VIDEO| ಸರ್ಕಾರಿ ಶಾಲೆಯತ್ತ ಸಂಯುಕ್ತಾ ಒಲವು: ಅಮೃತಹಳ್ಳಿ ಶಾಲೆಗೆ ಕಂಪ್ಯೂಟರ್, ಲೈಬ್ರರಿ ವ್ಯವಸ್ಥೆ

ಬೆಂಗಳೂರು: ನಟಿ ಸಂಯುಕ್ತಾ ಹೊರನಾಡು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಳ್ಳುವುದಾಗಿ ಇತ್ತೀಚೆಗೆ ಹೇಳಿದ್ದರು. ಇದೀಗ ಅವರ ಮೊದಲ ಕನಸು ಈಡೇರಿದೆ. ಹೆಬ್ಬಾಳದ ಅಮೃತಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಪಡೆದುಕೊಂಡು, ಅದರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

‘ಸೇವ್ ಗವರ್ನ್​ವೆುಂಟ್ ಸ್ಕೂಲ್’ ಅಭಿಯಾನದಲ್ಲಿ ತೊಡಗಿಕೊಂಡಿರುವ ಉಡುಪಿಯ ಅನಿಲ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಶನಿವಾರ (ಆ.10) 40ಕ್ಕೂ ಅಧಿಕ ಸ್ವಯಂಸೇವಕರೊಂದಿಗೆ ಸಂಯುಕ್ತಾ, ಅಮೃತಹಳ್ಳಿ ಶಾಲೆಗೆ ಕಂಪ್ಯೂಟರ್, ಲೈಬ್ರರಿ, ಪೇಂಟಿಂಗ್ ವ್ಯವಸ್ಥೆಗಳನ್ನು ಮಾಡುವ ಮೂಲಕ ಮಕ್ಕಳ ಖುಷಿಗೆ ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕನಕಪುರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಆಲೋಚನೆಯೂ ಅವರಿಗಿದೆಯಂತೆ.

‘ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಳ್ಳಬೇಕೆಂಬ ಯೋಚನೆಯಲ್ಲಿದ್ದೆ. ಅದು ಈಗ ಈಡೇರಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಮೃತಹಳ್ಳಿ ಸರ್ಕಾರಿ ಶಾಲೆಗೆ ಕೆಲವು ವ್ಯವಸ್ಥೆಗಳನ್ನು ಮಾಡಿಸಿದೆವು. ಐಬಿಎಂ ಕಡೆಯಿಂದ ಲ್ಯಾಪ್​ಟಾಪ್ ಕೊಡಿಸಲಾಗಿದ್ದು, ಹಲವು ಪುಸ್ತಕಗಳನ್ನು ಒದಗಿಸಿದ್ದೇವೆ. ಜತೆಗೆ ನಮ್ಮ ‘ಆರ್ಟ್​ರಿ’ ಆರ್ಟ್ ಗ್ಯಾಲರಿಯ ಕಲಾವಿದರೊಂದಿಗೆ ಶಾಲೆಯ ಗೋಡೆಗಳಲ್ಲಿ ಚಿತ್ರ ಬಿಡಿಸಿದೆವು. ಮಕ್ಕಳೂ ನಮ್ಮ ಜತೆ ಕೈ ಜೋಡಿಸಿದರು. ಹಾರ್ವೆನಿ ಎನ್​ಜಿಒ ಸೇರಿ ಹಲವು ಸಂಸ್ಥೆಗಳು ಈ ಕಾರ್ಯದಲ್ಲಿ ಭಾಗಿಯಾಗುತ್ತಿವೆ’ ಎನ್ನುತ್ತಾರೆ ಸಂಯುಕ್ತಾ. ಅವರ ಸ್ಪೂರ್ತಿದಾಯಕ ಕಾರ್ಯವನ್ನು ನೋಡಿರುವ ಹಲವರು ಕೂಡ ಮುಂದಿನ ದಿನಗಳಲ್ಲಿ ಕೈಲಾದಷ್ಟು ಸಹಾಯ ಮಾಡುವುದಾಗಿ ಟ್ವಿಟರ್, ಇನ್​ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದಾರಂತೆ.

ವಿದೇಶಗಳಲ್ಲಿ ಸರ್ಕಾರಿ ಶಾಲೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಅಂತಹ ಸ್ಥಿತಿಯಿಲ್ಲ. ಬಡ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆ ಗಳನ್ನು ನಾವು ಬೆಂಬಲಿಸಬೇಕು. ಅಮೃತಹಳ್ಳಿ ಶಾಲೆಯಲ್ಲಿ ಕಂಪ್ಯೂಟರ್, ಸರಿಯಾದ ಲೈಬ್ರೆರಿ ಇರಲಿಲ್ಲ. ಅಲ್ಲಿನ ಮಕ್ಕಳು ಗೊತ್ತಿರುವಷ್ಟು ಹಿಂದಿ, ಇಂಗ್ಲಿಷ್​ನಲ್ಲಿ ಮಾತನಾಡುತ್ತಾರೆ. ಇನ್ನೂ ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕೆಂದಿದ್ದೇನೆ.

| ಸಂಯುಕ್ತಾ ಹೊರನಾಡು ನಟಿ

Leave a Reply

Your email address will not be published. Required fields are marked *