Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕ್ರಿಸ್ ಗೇಲ್ ಎಂಬ ಕಿರೀಟವಿಲ್ಲದ ಮಹಾರಾಜ

Wednesday, 02.05.2018, 3:05 AM       No Comments

ಸಕಲಗುಣ ಸಂಪನ್ನ, ಏಕಗುಣ ಹೀನ…

ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿ ಯಾರೂ ಇಲ್ಲ. ಮಹಾನುಭಾವ, ಶ್ರೇಷ್ಠರೆನಿಸಿಕೊಂಡವರಲ್ಲೂ ಏನಾದರೊಂದು ಕುಂದುಕೊರತೆ ಇದ್ದೇ ಇರುತ್ತದೆ.

***

ಕ್ರಿಕೆಟ್ ಕಾಮೆಂಟರಿಯಲ್ಲಿ ಸುನಾಮಿ, ಚಂಡಮಾರುತ, ಬಿರುಗಾಳಿ ಮೊದಲಾದ ಪದಗಳ ನಿರಂತರ ಬಳಕೆ ಆಗುತ್ತಿದ್ದರೆ, ಆ ಪಂದ್ಯದಲ್ಲಿ ಕ್ರಿಸ್ ಗೇಲ್ ಆಡುತ್ತಿರುತ್ತಾರೆ…

ಗೇಲ್ ಆಟವೇ ಅಂಥದ್ದು. ಆಜಾನುಬಾಹು ವ್ಯಕ್ತಿತ್ವ. ನಿಲುವು, ನೋಟ, ಆಟ ಎಲ್ಲದರಿಂದಲೂ ಎದುರಿಗಿರುವವರನ್ನು ಬೆಚ್ಚಿಬೀಳಿಸುವಂಥ ಆಟಗಾರ ಅವರು. ಎದುರಾಳಿಗಳ ಮನೋಬಲ ಕುಗ್ಗಿಸುವುದಕ್ಕೆ ಗೇಲ್ ತಂಡದಲ್ಲಿದ್ದರೆ ಸಾಕು. ಇನ್ನು ಅವರ ಬ್ಯಾಟ್ ಮಾತನಾಡತೊಡಗಿದರೆ, ಆ ದಿನ ಗೆಲುವು ಕಟ್ಟಿಟ್ಟಬುತ್ತಿ. ಕಳೆದ ಎರಡು ದಶಕಗಳಿಂದ ಕ್ರಿಕೆಟ್ ಮೈದಾನದಲ್ಲಿ ಸುನಾಮಿಯಂತೆ ಬೌಲರ್​ಗಳ ಧೂಳೀಪಟ ಮಾಡುತ್ತಿರುವ ಗೇಲ್ ಪ್ರಾಯ ಈಗ 38 ಆಗಿದ್ದರೂ, ಅವರ ತೋಳ್ಬಲ ಕುಗ್ಗಿಲ್ಲ, ರನ್ ಹಸಿವು ತಗ್ಗಿಲ್ಲ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಸದಸ್ಯರಾಗಿರುವ ಗೇಲ್​ರನ್ನು ಆರಂಭದ ಎರಡು ಪಂದ್ಯಗಳಲ್ಲಿ ಆಡಿಸಿರಲಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧದ 2ನೇ ಪಂದ್ಯದಲ್ಲಿ ಗೇಲ್ ಆಟವನ್ನು ನೋಡಲು ಕಾತರಿಸಿದ್ದ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದರು. ಆದರೆ, 3ನೇ ಪಂದ್ಯದಿಂದ ಅವಕಾಶ ಪಡೆದ ಅವರು ಸತತ ಪಂದ್ಯಗಳಲ್ಲಿ ಚೆನ್ನೈ ಸೂಪರ್ಕಿಂಗ್ಸ್, ಸನ್​ರೈಸರ್ಸ್, ಕೋಲ್ಕತ ನೈಟ್​ರೈಡರ್ಸ್ ವಿರುದ್ಧ ಕ್ರಮವಾಗಿ 63, 104, 62 ರನ್ ಚಚ್ಚುವ ಮೂಲಕ ತಮ್ಮ ಮಹತ್ವ ತೋರಿಸಿಕೊಟ್ಟರು.

ಕ್ರೀಡಾಕ್ಷೇತ್ರದ ಒಂದು ದುರಂತವೆಂದರೆ ಆಡಳಿತಗಾರರ ಮರ್ಜಿಯಂತೆ ನಡೆಯುವ ಬಹುತೇಕ ಕ್ರೀಡೆಗಳಲ್ಲಿ ಶ್ರೇಷ್ಠ ಆಟಗಾರರ ಪರಿಪೂರ್ಣ ಬಳಕೆ ಆಗುವುದಿಲ್ಲ. ಆಟಗಾರ ಎಷ್ಟೇ ಗಟ್ಟಿಗನಾಗಿದ್ದರೂ, ಕ್ರಿಕೆಟ್ ಮಂಡಳಿ ಅಧಿಕಾರಿಗಳು, ಆಯ್ಕೆಗಾರರು, ಕೊನೆಗೆ ಟೀಮ್ ಮ್ಯಾನೇಜ್​ವೆುಂಟ್ ಅವಕೃಪೆಗೆ ತುತ್ತಾಗಿ ಬಿಟ್ಟರೆ ಆಡುವ ಅವಕಾಶವನ್ನೇ ಕೊಡದೆ ಕೂರಿಸಲಾಗುತ್ತದೆ. ಅಲ್ಲಿ ಅಭಿಮಾನಿಗಳ ಭಾವನೆಗೆ ಅವಕಾಶವೇ ಇರುವುದಿಲ್ಲ.

ಫುಟ್​ಬಾಲ್​ನಲ್ಲೂ ಹೀಗಾಗುತ್ತದೆ. ಯುರೋಪಿನ ವಿಶ್ವಪ್ರಸಿದ್ಧ ಲೀಗ್​ಗಳಲ್ಲಿ, ವಿಶ್ವಕಪ್ ಟೂರ್ನಿಯ ವಿವಿಧ ಹಂತದ ಪಂದ್ಯಗಳಲ್ಲಿ ಫಾಮರ್್​ನ ಉತ್ತುಂಗದಲ್ಲಿರುವ ದೊಡ್ಡದೊಡ್ಡ ಆಟಗಾರರನ್ನು ವಿನಾಕಾರಣ ಬೆಂಚು ಕಾಯಿಸಲಾಗುತ್ತದೆ. ಕಾರಣ ಮ್ಯಾನೇಜರ್ ಮರ್ಜಿ. ತಂಡವನ್ನು ಮುನ್ನಡೆಸುವ ಮ್ಯಾನೇಜರ್​ಗಳು ಸಾರ್ವಭೌಮ ಅಧಿಕಾರ ಹೊಂದಿರುವ ಫುಟ್​ಬಾಲ್​ನಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ, ಮೆಸ್ಸಿಯಂಥ ಜಗದ್ವಿಖ್ಯಾತರೂ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆಯಬೇಕಾದರೆ, ಮ್ಯಾನೇಜರ್ ಮರ್ಜಿಗೆ ಕಾಯಬೇಕು. ಇಂಗ್ಲೆಂಡ್​ನ ಡೇವಿಡ್ ಬೆಕ್​ಹ್ಯಾಂ, ಬ್ರೆಜಿಲ್​ನ ರೊನಾಲ್ಡೊ, ಸ್ಪೇನ್​ನ ರಾಲ್, ಪೋರ್ಚುಗಲ್​ನ ಲೂಯಿಸ್ ಫಿಗೋರಂಥ ಶ್ರೇಷ್ಠಾತಿಶ್ರೇಷ್ಠ ಆಟಗಾರರೂ ಮ್ಯಾನೇಜರ್​ಗಳ ತಾರತಮ್ಯ ಧೋರಣೆಯಿಂದಾಗಿ ದೊಡ್ಡದೊಡ್ಡ ಪಂದ್ಯ ಆಡುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಪಂದ್ಯದ ಕೊನೆಯ ಒಂದೆರಡು ನಿಮಿಷಗಳಲ್ಲಿ ಮಾತ್ರ ಮೈದಾನಕ್ಕಿಳಿಯುವ ಅವಕಾಶ ಪಡೆದು ಅವಮಾನ ಅನುಭವಿಸಿದ್ದಾರೆ.

