More

    ದೂಡಬೇಡಿ ಕಾಲ; ತೆರಿಗೆ ಉಳಿಸಲು ಇದು ಸಕಾಲ 

    ಟ್ಯಾಕ್ಸ್ ಉಳಿಸೋಕೆ ಮಾರ್ಚ್ 2020ರ ತನಕ ಟೈಮ್ ಇರೋವಾಗ ಈಗಲೇ ಅದರ ಬಗ್ಗೆ ಚಿಂತೆ ಯಾಕೆ ಅಂತ ಅನ್ಕೊಂಡ್ರೆ ಕೊನೇ ಗಳಿಗೆಯಲ್ಲಿ ನೀವು ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ. ಇನ್ನಿರುವ ಮೂರು ತಿಂಗಳನ್ನಾದರೂ ವ್ಯವಸ್ಥಿತವಾಗಿ ಬಳಸಿಕೊಂಡರೆ ಟ್ಯಾಕ್ಸ್ ಉಳಿಸುವ ಹಾದಿ ಸುಗಮ.

    ನೀವು ಇಲ್ಲಿತನಕ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡೋಕೆ ಎಷ್ಟು ಪ್ಲಾನ್ ಮಾಡಿದ್ದೀರೋ ಗೊತ್ತಿಲ್ಲ. ಆದರೆ ಈಗ ಪ್ಲಾನ್ ಮಾಡದಿದ್ದರೆ ನೀವು ತೆರಿಗೆ ಉಳಿಸುವ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಅನ್ನೋದು ಮಾತ್ರ ಸತ್ಯ. ಟ್ಯಾಕ್ಸ್ ಉಳಿಸೋಕೆ ಮಾರ್ಚ್ 2020ರ ತನಕ ಟೈಮ್ ಇರೋವಾಗ ಈಗಲೇ ಅದರ ಬಗ್ಗೆ ಚಿಂತೆ ಯಾಕೆ ಅಂತ ಅನ್ಕೊಂಡ್ರೆ ಕೊನೇ ಗಳಿಗೆಯಲ್ಲಿ ನೀವು ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ. ಇನ್ನಿರುವ ಮೂರು ತಿಂಗಳನ್ನಾದರೂ ವ್ಯವಸ್ಥಿತವಾಗಿ ಬಳಸಿಕೊಂಡರೆ ಟ್ಯಾಕ್ಸ್ ಉಳಿಸುವ ಹಾದಿ ಸುಗಮ.

    ಆರಂಭಿಕ ಹಂತ: ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು ಎನ್ನುವುದನ್ನು ಅರಿಯುವುದರೊಂದಿಗೆ ನ್ಯಾಯಯುತವಾಗಿ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. ಇದಕ್ಕೆ ಮೊದಲು ನೀವು ಆದಾಯ ತೆರಿಗೆಯ ಮಿತಿಯನ್ನು ಅರಿಯಬೇಕು. ತೆರಿಗೆ ಮಿತಿಗೆ ಅನುಗಣವಾಗಿ ನೀವು ತೆರಿಗೆ ಉಳಿತಾಯಕ್ಕೆ ಯೋಜನೆ ರೂಪಿಸಬಹುದು.

    ಆದಾಯ ತೆರಿಗೆ ಮಿತಿ 2019-20 (ಸಾಮಾನ್ಯ ನಾಗರಿಕರಿಗೆ): 60 ವರ್ಷ ಒಳಪಟ್ಟ ಸಾಮಾನ್ಯ ನಾಗರಿಕರು ರೂ. 2.5 ಲಕ್ಷವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ರೂ. 2.5 ಲಕ್ಷದಿಂದ ರೂ. 5 ಲಕ್ಷ ವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ ಪಾವತಿಸಬೇಕು. ರೂ. 5 ಲಕ್ಷದಿಂದ ರೂ. 10 ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ಕಟ್ಟಬೇಕು. ರೂ. 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ಅನ್ವಯ.

    ಆದಾಯ ತೆರಿಗೆ ಮಿತಿ 2019-20 (ಹಿರಿಯ ನಾಗರಿಕರಿಗೆ – 60 ವರ್ಷದಿಂದ 80 ವರ್ಷ ಒಳಪಟ್ಟು): 60 ವರ್ಷದಿಂದ 80 ವರ್ಷ ಒಳಪಟ್ಟ ಹಿರಿಯ ನಾಗರಿಕರು ರೂ. 3 ಲಕ್ಷವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ರೂ. 3 ಲಕ್ಷದಿಂದ ರೂ. 5 ಲಕ್ಷವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ ಪಾವತಿಸಬೇಕು. ರೂ. 5 ಲಕ್ಷದಿಂದ ರೂ. 10 ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ಕಟ್ಟಬೇಕು. ರೂ. 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ಅನ್ವಯ.

