Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಕನಸುಗಳ ಆ ಮುಖ, ಈ ಮುಖ, ಗೋಮುಖ!

Wednesday, 07.03.2018, 3:05 AM       No Comments

ಬದುಕೆನ್ನುವುದು ಕನಸುಗಳ ಭಿಕ್ಷೆ…

ಅನೇಕ ಬಾರಿ ಹೀಗನ್ನಿಸುವುದಿದೆ.

ಕನಸುಗಳಿಲ್ಲದ ಬದುಕೊಂದಿದೆಯೇ? ಕನಸುಗಳಿಲ್ಲದೆ ಬದುಕುವುದಾದರೂ ಹೇಗೆ?

ಜಗತ್ತಿನಲ್ಲಿ ಪ್ರತಿಯೊಬ್ಬರೂ ಕನಸುಗಾರರೇ? ಕೆಲವರು ಬದುಕಿನ ಕನಸು ಕಾಣುತ್ತಾರೆ. ಕೆಲವರು ಕನಸಿನಂತೆಯೇ ಬದುಕುತ್ತಾರೆ. ಎಷ್ಟೋ ಕನಸುಗಳಿಗೆ ಅರ್ಥವಿರುವುದಿಲ್ಲ. ಅನೇಕ ಬಾರಿ ಕನಸುಗಳ ಅರ್ಥ ಹುಡುಕಿಕೊಂಡು ಹೋಗಿ ಅನರ್ಥವಾಗುವುದಿರುತ್ತದೆ. ಅದೇ ರೀತಿ ನಮ್ಮ ಕನಸುಗಳ ಅರ್ಥ, ನಿಗೂಢಾರ್ಥ, ಭಾವಾರ್ಥಗಳಲ್ಲೇ ಜೀವನದ ಸಾರ್ಥಕತೆಯೂ ಇರುತ್ತದೆ.

ನಿದ್ರೆಯಲ್ಲಿ ಕಾಣುವ ಕನಸಿಗೂ, ಜಾಗೃತ ಮನಸ್ಸಿನ ಕನಸಿಗೂ

ವ್ಯತ್ಯಾಸವಿದೆ. ಹಾಗೆ ನೋಡಿದರೆ, ಜಗತ್ತಿನ ದೊಡ್ಡ ದೊಡ್ಡ ಸಾಧಕರೆಲ್ಲರೂ ಕನಸುಗಾರರೇ. ಬುದ್ಧಿ ತಿಳಿಯುವ ವಯಸ್ಸಿನಿಂದ ಕೊನೆಗಾಲದವರೆಗೆ ಜೀವನದ ವಿವಿಧ ಮಜಲುಗಳಲ್ಲಿ ಕಾಣುವ ಭಿನ್ನ ಕನಸುಗಳ ಒಟ್ಟು ಹೂರಣವೇ ನಮ್ಮ ಬದುಕಾಗಿರುತ್ತದೆ. ಅವರವರ ಯೋಗ, ಯೋಗ್ಯತೆ ಆಧರಿಸಿ, ಅನುಸರಿಸಿ ಪ್ರತಿಯೊಬ್ಬರ ಬದುಕಿರುತ್ತದೆ. ಕೆಲವರ ಪಾಲಿಗೆ ಬದುಕೊಂದು ಸುಂದರ ಕನಸಿನಂತಿರುತ್ತದೆ. ಇನ್ನು ಕೆಲವರ ಪಾಲಿಗೆ ದುಃಸ್ವಪ್ನ. ಮುಗಿದರೆ ಸಾಕೆಂದು ಆ ಕನಸಿನಿಂದ ಕಾಲು ಹೊರಗಿಡುವ ಆತುರದಲ್ಲಿರುತ್ತಾರೆ.

ಹೊರಡುವೆ ಹಾಗಿದ್ದರೆ… ರಾತ್ರಿ ಕನಸಿನಲ್ಲಿ ಭೇಟಿಯಾಗೋಣ…!

