Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಲೀಡರ್, ಲೀಡರ್​ಷಿಪ್ ಹಾಗೂ ಕುಮಾರಪರ್ವ

Wednesday, 23.05.2018, 3:05 AM       No Comments

ಮೊದಲಿಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರೇ ಹಂಚಿಕೊಂಡ ಪ್ರಸಂಗವನ್ನೊಮ್ಮೆ ಮೆಲುಕು ಹಾಕೋಣ..

1973ರಲ್ಲಿ ಎಸ್​ಎಲ್​ವಿ-3 ಯೋಜನೆಗೆ ಚಾಲನೆ ನೀಡಲಾಗಿತ್ತು. ರೋಹಿಣಿ ಉಪಗ್ರಹವನ್ನು 1980ರ ಒಳಗೆ ಕಕ್ಷೆಗೆ ಸೇರಿಸುವುದು ಆಗಿನ ಗುರಿಯಾಗಿತ್ತು. ಈ ಯೋಜನೆಯ ನಿರ್ದೇಶಕರಾಗಿದ್ದ ಅಬ್ದುಲ್ ಕಲಾಂ ನೇತೃತ್ವದಲ್ಲಿ ಸಾವಿರಾರು ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದರು. 1979ರ ಆಗಸ್ಟ್ ಹೊತ್ತಿಗೆ ರೋಹಿಣಿ ಉಪಗ್ರಹ ಉಡಾವಣೆಗೆ ಸಜ್ಜಾಗಿತ್ತು. ಆದರೆ, ಉಡಾವಣೆ ಸಂದರ್ಭದಲ್ಲಿ ಕೆಲವು ತಾಂತ್ರಿಕ ಎಚ್ಚರಿಕೆಗಳನ್ನು ಕಡೆಗಣಿಸಿದ್ದರಿಂದಾಗಿ ಉಪಗ್ರಹ ಕಕ್ಷೆಗೆ ಸೇರುವ ಬದಲು ಬಂಗಾಳಕೊಲ್ಲಿಗೆ ಬಿದ್ದಿತ್ತು. ಆ ದಿನ ಉಪಗ್ರಹ ಉಡಾವಣೆ ಬೆಳಗ್ಗೆ 7 ಗಂಟೆಗೆ ನಡೆದು ವಿಫಲವಾಗಿತ್ತು. 7.45ಕ್ಕೆ ಸುದ್ದಿಗೋಷ್ಠಿ ನಿಗದಿಯಾಗಿತ್ತು. ಆಗ ಇಸ್ರೋ ಅಧ್ಯಕ್ಷರಾಗಿದ್ದ ಪ್ರೊ.ಸತೀಶ್ ಧವನ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ವೈಫಲ್ಯದ ಹೊಣೆ ಹೊತ್ತಿದ್ದರು. ನೂರಾರು ಜನರ ತಂಡ ಹಲವಾರು ವರ್ಷಗಳಿಂದ ಪರಿಶ್ರಮ ಪಟ್ಟು ಕೆಲಸ ಮಾಡಿದ್ದರೂ, ಕೆಲವೊಂದು ತಾಂತ್ರಿಕ ಕೊರತೆಗಳಿಂದಾಗಿ ಯೋಜನೆ ಯಶಸ್ವಿಯಾಗಲಿಲ್ಲ. ಒಂದೇ ವರ್ಷದಲ್ಲಿ ಇನ್ನೊಮ್ಮೆ ಉಪಗ್ರಹ ನಿರ್ವಿುಸಿ ಯಶಸ್ವಿಯಾಗಿ ಉಡಾಯಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದರು. ವಾಸ್ತವದಲ್ಲಿ ಯೋಜನಾ ನಿರ್ದೇಶಕರು ಕಲಾಂ ಆಗಿದ್ದರೂ, ವೈಫಲ್ಯದ ಪೂರ್ಣ ಹೊಣೆಯನ್ನು ಪ್ರೊ. ಧವನ್ ಹೊತ್ತುಕೊಂಡಿದ್ದರು. ಅದಾದ ಒಂದು ವರ್ಷದಲ್ಲೇ ಇಸ್ರೋ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ಇಡೀ ದೇಶ ಸಂಭ್ರಮಾಚರಿಸಿತು. ಈ ಬಾರಿ ಸುದ್ದಿಗೋಷ್ಠಿಯನ್ನು ನಡೆಸಿಕೊಡುವಂತೆ ಕಲಾಂ ಅವರಿಗೆ ಪ್ರೊ. ಧವನ್ ಸೂಚಿಸಿದರು. ಸೋಲಿಗೆ ತಂಡ ಕಾರಣ, ಯಶಸ್ಸಿಗೆ ನಾನೊಬ್ಬನೇ ಕಾರಣ ಎನ್ನುವ ಬಾಸ್​ಗಳ ನಡುವೆ ಸತೀಶ್ ಧವನ್ ಅಪರೂಪ, ಅಪವಾದ ಎಂದು ಕಲಾಂ ಸ್ಮರಿಸಿದ್ದರು.

