Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಸಣ್ಣ-ಪುಟ್ಟ ಚಿತ್ರಗಳ ದೊಡ್ಡ ಮಾಯಾಲೋಕ!

Wednesday, 04.07.2018, 3:04 AM       No Comments

ಮೊದಲು ನನ್ನ ಕಥೆ ಬರೆದು ಮುಗಿಸು…

ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದು ಆಚೆ ಬಂದಾಗ ಎದುರು ಫ್ಲ್ಯಾಟ್​ನ ಬಾಗಿಲಲ್ಲಿ ಆ ಹುಡುಗಿ. ಏನೋ ಹುಡುಕುತ್ತ, ಬ್ಯಾಗಿನೊಳಗೆ ಕೈಹಾಕಿ ತಡಕುತ್ತ, ಕಣ್ಣಿಗೆ ಅಡ್ಡ ಬರುವ ಮುಂಗುರುಳ ಸರಿಪಡಿಸಿಕೊಳ್ಳುತ್ತ, ಚಡಪಡಿಸುತ್ತಿರುವ ಸುಂದರಿ…

ಮೆಟ್ರೋ ಸಿಟಿಗಳಲ್ಲಿ ಅನಿವಾರ್ಯವಲ್ಲದ ಹೊರತು ಪರಕೀಯರನ್ನು ಮಾತನಾಡಿಸುವ ಪ್ರಮೇಯ ಕಡಿಮೆ. ಯಾರ ಪ್ರೖೆವೆಸಿಗೂ ಭಂಗ ತರಬಾರದು ಎಂಬ ಔದಾರ್ಯವೋ… ಹೇಗೆ ಮಾತನಾಡಿಸುವುದೆಂಬ ಹಿಂಜರಿಕೆಯೋ… ಯಾರಾದರೆ ನನಗೇನು ಎಂಬ ನಿಷ್ಕಾಳಜಿಯೋ.. ಏನೋ?

ಮಧ್ಯಾಹ್ನ ಕಳೆದು, ಸಂಜೆ ಸರಿದು ಹೊತ್ತು ಮೀರಿದರೂ ಆ ಹುಡುಗಿ ಆ ಜಾಗ ಬಿಟ್ಟು ಕದಲದ್ದನ್ನು ಕಂಡಾಗ ಇದೇನೋ ಅಸ್ವಾಭಾವಿಕ… ಏನಾದರಾಗಲಿ.. ಬಹುಶಃ ನೆರವು ಬೇಕಿದ್ದೀತು.. ವಿಚಾರಿಸೋಣ ಎಂಬ ಕುತೂಹಲ. ಹಾಗೆಯೇ ಶುರುವಾಗಿದ್ದು ಮಾತು, ಆಗಿದ್ದು ಪರಿಚಯ, ಸ್ವಲ್ಪ ಸ್ವಲ್ಪವೇ ಧೈರ್ಯ, ಹರಟುತ್ತ ಹರಟುತ್ತ ಸಲುಗೆ, ಮಾತಿನಿಂದ ಮಾತಿಗೆ ಆಪ್ತತೆ, ಪರವಾಗಿಲ್ಲ ನಂಬಬಹುದು ಎಂಬ ವಿಶ್ವಾಸ, ಪಕ್ಕದ ಫ್ಲ್ಯಾಟ್​ಗೆ ಹೊಸದಾಗಿ ಬಂದಿದ್ದೇನೆ. ಕೀ ಕಳೆದುಹೋಗಿದೆ, ಡೂಪ್ಲಿಕೇಟ್ ಕೀ ಮಾಡುವವರು ಈಗ ಬರಲು ಒಪು್ಪತ್ತಿಲ್ಲ. ಇಲ್ಲೇ ಮೆಟ್ಟಿಲ ಮೇಲೆ ರಾತ್ರಿ ಕಳೆಯುತ್ತೇನೆ ಎಂಬ ವಿವರಣೆಗೆ, ಪಕ್ಕದ ಮನೆ ಇರುವಾಗ ಮೆಟ್ಟಿಲುಗಳ ಮೇಲೆ ಜಾಗರಣೆ ಏಕೆ? ಕಷ್ಟಕಾಲದಲ್ಲಿ ಆಗದಿದ್ದರೆ ನಾವೆಂಥ ನೆರೆಹೊರೆ ಎಂಬ ಆಹ್ವಾನ. ಒಲ್ಲದ ಹೆಜ್ಜೆ ಇರಿಸುತ್ತ ಮನೆ ಒಳಗೆ ಬಂದ ಮೇಲೆ ಉಪಚಾರ, ಪರಸ್ಪರರ ಬಗ್ಗೆ ಇನ್ನಷ್ಟು ಮತ್ತಷ್ಟು ವಿಚಾರ ತಿಳಿದುಕೊಳ್ಳುವ ಅವಸರ, ಸಡಗರ… ಸುಪ್ತಮನದ ಭಾವಸೆರೆಗೆ ಸಿಲುಕಿ ಇಬ್ಬರೂ ಮುಜುಗರದ ಪೊರೆ, ಪರದೆ ಕಳಚಿದ ಮೇಲೆ ರತಿ-ಮನ್ಮಥರ ಶೃಂಗಾರ. ಒಂದು ರಾತ್ರಿಯ ಸ್ವಪ್ನ ಸಂಸಾರ!

