ಮಹಿಳೆ ಸೌಂದರ್ಯವನ್ನಲ್ಲ, ಸಾಮರ್ಥ್ಯ ಗುರುತಿಸುವ ಕಾಲ

ರಾಜಕಾರಣವೆನ್ನುವುದು ಕೇವಲ ಪುರುಷ ಜಗತ್ತು, ಅಲ್ಲಿ ಗಂಡಸರಿಗೆ ಮಾತ್ರ ಪ್ರವೇಶ ಎಂದು ಯಾವ ಪುಣ್ಯಾತ್ಮನೂ ಹೇಳಿಲ್ಲ. ಆದರೂ, ಜನ ಹಾಗಂದುಕೊಂಡುಬಿಟ್ಟಿದ್ದಾರೆ. ಏಕೆಂದರೆ, ಜನ ಯಾವಾಗಲೂ ಹಾಗೆಯೇ, ಸುಲಭವಾಗಿ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವುದಿಲ್ಲ.

ಕೆಲವು ತಿಂಗಳ ಹಿಂದೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆದ ಸಮಯ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿ ಸಾಗಿತ್ತು. ‘ಪಾಪ, ಆ ವಸುಂಧರಾ ರಾಜೆಯನ್ನೊಮ್ಮೆ ನೋಡಿ, ಎಷ್ಟು ದಪ್ಪಗಾಗಿದ್ದಾರೆ. ಸ್ವಲ್ಪ ದಿನ ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಬಿಡಿ…’ ಎಂದು ಬಿಹಾರದ ನಾಯಕ ಶರದ್ ಯಾದವ್ ವ್ಯಂಗ್ಯವಾಗಿ ಅವಹೇಳನಗೈದರು. ಭಾರತೀಯ ರಾಜಕೀಯದಲ್ಲಿ ಇಂಥ ಅಪಹಾಸ್ಯಗೈದವರಲ್ಲಿ ಶರದ್ ಯಾದವ್ ಮೊದಲಿಗರೂ ಅಲ್ಲ, ಕೊನೆಯ ವ್ಯಕ್ತಿಯೂ ಅಲ್ಲ. ವಸುಂಧರಾ ರಾಜೇ ಕೂಡ ಈ ರೀತಿ ಅಪಹಾಸ್ಯಕ್ಕೆ ಬಲಿಪಶುವಾದ ನೂರಾರು, ಸಾವಿರಾರು ರಾಜಕೀಯ ಸ್ತ್ರೀಯರ ಪೈಕಿ ಒಬ್ಬರಷ್ಟೇ.

‘ಆಕೆ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ. ಆದರೆ, ಅವಳ ಕಡೆ ಸ್ವಲ್ಪ ನೋಡಿ, ಯಾವ ಕೋನದಲ್ಲಾದರೂ, ಆಕೆ ಅಮೆರಿಕ ಅಧ್ಯಕ್ಷೆ ಥರ ಕಾಣುತ್ತಾಳಾ?’ ಎಂಬ ಟೀಕೆಯನ್ನು ಎದುರಿಸಿದವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್. ಇಂಥ ಹೇಳಿಕೆ ನೀಡಿದ ವ್ಯಕ್ತಿ ಡೊನಾಲ್ಡ್ ಟ್ರಂಪ್. ವಸುಂಧರಾ ರಾಜೆಯಂತೆ ಹಿಲರಿಯನ್ನು ಸಹ ಜನ ಚುನಾವಣೆಯಲ್ಲಿ ಒಪ್ಪಲಿಲ್ಲ. ಅವಮಾನಿಸಿದವರೇ ಜನರಿಂದ ಸಮ್ಮಾನಿತರಾದರು.

ಕೆಲವು ವರ್ಷಗಳ ಹಿಂದೆ ಬೊಲಿವಿಯದಲ್ಲಿ ನಡೆದ ಘಟನೆ ಇದು. ಲೈಂಗಿಕ ಕಿರುಕುಳ ದೂರು ದಾಖಲಿಸಲು ಮಹಿಳೆಯೊಬ್ಬಳಿಗೆ ನೆರವಾದ ಕಾರಣಕ್ಕೆ ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜುವಾನ ಕ್ವಿಸ್ಪ್ ಎಂಬಾಕೆಯ ಮೇಲೆ ಬ್ರಹ್ಮಾಂಡ ಒತ್ತಡ ಹೇರಿ ಕೌನ್ಸಿಲ್​ನಿಂದ ಅಮಾನತುಗೊಳಿಸಲಾಯಿತು. ಆಕೆ ನ್ಯಾಯಾಲಯದ ಮೆಟ್ಟಿಲೇರಿ ಅಮಾನತಿಗೆ ತಡೆಯಾಜ್ಞೆ ತಂದರು. ಇದಾದ ಒಂದು ತಿಂಗಳ ಬಳಿಕ ಆಕೆಯ ಶವ ಊರ ಹೊರಗಿನ ಪೊದೆಯೊಂದರ ಬಳಿ ಪತ್ತೆಯಾಗಿತ್ತು.

ಉಗಾಂಡದಲ್ಲೊಂದು ಘಟನೆ ನಡೆಯಿತು. ಪ್ರತಿಪಕ್ಷದ ನಾಯಕಿ ಜೈನಾಬ್ ಫಾತಿಮ ನೈಗಾಗ ಪಕ್ಷದ ಸಹವರ್ತಿಗಳೊಂದಿಗೆ ಕಾರಿನಲ್ಲಿ ಚುನಾವಣಾ ರ್ಯಾಲಿಯೊಂದಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಪೊಲೀಸರು ಅವರನ್ನು ತಡೆದರು. ಜತೆಯಲ್ಲಿದ್ದ ಗಂಡಸರನ್ನೆಲ್ಲ ಬೇರೊಂದು ವಾಹನದಲ್ಲಿ ಅಲ್ಲಿಂದ ಕಳಿಸಿದ ಪೊಲೀಸರು ಜೈನಾಬ್​ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಅವಮಾನಿಸಿದರು.

ಒಂದೆರಡು ವರ್ಷ ಕೆಳಗೆ ಕಾಂಗ್ರೆಸ್​ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ತಮ್ಮದೇ ಪಕ್ಷದ ಮೀನಾಕ್ಷಿ ನಟರಾಜನ್ ಕುರಿತು ‘ನಾನೊಬ್ಬ ನುರಿತ ಅಕ್ಕಸಾಲಿಗ. ಈಕೆ ನೂರಕ್ಕೆ ನೂರು ಅಪ್ಪಟ ಚಿನ್ನ’ ಎಂಬ ಹೊಗಳಿಕೆಯನ್ನು ಅಶ್ಲೀಲ ಪದಗಳನ್ನು ಬಳಸಿ ಹೇಳಿದ್ದರು. ‘ಕ್ಯಾಮರಾ ಮುಂದೆ ಸೊಂಟ ಕುಣಿಸುವವಳನ್ನು ಮಾನವ ಸಂಪನ್ಮೂಲ ಸಚಿವೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಮೃತಿ ಇರಾನಿ ಕುರಿತು ಟೀಕಿಸಿದ್ದವರು ಸಂಜಯ್ ನಿರುಪಮ್ ಲಾಲು ಪ್ರಸಾದ್ ಯಾದವ್ ಹಿಂದೊಮ್ಮೆ ದೇಶದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಸಿದ್ದರು. ಹೀಗೆ ಜಗತ್ತಿನ ಯಾವುದೇ ಮೂಲೆ, ಯಾವುದೇ ದೇಶಕ್ಕೆ ಹೋದರೂ ಮಹಿಳೆಯರ ಬಗೆಗಿನ ಜನರ ದೃಷ್ಟಿಕೋನ ಒಂದೇ. ಮಹಿಳಾ ರಾಜಕಾರಣಿಗಳು ಅನುಭವಿಸುತ್ತಿರುವ ಬವಣೆಯೂ ಒಂದೇ.

