More

    ಆಸ್ಕರ್ ಅಂಬರಕ್ಕೆ ನಾದ ಏಣಿ ಹಾಕಿದ ಕೀರವಾಣಿ

    ಆಸ್ಕರ್ ಅಂಬರಕ್ಕೆ ನಾದ ಏಣಿ ಹಾಕಿದ ಕೀರವಾಣಿ‘ಏಕ್ ಪ್ಯಾರ್ ಕಾ ನಗಮಾ ಹೈ / ಮೌಜೊ ಕಿ ರವಾನಿ ಹೈ..’

    ಕೆಲವೊಂದು ತಪು್ಪಗ್ರಹಿಕೆಗಳಿಗೆ ಜೀವನ ಗತಿಯನ್ನೇ ಬದಲಿಸಿಬಿಡುವ ತಾಕತ್ತಿರುತ್ತದೆ. ನಾವೇನೋ ಅಂದುಕೊಂಡಿರುತ್ತೇವೆ. ಅದೇ ಸರಿ ಅಂದುಕೊಂಡಿರುತ್ತೇವೆ. ಆದರೆ, ನಿಜವಾಗಿ ಅಲ್ಲಿ ಬೇರೇನೋ ಇರುತ್ತದೆ. ಅದು ಕಣ್ತಪ್ಪೋ, ಗ್ರಹಿಕೆಯ ತಪ್ಪೋ? ಆದರೆ, ಹೃದಯ ಅದನ್ನೇ ಒಪ್ಪಿಕೊಂಡಿರುತ್ತದೆ.

    ‘ಏಕ್ ಪ್ಯಾರ್ ಕಾ ನಗಮಾ ಹೈ, ಮೌಜೊ ಕಿ ರವಾನಿ ಹೈ| ಜಿಂದಗಿ ಔರ್ ಕುಛ್ ಭೀ ನಹೀ, ತೇರಿ ಮೇರಿ ಕಹಾನಿ ಹೈ..’ ಬಾಲಿವುಡ್​ನ ಅಮರ ಪ್ರೇಮಗೀತೆಗಳಲ್ಲೊಂದು. ‘ಇದೊಂದು ಪ್ರೇಮದ ಗೀತೆ, ಆಕರ್ಷಣೆ ಬಹಳ ತೀವ್ರವಾಗಿದೆ, ಜೀವನದಲ್ಲಿ ಇದನ್ನು ಬಿಟ್ಟರೆ ಬೇರೇನಿದೆ, ಇದು ನನ್ನ ನಿನ್ನ ಕಥೆಯೇ ಆಗಿದೆ’ ಎಂಬರ್ಥದ ಸಾಲುಗಳವು. 10 ವರ್ಷದ ಆ ಬಾಲಪ್ರತಿಭೆಗೆ ಪಿಟೀಲಿನಲ್ಲಿ ಈ ಹಾಡು ನುಡಿಸುವುದೆಂದರೆ ಪಂಚಪ್ರಾಣ. ಆಂಧ್ರದ ಕರಾವಳಿ ನಗರ ಕಾಕಿನಾಡ ಸುತ್ತಮುತ್ತ ಜನಪ್ರಿಯವಾಗಿದ್ದ ‘ಪ್ರಾಣಲಿಂಗಂ’ ಎಂಬ ಸಂಚಾರಿ ಸಂಗೀತ ತಂಡದಲ್ಲಿ ಈ ಹುಡುಗನೇ ಆಕರ್ಷಣೆ. ಈತ ಭಾವಗಂಗೆಯೇ ಅವತರಿಸುವಂತೆ ‘ಏಕ್ ಪ್ಯಾರ್ ಕಾ ನಗಮಾ ಹೈ’ ಎಂದು ವಯಲಿನ್​ನಲ್ಲಿ ಸ್ವರ ಹೊಮ್ಮಿಸುತ್ತಿದ್ದರೆ ಜನ ಭಾವಪರವಶರಾಗುತ್ತಿದ್ದರು. ಈ ಹಾಡು ಆ ಹುಡುಗನಿಗೆ ಅಷ್ಟೊಂದು ಪ್ರಿಯವೆನಿಸುವುದಕ್ಕೂ ಒಂದು ಕಾರಣವಿತ್ತು. ಅದು ‘ಮೌಜೊ ಕಿ ರವಾನಿ ಹೇ..’ ಸಾಲು. ಹೌದು! ಆ ಪುಟ್ಟ ಬಾಲಕ ಆ ಸಾಲನ್ನು ‘ಮೌಜೊ ‘ಕೀರವಾಣಿ’ ಹೇ’ ಎಂದು ಗ್ರಹಿಸಿಕೊಂಡಿದ್ದ. ’ಕೀರವಾಣಿ’ ತನ್ನ ಹೆಸರು… ಅರೆ.. ನನ್ನ ಹೆಸರಲ್ಲೇ ಹಾಡು ಎಂಬುದು ಆತನ ಖುಷಿಗೆ ಕಾರಣವಾಗಿತ್ತು.