ಆತ ಹಣಕಾಸು ಅಧಿಕಾರಿ. ಆಕೆ ಗುಣಮಟ್ಟ ಪರೀಕ್ಷಕಿ. ಇಬ್ಬರೂ ಕೆಲಸ ಮಾಡುವುದು ದೊಡ್ಡ ಪ್ರಮಾಣದ ಕಸಾಯಿಖಾನೆಯೊಂದರಲ್ಲಿ. ಆತನಿಗೆ ಒಂದು ಕೈ ಸ್ವಾಧೀನದಲ್ಲಿಲ್ಲ. ಆದರೆ, ಸೂಕ್ಷ್ಮಗ್ರಾಹಿ. ಆಕೆಯೂ ವಿದ್ಯಾವಂತೆ. ಆದರೆ, ಪ್ರಾಪಂಚಿಕ ಜಗತ್ತಿನ ಪರಿಚಯವಿಲ್ಲದ, ಹಲವು ಬಗೆಯ ಅಜ್ಞಾನ-ಗೊಂದಲಗಳಿಂದ ತೊಳಲುತ್ತಿರುವ ಯುವತಿ. ರಾತ್ರಿಯಾದರೆ, ಇಬ್ಬರಿಗೂ ಬೀಳುವುದು ಒಂದೇ ಕನಸು. ಹಗಲಿನಲ್ಲಿ ವಿಚಿತ್ರ, ವಿಕ್ಷಿಪ್ತ, ಏಕಾಕಿತನದ ಅಸಹನೀಯ ಬದುಕು ನಡೆಸುವ ಅವರಿಬ್ಬರು ರಾತ್ರಿಯಾದರೆ, ಒಟ್ಟಿಗೆ ವಿಹರಿಸುವ ಜೋಡಿ ಜಿಂಕೆಗಳು.

ಹಿಮಾಚ್ಛಾದಿತ ಅರಣ್ಯ, ಅಲ್ಲೊಂದು ಕೆರೆ, ಸನಿಹದಲ್ಲೇ ತೊರೆ, ಬೆಳ್ಳಿ ಹೊದಿಕೆಯನ್ನು ಭೂಮಿಗೆ ಹಾಸಿದಂತಹ ಭವ್ಯ ವಾತಾವರಣದಲ್ಲಿ ಆತ ಪ್ರೀತಿಗಾಗಿ ಹಂಬಲಿಸುವ ಸುವರ್ಣಮೃಗ. ಆಕೆಯೋ ಸಮರ್ಪಣೆಗೆ ಕಾದಿರುವ ಮೃಗನಯನಿ. ಮೂಕಪ್ರಾಣಿಗಳ ದೇಹದಲ್ಲಿ ಅವರಿಬ್ಬರ ಆತ್ಮಗಳ ಸಂಚಾರ, ವಿಹಾರ, ಸರಸ ಸಮಾಚಾರದ ಪರಿಯನ್ನು ಕನಸಿನ ರೂಪಕದಲ್ಲಿ ಸಹೃದಯಿಗಳ ಮನಸ್ಸನ್ನು ಕಾಡುವ ಚಲನಚಿತ್ರ ರೂಪದಲ್ಲಿ ಕಟ್ಟಿಕೊಟ್ಟಿರುವುದು ಹಂಗೆರಿಯ ನಿರ್ದೇಶಕಿ ಇದಿಕೊ ಎನ್ಯೆದಿ ಅವರ ‘ಆನ್ ಬಾಡಿ ಆಂಡ್ ಸೌಲ್’ ಚಿತ್ರದ ಹೆಚ್ಚುಗಾರಿಕೆ. ಮೇಲೆ ಉಲ್ಲೇಖಿಸಿರುವ ಕನಸಿನಲ್ಲಿ ಭೇಟಿಯಾಗುವ ಸಂಭಾಷಣೆ ಇದೇ ಚಿತ್ರದ್ದು…