ಶ್ರೇಷ್ಠ ನಾಯಕರು ಇರುವುದೇ ಹೀಗೆ. ಒಂದು ಸಿದ್ಧ ವ್ಯವಸ್ಥೆಯನ್ನು ನಿರ್ವಹಿಸುವುದಕ್ಕೆ ಓರ್ವ ಮ್ಯಾನೇಜರ್ ಸಾಕು. ಆದರೆ, ನಿಜನಾಯಕರು ಶೂನ್ಯದಿಂದ ಪರಿಪೂರ್ಣತೆಯೆಡೆಗೆ ಸ್ವತಃ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಈ ಹಾದಿಯಲ್ಲಿ ಅವರ ಪ್ರಾಮಾಣಿಕತೆ, ಬದ್ಧತೆ ಪ್ರಶ್ನಾತೀತವಾಗಿರುತ್ತದೆ. ಎಂಥ ತ್ಯಾಗಕ್ಕೂ ಅವರು ಸಿದ್ಧರಾಗಿರುತ್ತಾರೆ. ಕರ್ನಾಟಕದಲ್ಲಿ ಇಂದಿನಿಂದ ಕುಮಾರಪರ್ವ. ಎಚ್.ಡಿ. ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜನಾದೇಶ ಏನೇ ಇರಬಹುದು. ಜೆಡಿಎಸ್ ಅಖಂಡ ಕರ್ನಾಟಕದಲ್ಲಿ ಗೆದ್ದಿರುವುದು 38 ಸ್ಥಾನ ಮಾತ್ರವೇ ಆಗಿರಬಹುದು. ಆದರೂ, ಎಚ್​ಡಿಕೆ ಮುಖ್ಯಮಂತ್ರಿ ಎನ್ನುವುದು ವಾಸ್ತವ.

ಎಚ್ಡಿಕೆ ಪ್ರಮಾಣವಚನದ ಸಂದರ್ಭದಲ್ಲಿ ಪ್ರೊ. ಸತೀಶ್ ಧವನ್​ರನ್ನು ನೆನೆಯುವುದಕ್ಕೂ ಸಕಾರಣವಿದೆ. ರಾಜ್ಯಕ್ಕೀಗ ಶ್ರೇಷ್ಠ ನಾಯಕ ಹಾಗೂ ನಾಯಕತ್ವದ ಅವಶ್ಯಕತೆ ಇದೆ. ಪ್ರತಿಪಕ್ಷಗಳು ಏನೇ ಹೇಳಲಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಗುಣಗಳ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಪ್ರಧಾನಿಯಾಗಿ ಅವರ ನ್ಯಾಯ, ನಿಷ್ಠುರ ಆಡಳಿತವನ್ನು ಜಗತ್ತೇ ಕೊಂಡಾಡುತ್ತಿದೆ. ಕೇಂದ್ರದಲ್ಲಿ ಎನ್​ಡಿಎ ಇರುವಾಗ ರಾಜ್ಯದಲ್ಲೂ ಬಿಜೆಪಿ ಗೆದ್ದರೆ, ಮೋದಿ ಮಾರ್ಗದರ್ಶನದಲ್ಲಿ ಯಡಿಯೂರಪ್ಪ ಅವರಿಂದ ಪ್ರಬುದ್ಧ ಆಡಳಿತ ಸಾಧ್ಯ ಎಂದು ಜನ ಭಾವಿಸಿದ್ದರಾದರೂ, ಅಂದುಕೊಂಡಿದ್ದೆಲ್ಲವೂ ಸಾಧ್ಯವಾಗುವುದು ಸೃಷ್ಟಿ ನಿಯಮಕ್ಕೆ ವಿರುದ್ಧ.