    ಕೀರವಾಣಿ ಎನ್ನುವುದು ಕರ್ನಾಟಕ ಸಂಗೀತ ಪರಂಪರೆಯಲ್ಲಿನ ಪ್ರಸಿದ್ಧ ರಾಗದ ಹೆಸರು. ಕರ್ನಾಟಕ ಸಂಗೀತದ 72 ಮೇಳಕರ್ತ ರಾಗಗಳಲ್ಲಿ ಕೀರವಾಣಿ 21ನೇ ಮೇಳಕರ್ತ ರಾಗ. ‘ಅಮೆರಿಕ ಅಮೆರಿಕ’ ಚಿತ್ರದ ‘ನೂರು ಜನ್ಮಕು, ನೂರಾರು ಜನ್ಮಕು’ ಕೀರವಾಣಿ ರಾಗದಲ್ಲಿರುವ ಅತ್ಯಂತ ಜನಪ್ರಿಯ ಹಾಡು. ಮೈಸೂರು ಅನಂತಸ್ವಾಮಿ ಕಂಠಸಿರಿಯಲ್ಲಿ ಅಜರಾಮರವಾಗಿರುವ ಜಿಎಸ್​ಎಸ್ ಕವಿತೆ ‘ಎದೆ ತುಂಬಿ ಹಾಡಿದೆನು ಅಂದು ನಾನು’, ಅಷ್ಟೇ ಏಕೆ ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ..’ ಇನ್ನು ಮುಂತಾದ ಹಾಡುಗಳಿಗೆ ಅಮರತ್ವ ತಂದುಕೊಟ್ಟಿದ್ದು ಇದೇ ಕೀರವಾಣಿ ರಾಗ. ಕರ್ನಾಟಕ ಸಂಗೀತದಿಂದ ಹಿಂದೂಸ್ಥಾನಿಗೂ ವಲಸೆ ಹೋಗಿ ಸುಪ್ರಸಿದ್ಧವಾಗಿರುವ ಇಂಥ ರಾಗದ ಹೆಸರು ಹೊತ್ತ ಕೀರವಾಣಿ ಭಾರತೀಯ ಸಂಗೀತ ಅಷ್ಟೇ ಏಕೆ ವಿಶ್ವ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದು ವಿಧಿಲಿಖಿತವೇ ಆಗಿತ್ತು ಅನಿಸುತ್ತದೆ.

    ಮೊನ್ನೆ ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು’ ಹಾಡಿನ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿಯೇ ಬಂದ ಮೇಲೆ ಕೀರವಾಣಿ ಹೆಸರು ಎಲ್ಲರ ನಾಲಿಗೆಯಲ್ಲಿ ನಲಿಯುತ್ತಿದೆ. ಆದರೆ, ಸಂಗೀತ ಪ್ರಿಯರ ಪಾಲಿಗೆ, ಅದರಲ್ಲೂ ದಕ್ಷಿಣ ಭಾರತದ ಚಿತ್ರಸಂಗೀತವನ್ನು ಗುನುಗುವವರಿಗೆ ಕೀರವಾಣಿ ಸಂಗೀತ ಚಿರಪರಿಚಿತ. ‘ಬಾಹುಬಲಿ’, ‘ಕ್ಷಣಕ್ಷಣಂ’, ‘ಅಲ್ಲರಿ ಪ್ರಿಯಡು’, ‘ಪೆಲ್ಲಿ ಸಂದಡಿ’, ‘ಛತ್ರಪತಿ’, ‘ಮಗಧೀರ’, ‘ವೇದಂ’, ‘ಈಗ’, ‘ಅನ್ನಮಯ್ಯ..’ ಒಂದೇ ಎರಡೇ. ಕೀರವಾಣಿ ಹೆಸರಿನಂತೆ ಅವರ ಸಂಗೀತವೂ ಮಾಧುರ್ಯಭರಿತ, ಆರ್ದ್ರ, ಇಂಪು, ಜೀವವೀಣೆಯ ತಂತುಗಳನ್ನು ನಮಗೇ ಅರಿವಿಲ್ಲದಂತೆ ಮಿಡಿದು, ರಾಗಗಳನ್ನು ಗುನುಗುವಂತೆ ಮಾಡುವ ಅನುಪಮ ಶಕ್ತಿ ಅವರ ಹಾಡುಗಳಿಗೆ. ಬಾಲಿವುಡ್​ನ ’ಕ್ರಿಮಿನಲ್’ ಚಿತ್ರದ ‘ತು ಮಿಲೆ.. ದಿಲ್ ಖಿಲೆ..’ ಹಾಡಿನಂತೆ, ‘ಜಿಸ್ಮ್’ ಚಿತ್ರದ ‘ಜಾದು ಹೇ ನಶಾ ಹೇ’, ‘ಆವಾರಾ ಪನ್, ಬಂಜಾರಾಪನ್..’ ‘ಸಾಯಾ’ ಚಿತ್ರದ ‘ಓ ಸಾಥಿಯಾ..’ ಮೊದಲಾದ ಹಾಡುಗಳ ಎದೆ ಕರಗಿಸುವ ಸತ್ವ ಅವರ ಹಾಡುಗಳ ಶಕ್ತಿ.

    ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಕೀರವಾಣಿ ಹಾಡುಗಳಷ್ಟೇ ಅಲ್ಲ, ಅವರ ಜೀವನವೇ ಒಂದು ಬಗೆಯಲ್ಲಿ ವಿಸ್ಮಯ. ಸಾಧನೆಯಲ್ಲಿ ಎಷ್ಟೇ ದೊಡ್ಡವರಾದರೂ, ಶೋಕಿ, ಅಹಂಕಾರ ಇಲ್ಲದ ಸೀದಾಸಾದಾ ವ್ಯಕ್ತಿ. ಕಳೆದ ತಿಂಗಳು ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಾಗ ಪ್ರಶಸ್ತಿ ವೇದಿಕೆಯಲ್ಲಿ ಕೀರವಾಣಿ ಮಾಡಿದ ಭಾಷಣದಂತೆಯೇ ಅವರ ಜೀವನವೂ ಸೊಗಸು. ಸಂಗೀತ, ಕಲಾವಂತಿಕೆಯ ಹಿನ್ನೆಲೆಯ ಕುಟುಂಬದಿಂದ ಬಂದವರು ಕೀರವಾಣಿ. ಅವರ ತಂದೆ ಕೊಡುರಿ ಶಿವಶಕ್ತಿ ದತ್ತ ಬಾಲ್ಯದಲ್ಲೇ ಸಂಗೀತ ಮತ್ತು ಸಿನಿಮಾ ಹುಚ್ಚು ಹತ್ತಿಸಿಕೊಂಡು ಕೊನೆಗೆ ತೆಲುಗು ಚಿತ್ರರಂಗದಲ್ಲಿ ಗೀತರಚನೆಕಾರ ಹಾಗೂ ಚಿತ್ರಕಥೆಗಾರರಾಗಿ ಹೆಸರು ಮಾಡಿದವರು. ಇನ್ನೂ ಸ್ವಾರಸ್ಯವೆಂದರೆ, ಶಿವಶಕ್ತಿ ದತ್ತ ಮತ್ತು ‘ಬಾಹುಬಲಿ’, ‘ಆರ್​ಆರ್​ಆರ್’ ಮೊದಲಾದ ಮಹಾನ್ ಚಿತ್ರಗಳ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಖಾಸಾ ಸೋದರರು. ಅಲ್ಲಿಗೆ ‘ಬಾಹುಬಲಿ’, ‘ಆರ್​ಆರ್​ಆರ್’ ನಿರ್ದೇಶಕ ರಾಜಮೌಳಿ ಮತ್ತು ಕೀರವಾಣಿ ಕೂಡ ಸೋದರಸಂಬಂಧಿಗಳು. ಇಲ್ಲಿಗೇ ನಿಲ್ಲುವುದಿಲ್ಲ. ರಾಜಮೌಳಿ ಪತ್ನಿ ರಮಾ ಮತ್ತು ಕೀರವಾಣಿ ಪತ್ನಿ ಶ್ರೀವಲ್ಲಿ ಸ್ವಂತ ಅಕ್ಕ-ತಂಗಿ!

    ಭಾರತೀಯ ಚಿತ್ರರಂಗದಲ್ಲಿ ಹಲವು ಭಾಷಾ ಚಿತ್ರಗಳಿಗೆ ಸೂಪರ್​ಹಿಟ್ ಸಂಗೀತ ನೀಡಿದ್ದರೂ, ಎರಡು ಅವತರಣಿಕೆಗಳಲ್ಲಿ ‘ಬಾಹುಬಲಿ’ ವಿಶ್ವ ಚಿತ್ರರಂಗದ ಗಮನ ಸೆಳೆಯುವವರೆಗೆ ಕೀರವಾಣಿ ಕೂಡ ತೆರೆಮರೆಯಲ್ಲೇ ಇದ್ದಂಥವರು. ಅದಕ್ಕೆ ಕಾರಣವೂ ಇದೆ. ತೆಲುಗು ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಎಂದು ಹೆಸರಾಗಿದ್ದ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮರಕತಮಣಿ ಹೆಸರಲ್ಲಿ ಗುರುತಿಸಿಕೊಂಡಿದ್ದರು. ಬಾಲಿವುಡ್​ನಲ್ಲಿ ಅವರನ್ನು ಗುರುತಿಸುತ್ತಿದ್ದುದು ಎಂಎಂ ಕ್ರೀಮ್ ಎಂದು! ವಿವಿಧ ಭಾಷಾ ಚಿತ್ರರಂಗಗಳಲ್ಲಿ ಭಿನ್ನ ಹೆಸರಿಂದ ಗುರುತಿಸಿಕೊಂಡಿದ್ದ ಕೀರವಾಣಿ ಅಭಿಮಾನಿಗಳಿಗೆ ‘ಇವರು ಅವರೇನಾ, ಬೇರೆಯಾ’ ಎಂಬ ಗೊಂದಲ ಮೂಡಿಸಿದ್ದು ಸುಳ್ಳಲ್ಲ. ಅಂಥ ಒಂದು ಪ್ರಸಿದ್ಧ ಪ್ರಸಂಗವೂ ನಡೆದಿದ್ದಿದೆ.

    ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ವತೃ ರಾಮೋಜಿ ರಾವ್ ಅವರಿಗೆ ಕೀರವಾಣಿ ಇಷ್ಟದ ಸಂಗೀತ ನಿರ್ದೇಶಕರಾಗಿದ್ದರು. ಅವರ ಹಲವು ಚಿತ್ರಗಳಿಗೆ ಕೀರವಾಣಿ ಸಂಗೀತ ನಿರ್ದೇಶಕರಾಗಿ ಒಪ್ಪಂದ ಮಾಡಿಕೊಂಡಿದ್ದರು. ಅಷ್ಟರ ನಡುವೆ ಒಂದು ಚಿತ್ರದ ನಿರ್ದೇಶಕರ ಜತೆಗಿನ ಭಿನ್ನಾಭಿಪ್ರಾಯದಿಂದ ಕೀರವಾಣಿ ಆ ಚಿತ್ರದಿಂದ ಹೊರನಡೆದರು. ಇದನ್ನು ತಿಳಿದು ಬೇಸರಪಟ್ಟುಕೊಂಡ ರಾಮೋಜಿ ರಾವ್, ಈ ಕೀರವಾಣಿ ಸಹವಾಸವೇ ಬೇಡ. ಬಾಲಿವುಡ್​ನಲ್ಲಿ ‘ಸುರ್’ ಚಿತ್ರಕ್ಕೆ ಎಂಎಂ ಕ್ರೀಮ್ ಸಂಗೀತ ನಿರ್ದೇಶನ ಅದ್ಭುತವಾಗಿದೆ. ಅವರನ್ನು ಸಂರ್ಪಸಿ ಎಂದು ಸಹಾಯಕರಿಗೆ ಹೇಳಿದರು. ಆಗ ಎಂಎಂ ಕ್ರೀಮ್ ಮತ್ತು ಕೀರವಾಣಿ ಇಬ್ಬರೂ ಒಬ್ಬರೇ ಎಂದಾಗ ರಾಮೋಜಿ ರಾವ್ ಅಚ್ಚರಿ ಪಟ್ಟಿದ್ದರಂತೆ.

    90ರ ದಶಕದ ಬಾಲಿವುಡ್​ನ ಅನೇಕ ಅದ್ಭುತ ಚಿತ್ರ ಹಾಗೂ ಹಾಡುಗಳ ಹಿಂದೆ ಕೀರವಾಣಿ ಪ್ರತಿಭೆಯಿತ್ತು. ಆದರೆ, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಅಬ್ಬರವಿಲ್ಲದ ಆ ಕಾಲದಲ್ಲಿ ಅನೇಕರಿಗೆ ಈ ಎಂಎಂ ಕ್ರೀಮ್ ಯಾರೆಂಬುದೇ ಗೊತ್ತಿರಲಿಲ್ಲ. ಕೀರವಾಣಿ ಸಹ ಪ್ರಚಾರ ಬಯಸುತ್ತಿರಲಿಲ್ಲ. ಅವರು ಎಂಎಂ ಕ್ರೀಮ್ ಎಂಬ ಅಲಿಯಾಸ್ ಹೆಸರು ಇಟ್ಟುಕೊಂಡ ಕುರಿತೂ ಒಂದು ಕಥೆಯಿತ್ತು. ಕೀರವಾಣಿ ಅಪಾರ ದೈವಭೀರು. ಅವರ ಪತ್ನಿ ಮೊದಲ ಮಗುವಿನ ಗರ್ಭಿಣಿ ಆಗಿದ್ದಾಗ ಕುಟುಂಬಕ್ಕೆ ಆತ್ಮೀಯರಾಗಿದ್ದ ಧರ್ಮಗುರುವೊಬ್ಬರು ನಿಮಗೆ ಅಕಾಲ ಮೃತ್ಯುವಿನ ಅಪಾಯವಿದೆ. ಒಂದೂವರೆ ವರ್ಷ ಕಾಲ ಕುಟುಂಬದಿಂದ ದೂರ ಸನ್ಯಸ್ಥ ಜೀವನ ನಡೆಸಿ ಎಂದು ಸಲಹೆ ನೀಡಿದ್ದರು. ಅದೇ ರೀತಿ ಕೀರವಾಣಿ ಆವರೆಗಿನ ಗಳಿಕೆಯನ್ನೆಲ್ಲ ದಾನಧರ್ಮ ಮಾಡಿ, ಕುಟುಂಬದಿಂದ ದೂರ ಏಕಾಂಗಿಯಾಗಿ ಕಾಲಕಳೆದಿದ್ದರಂತೆ. ಮಗ ಹುಟ್ಟಿ ಕೆಲವು ತಿಂಗಳ ನಂತರ ಅವರು ಮನೆಗೆ ಮರಳಿದರು. ಮಗನಿಗೆ ಕಾಲಭೈರವ ಎಂದು ಹೆಸರಿಟ್ಟರು. ಕೀರವಾಣಿ ಅವರ ಇಬ್ಬರು ಗಂಡುಮಕ್ಕಳು ಕೂಡ ಗಾಯಕ, ಸಂಗೀತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಗುರುಗಳ ಸೂಚನೆಯಂತೆ ಬಾಲಿವುಡ್​ನಲ್ಲಿ ಎಂಎಂ ಕ್ರೀಮ್ ಎಂಬ ಹೆಸರು ಇರಿಸಿಕೊಂಡಿದ್ದೂ ಇದೇ ಅವಧಿಯಲ್ಲಿ.

    ಕೀರವಾಣಿಗೆ ದೊಡ್ಡ ಬ್ರೇಕ್ ನೀಡಿದ್ದು ರಾಮಗೋಪಾಲ ವರ್ಮ. ಚೆನ್ನೈನ ಸ್ಟುಡಿಯೋದಲ್ಲೊಮ್ಮೆ ಕೀರವಾಣಿ ಸ್ಟೀಫನ್ ಕಿಂಗ್​ರ ಕೃತಿಯೊಂದನ್ನು ಓದುತ್ತ ಕುಳಿತಿದ್ದಾಗ ಅಚಾನಕ್ಕಾಗಿ ವರ್ಮ ಕಣ್ಣಿಗೆ ಬಿದ್ದರು. ಅದಾಗಲೇ ಕೀರವಾಣಿ ಸಂಯೋಜಿಸಿದ ಹಾಡುಗಳನ್ನು ಕೇಳಿದ್ದ ವರ್ಮ, ಸ್ಟೀಫನ್ ಕಿಂಗ್ ಅಭಿಮಾನಿಯೆಂದ ಮೇಲೆ ಕೀರವಾಣಿ ಜತೆ ನಾನು ಕೆಲಸ ಮಾಡಲೇಬೇಕು ಎಂದು ನಿರ್ಧರಿಸಿದರು. ‘ಕ್ಷಣ ಕ್ಷಣಂ’ ಚಿತ್ರಕ್ಕೆ ಕೀರವಾಣಿ ಆಯ್ಕೆಯಾಗಿದ್ದು ಹೀಗೆ. 1994ರಲ್ಲಿ ಮಹೇಶ್ ಭಟ್​ರ ‘ಕ್ರಿಮಿನಲ್’ ಚಿತ್ರದ ಮೂಲಕ ಕೀರವಾಣಿ ಬಾಲಿವುಡ್​ಗೆ ದೊಡ್ಡ ಮಟ್ಟದಲ್ಲಿ ಪ್ರವೇಶಿಸಿದರು. ಅದೊಂದು ದಿನ ಪ್ರಸಿದ್ಧ ಗಾಯಕ ಕುಮಾರ್ ಸಾನು ಅವರನ್ನು ಭೇಟಿ ಮಾಡಿದ ಸಂದರ್ಭ. ಸಾನು ಸಹಜವಾಗಿ ಹಸ್ತಲಾಘವಕ್ಕೆ ಕೈಚಾಚಿದರು. ಆದರೆ, ನೇಮದಲ್ಲಿದ್ದ ಕೀರವಾಣಿ ಹಸ್ತಚಾಚದೆ ಕೈಮುಗಿದರು. ಸಾನು ಆ ಕ್ಷಣ ತುಸು ಪೆಚ್ಚಾದರೂ, ಮುಂದೆ ಅರ್ಥ ಮಾಡಿಕೊಂಡರು. ಅವರಿಬ್ಬರ ತಾಳಮೇಳದಲ್ಲಿ ‘ತು ಮಿಲೇ, ದಿಲ್ ಖಿಲೆ’ ಹಾಡು ಅದ್ಭುತ ಗೀತೆಯಾಗಿ ಹೊರಹೊಮ್ಮಿತು. ಅದೇ ರೀತಿ ‘ಜಿಸ್ಮ್’ ಚಿತ್ರದಲ್ಲಿ ನಾಯಕಿ ಉನ್ಮಾದದಿಂದ ಹಾಡುವ ವಿರಹಗೀತೆ ‘ಜಾದೂ ಹೇ ನಶಾ ಹೆ’ ಹಾಡಿಗೆ ಕೀರವಾಣಿ ಆಗಿನ್ನೂ ಉದ್ಯಮದಲ್ಲಿ ಹೊಸಬರಾಗಿದ್ದ ಶ್ರೇಯಾ ಘೋಷಾಲ್​ರನ್ನ ಆಯ್ಕೆ ಮಾಡಿಕೊಂಡಿದ್ದೂ ಒಂದು ರೀತಿಯಲ್ಲಿ ಟ್ರೆಂಡ್​ಸೆಟ್ಟರ್ ಆಗಿತ್ತು. ಲತಾ ಮಂಗೇಶ್ಕರ್ ಘರಾನಾಕ್ಕೆ ಸೇರುವ, ಮೃದು, ಮಧುರ, ಜೇನುದನಿಯ ಶ್ರೇಯಾ, ಮಾದಕ ಸ್ವರದಲ್ಲಿ ‘ಜಾದೂ ಹೇ ನಶಾ ಹೇ’ ಹಾಡಿಯಾರೆ ಎಂಬ ಅನುಮಾನ ಕೆಲವರಿಗಿತ್ತು. ಆದರೆ, ಶ್ರೇಯಾ ಮತ್ತು ಕೀರವಾಣಿ ಇಬ್ಬರೂ ಅಗ್ನಿಪರೀಕ್ಷೆಯಲ್ಲಿ ಪಾಸಾಗಿದ್ದರು. ವಿಶೇಷವೆಂದರೆ ಶ್ರೇಯಾ ಜತೆ ಲೋಕಾಭಿರಾಮವಾಗಿ ಮಾತನಾಡುವಾಗ ಆಕೆ ನಗುವ ತುಣುಕುಗಳನ್ನು ಕೀರವಾಣಿ ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ನಂತರ ಅದನ್ನು ಹಾಡಿನ ನಡುವೆ ಸೇರಿಸಿದ್ದರು. ಹಾಡುವ ಸಂದರ್ಭದಲ್ಲಿ ನಡುನಡುವೆ ನಗಲು ಹೇಳಿದ್ದರೆ, ಅದು ಅಷ್ಟು ಸಹಜವಾಗಿ ಬರುತ್ತಿರಲಿಲ್ಲ ಎನ್ನುವುದು ಕೀರವಾಣಿ ಅಭಿಪ್ರಾಯವಾಗಿತ್ತು.

    ಕನ್ನಡದಲ್ಲೂ ‘ಜಮೀನ್ದಾರ’, ‘ಅಳಿಮಯ್ಯ’, ‘ಸ್ವಾತಿ’, ‘ಅಪ್ಪಾಜಿ’, ‘ವೀರಮದಕರಿ’ ಹೀಗೆ 5 ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಕೀರವಾಣಿ, ‘ಬಾಹುಬಲಿ’ ಎರಡು ಅವತರಣಿಕೆಗಳ ಮೂಲಕ ವಿಶ್ವ ಮಟ್ಟದಲ್ಲಿ ಪರಿಚಯಗೊಂಡರು. ಇದೀಗ ‘ಆರ್​ಆರ್​ಆರ್’ ಚಿತ್ರ ಮತ್ತು ‘ನಾಟು ನಾಟು’ ಹಾಡು ಅವರನ್ನು ಆಸ್ಕರ್ ಎತ್ತರಕ್ಕೇರಿಸಿದೆ. ಸಾಧನೆಯಲ್ಲಿ ಅಂಬರಕ್ಕೇರಿದರೂ, ವ್ಯಕ್ತಿಯಾಗಿ ಸೀದಾಸಾದಾ ಸರಳ, ನಿಸ್ಪಹತೆಯಿಂದ ಎಲ್ಲರಲ್ಲೊಬ್ಬರಂತೆ ಇರುವುದನ್ನೇ ಇಷ್ಟ ಪಡುವ ಕೀರವಾಣಿ ಭಾರತೀಯ ಚಿತ್ರಸಂಗೀತವನ್ನು ಕೀರ್ತಿಶಿಖರದ ಮೇಲೆ ಪ್ರತಿಷ್ಠಾಪಿಸಿದ್ದಾರೆ. ಅಭಿನಂದನೆಗಳು ಕೀರವಾಣಿ ಸರ್..

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts