ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದೆವು!

ಮಂಗಳೂರು: ನಮ್ಮಿಬ್ಬರಿಗೂ ಎರಡನೇ ಜನ್ಮ ದೊರೆತಂತಾಗಿದೆ. ದೇವರ ದಯೆಯೋ ಅಥವಾ ನಮ್ಮ ಪುಣ್ಯವೋ ಗೊತ್ತಿಲ್ಲ. ಭಾರತಕ್ಕೆ ತಲುಪುವ ತನಕವೂ ಆತಂಕದಲ್ಲೇ ಇದ್ದ ನಾವು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ಮಂಗಳೂರು ತಲುಪಿದ್ದೇವೆ.

– ಇದು ಶ್ರೀಲಂಕಾ ಬಾಂಬ್ ಸ್ಫೋಟದಿಂದ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದ ಡಾ.ಕೇಶವರಾಜ್ ದಂಪತಿಯ ಅನುಭವ. ಮಂಗಳವಾರ ರಾತ್ರಿ ಶ್ರೀಲಂಕಾದಿಂದ ಹೊರಟು ಚೆನ್ನೈ ಮೂಲಕ ಬೆಂಗಳೂರು ಮಾರ್ಗವಾಗಿ ಬುಧವಾರ ಮಂಗಳೂರು ತಲುಪಿ, ಮಾಧ್ಯಮ ಪ್ರತಿನಿಧಿಗಳ ಜತೆ ಅನುಭವ ಹಂಚಿಕೊಂಡರು.

ವೇಣೂರಿನ ಡಾ.ಕೇಶವರಾಜ್ ತಮ್ಮ ಪತ್ನಿ ಶ್ರೀದೇವಿ ಅವರೊಂದಿಗೆ ನಾಲ್ಕನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಕೊಲಂಬೋದಲ್ಲಿ ದಿ ಸಿನೆಮೆನ್ ಗ್ರಾೃಂಡ್ ಹೊಟೇಲ್‌ನಲ್ಲಿ ಏಜೆನ್ಸಿ ಇವರಿಬ್ಬರಿಗೂ ರೂಂ ಬುಕ್ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಏಜೆನ್ಸಿಯವರು ದಂಪತಿಗೆ ಕರೆ ಮಾಡಿ ಹೊಟೇಲ್ ಬದಲಾವಣೆ ಮಾಡಿಸಿದ್ದರು. ದಂಪತಿ ಹೊಟೇಲ್‌ನಿಂದ ವಾಪಸ್ಸಾಗಿದ್ದರು. ಅವರು ಅಲ್ಲಿಂದ ತೆರಳಿದ ಕೆಲವೇ ಗಂಟೆಗಳಲ್ಲಿ ಆ ಹೊಟೇಲ್‌ನಲ್ಲಿ ಬಾಂಬ್ ಸ್ಫೋಟಿಸಿತ್ತು. ಸ್ಫೋಟದ ಸದ್ದು ನಮಗೆ ಕೇಳಿಸಿತ್ತು ಎಂದವರು ಹೇಳಿದರು.

ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗಳು, ಪೊಲೀಸ್ ವಾಹನಗಳು ಸಾಗುತ್ತಿದ್ದವು. ಚರ್ಚ್ ಸ್ಫೋಟ ನಾವಿದ್ದ ಹೊಟೇಲ್‌ನಿಂದ 1.5 ಕಿ.ಮೀ. ದೂರದಲ್ಲಿ ಸಂಭವಿಸಿತ್ತು. ಆದರೆ ಪ್ರವಾಸಿ ಗೈಡ್ ನಮಗೆ ಧೈರ್ಯ ತುಂಬಿ, ಸಣ್ಣ ಮಟ್ಟದ ಸ್ಫೋಟವಷ್ಟೇ ಸಂಭವಿಸಿದೆ ಎಂದು ಹೇಳಿದ್ದರು.

ಸಂಪರ್ಕ ಸಾಧನ ಸ್ಥಗಿತ: ಸ್ಫೋಟದ ಬಳಿಕ ಇಂಟರ್ನೆಟ್ ಸ್ಥಗಿತಗೊಂಡಿತ್ತು. ಅಲ್ಲಿ ಸ್ಥಳೀಯ ಸಿಮ್ ಕಾರ್ಡ್ ನೀಡಿದ್ದರು. ಅದು ಕೂಡಾ ರೀಚಾರ್ಜ್ ಆಗುತ್ತಿರಲಿಲ್ಲ. ಮನೆಯವರನ್ನು ಸಾಯಂಕಾಲದ ತನಕ ಸಂಪರ್ಕಿಸಲು ಸಾಧ್ಯವೇ ಆಗಿರಲಿಲ್ಲ. ಮನೆಯವರೂ ಆತಂಕದಲ್ಲಿದ್ದರು. ಬರುವಾಗಲೂ ಅಲ್ಲಿನ ವಿಮಾನ ನಿಲ್ದಾಣದಲ್ಲಿ ವಿಪರೀತ ರಶ್ ಇದ್ದುದರಿಂದ ಊಟ, ನೀರು ಸಿಗದೆ ಬಹಳಷ್ಟು ತೊಂದರೆ ಅನುಭವಿ ಸಿದೆವು. ಅಲ್ಲಿನ ಅಶ್ರಫ್ ಅಹ್ಮದ್ ಮತ್ತು ಮಹೇಶ್ ಎಂಬವರು ನಮಗೆ ಆಪಧ್ಬಾಂಧವರಂತೆ ಸಹಾಯ ಮಾಡಿದರು. ನಾವು ಮನೆಗೆ ತಲುಪಿದ ಬಳಿಕವೂ ಕರೆ ಮಾಡಿ ವಿಚಾರಿಸಿದರು. ಕೊನೆಗೂ ಕೊಲಂಬೋ ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಹೋದ ವೇಗದಲ್ಲೇ ಮತ್ತೆ ಮರಳಿ ಬಂದಿದ್ದೇವೆ ಎಂದು ಡಾ.ಕೇಶವರಾಜ್ ಅನುಭವ ಹಂಚಿಕೊಂಡರು.

Leave a Reply

Your email address will not be published. Required fields are marked *