ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿ

ಚಾಮರಾಜನಗರ: ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮೈಸೂರಿನ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಂಪರೆಯ ಅರಿವು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸ್ಮಾರಕ ಹಾಗೂ ಆಚರಣೆಗಳು ನಮ್ಮ ಪರಂಪರೆಯಾಗಿದ್ದು ಇವುಗಳ ಕುರಿತು ಪ್ರತಿಯೊಬ್ಬರು ಸಾಕಷ್ಟು ತಿಳಿವಳಿಕೆ ಪಡೆಯಬೇಕು. ನಮ್ಮ ರಾಜ್ಯದಲ್ಲಿ ಕದಂಬರು, ಗಂಗರು, ಹೊಯ್ಸಳರು, ಮೈಸೂರಿನ ಒಡೆಯರು ಸೇರಿ ಇತರೆ ರಾಜವಂಶಗಳು ಆಳ್ವಿಕೆ ಮಾಡಿದ್ದು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸ್ಮಾರಕಕ್ಕೆ ತನ್ನದೇ ಆದ ಮೌಲ್ಯವಿದ್ದು ಅವುಗಳನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ 14 ಪ್ರಾಚ್ಯವಸ್ತು ಸಂಗ್ರಹಾಲಯಗಳಿದ್ದು ಜಿಲ್ಲೆಯ ಯಳಂದೂರಿನಲ್ಲಿರುವ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯವೂ ಒಂದಾಗಿದೆ. ಯಾವುದೇ ಸ್ಮಾರಕಗಳು 100 ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಪ್ರಾಚೀನ ಸ್ಮಾರಕವೆಂದು ಕರೆಯಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಸಂರಕ್ಷಣೆ ಇಲ್ಲದ 25 ರಿಂದ 35 ಸಾವಿರ ಸ್ಮಾರಕಗಳಿರುವುದನ್ನು ಕಾಣಬಹುದು ಎಂದು ತಿಳಿಸಿದರು.

ಪಾರಂಪರಿಕ ಸ್ಮಾರಕಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಹಿಂದೆ ಮೈಸೂರಿನಲ್ಲಿ ಪಾರಂಪರಿಕ ನಡಿಗೆ, ಪಾರಂಪರಿಕ ಸೈಕ್ಲಿಂಗ್, ಪಾರಂಪರಿಕ ಕ್ಲಬ್‌ಗಳನ್ನು ಆಯೋಜಿಸಲಾಗಿತ್ತು. ಸ್ಮಾರಕಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಹಾಳಾಗುವುದಿಲ್ಲ. ಅಲ್ಲದೇ ವಿದ್ಯಾರ್ಥಿಗಳು ಸ್ಮಾರಕಗಳ ಇತಿಹಾಸದ ಕುರಿತು ಬರೆದಿಡುವ ಜತೆಗೆ ಆ ಮಾಹಿತಿಯನ್ನು ಇತರರಿಗೂ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ ಮಾತನಾಡಿ, ಪರಂಪರೆಯ ಇತಿಹಾಸವನ್ನು ವಿದ್ಯಾರ್ಥಿಗಳಲ್ಲದೇ ಇತರರು ತಿಳಿಯಬೇಕು. ಪ್ರತಿಯೊಬ್ಬರು ಪಾರಂಪರಿಕ ಸ್ಥಳಗಳನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಂಪರೆಯ ಬಗ್ಗೆ ತಿಳಿಯುವುದು ಮಾಹಿತಿ ಹಾಗೂ ಜ್ಞಾನಕ್ಕೆ ಅಲ್ಲ. ಬದಲಿಗೆ ಅದು ನಮ್ಮನ್ನು ನಾವು ಏನು ಎಂದು ತಿಳಿಸುತ್ತದೆ. ಪರಂಪರೆಯ ಅರಿವು ಪ್ರತಿಯೊಬ್ಬರಿಗೂ ಇರಬೇಕು. ವಿದ್ಯಾರ್ಥಿಗಳಿಗೆ ಪರಂಪರೆಯ ಅರಿವಿನ ಜತೆಗೆ ರಾಜಕೀಯ ಅರಿವು ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ದಕ್ಷಿಣ ವಿಭಾಗೀಯ ಪತ್ರಾಗಾರ ಕಚೇರಿಯ ಪತ್ರಪಾಲಕರಾದ ಡಾ.ಗವಿಸಿದ್ದಯ್ಯ, ಮೈಸೂರು ವಿವಿ ಪ್ರಾಚೀನ ಹಾಗೂ ಪುರಾತತ್ವಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್, ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಎಸ್.ಮರಿಸ್ವಾಮಿ, ಉಪನ್ಯಾಸಕರಾದ ಸತೀಶ್, ಪುಷ್ಪಲತಾ ಇತರರಿದ್ದರು.

ಸುಟ್ಟ ಇಟ್ಟಿಗೆ, ಸುಣ್ಣದ ಗಾರೆ ಬಳಸಿ ಕಟ್ಟಡ ನಿರ್ಮಾಣ
ರಾಜರ ಕಾಲದಲ್ಲಿ ಕಬ್ಬಿಣ ಬಳಸದೆ ಸುಟ್ಟ ಇಟ್ಟಿಗೆ, ಸುಣ್ಣದ ಗಾರೆ ಬಳಸಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು ಎಂದು ಮೈಸೂರು ವಿವಿ ಪ್ರಾಚೀನ ಹಾಗೂ ಪುರಾತತ್ವಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ತಿಳಿಸಿದರು.

ರಾಜರ ಕಾಲದಲ್ಲಿ ಕಟ್ಟಿರುವ ಕಟ್ಟಡಗಳ ಗೋಡೆಗಳು 12 ರಿಂದ 15 ಇಂಚು ದಪ್ಪ ಇರುತ್ತದೆ. ಈ ಕಟ್ಟಡಗಳನ್ನು ನಿರ್ಮಿಸಲು ಬಳಸುತ್ತಿದ್ದ ಸುಣ್ಣದ ಗಾರೆಯನ್ನು ಸುಣ್ಣ, ನದಿಯ ಮರಳು, ನೀರನ್ನು ಸಮ ಪ್ರಮಾಣದಲ್ಲಿ ಬಳಸಿ ಅದಕ್ಕೆ ಬೆಲ್ಲದ ಪಾಕ, ಕೋಳಿ ಮೊಟ್ಟೆ, ಮೊಟ್ಟೆಯ ಸಿಪ್ಪೆ, ಕಪ್ಪೆ ಚಿಪ್ಪು, ಅಂಟುವಾಳ ಕಾಯಿ, ಮರವಜ್ರಗಳನ್ನು ಬಳಸಿ ತಯಾರಿಸಲಾಗುತ್ತಿತ್ತು ಎಂದರು.

ಮೈಸೂರಿನಲ್ಲಿರುವ ಅಂಬಾವಿಲಾಸ ಅರಮನೆಗೂ ಹಿಂದೆ ಮರದ ಅರಮನೆ ಇತ್ತು. ಇದಕ್ಕೂ ಮೊದಲು ಇದ್ದ ಸೌಂದರ್ಯ ವಿಲಾಸ ಅರಮನೆಯು 1792 ರ ಅವಧಿಯಲ್ಲಿ ಸಿಡಿಲು ಬಡಿದು ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಲ್ಲದ ಅರಮನೆಯಾಯಿತು. ಈ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಇದನ್ನು ಒಡೆದು ಹೊಸದಾಗಿ ಕಟ್ಟಲು ತೀರ್ಮಾನಿಸಿದ್ದನು ಎಂದು ತಿಳಿಸಿದರು.

1794 ರಿಂದ 1800 ರ ಅವಧಿಯಲ್ಲಿ ಇಲ್ಲಿ ಯಾವುದೇ ಅರಮನೆ ಇರಲಿಲ್ಲ. ನಂತರ ಎರಡು ವರ್ಷದ ಅವಧಿಯಲ್ಲಿ ಮರದ ಅರಮನೆಯನ್ನು ಕಟ್ಟಲಾಯಿತು. 1897 ಫೆ.27 ರಂದು ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋಯಿತು. ಆ ನಂತರ ಅಂಬಾ ವಿಲಾಸ ಅರಮನೆ ನಿರ್ಮಿಸಲಾಯಿತು ಎಂದು ಹೇಳಿದರು.