Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ವಿಶ್ವಕಪ್​ನ ಥ್ರಿಲ್ ಹಾಗೂ ದೇಶಿ ಫುಟ್​ಬಾಲ್ ಚಡಪಡಿಕೆ

Wednesday, 06.06.2018, 3:04 AM       No Comments

ಳೆದ ವಾರ ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ. ಉಕ್ರೇನ್​ನ ಕೈವ್​ನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫುಟ್​ಬಾಲ್ ಫೈನಲ್ ಪಂದ್ಯ. ಸ್ಪೇನ್​ನ ರಿಯಲ್ ಮ್ಯಾಡ್ರಿಡ್ ಮತ್ತು ಇಂಗ್ಲೆಂಡ್​ನ ಲಿವರ್​ಪೂಲ್ ಕ್ಲಬ್​ಗಳ ನಡುವೆ ಜಿದ್ದಾಜಿದ್ದಿ ಹೋರಾಟ. ಫುಟ್​ಬಾಲ್ ಜಗತ್ತಿನ ಸೂಪರ್​ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಯಾವಾಗ ಗೋಲು ಹೊಡೆದಾರೆಂದು ಎಲ್ಲರೂ ಕಾಯುತ್ತಿದ್ದರು. ಹಾಲಿ ಋತುವಿನಲ್ಲಿ ಅದ್ಭುತ 40 ಗೋಲು ಬಾರಿಸಿ ಲಿವರ್​ಪೂಲ್ ತಂಡವನ್ನು ಚಾಂಪಿಯನ್ಸ್ ಲೀಗ್ ಫೈನಲ್ ಮೆಟ್ಟಿಲು ಹತ್ತಿಸಿದ್ದ ಈಜಿಪ್ಟ್ ಮೂಲದ ಆಟಗಾರ ಮೋ ಸಲಾಹ್ ಭುಜದ ಮೂಳೆ ಮುರಿದುಕೊಂಡು ಪಂದ್ಯ ತೊರೆದಿದ್ದರು. ಚೆಂಡು ಆಟದ ಮುಕ್ಕಾಲುಪಾಲು ರಿಯಲ್ ಮ್ಯಾಡ್ರಿಡ್ ಹತೋಟಿಯಲ್ಲಿತ್ತು. ಉಭಯ ತಂಡಗಳು ತಲಾ 1 ಗೋಲು ಬಾರಿಸಿದ್ದವು. ಅಂಥ ಸನ್ನಿವೇಶದಲ್ಲಿ ಸಬ್​ಸ್ಟಿಟ್ಯೂಟ್ (ಬದಲಿ ಆಟಗಾರ) ಆಗಿ ಕಣಕ್ಕಿಳಿದವರು ಗರೆಥ್ ಬೇಲ್. ಇಂಗ್ಲೆಂಡ್ ಆಜುಬಾಜಿನಲ್ಲಿರುವ ವೇಲ್ಸ್ ಎಂಬ ಪುಟ್ಟರಾಷ್ಟ್ರ ಪ್ರತಿನಿಧಿಸಿ ದೊಡ್ಡ ಹೆಸರು ಮಾಡಿರುವ ಬೇಲ್ 2013ರಿಂದ ರಿಯಲ್ ಮ್ಯಾಡ್ರಿಡ್​ನ ಭಾಗವಾಗಿ ಹಲವು ಟೂರ್ನಿಗಳನ್ನು ಗೆಲ್ಲಿಸಿಕೊಟ್ಟಿದ್ದರೂ, ಮೇ 26ರಂದು ನಡೆದ ಫೈನಲ್​ನಲ್ಲಿ ಆರಂಭಿಕ ಹನ್ನೊಂದು ಮಂದಿಯಲ್ಲಿ ಅವರಿಗೆ ಸ್ಥಾನ ದಕ್ಕಿರಲಿಲ್ಲ. ಈ ಬೇಸರವನ್ನವರು ತೀರಿಸಿಕೊಂಡಿದ್ದು ಮಾತ್ರ ಲಿವರ್​ಪೂಲ್ ತಂಡದ ಮೇಲೆ. ಅಂಕಣದ ಬಲಭಾಗದಿಂದ ಮಾರ್ಸೆಲೋ ಕ್ರಾಸ್​ನಲ್ಲಿ ಆಗಸಕ್ಕೆ ಜಿಗಿದ ಚೆಂಡನ್ನು ಗೋಲುಪೆಟ್ಟಿಗೆಗೆ ಬೆನ್ನುಹಾಕಿ ಆರಡಿ ಎತ್ತರಕ್ಕೆ ಜಿಗಿದಿದ್ದ ಬೇಲ್, ಹಿಮ್ಮುಖವಾಗಿ ಬೀಳುವ ಕ್ಷಣದಲ್ಲಿ ಎಡಗಾಲಿನಿಂದ ಒದ್ದ ಚೆಂಡು ತಲೆಮೇಲಿಂದ ಸಾಗಿ ಗೋಲುಪೆಟ್ಟಿಗೆಯ ಒಡಲು ಸೀಳಿತ್ತು. ಫುಟ್​ಬಾಲ್ ಜಗತ್ತಿನಲ್ಲಿ ಪೀಲೆಯಿಂದ ರೊನಾಲ್ಡೋವರೆಗೆ, ಜಿನೆದಿನ್ ಜಿದಾನ್​ರಿಂದ ಲಯೊನೆಲ್ ಮೆಸ್ಸಿ, ಕ್ರಿಶ್ಚಿಯಾನೊ ರೊನಾಲ್ಡೊವರೆಗೆ ಅನೇಕರು ಅದ್ಭುತ ಗೋಲುಗಳನ್ನು ದಾಖಲಿಸಿದ್ದಾರೆ. ಆದರೆ, ಬೇಲ್​ರ ಈ ಗೋಲು ಸಹ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಲು ಅರ್ಹವಾಗಿತ್ತು.

ತಡರಾತ್ರಿ ನಿದ್ರೆಗೆಟ್ಟು ಯುರೋಪಿಯನ್ ಲೀಗ್​ನ ಇಂಥ ಅದ್ಭುತ ಪಂದ್ಯಗಳನ್ನು ವೀಕ್ಷಿಸುವ ಭಾರತೀಯ ಅಭಿಮಾನಿಗಳು ಭಾರತದಲ್ಲಿ ನಡೆಯುವ ಫುಟ್​ಬಾಲ್ ಪಂದ್ಯ ವೀಕ್ಷಿಸಲು ಬರುವುದು ಮಾತ್ರ ಒಂದೆರಡು ಸಾವಿರದ ಸಂಖ್ಯೆಗಳಲ್ಲಿ. ಕ್ರಿಕೆಟ್ ಅದರಲ್ಲೂ ಐಪಿಎಲ್ ಪಂದ್ಯಗಳಿಗಿರುವ ಹುಚ್ಚು ಕ್ರೇಜ್ ನಮ್ಮ ಫುಟ್​ಬಾಲ್ ಪಂದ್ಯಗಳಿಗೆ ಇರುವುದಿಲ್ಲ. ಭಾರತ ಆಡುವ ಅಂತಾರಾಷ್ಟ್ರೀಯ ಪಂದ್ಯವಿರಲಿ ಅಥವಾ ಸ್ವಲ್ಪ ಮಟ್ಟಿನ ಉನ್ನತ ಸ್ಪರ್ಧಾತ್ಮಕತೆಗೆ ಸಾಕ್ಷಿಯಾಗುವ ಐ-ಲೀಗ್ ಪಂದ್ಯಗಳಿರಲಿ, ಟಿಕೆಟ್​ಗಾಗಿ ಉದ್ದುದ್ದ ಕ್ಯೂ ಕಾಣುವುದಿಲ್ಲ. ಐಪಿಎಲ್ ಪಂದ್ಯದ ಟಿಕೆಟ್​ಗಾಗಿ ಹಿಂದಿನ ರಾತ್ರಿಯೇ ಕೌಂಟರ್ ಎದುರು ಜಾಗರಣೆ ಮಾಡುವಂಥ ದೃಶ್ಯವಂತೂ ಇಲ್ಲವೇ ಇಲ್ಲ. ಆನ್​ಲೈನ್​ನಲ್ಲಿ ಟಿಕೆಟ್ ಭರಾಟೆಯೂ ಇಲ್ಲ.

ಇದಕ್ಕೆಲ್ಲ ಪ್ರಮುಖ ಹಾಗೂ ಏಕೈಕ ಕಾರಣ ಗುಣಮಟ್ಟ. ಕ್ರಿಕೆಟ್​ನಲ್ಲಿ ಭಾರತವೇ ಟಾಪ್. ಅಂತಾರಾಷ್ಟ್ರೀಯ ಪಂದ್ಯವಿರಲಿ, ಐಪಿಎಲ್ ಆಗಿರಲಿ, ಭಾರತೀಯರು ಆಡುವ ಪಂದ್ಯಗಳ ಸ್ಪರ್ಧಾ ಮಟ್ಟ ಇಂಟರ್​ನ್ಯಾಷನಲ್. ಆದರೆ, ಫುಟ್​ಬಾಲ್​ನಲ್ಲಿ ಹಾಗಲ್ಲ. ಯುರೋಪ್, ದಕ್ಷಿಣ ಅಮೆರಿಕ, ಆಫ್ರಿಕಾ, ಪಶ್ಚಿಮ ಏಷ್ಯಾ ಅಥವಾ ಚೀನಾದವರ ಆಟದ ಗುಣಮಟ್ಟದ ಹತ್ತಿರಕ್ಕೂ ಭಾರತೀಯರು ಸುಳಿಯುವುದಿಲ್ಲ. ಯುರೋಪಿನಲ್ಲಿ ಕ್ಲಬ್ ಫುಟ್​ಬಾಲ್ ಲೀಗ್ ಪಂದ್ಯಗಳ ಗುಣಮಟ್ಟ ವಿಶ್ವಕಪ್​ಗಿಂತ ಶ್ರೇಷ್ಠ ಮಟ್ಟದಲ್ಲಿರುತ್ತದೆ. ಸ್ಪೇನ್, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್​ನ ದೇಶಿ ಲೀಗ್​ಗಳಲ್ಲಿ ಪ್ರತೀ ವರ್ಷ ಬಿಲಿಯನ್​ಗಟ್ಟಲೆ ಡಾಲರ್ ವಹಿವಾಟು ನಡೆಯುತ್ತದೆ. ಆ ಪಂದ್ಯಗಳನ್ನು ವೀಕ್ಷಿಸಲೆಂದೇ ಕೋಟ್ಯಂತರ ರೂ. ಖರ್ಚು ಮಾಡಿ ಯುರೋಪಿಗೆ ತೆರಳುವ ಶ್ರೀಮಂತರು ಭಾರತದಲ್ಲಿದ್ದಾರೆ. ಇಂಥ ಶ್ರೇಷ್ಠ ಆಟವನ್ನು ಟಿವಿಯಲ್ಲಾದರೂ ಸರಿ, ನೋಡಿದ ಮೇಲೆ ಭಾರತೀಯ ಫುಟ್​ಬಾಲ್ ರುಚಿಸುವುದಿಲ್ಲ ಎನ್ನುವುದು ದೇಶಿ ಅಭಿಮಾನಿಗಳ ಸಬೂಬು.

ಇದೇ ಕಾರಣಕ್ಕೆ ಮೊನ್ನೆ ಮುಂಬೈನಲ್ಲಿ ಕೀನ್ಯಾ ವಿರುದ್ಧದ ಅಂತಾರಾಷ್ಟ್ರೀಯ ಫುಟ್​ಬಾಲ್ ಪಂದ್ಯಕ್ಕೆ ಮುನ್ನ ಭಾರತ ಫುಟ್​ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಅಭಿಮಾನಿಗಳಲ್ಲೊಂದು ನಿವೇದನೆ ಮಾಡಿಕೊಂಡರು. ‘ಯುರೋಪಿನ ಕ್ಲಬ್​ಗಳ ಮಟ್ಟದಲ್ಲಿ ನಾವು ಶ್ರೇಷ್ಠ ಮಟ್ಟದಲ್ಲಿ ಆಟ ಆಡುವುದಿಲ್ಲ ಎನ್ನುವುದು ನಿಜ. ಆದರೆ, ಅದೊಂದೇ ಕಾರಣಕ್ಕೆ ನಮ್ಮನ್ನು ನಿರ್ಲಕ್ಷಿಸಬೇಡಿ. ನಮಗೆ ಆಡಲು ಬರುವುದಿಲ್ಲ ಎಂಬ ಟೀಕೆಯನ್ನು ಮನೆಯಲ್ಲಿ ಕುಳಿತು ಮಾಡಬೇಡಿ. ದಯವಿಟ್ಟು ಕ್ರೀಡಾಂಗಣಕ್ಕೆ ಬನ್ನಿ. ನಮ್ಮ ಆಟವನ್ನು ನೋಡುವಾಗ ನಮ್ಮ ತಪು್ಪಗಳನ್ನು ಟೀಕಿಸಿ, ನಿಂದಿಸಿ, ಕೂಗಿ, ಗಲಾಟೆ ಮಾಡಿ. ನಮ್ಮನ್ನು ನಿಂದಿಸುವುದಕ್ಕಾದರೂ ಮೈದಾನಕ್ಕೆ ಬನ್ನಿ. ನಮ್ಮ ಆಟದ ಗುಣಮಟ್ಟ ಸುಧಾರಿಸುವುದಕ್ಕೆ ನಿಮ್ಮ ನೇರಾನೇರ ತಿರಸ್ಕಾರವೇ ಪ್ರೇರಣೆ ಆದರೂ ಆಗಬಹುದು’ ಎಂದು ಛೇಟ್ರಿ ಮನವಿ ಮಾಡಿದ್ದರು.

ಛೇಟ್ರಿ ಹೇಳಿದ್ದು ವಾಸ್ತವವಾಗಿತ್ತು. ಖಾಲಿ ಮೈದಾನದಲ್ಲಿ ನಡೆಯುವ ಯಾವುದೇ ಪಂದ್ಯ ಶ್ರೇಷ್ಠವಾಗಿರಲು ಸಾಧ್ಯವಿಲ್ಲ. ಮೂವತ್ತು ವರ್ಷದ ಕೆಳಗೆ ಭಾರತದಲ್ಲಿ ಕ್ರಿಕೆಟ್ ಹಣೆಬರಹವೂ ಇದೇ ಆಗಿತ್ತು. ಆದರೆ, 1983ರಲ್ಲಿ ಕಪಿಲ್ ದೇವ್ ಬಳಗ ವಿಶ್ವಕಪ್ ಗೆದ್ದಿದ್ದೇ ಗೆದ್ದಿದ್ದು. ಆಟದ ಅದೃಷ್ಟವೇ ಬದಲಾಗಿ ಹೋಯಿತು. ದೇಶದಲ್ಲಿ ಕ್ರಿಕೆಟ್ ಸೂಪರ್​ಸ್ಟಾರ್​ಗಳ ಸಂತತಿ ಬೆಳೆಯಿತು. ಪಂದ್ಯಗಳನ್ನು ವೀಕ್ಷಿಸಲು ಜನರು ಸಾಗರೋಪಾದಿಯಲ್ಲಿ ಕ್ರೀಡಾಂಗಣಗಳಿಗೆ ಬರತೊಡಗಿದರು. ಜನರ ಹಿಂದೆಯೇ ಸುನಾಮಿಯಂತೆ ಹಣ ಹರಿದುಬಂತು. ಪ್ರಾಯೋಜಕರು ಸಾಲುಗಟ್ಟಿನಿಂತರು. ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಆಟದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾದವು. ತಂತ್ರಜ್ಞಾನವನ್ನು ಬಳಸಿಕೊಂಡು ಕ್ರಿಕೆಟ್ ಬೆಳೆಯಿತು. ಟಿ20ಯಂಥ ಹೊಸ ಮಾದರಿಗಳ ಆವಿಷ್ಕಾರಗಳಾದವು. ಕೇವಲ 10-12 ಐಸಿಸಿ ಮಾನ್ಯತೆಯ, 6ರಿಂದ7 ವಿಶ್ವದರ್ಜೆಯ ತಂಡಗಳಿರುವ ಕ್ರಿಕೆಟ್ ಜಗದ್ವಾ್ಯಪಿಯಾಗಿ ಬೆಳೆಯಿತು.

ಇನ್ನು, ಒಲಿಂಪಿಕ್ಸ್​ಗೆ ಸೇರ್ಪಡೆಗೊಂಡರೆ ಭಾರತಕ್ಕೊಂದು ನಿಶ್ಚಿತ ಚಿನ್ನದ ಗ್ಯಾರಂಟಿ ಇರುವ ಕಬಡ್ಡಿಯಲ್ಲೂ ಕಳೆದ ನಾಲ್ಕೈದು ವರ್ಷಗಳಲ್ಲಿ ಮಹತ್ವದ ಬದಲಾವಣೆ ಆಗಿದೆ. ಕಬಡ್ಡಿ ವಿಶ್ವಕಪ್​ನ ವ್ಯಾಪ್ತಿ-ಪ್ರಾಪ್ತಿ ಸೀಮಿತ ಸ್ವರೂಪದಲ್ಲಿದ್ದರೂ, ಪ್ರೊ-ಕಬಡ್ಡಿ ಪಂದ್ಯಗಳು ದೇಶದಲ್ಲಿ ಐಪಿಎಲ್ ನಂತರದ ಕ್ರೇಜ್ ಹುಟ್ಟುಹಾಕಿವೆ. ಮೊನ್ನೆ ನಡೆದ ಹರಾಜಿನಲ್ಲಿ ಆಟಗಾರರು ಕೋಟಿ ರೂ. ಮುಖ ನೋಡಿದ್ದು ಸಹ ಈ ಆಟ ಆಧುನಿಕ ಅಪೇಕ್ಷೆಗಳಿಗೆ ಸ್ಪಂದಿಸಿ ಬೆಳೆಯುತ್ತಿರುವುದರ ದ್ಯೋತಕ.

ಬಹುಶಃ ಭಾರತದಲ್ಲಿ ಕ್ರಿಕೆಟ್​ನಲ್ಲಾದ ಹಾಗೂ ಕಬಡ್ಡಿಯಲ್ಲಾಗುತ್ತಿರುವ ಬದಲಾವಣೆ ಫುಟ್​ಬಾಲ್​ನಲ್ಲೂ ಸಾಧ್ಯ.

ಬದಲಾವಣೆಗಳು ಯಾವಾಗಲೂ ಬಹುಮುಖಿ. ಅದು ಒಬ್ಬಿಬ್ಬರಿಂದ ಆಗುವಂಥದ್ದಲ್ಲ. ಆಟಗಾರರು ಕಷ್ಟಪಟ್ಟು ಒಂದು ಟೂರ್ನಿ ಗೆದ್ದುಬಿಟ್ಟರೆ ಆಟ ಶ್ರೇಷ್ಠವಾಗಿಬಿಡುವುದಿಲ್ಲ. ಭಾರತ ಫುಟ್​ಬಾಲ್ ತಂಡ ಕಳೆದ ಒಂದು ಒಂದೂವರೆ ದಶಕದಲ್ಲಿ ಅನೇಕ ಗಮನ ಸೆಳೆಯುವ ಗೆಲುವುಗಳನ್ನು ದಾಖಲಿಸಿದೆ. ಆದರೂ, ತಂಡವಾಗಿ, ಕ್ರೀಡೆಯಾಗಿ ವಿಶ್ವಮಟ್ಟಕ್ಕೇರದೇ ಇರುವುದಕ್ಕೆ, ಹಲವು ಕಾರಣಗಳಿವೆ. ಮುಖ್ಯವಾಗಿ ಆಡಳಿತಾತ್ಮಕ ಕಾರಣಗಳು. ಸುಮಾರು ಎರಡು ದಶಕ ಕಾಲ ದೇಶದ ಫುಟ್​ಬಾಲ್ ಒಕ್ಕೂಟ ಪ್ರಿಯರಂಜನ್ ದಾಸ್​ವುುನ್ಶಿ ಅವರ ಹಿಡಿತದಲ್ಲಿತ್ತು. ಅವರ ಬಳಿಕ ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್​ನ ಪ್ರಫುಲ್ ಪಟೇಲ್ ಎಐಎಫ್​ಎಫ್ ಮುಖ್ಯಸ್ಥರಾಗಿದ್ದರೂ ಭಾರತದ ಫಿಫಾ ರ್ಯಾಂಕಿಂಗ್, ಆಟದ ಗುಣಮಟ್ಟ, ಆಟಗಾರರ ಜೀವನಮಟ್ಟ ಸುಧಾರಣೆಗೆ ಅಂಥ ಗಂಭೀರ ಪ್ರಯತ್ನಗಳನ್ನೇನೂ ಮಾಡಿಲ್ಲ. ಮೈದಾನದಲ್ಲಿ ಓರ್ವ ವಿಜಯನ್, ಭುಟಿಯಾ, ಛೇಟ್ರಿಯಂಥ ಆಟಗಾರರು ಬಂದರಷ್ಟೇ ಸಾಲದು, ಆಡಳಿತರಂಗದಲ್ಲಿ ಚತುರರು ಬರಬೇಕು. ಕ್ರಿಕೆಟ್ ಆಡಳಿತಕ್ಕೆ ದಾಲ್ಮಿಯಾ, ಐಎಸ್ ಬಿಂದ್ರಾರಂಥ ಚಾಣಕ್ಯರು ದೊರೆತಂತೆ ಫುಟ್​ಬಾಲ್ ಸಹ ಸಮರ್ಥರ ನಿರೀಕ್ಷೆಯಲ್ಲಿದೆ.

ಪ್ರತೀ ಎರಡು, ನಾಲ್ಕು ವರ್ಷಗಳಿಗೊಮ್ಮೆ ಛೇ! ಭಾರತೀಯ ಫುಟ್​ಬಾಲ್ ಮಾತ್ರ ಯಾಕೆ ಹೀಗೆ ಎಂದು ವ್ಯಥೆ ಪಡುವುದಕ್ಕೂ ಕಾರಣವಿದೆ. 2016ರಲ್ಲಿ ಯುರೋ ಕಪ್ ಫುಟ್​ಬಾಲ್ ನಡೆದಿತ್ತು. ಇನ್ನೇನು ಬರುವ 14ನೇ ತಾರೀಖು ರಷ್ಯಾದಲ್ಲಿ ಫಿಫಾ ವಿಶ್ವಕಪ್ ಫುಟ್​ಬಾಲ್ ಟೂರ್ನಿ ಆರಂಭವಾಗಲಿದೆ. ಸುಮಾರು ಒಂದು ತಿಂಗಳ ಕಾಲ ಆಟದ ಅಭಿಮಾನಿಗಳಿಗೆ ಸರ್ವಶ್ರೇಷ್ಠ ಪಂದ್ಯಗಳ ರಸಗವಳ.

ಹಿಂದಿನ ವಿಶ್ವಕಪ್ 2014ರಲ್ಲಿ ಬ್ರೆಜಿಲ್​ನಲ್ಲಿ ನಡೆದಾಗ ಜರ್ಮನಿ ದಕ್ಷಿಣ ಅಮೆರಿಕದ ಅರ್ಜೆಂಟೀನಾವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿಯ ಟೂರ್ನಿಯಲ್ಲೂ ಜರ್ಮನಿ, ಬ್ರೆಜಿಲ್, ಅರ್ಜೆಂಟೀನಾ, ಸ್ಪೇನ್ ಫೇವರಿಟ್ ತಂಡಗಳು. ಅರ್ಹತಾ ಸುತ್ತಿನ ಪ್ರದರ್ಶನದ ಆಧಾರದ ಮೇಲೆ ವಿಶ್ಲೇಷಕರು ಬೆಲ್ಜಿಯಂ ಅನ್ನು ಸಹ ಪ್ರಧಾನ ತಂಡಗಳ ಯಾದಿಯಲ್ಲಿ ಗುರುತಿಸುತ್ತಿದ್ದಾರೆ. ಇನ್ನು ಸಾಂಪ್ರದಾಯಿಕವಾಗಿ ಫ್ರಾನ್ಸ್, ಇಂಗ್ಲೆಂಡ್, ಪೋರ್ಚುಗಲ್ ಆಕರ್ಷಕ ಆಟಕ್ಕೆ ಹೆಸರುವಾಸಿ. ಇಟಲಿ, ಹಾಲೆಂಡ್​ನಂಥ ಸಾಂಪ್ರದಾಯಿಕ ಶಕ್ತಿಕೇಂದ್ರಗಳು ಈ ಬಾರಿ ಅರ್ಹತೆಯನ್ನೇ ಪಡೆದಿಲ್ಲ ಎನ್ನುವುದು ನಿರಾಸೆ. ಅಷ್ಟರ ನಡುವೆ ವಿಶೇಷವೆಂದರೆ, ಬ್ರೆಜಿಲ್​ನ ನೇಮರ್, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಹಾಗೂ ಪೋರ್ಚುಗಲ್​ನ ಕ್ರಿಶ್ಚಿಯಾನೊ ರೊನಾಲ್ಡೊರ ತ್ರಿಕೋನಸಮರಕ್ಕೆ ಈ ಟೂರ್ನಿ ಸಾಕ್ಷಿಯಾಗಲಿದೆ. ವಿಶ್ವದ ಸಮಕಾಲೀನ ಅತ್ಯುತ್ತಮರೆನಿಸಿರುವ ಈ ಮೂವರ ಗೋಲ್ಡನ್ ಬೂಟ್ ಕನಸಿಗೆ ಸವಾಲೊಡ್ಡುವಂಥ ಅನೇಕ ಆಟಗಾರರು ಇತರ ತಂಡಗಳಲ್ಲಿದ್ದಾರೆ. ಜರ್ಮನಿಯ ಹಳೆ ಹುಲಿ ಥಾಮಸ್ ಮುಲ್ಲರ್, ಈಜಿಪ್ಟ್​ನ ಸೆನ್ಸೇಷನ್ ಮೋ ಸಲಾಹ್, ಫ್ರಾನ್ಸ್​ನ

ಆಂಟೋನಿಯೊ ಗ್ರೀಜ್​ವುನ್, ಸ್ಪೇನ್​ನ ಡೀಗೋ ಕೋಸ್ಟ, ಪೋಲೆಂಡ್​ನ ರಾಬರ್ಟ್ ಲೆವಾಂಡೊವ್​ಸ್ಕಿ ಅಂಥ ಕೆಲವರು. ಒಟ್ಟಾರೆ ಇತ್ತೀಚೆಗೆ ಐಪಿಎಲ್ ಗುಂಗಿನಿಂದ ಹೊರಬಂದಿರುವ ದೇಶದ ಕ್ರೀಡಾಭಿಮಾನಿಗಳ ಮನೆಯ ಟಿವಿ ಸೆಟ್​ಗಳಲ್ಲಿ ಇನ್ನೊಂದು ತಿಂಗಳು ಗೋಲ್, ಕಿಕ್​ಗಳ ಆರ್ಭಟ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top