಿದ್ದ ವಿರಾಟ್ ಸಹ ಕಾಂಗರೂಗಳಿಗೆ ಅವರದೇ ಭಾಷೆಯಲ್ಲಿ ಸೆಡ್ಡುಹೊಡೆಯಬಲ್ಲ ಗಟ್ಟಿಗ. ಓರ್ವ ಆಟಗಾರನಾಗಿ, ನಾಯಕನಾಗಿ ಹಾಗೂ ನಿಜಬದುಕಿನಲ್ಲಿ ವಿರಾಟ್ ಪಾಲಿಗೆ ಹನಿಮೂನ್ ಅವಧಿ ಮುಗಿದಿದೆ. ಕ್ರಿಕೆಟ್ ಶ್ರೇಷ್ಠರ ಒಡ್ಡೋಲಗದಲ್ಲಿ ನಾಯಕರಾಗಿ ತಮ್ಮ ಹೆಸರು ಯಾವ ಸಾಲಿನಲ್ಲಿರಬೇಕೆಂದು ನಿರ್ಷRಸುವ, ನಿರ್ಣಯಿಸುವ ವೃತ್ತಿಜೀವನದ ಅತಿ ದೊಡ್ಡ ಅಗ್ನಿಪರೀಕ್ಷೆ ಆಸ್ಟ್ರೇಲಿಯಾ ಪ್ರವಾಸದ ರೂಪದಲ್ಲಿ ವಿರಾಟ್ ಮುಂದಿದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)