ಕ್ರಿಕೆಟ್​ನಲ್ಲೂ ಅಷ್ಟೇ. ಅದರಲ್ಲೂ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವೆ ಎಣ್ಣೆ-ಸೀಗೆಕಾಯಿ ಸಂಬಂಧವುಳ್ಳ ವೆಸ್ಟ್ ಇಂಡೀಸ್​ನಲ್ಲಿ ಅನೇಕ ದಿಗ್ಗಜ ಆಟಗಾರರು ನೊಂದಿದ್ದಾರೆ. ಬ್ರಿಯಾನ್ ಲಾರಾರಂಥ ಮಹಾನ್ ಆಟಗಾರ ವಿಂಡೀಸ್ ಮಂಡಳಿಯನ್ನು ಎದುರು ಹಾಕಿಕೊಂಡ ಕಾರಣಕ್ಕೆ ಅನೇಕ ಪ್ರಮುಖ ಟೂರ್ನಿ, ಸರಣಿ, ಪಂದ್ಯಗಳನ್ನು ತಪ್ಪಿಸಿಕೊಂಡ ಉದಾಹರಣೆ ಇದೆ. ಗೇಲ್ ಕೂಡ ಅಷ್ಟೇ. ಪ್ರಾಯೋಜಕತ್ವ ಒಪ್ಪಂದಕ್ಕೆ ಬಲಿಪಶುವಾಗಿ ವಿಂಡೀಸ್ ತಂಡದ ನಾಯಕತ್ವ ಕಳೆದುಕೊಂಡರು. ಅನೇಕ ಸರಣಿಗಳಿಂದ ಕೊಕ್ ಪಡೆದರು. ತಂಡ ನಿರಂತರವಾಗಿ ಸಣ್ಣಪುಟ್ಟ ತಂಡಗಳ ವಿರುದ್ಧ ಸೋತು ನೆಲಕಚ್ಚಿದ್ದರೂ, ಗೇಲ್​ರಂಥ ಶ್ರೇಷ್ಠ ಆಟಗಾರರನ್ನು ಬಳಸಿಕೊಳ್ಳುವ ಪ್ರಯತ್ನ ವಿಂಡೀಸ್ ಮಂಡಳಿಯಿಂದ ಆಗಲೇ ಇಲ್ಲ.

ಇಲ್ಲಿ ಒಂದು ಮಹತ್ವದ ಸಂಗತಿ ಇದೆ. ಜಗತ್ತಿನ ಯಾವುದೇ ಕ್ರೀಡೆಯನ್ನು ಗಮನಿಸಿದರೂ, ಆಟದ ಮೈದಾನದಲ್ಲಿ ಅಪ್ರತಿಮ ಆತ್ಮವಿಶ್ವಾಸ, ಧಾರ್ಷ್ಟ್ರ್ಯ ಕೆಚ್ಚು ಪ್ರದರ್ಶಿಸುವ ಆಟಗಾರರು ಸ್ವಭಾವತಃ ಕೂಡ ತುಸು ಮುಂಗೋಪಿಗಳೋ, ಅಹಂಭಾವಿಗಳೋ ಆಗಿರುತ್ತಾರೆ. ತಮ್ಮ ಪ್ರತಿಭೆಗೆ ತಕ್ಕ ಗೌರವ, ವಿನಾಯ್ತಿ ಸಿಗಲಿ ಎಂಬ ಅಪೇಕ್ಷೆಯೂ ಅವರಲ್ಲಿರುತ್ತದೆ. ಅವರ ವರ್ತನೆಗಳೂ, ಸಾರ್ವಜನಿಕ ಹೇಳಿಕೆಗಳೂ ಕೆಲವೊಮ್ಮೆ ಅತಿರೇಕ ಎನ್ನುವಂತೆಯೂ ಇರುತ್ತದೆ. ಇಂಥ ಸಂದರ್ಭದಲ್ಲಿ ಮಂಡಳಿಗಳು ಶಿಸ್ತಿನ ಮಾರ್ಗ ಅನುಸರಿಸಿ ಆಟಗಾರರನ್ನು ತಿದ್ದುವ ಬದಲು, ದಂಡನೆಯ ಮಾರ್ಗದಿಂದ ಹತ್ತಿಕ್ಕುವ ಪ್ರಯತ್ನ ನಡೆಸುತ್ತವೆ. ಮೈದಾನದಲ್ಲಿ ಬೊಬ್ಬಿರಿಯುವ ಆಟಗಾರ ಹೊರಗೆ, ಮಂಡಳಿ ಅಧಿಕಾರಿಗಳ ಎದುರು ಕೈಕಟ್ಟಿ, ತಲೆಬಾಗಿ ನಿಲ್ಲಬೇಕು ಎಂದು ನಿರೀಕ್ಷಿಸುವುದು ಕೂಡ ತಪ್ಪೇ ಅಲ್ಲವೇ? ಯಾವುದೇ ಕ್ರಿಕೆಟ್ ಮಂಡಳಿಯ ಶ್ರೀಮಂತಿಕೆ ಬೆಳೆಯುವಲ್ಲಿ ಚಾಣಾಕ್ಷ ಆಡಳಿತಗಾರರಷ್ಟೇ, ಆಟಗಾರರ ಪಾತ್ರವೂ ಪ್ರಮುಖ. ಭಾರತದಲ್ಲಿ ಕಪಿಲ್ ದೇವ್, ಸಚಿನ್ ತೆಂಡುಲ್ಕರ್​ರಂಥ ಆಟಗಾರರಿಲ್ಲದೇ ಹೋಗಿದ್ದರೆ, ಒಬ್ಬ ಜಗನ್ಮೋಹನ್ ದಾಲ್ಮಿಯಾ, ಇಂದ್ರಜಿತ್ ಸಿಂಗ್ ಬಿಂದ್ರಾರಂಥ ಆಡಳಿತಗಾರರಿಂದ ಬಿಸಿಸಿಐ ಈ ಮಟ್ಟಿಗೆ ಶ್ರೀಮಂತವಾಗುವುದು ಸಾಧ್ಯವೇ ಇರಲಿಲ್ಲ. ಯಾವುದೇ ಪ್ರಾಯೋಜಕರು ಹಣ ಹೂಡಬೇಕಾದರೆ ತಂಡದ ಪ್ರದರ್ಶನ, ಫಲಿತಾಂಶ, ಸ್ಟಾರ್ ಆಟಗಾರರ ಉಪಸ್ಥಿತಿ ಹಾಗೂ ಜನಾಕರ್ಷಣೆಯನ್ನು ಮಾನದಂಡವಾಗಿ ಪರಿಗಣಿಸುತ್ತಾರೆ. ಆದರೆ, ವೆಸ್ಟ್ ಇಂಡೀಸ್ ಮಂಡಳಿಗೆ ಇವತ್ತಿಗೂ ಆಟಗಾರರ ಮಹತ್ವ ಅರಿವಾಗಿಲ್ಲ. ಬದಲಿಗೆ ಅವರು ತಮ್ಮ ನೇರಕ್ಕೆ ಆಟಗಾರರು ತಗ್ಗಿ-ಬಗ್ಗಿ ನಡೆಯಬೇಕು ಎಂದೇ ಭಾವಿಸಿದ್ದಾರೆ. ಅದರಿಂದ ನಷ್ಟವಾಗುವುದು ತಂಡಕ್ಕೆ, ಕ್ರಿಕೆಟ್​ಗೆ ಹಾಗೂ ಅಭಿಮಾನಿಗಳಿಗೆ.

ಕ್ರಿಸ್ ಗೇಲ್ ಓರ್ವ ವಿವಾದಾತ್ಮಕ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರ ಸ್ವಭಾವವೇ ಹಾಗೆ. ಬಿಂದಾಸ್ ಜೀವನ, ಬಿಡುಬೀಸು ಮಾತು, ಹಾಡು, ಕುಡಿತ, ಕುಣಿತ ಎಲ್ಲವೂ ಅವರ ಜೀವನದ ಅವಿಭಾಜ್ಯ ಅಂಗಗಳು. 2005ರಲ್ಲಿ ಹೃದಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಬಳಿಕ ಬದುಕಿನ ಪ್ರತಿ ದಿನವನ್ನೂ ಕೊನೆಯ ದಿನ ಎಂಬಂತೆ ಆಸ್ವಾದಿಸುವ ಜೀವನಶೈಲಿಯನ್ನು ಅವರು ರೂಢಿಸಿಕೊಂಡಿದ್ದಾರೆ. ಅವರ ಅರಮನೆಯಂಥ ಬೃಹತ್ ಬಂಗಲೆಯಲ್ಲಿ ಬಾರ್, ಸ್ಟ್ರಿಪ್ ಕ್ಲಬ್ ಸಹಿತ ಎಲ್ಲ ವಿಲಾಸಿ ಸೌಲಭ್ಯಗಳಿವೆ. ಅವರು ಮಲಗುವ ಕೊಠಡಿಗೆ ಗಾಜಿನ ಮೇಲ್ಛಾವಣಿ ಹಾಕಿಸಿಕೊಂಡು ರಾತ್ರಿ ಆಗಸ ನೋಡುತ್ತ ಮಲಗುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ಬದುಕಿನ ಪ್ರತಿ ಕ್ಷಣವನ್ನೂ ಆನಂದಿಸಬೇಕೆನ್ನುವ ಪ್ರವೃತ್ತಿಯ ಅವರು ಬಾಹ್ಯಜಗತ್ತಿನ ಮಟ್ಟಿಗೆ ಮೋಜುಗಾರ, ಸೊಗಸುಗಾರ.

ವೆಸ್ಟ್ ಇಂಡೀಸ್ ಮಂಡಳಿಯಲ್ಲಿ ಅವಕಾಶ ಕಡಿಮೆಯಾಗುತ್ತ ಹೋದಂತೆ, ವೃತ್ತಿಪರ ಲೀಗ್​ಗಳತ್ತ ಗಮನ ಹರಿಸಿದ ಗೇಲ್, ಭಾರತದ ಐಪಿಎಲ್, ಆಸ್ಟ್ರೇಲಿಯಾದ ಬಿಗ್​ಬ್ಯಾಷ್, ಪಾಕಿಸ್ತಾನ, ಬಾಂಗ್ಲಾ, ಜಿಂಬಾಬ್ವೆಯ ಲೀಗ್​ಗಳಲ್ಲೂ ಆಡಿದ್ದಾರೆ, ಆಡುತ್ತಿದ್ದಾರೆ, ಇಂಗ್ಲೆಂಡ್​ನ ಕೌಂಟಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ವರ್ಷಪೂರ್ತಿ ಒಂದಿಲ್ಲೊಂದು ಕ್ರಿಕೆಟ್ ಟೂರ್ನಿಯಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಅವರ ರನ್ ಹಸಿವು ಹೆಚ್ಚುತ್ತಲೇ ಇದೆ.

ಯಾವುದೇ ಆಟಗಾರ ಕ್ರೀಡೆಗಿಂತ ದೊಡ್ಡವನಲ್ಲ ಎನ್ನುವುದು ವಾಸ್ತವ. ಸಚಿನ್ ತೆಂಡುಲ್ಕರ್​ರಂಥ ಆಟಗಾರರನ್ನು ಅಭಿಮಾನಿಗಳು ಆಟದ ದೇವರ ಪಟ್ಟಕ್ಕೇರಿಸಿದರೂ, ಅವರು ವ್ಯಕ್ತಿಗತವಾಗಿ ಶಿಸ್ತಿನ ಚೌಕಟ್ಟು ಮೀರಿ ಯಾವತ್ತೂ ಹಾರಾಡಲಿಲ್ಲ. ಗೇಲ್ ವಿಚಾರದಲ್ಲಿ ಹಾರಾಟವೇ ಅವರ ಪಾಲಿಗೆ ಮುಳುವಾದ ಅಂಶ. ಆದರೂ, ಆಡಳಿತಗಾರರು, ಟೀಮ್ ಮ್ಯಾನೇಜ್​ವೆುಂಟ್ ಅರಿತುಕೊಳ್ಳಬೇಕಾದ ಒಂದು ಅಂಶವೆಂದರೆ, ಗೇಲ್​ರಂಥ ಆಟಗಾರನನ್ನು ಒಮ್ಮೆ ತಂಡಕ್ಕೆ ಆಯ್ಕೆ ಮಾಡಿದ ಮೇಲೆ ಬೆಂಚು ಕಾಯಿಸುವ ಅವಮಾನಕ್ಕೆ ಗುರಿಪಡಿಸಬಾರದು. ಗೇಲ್​ಗೆ ವಯಸ್ಸಾಗಿದೆ ಅನ್ನಿಸಿದರೆ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದೇ ಬೇಡ. ಗೇಲ್, ವೀರೇಂದ್ರ ಸೆಹ್ವಾಗ್​ರಂಥ ಆಟಗಾರರು ಎಂಥ ವಿಧ್ವಂಸಕರೆಂದರೆ ಯಾವುದೇ ಮಾದರಿಯ ಕ್ರಿಕೆಟ್​ನಲ್ಲಿ ಅವರು ಹತ್ತು ಓವರ್ ಆಡಿದರೆ ತಂಡ ದೊಡ್ಡ ಮೊತ್ತ ಪೇರಿಸಿರುತ್ತದೆ. ಅವರು ಔಟಾದ ಬಳಿಕವೂ ಅನ್ಯ ಆಟಗಾರರಿಗೆ ಆಡುವುದಕ್ಕೆ ಸಾಕಷ್ಟು ಓವರ್ ಉಳಿದಿರುತ್ತದೆ. ವೈಫಲ್ಯಗಳು ಎಂಥ ಆಟಗಾರರಿಗೂ ಸಹಜ. ಹಾಗೆಂದು ಆಡಿಸದೇ ಇರುವುದು ಅದಕ್ಕೆ ಪರಿಹಾರವಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು ಅವಕಾಶ ನೀಡುವುದರಿಂದ ಲಾಭ ಜಾಸ್ತಿ.

ಐಪಿಎಲ್ ಆರಂಭದ ದಿನಗಳಿಂದ ಅನೇಕ ಸ್ಪೋಟಕ ಬ್ಯಾಟ್ಸ್​ಮನ್​ಗಳನ್ನು ಕಂಡಿದೆ. ಈ ಟೂರ್ನಿಯಲ್ಲಿ ಭಯಂಕರ ಆಟ ಪ್ರದರ್ಶಿಸಿ ಅನೇಕರು ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದಾರೆ. ಆದರೆ, ಈ ಹನ್ನೊಂದು ವರ್ಷಗಳಲ್ಲಿ ವಿವಿಧ ತಂಡಗಳ ಪರ ಗೇಲ್ ಸೃಷ್ಟಿಸಿರುವ ಚಂಡಮಾರುತಗಳಿಗೆ, ಸಿಕ್ಸರ್​ಗಳ ಸಿಡಿಮದ್ದುಗಳಿಗೆ ಸರಿಸಾಟಿ ಇಲ್ಲ. ಗೇಲ್ ಎಂದರೇ ಹಾಗೆ. ಟಿ-ಟ್ವೆಂಟಿ ಶತಕ, ಏಕದಿನದಲ್ಲಿ ದ್ವಿಶತಕ, ಟೆಸ್ಟ್​ಗಳಲ್ಲಿ ತ್ರಿಶತಕದ ಆಟವಿರಲಿ ಅಥವಾ, ಐಪಿಎಲ್​ನ ಧಾಂ-ಧೂಂ ಹೊಡೆತಗಾರಿಕೆ ಇರಲಿ, ಎದುರಾಳಿ ಬೌಲರ್​ಗಳನ್ನು ನೀನ್ಯಾವ ಲೆಕ್ಕ ಎಂಬಂತೆ ದಂಡಿಸುವ ಅವರ ಬ್ಯಾಟಿಂಗ್ ಕಣ್ಣಿಗೆ ಹಬ್ಬ. ವಿಶ್ವ ಕ್ರಿಕೆಟ್​ನಲ್ಲಿ ಗೇಲ್​ರ ಮಹತ್ವ ಬಣ್ಣಿಸುವುದಕ್ಕೆ ಅವರು ವಿಕೆಟ್ ಒಪ್ಪಿಸಿದಾಗ ಎದುರಾಳಿಗಳು ವಿಶ್ವಕಪ್ ಗೆದ್ದಂತೆ ಸಂಭ್ರಮಿಸುವ ಪರಿಯೊಂದೇ ಸಾಕು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top