ಅವನು ಜನಪ್ರಿಯ ಲೇಖಕ. ಬರೆದಿದ್ದೆಲ್ಲ ಬೆಸ್ಟ್ ಸೆಲ್ಲರ್. ಸದ್ಯ ಹೊಸ ಕಾದಂಬರಿ ಬಿಡುಗಡೆ ಯಾವಾಗ ಎಂದು ಓದುಗ ಸಮೂಹ ತುದಿಗಾಲಲ್ಲಿ ನಿಂತಿದೆ. ಅದಕ್ಕೆ ತಕ್ಕಂತೆ ಆತನೂ ಹೊಸತೊಂದು ಕಥೆ ಶುರು ಮಾಡಿದ್ದಾಗಿದೆ. ವಿಕ್ಷಿಪ್ತ ಹುಡುಗಿಯೊಬ್ಬಳ ಸುತ್ತ ಈ ಬಾರಿ ಆತನ ಕಾದಂಬರಿ. ಆ ಬರವಣಿಗೆಯ ಗುಂಗಿನಲ್ಲಿರುವಾಗಲೇ ನಡೆದಿದ್ದು ಈ ಕಥೆ.

ಬೆಳಗಾಯಿತು ಆತನ ದಿನಚರಿಯಲ್ಲೇನೂ ಬದಲಿಲ್ಲ. ಆದರೆ, ಆ ಹುಡುಗಿ ಹೊರಡುತ್ತಿಲ್ಲ. ಮಧ್ಯಾಹ್ನವಾಯಿತು. ಸಂಜೆಯಾಯಿತು. ಆತ ಸಮಾಧಾನವಾಗಿ ಹೇಳಿದ್ದಾಯಿತು, ಗದರಿದ್ದಾಯಿತು, ಪೊಲೀಸರನ್ನೇ ಕರೆಯುತ್ತೇನೆಂದರೂ ಆಕೆ.. ಊಹೂಂ ಕದಲುತ್ತಿಲ್ಲ. ಇದೇನು ಕನಸೋ, ಭ್ರಮೆಯೋ, ಆಕೆ ಪರಿಚಯವಾಗಿದ್ದು, ಮನೆಗೆ ಬಂದಿದ್ದು, ರಾತ್ರಿ ಕಳೆದಿದ್ದು, ಈಗ ಮಾತಿಲ್ಲದೆ, ಕತೆಯಿಲ್ಲದೆ, ಹೋಗೆಂದರೂ ಹೋಗದೆ ಪ್ರಶ್ನೆಯಾಗಿ ಕಾಡುತ್ತಿರುವುದು? ಮೋಹಕ್ಕೆ ಮನಸೋತು ಮೋಹಿನಿಯನ್ನು ಮನೆಯೊಳಗೆ ಬಿಟ್ಟುಕೊಂಡಂತಾಯಿತೇ? ಹಿಂದಿನ ದಿನದಿಂದ ನಡೆದಿದ್ದೆಲ್ಲವನ್ನೂ, ಆಕೆಯ ಮಾತುಗಳೆಲ್ಲವನ್ನೂ ಮೆಲುಕು ಹಾಕಿದಾಗ ಆತನಲ್ಲೇ ಅದೇನೋ ಹೊಳಹು, ಹೊಸದೊಂದು ಸುಳಿವು… ಆ ಹುಡುಗಿಯ ರೂಪ, ಮಾತು, ಒಡನಾಟ, ಸ್ವಭಾವ ಎಲ್ಲವೂ ತನಗೆ ಹತ್ತಿರದಿಂದ ಕಂಡಂತೆ, ಚಿರಪರಿಚಿತವಿದ್ದಂತೆ… ಅರ್ಧ ಬರೆದಿಟ್ಟ ತನ್ನ ಕಾದಂಬರಿಯ ಪುಟಗಳನ್ನು ತೆರೆದು ಮತ್ತೊಮ್ಮೆ ಓದುವಾಗ.. ಅರೆರೆ, ಇದೇನಿದು? ತಾನು ಕಥೆಯನ್ನು ಅರ್ಧಕ್ಕೆ ನಿಲ್ಲಿಸಿ ಹಲವು ದಿನಗಳೇ ಕಳೆದಿದೆ. ಮುಂದೆ ಬರೆದಿಲ್ಲ. ಕಥೆಯಲ್ಲೂ ಕಥಾನಾಯಕನ ಮನೆಗೆ ಬಂದ ಆಗಂತುಕ ಯುವತಿ ನಿರ್ಗಮಿಸಿಲ್ಲ. ಹಾಗಾದರೆ, ಈ ಹುಡುಗಿ ಆ ಕಥೆಯ ನಾಯಕಿಯೇ? ಯಾರು ನೀನು? ಮಾತನಾಡು? ಎಂದು ಅಂಗಲಾಚಿದಾಗ ಆ ಹುಡುಗಿ ನೂರಕ್ಕೊಂದೆಂಬಂತೆ ಮಾತನಾಡಿದ್ದು… ‘ಬೇಗ ನನ್ನ ಕಥೆ ಮುಗಿಸು…’

ಆದರೆ, ಟ್ವಿಸ್ಟ್ ಇಲ್ಲಿಗೇ ಮುಗಿಯುವುದಿಲ್ಲ. ಅದಾದ ಕೆಲ ಹೊತ್ತಿನಲ್ಲೇ ನಿಜವಾದ ಕಥೆಗಾರ್ತಿ ಗೋವಾ ಟ್ರಿಪ್ ಮುಗಿಸಿ ಫ್ಲ್ಯಾಟ್​ಗೆ ಮರಳುತ್ತಾಳೆ. ಮನೆಯೊಳಗೆ ಆಗಂತುಕನನ್ನು ಕಂಡು ಹೌಹಾರುತ್ತಾಳೆ. ಯಾರು ನೀನು ಎಂದು ನಡುಗುವ ಧ್ವನಿಯಲ್ಲಿ ಕೇಳುವಾಗ ‘ಕಥೆ ಮುಗಿಸಿ, ನನ್ನ ಪಾತ್ರಕ್ಕೊಂದು ಗತಿಕಾಣಿಸು…’ ಎಂದು ಆ ಜನಪ್ರಿಯ ಲೇಖಕ ಹೇಳುತ್ತಾನೆ.

ಇಂಟರ್ನೆಟ್ ಅಗ್ಗವಾದ ಮೇಲೆ ಬಹುತೇಕರ ಮನೆಯೇ ಮಲ್ಟಿಪ್ಲೆಕ್ಸ್ ಗಳಾಗಿ ಬಿಟ್ಟಿದೆ. ನಮ್ಮ ಮೊಬೈಲ್ ಜಗತ್ತನ್ನೇ ತೋರಿಸುವ ಮಾಯಾಕನ್ನಡಿ ಆಗಿ ಬಿಟ್ಟಿದೆ. ಒಳಿತು, ಕೆಡುಕು ಎಲ್ಲವೂ ಇರುವ ಅವರವರ ಆಯ್ಕೆಯ ಈ ಮ್ಯಾಜಿಕ್ ಜಗತ್ತಿನಲ್ಲಿ ಏನುಂಟು? ಏನಿಲ್ಲ?

5 ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯ ಬೋರ್ ಎಂಬ ಕಾರಣಕ್ಕೆ ಏಕದಿನ ಕ್ರಿಕೆಟ್ ಜನಪ್ರಿಯವಾಯಿತು. ಒಂದು ಪಂದ್ಯಕ್ಕೆ ಇಡೀ ದಿನ ವ್ಯರ್ಥಮಾಡಬೇಕೇಕೆ ಎಂಬ ಕಾಲಘಟ್ಟದಲ್ಲೇ ಟಿ20 ಕ್ರಿಕೆಟ್ ಆವಿಷ್ಕಾರವಾಯಿತು. ಇದೀಗ ಜನರ ಅನುಕೂಲಕ್ಕೆ ತಕ್ಕಂತೆ 10 ಓವರ್ ಲೀಗ್​ಗಳೂ ಆವರಿಸಿಕೊಳ್ಳುತ್ತಿವೆ. ಇಂಥ ಬದಲಾವಣೆ ಕ್ರಿಕೆಟ್​ಗೆ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಆಗಿದೆ. ಚಲನಚಿತ್ರ ರಂಗದಲ್ಲೂ ಕಿರು ಸಿನಿಮಾಗಳ ಆವಿಷ್ಕಾರವಾಗಿದ್ದು ಇದೇ ರೀತಿ.

ಒಂದು ಸಿನಿಮಾ ನಿರ್ಮಾಣ ಮಾಡುವುದೆಂದರೆ ದೊಡ್ಡ ಸಾಹಸವೇ ಸರಿ. ಈಗೆಲ್ಲ ಕೋಟಿ ಬಜೆಟ್ ಇದ್ದರೂ ಚಿತ್ರ ನಿರ್ಮಾಣ ಕಷ್ಟ. ಎಷ್ಟೆಲ್ಲ ಖರ್ಚು, ಎಷ್ಟೆಲ್ಲ ಜನ, ಏನೆಲ್ಲ ಅಗತ್ಯಗಳು, ಕಿರಿಕಿರಿಗಳು, ಕಥೆಯ ಆಯ್ಕೆಯಿಂದ ನಾಯಕ, ನಾಯಕಿಯರ ಸಂಭಾವನೆ, ಸೆನ್ಸಾರ್, ಕೊನೆಗೆ ವಿತರಣೆವರೆಗೆ ಜೀವ ತೇಯಬೇಕು. ಅಷ್ಟಾದ ಮೇಲೂ ಜನರಿಗೆ ಇಷ್ಟವಾಗದಿದ್ದರೆ ಹಾಕಿದ ಬಂಡವಾಳ ಉಡೀಸ್. ಇಂಥ ಯಾವ ರಿಸ್ಕ್ ಇಲ್ಲದೆ, ಯಾರ ಮುಲಾಜೂ ಇಲ್ಲದೆ, ಖರ್ಚೇ ಇಲ್ಲದೆ, ಕಡಿಮೆ ಜನ, ಸಮಯದಲ್ಲಿ ತಮ್ಮಿಷ್ಟದಂತೆ ನಿರ್ವಿುಸಿ, ತಮ್ಮಿಷ್ಟದಂತೆ ಬಿಡುಗಡೆ ಮಾಡುವ ಹೊಸ ಸಾಧ್ಯತೆಯೇ ಈ ಕಿರು ಸಿನಿಮಾ. ಕೇವಲ 7 ನಿಮಿಷ, 10 ನಿಮಿಷ, 15 ನಿಮಿಷ, ಅತೀ ಹೆಚ್ಚು ಎಂದರೆ 45 ನಿಮಿಷದಲ್ಲಿ ಮುಗಿದೇ ಹೋಗುವ ಈ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದೇ ಇಂಟರ್ನೆಟ್ ಮೀಡಿಯಾ. ನಾವಿದ್ದಲ್ಲೇ, ಮೊಬೈಲ್​ನಲ್ಲೇ ಲಭ್ಯವಾಗುವ ಈ ಶಾರ್ಟ್ ಫಿಲಂಗಳು ಆಧುನಿಕ ಮನರಂಜನೆಯ ಸಾಧನ.

ಸಂತೋಷದ ವಿಚಾರವೆಂದರೆ, ಕ್ರಿಯಾಶೀಲರು ಹಾಗೂ ಕ್ರಿಯಾಶೀಲತೆಗೆ ಈ ಸಣ್ಣ ಚಿತ್ರಗಳು ಅತ್ಯಂತ ದೊಡ್ಡ ವೇದಿಕೆ. ಕೆಲವರು ಅನುಭವ ಹಂಚಿಕೊಂಡಿರುವಂತೆ ಕೇವಲ 800 ರೂ. ವೆಚ್ಚದಲ್ಲಿ ಚಿತ್ರೀಕರಣ, 3000 ರೂ. ವೆಚ್ಚದಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಚಿತ್ರವೇ ನಿರ್ವಣವಾದದ್ದೂ ಇದೆ. ಒಂದೊಳ್ಳೆಯ ಕ್ಯಾಮರಾ ಹಾಗೂ ಕ್ರಿಯೆಟಿವಿಟಿ ಎರಡಿದ್ದರೆ ಇಲ್ಲಿ ಚಿತ್ರ ರೆಡಿ. ಅದೇ ಕಾರಣಕ್ಕೆ ಬಾಲಿವುಡ್ ಹಾಗೂ ಇತರ ಭಾಷೆಗಳ ದೊಡ್ಡದೊಡ್ಡ ನಿರ್ದೇಶಕರೂ ತಮ್ಮದೂ ಒಂದಿರಲಿ ಎಂಬಂತೆ ಇಂಥ ಶಾರ್ಟ್ ಫಿಲಂಗಳನ್ನು ನಿರ್ವಿುಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ, ಹಿರಿ-ಕಿರಿಯ ನಿರ್ದೇಶಕರವರೆಗೆ ಅನೇಕರಿಗೆ ಈ ಶಾರ್ಟ್ ಫಿಲಂಗಳು ತಮ್ಮ ಬಯೋಡೇಟಾ ಸತ್ವ ಹೆಚ್ಚಿಸುವ ಮಾರ್ಗಗಳಾಗಿವೆ. ಅಷ್ಟೇ ಏಕೆ ಬಾಲಿವುಡ್​ನ ಹೆಚ್ಚಿನ ನಟ-ನಟಿಯರು ಕೈಯಲ್ಲಿ ಪ್ರಮುಖ ಚಿತ್ರಗಳಿಲ್ಲದೇ ಹೋದಾಗ ತಮ್ಮ ಬೇಡಿಕೆ ಉಳಿಸಿಕೊಳ್ಳುವ ಸಲುವಾಗಿ ಇಂಥ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ಆಪ್ಟೆಯಂಥ ನಟಿಯರು ಶಾರ್ಟ್ ಫಿಲಂಗಳ ಮೂಲಕವೇ ಸೂಪರ್​ಸ್ಟಾರ್​ಗಳನ್ನೂ ಮೀರಿದ ಹೆಸರು ಮಾಡಿದ್ದಾರೆ.

ರಾಧಿಕಾ ಆಪ್ಟೆ ಎಂದಾಗ ಅಹಲ್ಯಾ ಕಿರುಚಿತ್ರ ನೆನೆಸಿಕೊಳ್ಳಲೇ ಬೇಕು. ಖ್ಯಾತ ಬಂಗಾಳಿ ದಿಗ್ದರ್ಶಕ ಸುಜೋಯ್ ಘೋಷ್​ರ ಮಾಸ್ಟರ್​ಪೀಸ್ ಈ ಅಹಲ್ಯಾ. ಒಂದು ರಾಧಿಕಾ ನಟನೆಗಾಗಿ, ಇನ್ನೊಂದು ರಾಮಾಯಣದ ಅಹಲ್ಯೆಯ ಕಥಾವಸ್ತುವನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಸುಜೋಯ್ ಕಟ್ಟಿಕೊಟ್ಟ ರೀತಿಗಾಗಿ ಈ ಚಿತ್ರವನ್ನು ನೋಡಲೇಬೇಕು. ಚಿತ್ರರಂಗದಲ್ಲಿ ಹೆಜ್ಜೆ ಇರಿಸುವ ಮುನ್ನ ಶಾರ್ಟ್ ಫಿಲಂಗಳೊಂದು ಚಿಮ್ಮುಹಲಗೆ ಎಂದು ಪರಿಗಣಿಸುವವರು ಕೂಡ ಕಲಾತ್ಮಕತೆ, ರೋಚಕತೆ, ವಿಸ್ಮಯದ ನಿರೂಪಣಾ ಶೈಲಿಗಾಗಿ ಇದನ್ನು ನೋಡಲೇಬೇಕು.

ಚಲನಚಿತ್ರವನ್ನು ಎಲ್ಲರೂ ನಿರ್ವಿುಸಲು ಸಾಧ್ಯವಿಲ್ಲ. ಆದರೆ, ಕ್ರಿಯೆಟಿವಿಟಿ ಇದ್ದರೆ ಯಾರು ಬೇಕಾದರೂ ಸಣ್ಣ ಚಿತ್ರಗಳನ್ನು ನಿರ್ವಿುಸಬಹುದು. ಥ್ರಿಲ್ಲರ್, ಸಸ್ಪೆನ್ಸ್, ಕ್ರೖೆಮ್ ಹಾರರ್ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸಂದೇಶಾತ್ಮಕ ಕಿರುಚಿತ್ರಗಳಿಗೆ ಬಹಳ ಬೇಡಿಕೆ ಇದ್ದು, ಇಂಥ ಚಿತ್ರಗಳಿಗೆಂದೇ ಜಗತ್ತಿನ ವಿವಿಧೆಡೆ ಹಲವು ಚಿತ್ರೋತ್ಸವಗಳೂ ನಡೆಯುತ್ತವೆ. ಇನ್ನೊಂದು ವಿಶೇಷವೆಂದರೆ ಈ ಸಣ್ಣ ಚಿತ್ರಗಳೂ ಸೆನ್ಸಾರ್ ವ್ಯಾಪ್ತಿಗೆ ಬರುತ್ತವಾದರೂ, ಕಡ್ಡಾಯವೆಂಬ ನಿರ್ಬಂಧವಿಲ್ಲ. ವ್ಯಕ್ತಿಗತ ಯುಟ್ಯೂಬ್ ಖಾತೆ ಸೆನ್ಸಾರ್ ಹಂಗಿಲ್ಲದೆ ಬಿಡುಗಡೆ ಮಾಡುವವರ ಸಂಖ್ಯೆ ಸಾವಿರ. ಇಂಥ ಚಿತ್ರಗಳಲ್ಲಿ ಯಾವುದೇ ದೃಶ್ಯ ಅಥವಾ ಸಂಭಾಷಣೆ ಎಡಿಟ್ ಆಗದೆ ವೀಕ್ಷಕರಿಗೆ ಲಭ್ಯವಾಗುವುದರಿಂದ ಒಳಿತು-ಕೆಡುಕು ಎರಡೂ ಇದೆ.

ಇನ್ನು ಕಡಿಮೆ ಬಂಡವಾಳದ ಇಂಥ ಕಿರು ಚಿತ್ರಗಳಿಗೆ ಆನ್​ಲೈನ್​ನಲ್ಲಿ ದೊಡ್ಡ ಮಾರುಕಟ್ಟೆಯೂ ಇರುವುದರಿಂದ ಲಾಭದ ಸಾಧ್ಯತೆಯೇ ಹೆಚ್ಚು. ಒಳ್ಳೆಯ ಶಾರ್ಟ್ ಫಿಲಂಗಳಿಗೆ ಅಮೆಝಾನ್, ನೆಟ್​ಫ್ಲಿಕ್ಸ್ ಮೊದಲಾದೆಡೆ ಕೋಟ್ಯಂತರ ರೂ. ಮೌಲ್ಯವಿದ್ದರೆ, ಯುಟ್ಯೂಬ್​ನಲ್ಲೂ ವೀಕ್ಷಕರ ಸಂಖ್ಯೆ ಆಧರಿಸಿ ಲಾಭಾಂಶ ಕೈಸೇರುತ್ತದೆ. ಇನ್ನು ಕಾಪಿರೈಟ್ ವಿಚಾರವೂ ಇದೆ. ಕಿರುಚಿತ್ರಗಳಿಗೆ ಜಗತ್ತಿನ ಮೂಲೆಮೂಲೆಯ ವೀಕ್ಷಕ ವರ್ಗ ಇರುವ ಕಾರಣ, ಒಂದು ಸಣ್ಣ ಎಳೆ ಕದ್ದರೂ ಜಗಜ್ಜಾಹೀರಾಗಿಬಿಡುತ್ತದೆ. ಹಾಗಾಗಿ ಕಥೆ ಕಳ್ಳರು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು. ಒಟ್ಟಿನಲ್ಲಿ ಸಣ್ಣ ಚಿತ್ರಗಳ ದೊಡ್ಡ ದುನಿಯಾದಲ್ಲಿ ಕಸ-ರಸ ಎರಡೂ ಇದೆ. ಯಾವುದನ್ನು ನೋಡಬೇಕೆನ್ನುವುದು ನಮಗೆ ಬಿಟ್ಟಿದ್ದು.

ಅಂದ ಹಾಗೆ ಆರಂಭದಲ್ಲಿ ಹೇಳಿದ ಕಥೆ ಸ್ಕ್ರಿಪ್ಟೆಡ್ ಎಂಬ 20 ನಿಮಿಷದ ಸಣ್ಣ ಚಿತ್ರದ್ದು…

Leave a Reply

Your email address will not be published. Required fields are marked *

Back To Top