ಅಂತರ್ಜಲದ ಬೇಕಾಬಿಟ್ಟಿ ಬಳಕೆಯಿಂದ ಜಲಕ್ಷಾಮ

ವಿಜಯವಾಣಿ ಸುದ್ದಿಜಾಲ ರೋಣ

ಅಂತರ್ಜಲದ ಬೇಕಾಬಿಟ್ಟಿ ಬಳಕೆಯಿಂದ ದೇಶದಲ್ಲಿ ಪ್ರಸ್ತುತ ಜಲಕ್ಷಾಮದ ಸಂಕಷ್ಟ ಎದುರಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಕಳವಳ ವ್ಯಕ್ತಪಡಿಸಿದರು.

ಜಿಪಂ, ತಾಪಂ ಆಶ್ರಯದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಂಚಾಯಿತಿ ವಿಸ್ತೀರ್ಣಾಧಿಕಾರಿಗಳಿಗೆ ನರೇಗಾ ಯೋಜನೆಯಡಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ನದಿ ಪುನಃಶ್ಚೇತನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಅವೈಜ್ಞಾನಿಕವಾಗಿ ಅಂತರ್ಜಲವನ್ನು ಮೇಲೆತ್ತುವ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಹೀಗಾಗಿ ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಹೀಗಾಗಿ ಭೂಮಿಯಲ್ಲಿನ ನೀರನ್ನು ಮೇಲೆತ್ತುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವರ್ಷಕ್ಕೆ ಸುಮಾರು 30,000 ಕೋಟಿ ಕ್ಯುಬಿಕ್ ಮೀಟರ್ ನೀರನ್ನು ಮೇಲೆತ್ತಲಾಗುತ್ತಿದೆ. ಇದು ಪರಿಸರ ಮತ್ತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿದೆ ಎಂದರು.

ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಅಂತರ್ಜಲ ಬರಿದಾಗಿದೆ. ಎಷ್ಟೇ ಬೋರ್​ವೆಲ್ ಕೊರೆದರೂ ನೀರು ಬರುತ್ತಿಲ್ಲ. ನೀರು ಬಂದರೂ ಅದರಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಜನರು ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ ಎಂದು ಹೇಳಿದರು. ಆರ್ಟ್ ಆಫ್ ಲಿವಿಂಗ್​ನ ಯೋಜನಾ ನಿರ್ದೇಶಕ ನಾಗರಾಜ ಗಂಗೊಳ್ಳಿ ಮಾತನಾಡಿ, ಅಂತರ್ಜಲಮಟ್ಟ ವೃದ್ಧಿಸಲು ಗ್ರಾಪಂ ಸಹಾಯದೊಂದಿಗೆ ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಆರ್ಟ್ ಆಫ್ ಲಿವಿಂಗ್​ನಿಂದ 4450 ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ವಿುಸಲು ಯೋಜನೆ ರೂಪಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದ್ರಾ ತೇಳಿ, ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಚಳಗೇರಿ, ಇತರರು ಉಪಸ್ಥಿತರಿದ್ದರು.