    ಆದಾಯ ತೆರಿಗೆ ಮಿತಿ 2019-20 (ಅತ್ಯಂತ ಹಿರಿಯ ನಾಗರಿಕರಿಗೆ 80 ವರ್ಷ ಮೇಲ್ಪಟ್ಟು): 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ರೂ. 5 ಲಕ್ಷವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ರೂ. 5 ಲಕ್ಷದಿಂದ ರೂ. 10 ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ಪಾವತಿಸಬೇಕು. ರೂ. 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ಅನ್ವಯ.

    ಸರ್ಚಾರ್ಜ್ ಹೆಚ್ಚಳ:

    • 10ರಷ್ಟು (ರೂ. 50 ಲಕ್ಷದಿಂದ ರೂ. 1 ಲಕ್ಷದವರೆಗಿನ ಆದಾಯಕ್ಕೆ)
    • 15ರಷ್ಟು (ರೂ. 1 ಕೋಟಿಯಿಂದ ರೂ. 2 ಕೋಟಿವರೆಗಿನ ಆದಾಯಕ್ಕೆ)
    • 25ರಷ್ಟು (ರೂ. 2 ಕೋಟಿಯಿಂದ ರೂ. 5 ಕೋಟಿವರೆಗಿನ ಆದಾಯಕ್ಕೆ)
    • 37ರಷ್ಟು (ರೂ. 5 ಕೋಟಿಗಿಂತ ಹೆಚ್ಚಿನ ಆದಾಯಕ್ಕೆ)

    ರೂ. 5 ಲಕ್ಷವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: 5 ಲಕ್ಷದವರೆಗಿನ ಆದಾಯವಿರುವವರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87(ಎ) ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಎಂದು ತಿಳಿಸಲಾಗಿದೆ. ಇದರಂತೆ ನಿಮ್ಮ ಆದಾಯ ರೂ. 5 ಲಕ್ಷದ ಒಳಗಿದೆ ಎಂದು ತೋರಿಸಲು ಐಟಿ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. ಇದಲ್ಲದೆ ಮೂಲದಲ್ಲೇ ತೆರಿಗೆ ಕಡಿತವಾಗಿದ್ದು ನಿಮ್ಮಆದಾಯ ತೆರಿಗೆಗೆ ಒಳಪಡದಿದ್ದರೆ ಅದನ್ನು ಹಿಂಪಡೆಯಲು ಸಹ ಈ ರಿಟರ್ನ್್ಸಂದ ಸಾಧ್ಯವಾಗುತ್ತದೆ.

    ರೂ. 8 ಲಕ್ಷ ಗಳಿಸಿದರೂ ತೆರಿಗೆ ಕಟ್ಟಬೇಕಿಲ್ಲ…!: ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯ್ತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಮಧ್ಯಮ ವರ್ಗದ ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ. ಆದಾಯ ತೆರಿಗೆ ಕಾಯ್ದೆಯಡಿ ಇರುವ ಕೆಲವು ವಿನಾಯ್ತಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ವಾರ್ಷಿಕ 8 ಲಕ್ಷ ರೂ. ಆದಾಯ ಹೊಂದಿರುವ ವೇತನದಾರರು ಕೂಡ ಯಾವುದೇ ತೆರಿಗೆ ಕಟ್ಟದೆ ನಿರುಮ್ಮಳವಾಗಿರಬಹುದು

    ಗೃಹ ಸಾಲ ಪಡೆದವರಿಗೆ ಹೆಚ್ಚುವರಿ ಅನುಕೂಲ: ಸ್ವಂತ ಮನೆಯ ಕನಸು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಗೃಹ ಸಾಲದ ಮೇಲೆ ಹೆಚ್ಚುವರಿಯಾಗಿ ರೂ. 1.5 ಲಕ್ಷ ವಿನಾಯಿತಿ ನೀಡಿದೆ. ಆದರೆ ಈ ವಿನಾಯಿತಿ ಪಡೆಯಲು ಕೆಲ ಅರ್ಹತೆಗಳನ್ನು ಪೂರೈಸಬೇಕು. ರೂ. 45 ಲಕ್ಷ ಒಳಪಟ್ಟು ಮೌಲ್ಯ ಹೊಂದಿರುವ ಮನೆ ಖರೀದಿಗೆ ಮಾತ್ರ ನಿಯಮ ಅನ್ವಯಿಸಲಿದೆ.

    ಏಪ್ರಿಲ್ 1, 2019 ರಿಂದ ಮಾರ್ಚ್ 31, 2020ರ ಅವಧಿಯಲ್ಲಿ ಪಡೆದಿರುವ ಸಾಲಗಳಿಗೆ ಮಾತ್ರ ಇದು ಮಾನ್ಯವಾಗಲಿದೆ. ಮೊದಲ ಬಾರಿಗೆ ಮನೆ ಖರೀದಿ ಮಾಡುತ್ತಿರುವವರು ಇದರ ಫಲಾನುಭವಿಗಳಾಗಬಹುದು. ಮೇಲೆ ತಿಳಿಸಿರುವ ಮಾನದಂಡಗಳನ್ನು ನೀವು ಪೂರೈಸಿದಲ್ಲಿ ಆದಾಯ ತೆರಿಗೆಯ ಸೆಕ್ಷನ್ 24ಬಿನಲ್ಲಿ ನೀಡಲಾಗುವ ರೂ. 2 ಲಕ್ಷ ವಿನಾಯಿತಿಯ ಜತೆಗೆ ನಿಮಗೆ ಹೆಚ್ಚುವರಿಯಾಗಿ ರೂ. 1.5 ಲಕ್ಷ ವಿನಾಯಿತಿ ಲಭ್ಯ. ಅಂದರೆ ಒಟ್ಟು ರೂ. 3.5 ಲಕ್ಷ ವಿನಾಯಿತಿ ಪಡೆಯಲು ಸಾಧ್ಯ. ಇಲೆಕ್ಟ್ರಿಕ್ ವಾಹನಕ್ಕೂ ತೆರಿಗೆ ಅನುಕೂಲ: (ಸೆಕ್ಷನ್ 80 ಇಇಬಿ) ಇಲೆಕ್ಟ್ರಿಕ್ ವಾಹನದ ಮೇಲೆ ಸಾಲ ಪಡೆದು ಅದಕ್ಕೆ ಪಾವತಿಸುವ ಸಾಲದ ಮೇಲಿನ ಬಡ್ಡಿಗೆ ರೂ. 1.5 ಲಕ್ಷದವರೆಗೆ ವಿನಾಯಿತಿ ಸಿಗಲಿದೆ. ಏಪ್ರಿಲ್ 1, 2019 ರಿಂದ ಮಾರ್ಚ್ 2023ರವರೆಗೆ ಈ ನಿಯಮ ಅನ್ವಯ.

    ತೆರಿಗೆ ನಿಯಮದಲ್ಲಿ 7 ಪ್ರಮುಖ ಬದಲಾವಣೆಗಳು

    • ನಗದು ವಹಿವಾಟು ತಡೆಯಲು ಸೆಕ್ಷನ್ 194ಎನ್ ಜಾರಿಗೆ ತರಲಾಗಿದೆ. ಈ ಸೆಕ್ಷನ್ ಪ್ರಕಾರ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಬ್ಯಾಂಕ್ ಅಕೌಂಟ್​ನಿಂದ ರೂ. 1 ಕೋಟಿಗಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಬ್ಯಾಂಕ್​ಗಳು ಶೇ 2ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಮಾಡಬಹುದು.
    • ಸೆಕ್ಷನ್ 194 ಡಿಎ ಅನ್ವಯ ಜೀವ ವಿಮೆಯಿಂದ ವ್ಯಕ್ತಿಗೆ ಬರುವ ಒಟ್ಟು ಆದಾಯಕ್ಕೆ ಶೇ 5ರಷ್ಟು ಟಿಡಿಎಸ್ ಕಡಿತಗೊಳಿಸಬೇಕು. ಈ ಹಿಂದೆ ಶೇ 1ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತಿತ್ತು.
    • ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಅನ್ನು ಪರ್ಯಾಯವಾಗಿ ಬಳಸಲು ಅನುಮತಿ ನೀಡಲಾಗಿದೆ.
    • ರೂ. 1 ಲಕ್ಷ ಮೇಲ್ಪಟ್ಟು ವಿದ್ಯುತ್ ಬಿಲ್ ಪಾವತಿಸಿದರೆ ಕಡ್ಡಾಯವಾಗಿ ರಿಟರ್ನ್್ಸ ಫೈಲ್ ಮಾಡಬೇಕು.
    • ವಿದೇಶ ಪ್ರವಾಸಕ್ಕೆ ರೂ. 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಐಟಿ ರಿಟರ್ನ್್ಸ ಫೈಲಿಂಗ್ ಕಡ್ಡಾಯ.
    • ಬ್ಯಾಂಕ್​ನಲ್ಲಿ ರೂ. 1 ಕೋಟಿಗಿಂತ ಹೆಚ್ಚು ಠೇವಣಿ ಇಟ್ಟರೆ ರಿಟರ್ನ್್ಸ ಸಲ್ಲಿಸಬೇಕು.
    • ಈ ಹಿಂದೆ ಎನ್​ಪಿಎಸ್ ಪಿಂಚಣಿ ಯೋಜನೆಯಿಂದ ಹೊರಬರುವಾಗ ಶೇ 40ರಷ್ಟು ಹಣಕ್ಕೆ ತೆರಿಗೆ ಇರಲಿಲ್ಲ. ಆದರೆ ಈಗ ಶೇ 60ರಷ್ಟು ಹಣ ಪಡೆದರೂ ತೆರಿಗೆ ಇಲ್ಲ. ಏಪ್ರಿಲ್ 2020ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ.

    | ಸಿ.ಎಸ್. ಸುಧೀರ್ ಸಿಇಒ, ಸಂಸ್ಥಾಪಕ, ಇಂಡಿಯನ್ ಮನಿ ಡಾಟ್ ಕಾಂ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts