Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ದಡ್ಡತನ-ದೊಡ್ಡತನದ ನಡುವೆ ನಡವಳಿಕೆಯೆಂಬ ಗೆರೆ

Wednesday, 28.03.2018, 3:04 AM       No Comments

ಯಾವುದೇ ಸಂದರ್ಭ, ಘಟನೆಗೆ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದು ನಮ್ಮ ವೃತ್ತಿಪರತೆ, ಘನತೆ, ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಒಟ್ಟಾರೆ ನಡವಳಿಕೆ ವ್ಯಕ್ತಿತ್ವದ ಕನ್ನಡಿ. ಕ್ರೀಡಾವಲಯದ ಈಚಿನ ಮೂರು ಘಟನೆಗಳು ಈ ಮಾತಿಗೆ ಸಮರ್ಥನೆ ಒದಗಿಸುತ್ತವೆ.

 

ಡವಳಿಕೆ ವ್ಯಕ್ತಿತ್ವಕ್ಕೆ ಕನ್ನಡಿ..

ವ್ಯಕ್ತಿ ನಡವಳಿಕೆಯಿಂದ ಬೆಳೆಯುತ್ತಾನೆ. ವ್ಯಕ್ತಿತ್ವದ ಉತ್ಥಾನ, ಅಧಃಪತನ ಎರಡೂ ನಿರ್ದಿಷ್ಟ ಸಂದರ್ಭದಲ್ಲಿ ವ್ಯಕ್ತಿ ಯಾವ ರೀತಿ ವರ್ತಿಸುತ್ತಾನೆ, ಪ್ರತಿಕ್ರಿಯಿಸುತ್ತಾನೆ, ಪ್ರತಿಸ್ಪಂದಿಸುತ್ತಾನೆ ಎನ್ನುವುದನ್ನು ಅವಲಂಬಿಸಿರುತ್ತದೆ.

ಈ ಮಾತು ವ್ಯಕ್ತಿಗಳಿಗೆ ಮಾತ್ರವಲ್ಲ, ಸಂಸ್ಥೆ, ವ್ಯವಸ್ಥೆಗಳಿಗೂ ಅನ್ವಯಿಸುತ್ತದೆ. ಇತ್ತೀಚಿನ ಎರಡು ಉದಾಹರಣೆಗಳನ್ನು ಗಮನಿಸೋಣ..

ದೇಶದ ಪ್ರತಿಭಾವಂತ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ವಿರುದ್ಧ ಇತ್ತೀಚೆಗೆ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಹೊರಿಸಿದ್ದಳು. ಮದುವೆಯಾಗುವ ಭರವಸೆಯೊಂದಿಗೆ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಇದೀಗ ವಂಚಿಸಿದ್ದಾರೆ ಎನ್ನುವುದು ಆ ಯುವತಿಯ ದೂರಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸೌಮ್ಯಜಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಭಾರತೀಯ ಟೇಬಲ್ ಟೆನಿಸ್ ಒಕ್ಕೂಟ, ಅವರನ್ನು ಮುಂಬರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ ತಂಡದಿಂದ ಕೈಬಿಟ್ಟಿತು. ಅಷ್ಟೇ ಅಲ್ಲ, ಐಪಿಎಲ್ ಮಾದರಿಯ ವೃತ್ತಿಪರ ಟೇಬಲ್ ಟೆನಿಸ್ ಲೀಗ್​ನಿಂದಲೂ ಕೈಬಿಟ್ಟಿತು. ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ಇನ್ನೂ ರ್ತಾಕ ಹಂತ ತಲುಪಿಲ್ಲ. ದೂರುದಾರರ ಹಿನ್ನೆಲೆ ಹಾಗೂ ದೂರಿನ ಸತ್ಯಾಸತ್ಯತೆಯ ಪರಾಮರ್ಶೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಆದರೆ, ಟೇಬಲ್ ಟೆನಿಸ್ ಒಕ್ಕೂಟ ಮಾತ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಆಟಗಾರರಿಂದ ಸ್ವಲ್ಪ ಮಟ್ಟಿನ ಅಶಿಸ್ತನ್ನೂ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿತು.