ಜಗತ್ತಿನಲ್ಲಿ ಕೃಷಿಯಿಂದ ಬಾಹ್ಯಾಕಾಶದವರೆಗೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯ ಸಹಭಾಗಿತ್ವ ಪುರುಷರನ್ನು ಮೀರಿಸುವಂತಿದೆ. ಇದಕ್ಕೆ ರಾಜಕಾರಣವೂ ಹೊರತಲ್ಲ. ಆದರೆ, ಇವತ್ತಿಗೂ ಇಂಥ ಸಾಧಕರನ್ನು ಓರ್ವ ರಾಜಕಾರಣಿ, ವಿಜ್ಞಾನಿ, ಐಎಎಸ್, ಐಪಿಎಸ್ ಅಧಿಕಾರಿ ಎಂದು ಗುರುತಿಸದೆ, ಆಕೆಯ ಬುದ್ಧಿಮತ್ತೆ, ಪ್ರೌಢಿಮೆ, ಕೌಶಲವನ್ನು ಪರಿಗಣಿಸದೆ, ಓರ್ವ ಹೆಣ್ಣಾಗಿ ಇಷ್ಟು ಎತ್ತರಕ್ಕೇರಿದ್ದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ. ರಾಜಕಾರಣದಲ್ಲೂ ಅಷ್ಟೇ. ಗಾಡ್​ಫಾದರ್​ಗಳಿಲ್ಲದಿದ್ದರೆ ಬೆಳೆಯುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ವಿುಸಲಾಗುತ್ತದೆ. ಯಾರನ್ನೂ ಲೆಕ್ಕಿಸದೆ ಸ್ವತಂತ್ರವಾಗಿ ಬೆಳೆಯುವ ಛಲ ತೊಟ್ಟವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತದೆ. ಭಗೀರಥ ಪ್ರಯತ್ನ ಮಾಡಿ, ಛಲಬಿಡದೆ ಹೋರಾಡಿ ದಡ ಮುಟ್ಟಿದ ಮೇಲೂ ಆಕೆಗೆ ನ್ಯಾಯವಾಗಿ ಸಲ್ಲಬೇಕಾದ ಶ್ರೇಯವನ್ನು ಕೊಡದೆ, ಬೇರೆಯವರ ‘ಉಪಕಾರ’ದ ಅಪವಾದ ಹೊರಿಸಲಾಗುತ್ತದೆ. ಒಟ್ಟಿನಲ್ಲಿ ಹೆಣ್ಣು ರಾಜಕಾರಣದಲ್ಲಿ ಸ್ವತಂತ್ರವಾಗಿ ಏನನ್ನೂ ಸಾಧಿಸಲು ಸಾಧಿಸಲು ಸಾಧ್ಯವಿಲ್ಲ ಎಂದು ಸಾಬೀತುಮಾಡಲು ಹೊರಟ ಷಡ್ಯಂತ್ರದ ಭಾಗವಿದು.

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಒಬ್ಬೇಒಬ್ಬ ಮಹಿಳಾ ಅಧ್ಯಕ್ಷರನ್ನು ಇದುವರೆಗೆ ಕಂಡಿಲ್ಲ. ಜಗತ್ತಿನ ನೂರಾರು ದೇಶಗಳ ಇತಿಹಾಸದಲ್ಲಿ ಇದುವರೆಗೆ ಅಧ್ಯಕ್ಷ, ಪ್ರಧಾನಿ ಗಾಧಿಗೇರಿರುವ ಮಹಿಳೆಯರ ಸಂಖ್ಯೆ ಕಷ್ಟಪಟ್ಟು ಎಣಿಸಿದರೆ ಸರಿಯಾಗಿ ಹದಿನೆಂಟು ದಾಟುವುದಿಲ್ಲ. ಜಾಗತಿಕ ನಾಯಕಿಯರ ಪಟ್ಟಿಯಲ್ಲಿ ಇಂದಿರಾ ಗಾಂಧಿ, ಬೆನಜಿರ್ ಬುಟ್ಟೊ, ಏಂಜೆಲಾ ಮರ್ಕೆಲ್ ರೀತಿಯಲ್ಲಿ ಛಾಪು ಮೂಡಿಸಿದ ವೀರನಾರಿಯರ ಲೆಕ್ಕ ಬೆರಳೆಣಿಕೆ ದಾಟುವುದಿಲ್ಲ.

ಇದಕ್ಕೆಲ್ಲ ಕಾರಣಗಳು ಇಲ್ಲವೆಂದಲ್ಲ. ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಪೂರಕವಾಗಿ ಮಸೂದೆಗಳು ಅಂಗೀಕಾರಗೊಂಡ ಮಾತ್ರಕ್ಕೆ ಮಹಿಳೆಯರ ಸಂಖ್ಯೆ ಬೆಳೆದುಬಿಡುವುದಿಲ್ಲ. ಬದಲಿಗೆ ಆಸಕ್ತ ಮಹಿಳೆಯರು ಮುಕ್ತವಾಗಿ, ಸ್ವತಂತ್ರವಾಗಿ, ನಿರ್ಭೀತವಾಗಿ ಸ್ಪರ್ಧಿಸುವ, ಪ್ರತಿನಿಧಿಸುವ ವಾತಾವರಣ, ವ್ಯವಸ್ಥೆ ಬೆಳೆಯಬೇಕು. ಓರ್ವ ಸಂಸದೆ ಹಸುಗೂಸನ್ನು ಎತ್ತಿಕೊಂಡು ಸಂಸತ್ತಿನಲ್ಲಿ ಭಾಷಣ ಮಾಡುವ ದೃಶ್ಯವನ್ನು, ಸಂಸತ್ತಿನಲ್ಲೇ ಮಗುವಿಗೆ ಎದೆಹಾಲು ಕುಡಿಸುವ ದೃಶ್ಯವನ್ನು ಎಲ್ಲೆಡೆ ಛಾಪಿಸುವ ಮೂಲಕ ಮಹಿಳಾ ಸಮಾನತೆ, ಪ್ರಗತಿ, ಸಮಸಮಾಜದ ಭಾವನೆಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ವಾಸ್ತವದಲ್ಲಿ ನಮ್ಮ ಸಮಾಜ ಆ ಮಟ್ಟಕ್ಕೆ ಬೆಳೆದಿಲ್ಲ. ಈಗಲೂ ಸಂಸತ್ತಿನಲ್ಲಿ ಸ್ತ್ರೀಯೊಬ್ಬಳು ನಿಂತು ಭಾಷಣ ಮಾಡುವಾಗ ಆಕೆಯ ಮಾತಿನ ಲಹರಿಗೆ ಕಿವಿಗೊಡುವ ಬದಲು ಕಣ್ಸನ್ನೆ, ಕೈಸನ್ನೆಯಿಂದ ಆಕೆಯ ಅಂಗಾಂಗ ಅಣಕಿಸುವ ರಾಜಕಾರಣಿಗಳು ಜಗತ್ತಿನೆಲ್ಲೆಡೆ ಇದ್ದಾರೆ. ಅನೇಕರು ಇಂಥ ಪ್ರಸಂಗಗಳನ್ನು ವಿವಾದವಾಗಿಸಿ ಮತ್ತಷ್ಟು ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ಉದಾಸೀನವೇ ಮದ್ದು ಎಂಬಂತೆ ನಡೆದುಕೊಂಡಿದ್ದಾರೆ.

ಹೆಣ್ಣು ಎಂದರೆ ಸೌಂದರ್ಯ ಎನ್ನುವುದು ಕಾವ್ಯ ಸಮಾಜದ ದೃಷ್ಟಿಕೋನದಲ್ಲಿ ಸರಿ. ಆದರೆ, ವರ್ತಮಾನದ ಪ್ರಾಕ್ಟಿಕಲ್ ಯುಗದಲ್ಲಿ ಗಂಡು ಬಲಿಷ್ಠ, ಹೆಣ್ಣು ಕೋಮಲೆ ಎಂಬ ಭಾವನೆಗಿಂತ ಅಥವಾ ಗಂಡು ಕ್ರಿಯಾಶೀಲ, ಹೆಣ್ಣು ಸೌಂದರ್ಯದ ಗೊಂಬೆ ಎಂಬ ವಿಕೃತಿಗಿಂತ ಅವರವರ ಕೆಲಸದಿಂದ ಪ್ರತಿಯೊಬ್ಬರನ್ನೂ ಗುರುತಿಸುವ ಮನೋಭಾವ ಬೆಳೆಯಬೇಕಿದೆ. ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಮಾಯಾವತಿ, ಮಮತಾ ಬ್ಯಾನರ್ಜಿ, ಪ್ರಿಯಾಂಕಾ ಗಾಂಧಿ ಯಾರೇ ಇರಲಿ, ಅವರ ಕೆಲಸವನ್ನು, ಯೋಗ್ಯತೆಯನ್ನು, ದಕ್ಷತೆಯನ್ನು ಟೀಕಿಸುವ, ಹೊಗಳುವ ಅವಕಾಶ ಎಲ್ಲರಿಗೂ ಇದೆ. ಟೀಕಿಸುವಾಗ ಕೆಲಸವನ್ನು ಟೀಕಿಸಬೇಕೇ ವಿನಾ ಸೌಂದರ್ಯವನ್ನಲ್ಲ ಅಥವಾ ಹೆಣ್ಣೆಂಬ ಕಾರಣವನ್ನಲ್ಲ. ಓರ್ವ ಯುವತಿ ತಾನು ಇಷ್ಟ ಪಟ್ಟು ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ನಾಗರಿಕ ಸೇವೆಯ ವೃತ್ತಿಯನ್ನು ಆಯ್ದುಕೊಳ್ಳುವಂತೆ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂಥ ವ್ಯವಸ್ಥೆ ಜಗತ್ತಿನ ಯಾವುದೇ ದೇಶದಲ್ಲಿ ಇದುವರೆಗೆ ರೂಪುಗೊಂಡಿಲ್ಲ. ಅರ್ಜೆಂಟೀನಾದಿಂದ ಆಸ್ಟ್ರೇಲಿಯಾದವರೆಗೆ, ಬ್ರೆಜಿಲ್​ನಿಂದ ಬಾಂಗ್ಲಾದೇಶದವರೆಗೆ ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷೆ ಹುದ್ದೆಗೇರಿದ ಮಹಿಳೆಯರಲ್ಲೂ ಹೆಚ್ಚಿನವರು ರಾಜಕೀಯ ಕುಟುಂಬದಿಂದ ಬಂದವರೇ ಹೊರತು, ಸಾಮಾನ್ಯ ಹಿನ್ನೆಲೆಯಿಂದ ಬಂದು ರಾಜಕೀಯ ಎತ್ತರಕ್ಕೇರಿದವರು ಕಡಿಮೆ. ಭಾರತದಲ್ಲೂ ಹೋರಾಟದ ಹಿನ್ನೆಲೆಯಿಂದ ಮುಂಚೂಣಿಗೆ ಬಂದ ಮಮತಾ ಬ್ಯಾನರ್ಜಿ, ಮಾಯಾವತಿಯಂಥ ಕೆಲವು ಸಾಧಕಿಯರಿದ್ದರೂ, ಹೆಚ್ಚಿನವರು ಯಾವುದೋ ರಾಜಕಾರಣಿಯ ಹೆಂಡತಿ, ತಾಯಿ, ಮಗಳು ಅಥವಾ ಅಕ್ಕ-ತಂಗಿಯರಾಗಿರುವುದು ಕಾಣಬಹುದು. ಹಾಗೆಂದು ರಾಜಕೀಯ ಕುಟುಂಬದ ಮಹಿಳೆಯರು ಬರಬಾರದೆಂದಲ್ಲ. ಬದಲಿಗೆ ಅವರೂ ತಮ್ಮ ಕುಟುಂಬದ ಪ್ರಭಾವಳಿ ಬದಿಗಿಟ್ಟು, ಸ್ವತಂತ್ರವಾಗಿ, ಸ್ವಸಾಮರ್ಥ್ಯದಿಂದ ಬರುವಂಥ ವ್ಯವಸ್ಥೆ ನಿರ್ವಣವಾದರೆ, ಈಗ ಕೇಳಿಬರುತ್ತಿರುವ ಕುಹಕಗಳು, ನಿಂದನೆಗಳು ಕಡಿಮೆಯಾಗಬಹುದು. ರೆಬೆಲ್​ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಮಂಡ್ಯದಿಂದ ಚುನಾವಣಾ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ಕುರಿತು ಮೈತ್ರಿ ಸರ್ಕಾರದ ಸಚಿವ ರೇವಣ್ಣ ಆಡಿದ ಮಾತು ಸರ್ವತ್ರ ಟೀಕೆಗೆ ಗುರಿಯಾಯಿತು. ರೇವಣ್ಣ ಮಾತು ಮಹಿಳೆಯರು ಹಾಗೂ ರಾಜಕೀಯದಲ್ಲಿನ ಮಹಿಳೆಯರ ಅವಸ್ಥೆಯ ಬಗ್ಗೆ ಜಾಗತಿಕ ಮನೋಸ್ಥಿತಿಯ ಮುಂದುವರಿದ ಭಾಗವಷ್ಟೇ.

ಬಹುಶಃ ಈ ಎಲ್ಲ ಪುರುಷ ಮನೋಭಾವದ ವಿಕೃತಿಗಳಿಗೆ ಹೆದರಿಯೇ ಜಗತ್ತಿನಲ್ಲಿ ಹೆಚ್ಚಿನ ಮಹಿಳೆಯರು ರಾಜಕೀಯವನ್ನು ಒಂದು ಐಚ್ಛಿಕ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಜಾಗತಿಕ ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ, ರಾಷ್ಟ್ರ ರಾಜಕಾರಣದಲ್ಲಿ ಶೇ. 50ಕ್ಕಿಂತ ಹೆಚ್ಚಿನ ಮಹಿಳಾ ಪ್ರಾತಿನಿಧ್ಯ ಸದ್ಯದ ಮಟ್ಟಿಗೆ ಇರುವುದು ಆಫ್ರಿಕಾದ ರುವಾಂಡ, ದಕ್ಷಿಣ ಅಮೆರಿಕದ ಕ್ಯೂಬಾದಂಥ ಒಂದೆರಡು ದೇಶಗಳಲ್ಲಿ ಮಾತ್ರ. ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ಜಗತ್ತಿನ ಸಂಸದೀಯ ರಾಜಕಾರಣದಲ್ಲಿ ಶೇ. 77ರಷ್ಟು ಪುರುಷರೇ ಇದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ಶೇ. 93 ದೇಶಗಳಲ್ಲಿ ಪುರುಷರಿದ್ದಾರೆ. ಸರ್ಕಾರಗಳಲ್ಲಿ ಸಚಿವರಾಗಿ ಶೇ. 82ರಷ್ಟು ಗಂಡಸರೇ ಇದ್ದಾರೆ. ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದರೂ, ರಾಜಕಾರಣದಲ್ಲಿ ಶೇ. 10ರಷ್ಟು ಕೂಡ ಇಲ್ಲದಿರುವುದು ನಮ್ಮ ಸಮಾಜವೆಷ್ಟು ಪುರುಷ ಪ್ರಭಾವಿ ಎಂಬುದರ ದ್ಯೋತಕ. ಮೊನ್ನೆ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದವರೆಲ್ಲರೂ ವಾಸ್ತವಿಕವಾಗಿ ರಾಜಕೀಯದಲ್ಲಿ ಮಹಿಳಾ ಸಮಾನತೆಗೆ ಅವಕಾಶ ಮಾಡಿಕೊಡುವ ಕಾಲ ಸನ್ನಿಹಿತವಾಗಿದೆ.

ಕುಟುಂಬದ ಹೆಣ್ಣು ಮಕ್ಕಳ ಘನತೆ, ಗೌರವದ ಬಗ್ಗೆ ಆಸ್ಥೆ ವಹಿಸುವ ಸಮಾಜಕ್ಕೆ, ಜನರಿಗೆ ಬೇರೆ ಹೆಣ್ಣಿನ ಬಗ್ಗೆ ತುಚ್ಛವಾಗಿ ಕಾಣುವ, ಟೀಕಿಸುವ ಅಧಿಕಾರವಿಲ್ಲ. ಪೂರ್ವಗ್ರಹ ಬದಿಗಿಟ್ಟು ಮನೋಸ್ಥಿತಿಯನ್ನು ಬದಲಿಸುವ ಕಾಲ ಬಂದಿದೆ. ಏನಂತೀರಿ?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

One Reply to “ಮಹಿಳೆ ಸೌಂದರ್ಯವನ್ನಲ್ಲ, ಸಾಮರ್ಥ್ಯ ಗುರುತಿಸುವ ಕಾಲ”

  1. ಒಳ್ಳೆಯ ಚಿಂತನೆಯನ್ನು ವ್ಯಕ್ತಪಡಿಸಿದ್ದಿರಿ. ಇದು ಪ್ರಸ್ತುತವಾದ ವಿಚಾರ.

Comments are closed.