ಹಾಗಾದರೆ, ಇಬ್ಬರು ವ್ಯಕ್ತಿಗಳು ಒಂದೇ ಕನಸು ಕಾಣುವುದು ಸಾಧ್ಯವೇ? ಭಾರತೀಯ ಪರಿಕಲ್ಪನೆಯ ಪ್ರೀತಿ ಅಥವಾ ದಾಂಪತ್ಯವೆಂದರೆ, ಒಂದೇ ಕನಸು ಒಂದೇ ಬದುಕು ಎನ್ನುವುದೇ ಆಗಿದೆ. ಎರಡು ದೇಹ ಒಂದೇ ಜೀವ ಎಂಬಂತೆ ಪರಸ್ಪರರ ಆಸೆ, ಅವಶ್ಯಕತೆಗಳನ್ನು ಅರಿತು ಬೆರೆತು ನಡೆಯುವ ಜೀವನದ ಸಾಹಚರ್ಯ ಅದಾಗಿರುತ್ತದೆ. ಬೇಂದ್ರೆಯವರ ಸಖಿಗೀತದಂತೆ, ಡಾ. ರಾಜ್​ಕುಮಾರ್ ಚಿತ್ರಗಳ ಅನುರೂಪ ದಾಂಪತ್ಯದಂತೆ ಬದುಕುವ ಆಶಯ ಅದು. ಸಮಾಜದಲ್ಲಿ, ಸಮೂಹಜೀವನ ಕ್ರಮದಲ್ಲಿ ಪ್ರತ್ಯೇಕ ವ್ಯಕ್ತಿಗಳು ಒಂದೇ ಬಗೆಯ ಬದುಕಿನ, ಸಾಧನೆಯ ಕನಸು ಕಾಣುವುದು ಸಾಧ್ಯವಿದೆ. ಆದರೆ, ಇಬ್ಬರು ಅಪರಿಚಿತ ವ್ಯಕ್ತಿಗಳು ರಾತ್ರಿ ನಿದ್ರೆಯಲ್ಲಿ ಒಂದೇ ಕನಸು ಕಾಣುವಂಥ ಮೋಹಕ ಕಲ್ಪನೆ ಚಲನಚಿತ್ರಗಳಲ್ಲಿ ಮಾತ್ರ ಸಾಧ್ಯ.

ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಹಂಗೆರಿ ದೇಶದ ‘ಆನ್ ಬಾಡಿ ಆಂಡ್ ಸೌಲ್’ ಚಿತ್ರ ಇಂಥ ಸಾಧ್ಯತೆಗಳನ್ನು ತೆರೆದಿಟ್ಟಿತು.

ಚಲನಚಿತ್ರವೆಂದರೆ, ಕ್ರಿಯಾಶೀಲ ಮಾಧ್ಯಮ. ಅಲ್ಲಿ ಅಸಾಧ್ಯವೆಂಬುದೇ ಇಲ್ಲ. ಜನ ಸಾಮಾನ್ಯರು ಬಣ್ಣಬಣ್ಣದ ಕನಸುಗಳನ್ನು ಕಂಡರೆ, ಸಿನಿ ಜನ ಕನಸುಗಳಿಗೆ ಬಣ್ಣ ಹಚ್ಚುತ್ತಾರೆ. ಬದುಕಿನ ಅವಾಸ್ತವಿಕ ಸಂಗತಿಗಳೆಲ್ಲ ಬೆಳ್ಳಿ ಪರದೆಯ ಮೇಲೆ ವಾಸ್ತವದ ಭ್ರಮೆ ಹುಟ್ಟಿಸಿ ಮನಸ್ಸುಗಳನ್ನು ಆವರಿಸಿಬಿಡುತ್ತದೆ. ಒಂದು ಒಳ್ಳೆಯ ಚಿತ್ರ, ಒಳ್ಳೆಯ ಪಾತ್ರ ನೋಡುವ ಮನಸ್ಸನ್ನು ಕಾಡುವ ರೀತಿ, ಬೀರುವ ಪ್ರಭಾವ ದೀರ್ಘ ಕಾಲ ಶಾಶ್ವತವಾಗಿ ಉಳಿಯುವಂಥ ಸತ್ವದ್ದಾಗಿರುತ್ತದೆ.

ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಗೆ ಪಾತ್ರವಾಗಿರುವ ‘ಆನ್ ಬಾಡಿ ಆಂಡ್ ಸೌಲ್’ ಕನಸುಗಳ ಸಾದೃಶ್ಯ, ನಿಜ ಬದುಕಿನ ವೈರುಧ್ಯ, ಬದುಕಿನ ವರ್ತಮಾನದ ತಲ್ಲಣಗಳು, ತಾಕಲಾಟಗಳನ್ನು ಪರಿಚಯಿಸುತ್ತಲೇ, ಅತೀಂದ್ರಿಯ ಕಲ್ಪನೆಯ ಸೊಗಸನ್ನು ಬಿಚ್ಚಿಡುತ್ತದೆ. ಕಸಾಯಿಖಾನೆಯ ಕ್ರೌರ್ಯ, ಅಮಾನುಷ ವಾತಾವರಣದ ಹಿನ್ನೆಲೆಯಲ್ಲಿ ಮಾನಸಿಕ ಗಟ್ಟಿತನವನ್ನು ತೋರಿಸುತ್ತಲೇ, ಆಂತರಿಕ ಟೊಳ್ಳುತನ ಪರಿಚಯಿಸುವ, ಘಟನೆಗಳು, ಸನ್ನಿವೇಶಗಳನ್ನು ಸೃಷ್ಟಿಸುತ್ತ ಮನುಷ್ಯ ಸಹಜ ದೌರ್ಬಲ್ಯಗಳು, ಸಣ್ಣತನಗಳನ್ನು ಪರಿಚಯಿಸುವ ರೀತಿ ನೋಡುಗನ ಭಾವಬಿತ್ತಿಯೊಳಗೆ ದಾಖಲಾಗಿಬಿಡುತ್ತದೆ. ವೃತ್ತಿಪರ ಸನ್ನಿವೇಶದಲ್ಲಿ ಮುಖಾಮುಖಿಯಾಗುವ ಕಥಾನಾಯಕ-ನಾಯಕಿ ವಿಲಕ್ಷಣ ವಿಚಾರಣೆಯೊಂದರ ಸಂದರ್ಭದಲ್ಲಿ ತನಿಖಾಧಿಕಾರಿಯ ಎದುರು ತಮ್ಮಿಬ್ಬರ ಕನಸಿನ ಸಾದೃಶ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ತಮ್ಮಿಬ್ಬರಿಗೂ ಕಾಣುವ ಒಂದೇ ಕನಸಿನ ಅರ್ಥ ಗ್ರಹಿಸಲು ಅವರಿಬ್ಬರು ತಮ್ಮನ್ನು ತಾವು ನಾನಾ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ. ಕಾಮವನ್ನು ಮೀರಿದ ಜೀವನಪ್ರೀತಿ ಟಿಸಿಲೊಡೆಯುವ ಹಂತದಲ್ಲಿ ವಿವಿಧ ಅಗ್ನಿಪರೀಕ್ಷೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಕನಸಿನ ಅರ್ಥ ಹುಡುಕುತ್ತ ಬದುಕಿನಲ್ಲಿ ಹೊಸ ಅರ್ಥ ಕಂಡುಕೊಳ್ಳುತ್ತಾರೆ. ಇದು ನಾಣ್ಯದ ಒಂದು ಮುಖ…

ವಿಷಾದದ ಸಂಗತಿಯೆಂದರೆ, ಕನಸುಗಳ ಮಾಯಾಲೋಕವನ್ನು ರಮ್ಯ ಕಥಾನಕದ ಮೂಲಕ ಕಟ್ಟಿಕೊಡುವ ಚಿತ್ರವೊಂದು ತನ್ನ ಒಡಲಲ್ಲಿ ಅಸಹನೀಯ ಕ್ರೌರ್ಯವನ್ನೂ ಹುದುಗಿಸಿಕೊಂಡಿರುವುದು. ಇದೇ ಕಾರಣಕ್ಕಾಗಿ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿಸಲು ಯೋಗ್ಯವಾಗಿತ್ತೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಏಕೆಂದರೆ, ಚಿತ್ರದ ಪ್ರಾರಂಭದಲ್ಲಿ ದೃಶ್ಯೀಕರಿಸಲಾಗಿರುವ ಮೂಕಪಶುಗಳ ಮಾರಣಹೋಮ, ಕಸಾಯಿಖಾನೆಯ ಯಾಂತ್ರಿಕ ವಾತಾವರಣದಲ್ಲಿ ನಡೆಯುವ ಗೋಹತ್ಯೆಯ ಭೀಭತ್ಸ ರಕ್ತಪಾತದ ದೃಶ್ಯಗಳು ಆ ಚಿತ್ರಕ್ಕೆ, ನಿರ್ದೇಶಕರಿಗೆ ಅವಶ್ಯ ಅನಿಸಿದ್ದರೂ, ಬೆಂಗಳೂರಿನ ಚಿತ್ರೋತ್ಸವಕ್ಕೆ ಅಗತ್ಯ ಇರಲಿಲ್ಲವೇನೋ? ಜಲ್ಲಿಕಟ್ಟು, ಕಂಬಳದಂತಹ ಪಾರಂಪರಿಕ ಆಚರಣೆಗಳಿಂದ ಪ್ರಾಣಿ ಹಿಂಸೆ, ಮೂಕಪಶುಗಳ ಶೋಷಣೆಯಾಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರುವ ಪ್ರಾಣಿದಯಾ ಸಂಘಗಳು ಇಂಥ ಚಿತ್ರಗಳಲ್ಲಿರುವ ಪ್ರಾಣಿ ಹಿಂಸೆಯನ್ನು ಪ್ರತಿಭಟಿಸಲಿಲ್ಲವೇಕೆ ಎಂಬ ಪ್ರಶ್ನೆ ಮೂಡುವುದೂ ಸಹಜ. ಚಿತ್ರೋತ್ಸವ ನಡೆದ ಒಂದು ವಾರದ ಅವಧಿಯಲ್ಲಿ ಈ ಚಿತ್ರದಲ್ಲಿರುವ ಪ್ರಾಣಿ ಹಿಂಸೆ ಗೋರಕ್ಷಕರ ಗಮನಕ್ಕೂ ಬರಲಿಲ್ಲ. ಭಾರತೀಯ ಚಲನಚಿತ್ರಗಳಲ್ಲಿ ಒಂದು ಆನೆ, ಕುದುರೆ, ಜಿಂಕೆಯನ್ನು ಕಥೋಚಿತವಾಗಿ ಬಳಸಿಕೊಂಡರೂ, ಚಿತ್ರೀಕರಣದ ಸಂದರ್ಭದಲ್ಲಿ ಪ್ರಾಣಿ ಹಿಂಸೆ ಆಗಿಲ್ಲ ಎಂಬ ಮುಚ್ಚಳಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಹೀಗಿರುವಾಗ ಗೋವಿನ ಬಗ್ಗೆ ಭಾವುಕ, ಸೂಕ್ಷ್ಮ ಸಂವೇದನೆ ಹೊಂದಿರುವ ನಾಡಿನಲ್ಲಿ ಇಂಥ ಚಿತ್ರ ಪ್ರದರ್ಶನ ಅನಿವಾರ್ಯವಾಗಿತ್ತೇ?

ಮೊದಲೇ ಹೇಳಿದಂತೆ ‘ಆನ್ ಬಾಡಿ ಆಂಡ್ ಸೌಲ್’ ಹಂಗೆರಿ ದೇಶದ ಚಿತ್ರ. ಕಸಾಯಿಖಾನೆ ದೃಶ್ಯಗಳ ಅತಿರೇಕದ ಚಿತ್ರಣ, ವೈಭವೀಕರಣ ನಿರ್ದೇಶಕರ ಸ್ವಾತಂತ್ರ್ಯ ಎಂಬ ಸಮರ್ಥನೆ ಓಕೆ. ಪಾಶ್ಚಾತ್ಯ ಸಂಸ್ಕೃತಿ, ಸಂವೇದನೆಗಳಿಗೆ ಈ ಚಿತ್ರೀಕರಣ ಸರ್ವೆಸಾಮಾನ್ಯ ಎನಿಸಬಹುದು. ಇದರ ಜೊತೆಗೆ ಚಲನಚಿತ್ರವೆನ್ನುವುದು ನಿರ್ದೇಶಕನ ಅಭಿವ್ಯಕ್ತಿ ಮಾಧ್ಯಮವೂ ಹೌದು. ಆದರೂ, ಗಾರ್ಡಿಯನ್​ನಂಥ ಪತ್ರಿಕೆ ಸಹ ಚಿತ್ರವನ್ನು ವಿಮಶಿಸುವ ಸಂದರ್ಭದಲ್ಲಿ ಕಥೆಗೆ ಆ ಪ್ರಮಾಣದ ರಕ್ತಪಾತ, ಹಿಂಸೆ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅಷ್ಟೇ ಅಲ್ಲ, ಯಾವುದೇ ದೇಶ, ಧರ್ಮ, ಜನ, ಸಮುದಾಯ, ನಂಬಿಕೆ, ಸಂಪ್ರದಾಯ, ಭಾವನೆಗಳಿಗೆ ವಿರುದ್ಧವಾದ ವಿಷಯ, ವಿಚಾರಪ್ರೇರಿತ ಚಿತ್ರಗಳನ್ನು ಸೆನ್ಸಾರ್ ಮುಕ್ತ ಚಿತ್ರೋತ್ಸವಗಳಲ್ಲಾದರೂ ಪ್ರದರ್ಶಿಸುವುದಕ್ಕೆ ಜಗತ್ತಿನ ಅತ್ಯಂತ ಮುಂದುವರಿದ, ಪ್ರಗತಿಪರ ದೇಶಗಳಲ್ಲಿ ಅವಕಾಶವಿದೆಯೇ? ಚಲನಚಿತ್ರೋತ್ಸವಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ವ್ಯಕ್ತಿಗಳು ಇಂಥ ಸೂಕ್ಷ್ಮವಿಚಾರಗಳನ್ನು ಪರಿಗಣಿಸಬೇಕಲ್ಲವೇ? ಚಿತ್ರೋತ್ಸವಗಳು ಎಲ್ಲ ವಿಚಾರಧಾರೆಗಳಿಗೂ ಮುಕ್ತವಾಗಿರಬೇಕು ಎನ್ನುವುದೇನೋ ಸರಿಯೇ. ಆದರೆ, ಗೋಹತ್ಯೆ ವೈಭವೀಕರಣಕ್ಕೆ ಮಾತ್ರ ಈ ದೃಷ್ಟಿಕೋನ ಗುರಾಣಿಯಾಗಬಾರದು.

ಮತ್ತೆ ಕನಸುಗಳ ಬಗ್ಗೆಯೇ ಹೊರಳುವುದಾದರೆ ಭಾರತೀಯ ಭಾಷೆಗಳಲ್ಲೂ ಕನಸಿನ ದೃಶ್ಯಗಳು, ಹಾಡುಗಳು, ಫ್ಲ್ಯಾಶ್​ಬ್ಯಾಕ್​ಗಳಿಲ್ಲದ ಚಿತ್ರಗಳೇ ವಿರಳ ಎನ್ನಬಹುದು. ಇನ್ನು ಚಿತ್ರರಂಗವಿರಲಿ, ಯಾವುದೇ ಕ್ಷೇತ್ರವಿರಲಿ ಭವಿಷ್ಯದ ಕನಸು ಕಾಣುವವರು, ಕಂಡ ಕನಸಿನ ಬೆನ್ನತ್ತಿ ಹೋರಾಡುವವರು ದೊಡ್ಡ ಸಾಧನೆ ಮಾಡುತ್ತಾರೆ. ಹಗಲುಗನಸಿರಲಿ, ರಾತ್ರಿ ಕನಸಿರಲಿ ಕನಸುಗಾರರ ಬದುಕಿನಲ್ಲಿ ಜೀವಂತಿಕೆ ಇರುತ್ತದೆ. ಕನಸುಗಳೇ ಇಲ್ಲದ ಬದುಕು ಬರಡು. ಬದುಕು ಕನಸುಗಳ ಭಿಕ್ಷೆ ಅನ್ನಿಸುವುದೇ ಆ ಕಾರಣಕ್ಕೆ..

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top