ದೈವಬಲ ಅವಗಣನೆ ಬೇಡ: 38 ಶಾಸಕ ಬಲದ (ಈಗ 37) ಜೆಡಿಎಸ್ ಅಧಿಕಾರಕ್ಕೆ ಬಂದಿರುವುದು ಜನಾದೇಶಕ್ಕಿಂತ ಹೆಚ್ಚಾಗಿ ದೈವಬಲದಿಂದ ಎಂದು ಹೇಳಬಹುದು. ಪ್ರಮಾಣವಚನಕ್ಕೆ ಮುನ್ನ ಶ್ರೀರಂಗಂನಿಂದ ಶೃಂಗೇರಿಯವರೆಗೆ ಹತ್ತುಹಲವು ದೇವಾಲಯಗಳಿಗೆ ತೆರಳಿರುವ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ಬಳಿಕ ದೇವರು ಹಾಗೂ ಧರ್ಮದ ವಿಚಾರದಲ್ಲಿ ಪೂರ್ವಗ್ರಹದ ನಿರ್ಧಾರಗಳಿಂದ ದೂರವುಳಿಯಲಿ ಎಂದು ಅಪೇಕ್ಷಿಸುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್​ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳಲ್ಲಿ ಧಾರ್ವಿುಕ ವಿಚಾರಗಳನ್ನು ಮಾತನಾಡುವುದೇ ಕೋಮುವಾದವಾಗಿತ್ತು. ಮಠ-ಮಂದಿರಗಳು ಮಲತಾಯಿ ಧೋರಣೆಯಿಂದ ಸೊರಗಿದ್ದವು. ದೈವನಿಂದಕರಿಗೆ ರಾಜಾಶ್ರಯ ದೊರೆತಿತ್ತು. ಜನರ ಶ್ರದ್ಧೆ, ನಂಬಿಕೆಗಳ ಮೇಲೆ ಕೊಡಲಿಪೆಟ್ಟು ನೀಡುವಂಥ ಹಲವು ಪ್ರಸಂಗಗಳು ನಡೆದಿದ್ದವು. ಮುಜರಾಯಿ ವ್ಯಾಪ್ತಿಯ ದೇವಾಲಯಗಳಿಂದ ಬೊಕ್ಕಸಕ್ಕೆ ಅಪಾರ ಪ್ರಮಾಣದ ಹಣ ಹರಿದುಬರುತ್ತಿದ್ದರೂ, ದೇವಾಲಯಗಳ ಅಭಿವೃದ್ಧಿಗೆ, ಪುರೋಹಿತ ವರ್ಗದ ಕ್ಷೇಮಾಭಿವೃದ್ಧಿಗೆ ಕನಿಷ್ಠ ಪ್ರಯತ್ನಗಳೂ ಆಗಿರಲಿಲ್ಲ. ಮುಂದಿನ ದಿನಗಳಲ್ಲಾದರೂ, ಧರ್ಮ, ದೇವರು, ಮಠಗಳು, ಜಾತಿಗಳ ನಡುವೆ ತಾರತಮ್ಯ ಆಗದಿರಲಿ ಎನ್ನುವುದು ಅಪೇಕ್ಷೆ.