ಇದಕ್ಕೆ ವ್ಯತಿರಿಕ್ತವಾಗಿ ದೇಶಿ ಕ್ರೀಡಾ ವಲಯದ ಬಿಗ್​ಬಾಸ್ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ವರ್ತಿಸಿತು. ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಸ್ವತಃ ಆತನ ಪತ್ನಿಯೇ ಕೌಟುಂಬಿಕ ಕಿರುಕುಳ, ಅತ್ಯಾಚಾರ, ಅನೈತಿಕ ಸಂಬಂಧ, ದೈಹಿಕ ಹಲ್ಲೆ, ಇದೆಲ್ಲಕ್ಕಿಂತ ಮಿಗಿಲಾಗಿ ಮ್ಯಾಚ್​ಫಿಕ್ಸಿಂಗ್​ನ ಗುರುತರ ಆರೋಪ ಹೊರಿಸಿದರು. ಶಮಿ ವಿವಾಹಬಾಹಿರ ಸಂಬಂಧ ಹೊಂದಿರುವುದಕ್ಕೆ ವಾಟ್ಸ್​ಆಪ್ ಸಹಿತ ಹಲವು ದಾಖಲೆ ಒದಗಿಸಿದರು. ಪಾಕಿಸ್ತಾನದ ಯುವತಿ ಜೊತೆ ಶಮಿ ದುಬೈ ಹೋಟೆಲ್​ನಲ್ಲಿ ತಂಗಿದ್ದಕ್ಕೆ ಪುರಾವೆ ಒದಗಿಸಿದರು. ಈ ಪ್ರಕರಣ ಬೆಳಕಿಗೆ ಬಂದ ಆರಂಭದಲ್ಲಿ ಬಿಸಿಸಿಐ ಶಮಿಗೆ ಕೇಂದ್ರೀಯ ಗುತ್ತಿಗೆ ತಡೆ ಹಿಡಿಯುವ ಮೂಲಕ ಕಠಿಣ ನಿಲುವು ಪ್ರದರ್ಶಿಸಿತ್ತು. ಆದರೆ, ವಾರ ಒಪ್ಪತ್ತು ಕಳೆಯುವುದರೊಳಗೆ ತನ್ನ ಆಂತರಿಕ ತನಿಖೆ ಆಧಾರದ ಮೇಲೆ ಶಮಿಯನ್ನು ಮ್ಯಾಚ್​ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿ, ಅವರಿಗೆ ವಾರ್ಷಿಕ 3 ಕೋಟಿ ರೂ. ಮೌಲ್ಯದ ಕೇಂದ್ರೀಯ ಗುತ್ತಿಗೆ ಪ್ರದಾನ ಮಾಡಿದ್ದಲ್ಲದೆ, ಐಪಿಎಲ್​ನಲ್ಲಿ ಪಾಲ್ಗೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ನೀಡಿತು. ಇದೇ ವೇಳೆ, ಶಮಿ ಮ್ಯಾಚ್​ಫಿಕ್ಸಿಂಗ್​ನಲ್ಲಿ ಪಾಲ್ಗೊಂಡಿಲ್ಲ ಎನ್ನುವುದಷ್ಟೇ ನಮ್ಮ ಕಾಳಜಿ. ಅವರು ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದರೆ, ಕೌಟುಂಬಿಕ ದೌರ್ಜನ್ಯ ಎಸಗಿದ್ದರೆ ಅದು ಅವರ ವೈಯಕ್ತಿಕ ವಿಚಾರ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ಸಮಜಾಯಿಷಿ ನೀಡಿತು.

ಶಮಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟ ಭರವಸೆ ಮೂಡಿಸಿರುವ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ, ನಿಷ್ಕಳಂಕರಾಗಿ ಹೊರಹೊಮ್ಮಿದರೆ ಸಂತೋಷವೇ. ಆದರೆ, ಶಮಿಗೆ ಕ್ಲೀನ್​ಚಿಟ್ ನೀಡುವ ವಿಚಾರದಲ್ಲಿ ಬಿಸಿಸಿಐ ತೋರಿದ ತರಾತುರಿ ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಕೆಲವು ಕಾಲ ಗುತ್ತಿಗೆ ತಡೆಹಿಡಿದರೆ, ಐಪಿಎಲ್​ನಲ್ಲಿ ಅವಕಾಶ ನೀಡದಿದ್ದರೆ ಘೋರ ಅನ್ಯಾಯ ಎಂಬಂತೆ ಬಿಸಿಸಿಐ ವರ್ತಿಸಿತು. ಇದರ ಅವಶ್ಯಕತೆ ಇರಲಿಲ್ಲ.

ಕಾನೂನು ವ್ಯವಸ್ಥೆಯಲ್ಲಿ ಅನೇಕ ಬಾರಿ ಅಮಾಯಕರಿಗೆ ಅನ್ಯಾಯವಾಗುತ್ತದೆ. ಅದೆಷ್ಟೋ ಜನ ತಮ್ಮ ತಪ್ಪಿಲ್ಲದಿದ್ದರೂ, ಸುಳ್ಳು ಆರೋಪಗಳಿಗೆ ತಲೆಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿರುತ್ತಾರೆ. ಇದು ವ್ಯವಸ್ಥೆಯ ಲೋಪವೇ ಹೊರತು, ಕಾನೂನು-ಕಟ್ಟಳೆಯೇ ಸರಿಯಿಲ್ಲ ಎಂದಲ್ಲ. ಕ್ರಿಕೆಟ್​ನಲ್ಲೇ ಅಜಯ್ ಜಡೇಜಾ, ಶ್ರೀಶಾಂತ್ ಸಹಿತ ಅನೇಕ ಆಟಗಾರರು ಮ್ಯಾಚ್​ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್​ನಂಥ ಆರೋಪಗಳಿಗೆ ಸಿಲುಕಿ ಶಿಕ್ಷೆ ಅನುಭವಿಸಿದ್ದಾರೆ, ಇನ್ನೂ ಅನುಭವಿಸುತ್ತಿದ್ದಾರೆ. ಕೆಲವು ತಪ್ಪು ಮಾಡದ ಆಟಗಾರರೂ ತಮ್ಮ ಪ್ರಾಮಾಣಿಕತೆ, ಅಮಾಯಕತೆ ನಿರೂಪಿಸಲಾಗದೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಹಾಗಿರುವಾಗ ಶಮಿ ವಿಚಾರದಲ್ಲೂ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಯಬಹುದಿತ್ತು.

ಇನ್ನೂ ಮುಖ್ಯವಿಚಾರವೆಂದರೆ, ಶಮಿಯ ವಿವಾಹಬಾಹಿರ ಸಂಬಂಧಗಳು ಅವರ ವೈಯಕ್ತಿಕ ವಿಚಾರ ಎಂದು ಬಿಸಿಸಿಐ ಕೈತೊಳೆದುಕೊಂಡಿದ್ದು… ಈ ದೇಶದ ಯುವಪೀಳಿಗೆಗೆ ಕ್ರಿಕೆಟ್ ತಂಡ ಮಾದರಿ ಹಾಗೂ ಸ್ಪೂರ್ತಿ. ಪ್ರೖೆಮರಿ ಶಾಲಾ ದಿನಗಳಿಂದಲೇ ಮಕ್ಕಳು ತೆಂಡುಲ್ಕರ್, ವಿರಾಟ್ ಕೊಹ್ಲಿ ಆಗುವ ಕನಸು ಕಾಣುತ್ತಾರೆ. ದೇಶದ ಕ್ರಿಕೆಟ್ ಆಟಗಾರರನ್ನು ಅನುಸರಿಸಿ, ಅನುಕರಿಸಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುತ್ತಾರೆ. ಹೀಗಿರುವಾಗ ಕ್ರಿಕೆಟಿಗರ ಪ್ರತಿಯೊಂದು ನಡೆನುಡಿ, ಚಲನವಲನವೂ ಮಾದರಿಯಾಗಿರಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಶಮಿಯ ಅನೈತಿಕ ಚಟುವಟಿಕೆಗಳನ್ನು ಸಮರ್ಥಿಸುವ ಮೂಲಕ ಬಿಸಿಸಿಐ ಈ ದೇಶದ ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದೆ? ಜಗದ್ವಿಖ್ಯಾತ, ಸರ್ವಶ್ರೇಷ್ಠ ಗಾಲ್ಪ್ ಆಟಗಾರನಾಗಿದ್ದರೂ, ಟೈಗರ್ ವುಡ್ಸ್ ವಿವಾಹಬಾಹಿರ ಸಂಬಂಧಗಳ ಸುಳಿಗೆ ಸಿಲುಕಿ ಜೀವನ ಹಾಳು ಮಾಡಿಕೊಂಡರು. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಕಪಿಲ್ ದೇವ್​ರಂಥ ಧೀಮಂತ, ಘನ ವ್ಯಕ್ತಿತ್ವದ ಆಟಗಾರರು ಹಂಚಿಕೊಂಡ ಭಾರತೀಯ ಡ್ರೆಸ್ಸಿಂಗ್​ರೂಂನಲ್ಲಿ ಲಂಪಟರು, ಫಟಿಂಗರು ಸ್ಥಾನ ಪಡೆದರೆ, ತಂಡದ ಘನತೆ ಏನಾಗುತ್ತದೆ? ಆಟಗಾರರಿಗೊಂದು ಶಿಸ್ತು, ಸಂಯಮದ ಚೌಕಟ್ಟು, ನೀತಿಸಂಹಿತೆ ಬೇಡವೇ?

ತಪ್ಪು ಮಾಡುವ ವಿಚಾರದಲ್ಲಿ ಎಲ್ಲರ ಮನೆ ದೋಸೆಯೂ ತೂತೇ ಎನ್ನುವ ಮಾತಂತೂ ನಿಜ. ಕ್ರಿಕೆಟ್ ಮೈದಾನದ ಒಳಗೆ, ಹೊರಗೆ ಕ್ರಿಕೆಟ್ ಆಡಳಿತಾಧಿಕಾರಿಗಳು, ಅಂಪೈರ್​ಗಳು, ಮ್ಯಾಚ್​ರೆಫರಿಗಳ ಪಕ್ಷಪಾತ, ಏಕಪಕ್ಷೀಯ ತೀರ್ಪಗಳಿಂದ ಏಷ್ಯಾ, ಆಫ್ರಿಕಾ, ಕೆರಿಬಿಯನ್ ದ್ವೀಪದ ಆಟಗಾರರ ಪ್ರಾಮಾಣಿಕತೆಯನ್ನು ಮಾತ್ರ ಈವರೆಗೆ ಪ್ರಶ್ನಿಸಲಾಗುತ್ತಿತ್ತು. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಶಾಶ್ವತವಾಗಿ ಕಳಂಕ ಅಂಟಿಸಿಕೊಂಡು ತಲೆತಗ್ಗಿಸುವಂಥ ಘನಕಾರ್ಯ ಮಾಡಿದೆ!

ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್ ಆಗಿರುವ ಬಾಲ್ ಟ್ಯಾಂಪರಿಂಗ್ ಅಥವಾ ಚೆಂಡು ವಿರೂಪ ಕ್ರಿಕೆಟ್​ನಲ್ಲಿ ಹೊಸದೇನೂ ಅಲ್ಲ. ಮೊದಲಿನಿಂದ ಅನೇಕ ಆಟಗಾರರು ಈ ಆರೋಪಕ್ಕೆ ಸಿಲುಕಿ ಶಿಕ್ಷೆ ಅನುಭವಿಸಿದ್ದರೂ, ಹೆಚ್ಚಿನ ತಂಡಗಳು ಅತ್ಯಂತ ನಾಜೂಕಿನಿಂದ ಈ ಮೋಸದಾಟವನ್ನು ಆಡಿಕೊಂಡೇ ಬಂದಿದ್ದವು. ಇದೀಗ ಆಸ್ಟ್ರೇಲಿಯಾ ತಂಡವೇ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿರುವುದರಿಂದ ಅದರ ತೀವ್ರತೆ ಬೆಚ್ಚಿಬೀಳಿಸಿದೆ ಅಷ್ಟೇ.

ಆಸ್ಟ್ರೇಲಿಯಾ ಆಟಗಾರರು ಯಾವಾಗಲೂ ಸ್ಲೆಡ್ಜಿಂಗ್​ಗೆ (ಮೈದಾನದಲ್ಲಿ ಎದುರಾಳಿ ಆಟಗಾರರ ದೌರ್ಬಲ್ಯಗಳನ್ನು ಹುಡುಕಿ ತೆಗಳುವ ಮೂಲಕ ಮಾನಸಿಕವಾಗಿ ವಿಚಲಿತಗೊಳಿಸುವ ತಂತ್ರಗಾರಿಕೆ) ಪ್ರಸಿದ್ಧರು. ಭಾರತೀಯ ಪರಿಸ್ಥಿತಿಯಲ್ಲಿ ಈ ಸ್ಲೆಡ್ಜಿಂಗ್ ಅಥವಾ ನಿಂದನೆ ಅಕ್ಷಮ್ಯವಾಗಿ ಕಂಡರೂ, ಆಸ್ಟ್ರೇಯನ್ನರ ಪಾಲಿಗೆ ಇದು ಅವರ ಗಟ್ಟಿ ಮನಸ್ಥಿತಿಯ ಪ್ರತೀಕವಾಗಿತ್ತು. ನಾವು ನ್ಯಾಯಯುತವಾಗಿ ಆದರೆ, ನಿರ್ದಾಕ್ಷಿಣ್ಯ, ನಿಷ್ಕಾರಣ್ಯವಾಗಿ ಆಡುವವರು ಎಂದು ಅವರು ಹೆಮ್ಮೆ ಪಡುತಿದ್ದರು. ಅಂಥವರಿಗೀಗ ಚೆಂಡು ವಿರೂಪ ಆರೋಪ ಅಹಂಕಾರಕ್ಕೆ ದೊಡ್ಡಪೆಟ್ಟು ನೀಡಿದೆ. ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಬ್ರಾಡ್ಮನ್ ಉತ್ತರಾಧಿಕಾರಿ ಎಂದೇ ಬೀಗುತ್ತಿದ್ದ ಸ್ಟೀವನ್ ಸ್ಮಿತ್ ವೃತ್ತಿಭವಿಷ್ಯ ಅಡಕತ್ತರಿಗೆ ಸಿಲುಕಿದೆ. ನಾಯಕ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್, ಕೋಚ್ ಡರೇನ್ ಲೆಹ್ಮನ್ ಸಹಿತ ಪ್ರಮುಖರ ರಾಜೀನಾಮೆ ಪಡೆಯಲಾಗಿದೆ.

ಶಮಿ ವಿಚಾರದಲ್ಲಿ ಬಿಸಿಸಿಐ ನಡವಳಿಕೆಗೆ ಹೋಲಿಸಿದರೆ, ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ, ಆ ದೇಶದ ಸರ್ಕಾರ, ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ವರ್ತನೆ ಪ್ರಶಂಸಾರ್ಹವಾಗಿದೆ. ಭಾರತದಲ್ಲಿ ಪೊಲೀಸ್ ತನಿಖೆ ಶುರುವಾಗುವ ಮೊದಲೇ ಅಭಿಮಾನಿಗಳು, ಮಾಧ್ಯಮಗಳವರು ಶಮಿ ಪತ್ನಿಯ ಹಿನ್ನೆಲೆ ಹುಡುಕಿ ತೆಗೆದು, ಆಕೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಶಮಿಗೆ ಕ್ಲೀನ್​ಚಿಟ್ ಕೊಟ್ಟುಬಿಟ್ಟಿದ್ದರು. ಆದರೆ, ಸ್ಮಿತ್ ಬಳಗದ ಚೆಂಡು ವಿರೂಪಕೃತ್ಯವನ್ನು ಆಸ್ಟ್ರೇಲಿಯಾದಲ್ಲಿ ಯಾರೊಬ್ಬರೂ ಸಮರ್ಥಿಸಿಕೊಂಡಿಲ್ಲ, ಆ ರೀತಿ ನಡೆದಿಲ್ಲ ಎಂದು ಸಮಜಾಯಿಷಿ ನೀಡಿಲ್ಲ. ಸ್ವತಃ ಆಸ್ಟ್ರೇಲಿಯಾ ಪ್ರಧಾನಿಯೇ ತಂಡವನ್ನು ತರಾಟೆಗೆ ತೆಗೆದುಕೊಂಡು ಇಂಥ ಕೃತ್ಯ ನಮ್ಮ ಸಂಸ್ಕೃತಿಯಲ್ಲ ಎಂದಿದ್ದು ಉಳಿದವರಿಗೊಂದು ಮಾದರಿ.

ಈ ಎಲ್ಲ ಪ್ರಕರಣಗಳ ಒಟ್ಟು ತಾತ್ಪರ್ಯವೇನೆಂದರೆ, ಯಾವುದೇ ಸಂದರ್ಭ, ಘಟನೆಗೆ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದು ನಮ್ಮ ವೃತ್ತಿಪರತೆಯನ್ನು, ಘನತೆಯನ್ನು, ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ರಾಜಕಾರಣಿಗಳು ಮಕ್ಕಳ ಪುಂಡಾಟವನ್ನು ಸಮರ್ಥಿಸಿಕೊಳ್ಳುವುದಕ್ಕೂ, ಕ್ರಿಕೆಟ್ ಆಡಳಿತಗಾರರು ಆಟಗಾರರ ಲಂಪಟತನ ವೈಯಕ್ತಿಕ ಎಂದು ಕ್ಲೀನ್​ಚಿಟ್ ನೀಡುವುದಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಒಟ್ಟಾರೆ ನಡವಳಿಕೆ ವ್ಯಕ್ತಿತ್ವದ ಕನ್ನಡಿ ಎನ್ನುವುದಷ್ಟೇ ಸತ್ಯ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top