ಸಂಯಮ, ಇಚ್ಛಾಶಕ್ತಿ: ಓರ್ವ ನಾಯಕ ಶ್ರೇಷ್ಠನಾಗುವುದು ತನ್ನ ಸಂಯಮ, ಸಮಚಿತ್ತ ಹಾಗೂ ಇಚ್ಛಾಶಕ್ತಿಯಿಂದ. ವರ್ತಮಾನದ ಸನ್ನಿವೇಶದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ರೀತಿಯ ಬಗ್ಗೆ ಅನೇಕರ ಆಕ್ಷೇಪವಿದ್ದರೂ ಕುಮಾರಸ್ವಾಮಿಯ ಬಗ್ಗೆ ಅಂಥ ವಿರೋಧವೇನಿಲ್ಲ. ಇದಕ್ಕೆ ಕಾರಣ ಹಿಂದೆ 20-20 ಸರ್ಕಾರದ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಭಾರ ನಿರ್ವಹಿಸಿದ ರೀತಿ. ಅನೇಕರು ಗಮನಿಸಿದಂತೆ ಎಚ್ಡಿಕೆ ವಿರೋಧಪಕ್ಷದ ನಾಯಕರಾಗಿದ್ದಾಗ ಮಾತನಾಡುವ ಶೈಲಿ ಹಾಗೂ ರೀತಿಗೂ, ಮುಖ್ಯಮಂತ್ರಿಯಾಗಿದ್ದಾಗ ಮಾತನಾಡುತ್ತಿದ್ದ, ವರ್ತಿಸುತ್ತಿದ್ದ ರೀತಿಗೂ ಅಗಾಧ ವ್ಯತ್ಯಾಸವಿತ್ತು. ಈ ಚುನಾವಣೆಯ ಪ್ರಚಾರ ಸಂದರ್ಭದಲ್ಲೂ ಅವರು ವೀರಾವೇಶದಿಂದ ಮಾತನಾಡಿದ್ದಾರೆ. ಆದರೆ, ಮುಖ್ಯಮಂತ್ರಿಯಾದ ಬಳಿಕ ಸ್ಥಾನಗೌರವ ಮರೆತು ಮಾತನಾಡದಿರಲಿ. ರಾಜಕೀಯ ವೈರಿಗಳೇ ಆದರೂ, ದೇಶದ ಪ್ರಧಾನಿ, ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು, ಹಿರಿಯರ ಬಗ್ಗೆ ಏಕವಚನದ ನಿಂದನೆಗಳನ್ನು ಕೇಳುವಾಗ ಹಿಂದೆಲ್ಲ ಮನಸ್ಸಿಗೆ ಹಿಂಸೆಯಾಗುತ್ತಿತ್ತು. ಎಚ್ಡಿಕೆ ಆ ತಪ್ಪು ಮಾಡದಿದ್ದರೆ ಸಾಕು. ಪಕ್ಷ, ರಾಜಕೀಯ ಎಲ್ಲವೂ ಅಧಿಕಾರಕ್ಕೆ ಬರುವವರೆಗೆ ಮಾತ್ರ. ಬಂದ ಮೇಲೆ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಹಾಗಾಗಿ ಜನಕಲ್ಯಾಣದ ವಿಚಾರದಲ್ಲಿ ವೋಟ್ ಬ್ಯಾಂಕ್ ವರ್ಗೀಕರಣದ ರಾಜಕೀಯ ಬೇಡ. ಇನ್ನು ಕೇಂದ್ರದಲ್ಲಿ ನರೇಂದ್ರ ಮೋದಿ ಹಿಂದಿನ 70 ವರ್ಷಗಳಲ್ಲಿ ಯಾರೂ ಧೈರ್ಯ ಮಾಡದ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿದ್ದು ಅವರ ಪ್ರಬಲ ಇಚ್ಛಾಶಕ್ತಿಯಿಂದ. ಓರ್ವ ಮುಖ್ಯಮಂತ್ರಿ ಸಹ ಇಂಥ ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ, ನೆಲ-ಜಲ-ಗಡಿ ವಿವಾದಗಳಿಗೆ ಶಾಶ್ವತ ಪರಿಹಾರ ಸಾಧ್ಯ.

ಪರಿಸ್ಥಿತಿಯ ನಾಯಕ: ಶ್ರೇಷ್ಠ ನಾಯಕನಾಗುವುದಕ್ಕೆ ಸಿದ್ಧಸೂತ್ರವಿಲ್ಲ. ಬೇರೆಯವರ ಅನುಕರಣೆಯೂ ಅಸಾಧ್ಯ. ಭಾರತೀಯ ಕ್ರಿಕೆಟ್​ನ ಸರ್ವಶ್ರೇಷ್ಠ ನಾಯಕ ಎಂ.ಎಸ್. ಧೋನಿ ಹೇಳುವಂತೆ ನಾಯಕತ್ವ ಗುಣವನ್ನು, ಕಲಿಯಲು, ಕಲಿಸಲು ಸಾಧ್ಯವಿಲ್ಲ. ಅವರ ಪ್ರಕಾರ ನಾಯಕತ್ವವೆಂದರೆ ಅವ್ಯವಸ್ಥೆಯನ್ನು, ಅಲ್ಲೋಲಕಲ್ಲೋಲ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು. ಒಂದು ಕ್ರಿಕೆಟ್ ಪಂದ್ಯದ ಉದಾಹರಣೆಯನ್ನೇ ನೀಡುವುದಾದರೆ, ಅಲ್ಲಿ ಕೋಚ್ ಮಾರ್ಗದರ್ಶನ ಸೀಮಿತ. ಕ್ರಿಕೆಟ್ ಪಂದ್ಯ ಆರಂಭಗೊಂಡ ಬಳಿಕ ನಾಯಕನ ಕೌಶಲಕ್ಕದು ಅಗ್ನಿಪರೀಕ್ಷೆ. ಮೊನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ಪಂಜಾಬ್ ವೇಗಿಗಳು ಅದ್ಭುತ ಫಾಮರ್್​ನಲ್ಲಿದ್ದರು. ಮೋಹಿತ್ ಶರ್ಮ ಪ್ರಾರಂಭದಲ್ಲೇ ಅಂಬಟಿ ರಾಯುಡು ವಿಕೆಟ್ ಕಬಳಿಸಿದರೆ, 5ನೇ ಓವರ್​ನಲ್ಲಿ ಅಂಕಿತ್ ರಜಪೂತ್ ಸತತ 2 ವಿಕೆಟ್ ಕಬಳಿಸಿ ಸವಾಲೊಡ್ಡಿದರು. ಈ ಹಂತದಲ್ಲಿ ಪೂರ್ವರೂಢಿಯಂತೆ ಧೋನಿ ಅಥವಾ ಡ್ವೇನ್ ಬ್ರಾವೋ ಕ್ರೀಸಿಗೆ ಆಗಮಿಸಬೇಕಿತ್ತು. ಆದರೆ, ಧೋನಿ ಕಳಿಸಿದ್ದು ಹರ್ಭಜನ್​ರನ್ನು. ಭಜಿ ಎದುರಾಳಿಗಳ ರಣತಂತ್ರಕ್ಕೇ ಪೆಟ್ಟುಕೊಟ್ಟರು. ಹರ್ಭಜನ್ ಔಟಾದ ನಂತರವೂ ಧೋನಿ ತಾವೇ ಕ್ರೀಸಿಗಿಳಿಯುವ ಬದಲು ಮತ್ತೋರ್ವ ಪಿಂಚ್​ಹಿಟ್ಟರ್ ದೀಪಕ್ ಚಾಹರ್ ಅವರನ್ನು ಕಳಿಸಿದರು. ಚಾಹರ್ 20 ಎಸೆತಗಳಲ್ಲಿ 39 ರನ್ ಗಳಿಸಿದ್ದಷ್ಟೇ ಅಲ್ಲದೆ, ಎದುರಾಳಿ ಬೌಲರ್​ಗಳ ಮನೋಬಲ ಕುಗ್ಗಿಸುವ ಮೂಲಕ ಅವರ ಲೈನ್ ಮತ್ತು ಲೆಂಗ್ತ್ ಹಾಳು ಮಾಡಿದರು. ಆ ದಿನ ಪಂಜಾಬ್ ಗೆದ್ದು ಪ್ಲೇಆಫ್​ಗೆ ಬಡ್ತಿ ಪಡೆಯಬೇಕಿದ್ದರೆ ಚೆನ್ನೈ ತಂಡವನ್ನು 100ರೊಳಗೆ ಆಲೌಟ್ ಮಾಡಬೇಕಿತ್ತು. ಹಾಗಾಗಿ ವಿಕೆಟ್ ಕಬಳಿಸುವ ಅನಿವಾರ್ಯದಿಂದಾಗಿ 15 ಓವರ್ ಒಳಗೆ ಪಂಜಾಬ್​ನ ಪ್ರಮುಖ ಬೌಲರ್​ಗಳ ಓವರ್ ಕೋಟಾ ಮುಗಿದಿತ್ತು. ಕೊನೆಯಲ್ಲಿ ಧೋನಿ-ರೈನಾ ಗೆಲುವಿನ ಔಪಚಾರಿಕತೆ ಮುಗಿಸಿದ್ದರು. ಐಪಿಎಲ್​ನಲ್ಲಿ ಫೀಲ್ಡರ್​ಗಳು ಕ್ಯಾಚ್​ಬಿಟ್ಟಾಗ ಛೀಮಾರಿ ಹಾಕುವ, ಸ್ವತಃ ತಾವೇ ಕ್ಯಾಚ್ ನೆಲಕ್ಕೆ ಹಾಕಿದಾಗ ಹುಳಿನಗೆ ಪ್ರದರ್ಶಿಸುವ ಹಲವು ನಾಯಕರನ್ನು ಕಂಡಿದ್ದೇವೆ. ಅದೇ ರೀತಿ ಮುಂಚೂಣಿಯಲ್ಲಿ ನಿಂತು ಶ್ರೇಷ್ಠ ಮಾದರಿ ಪ್ರದರ್ಶಿಸಿದ ಧೋನಿ ನಾಯಕತ್ವವನ್ನೂ ನೋಡಿದ್ದೇವೆ. ಒಟ್ಟಾರೆ ಹೇಳುವುದಾದರೆ, ಕ್ರಿಕೆಟ್ ಪಂದ್ಯವಿರಲಿ, ರಾಜ್ಯಭಾರವಿರಲಿ, ನಾಯಕತ್ವವೆಂದರೆ ಶೋಕಿಯಲ್ಲ, ಅಲ್ಲಿ ಸ್ವಂತಕ್ಕಿಂತ ಪರಹಿತ, ಸ್ವಾರ್ಥಕ್ಕಿಂತ ತ್ಯಾಗ, ಆವೇಶಕ್ಕಿಂತ ಸಂಯಮ, ಮಾತಿಗಿಂತ ಮೌನಕ್ಕೆ ಹೆಚ್ಚು ತೂಕ. ಶ್ರೇಷ್ಠ ನಾಯಕತ್ವವೆಂದರೆ, ಪ್ರಶ್ನಾತೀತ ನಿಷ್ಠೆ, ಆತ್ಮವಿಶ್ವಾಸ, ಪ್ರೇರಣಾದಾಯಕ ನೇತೃತ್ವ, ಕಾರ್ಯದಕ್ಷತೆ, ಸಂವಹನಚಾತುರ್ಯ, ನಿಂತಕಾಲಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ವಿಶ್ವಾಸಾರ್ಹತೆ, ಕ್ರಿಯಾಶೀಲತೆ, ದುರ್ಬಲರ ಬಗ್ಗೆ ಸಹಾನುಭೂತಿ, ನ್ಯಾಯದಾನಕ್ಕೆ ನಿಷ್ಠುರ ಪ್ರವೃತ್ತಿ… ಹೀಗೆ ಸಕಾರಾತ್ಮಕ ಗುಣವಿಶೇಷಗಳ ಸಮಗ್ರ ಪ್ಯಾಕೇಜ್. ಇದೆಲ್ಲವೂ ರಾಜ್ಯವನ್ನಾಳುವವರಿಗೆ ಗೊತ್ತಿರುವುದಿಲ್ಲ ಎಂದೇನಲ್ಲ. ಆದರೆ, ಕಾಂಗ್ರೆಸ್ ಜತೆ ಅನುಕೂಲಸಿಂಧು ಮದುವೆ ಮಾಡಿಕೊಂಡಿರುವ ಎಚ್​ಡಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಒಳಿತು ಮಾಡುವ ಪ್ರಣಾಳಿಕೆಯನ್ನು ಜಾರಿ ಮಾಡಬೇಕಾದರೆ, ಈ ಎಲ್ಲವೂ ಅತ್ಯಗತ್ಯ.

ಸದ್ಯ ಅವರಿಗೊಂದು ಆಲ್ ದಿ ಬೆಸ್ಟ್ ಹೇಳೋಣ.. ಏನಂತೀರಿ?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top