ಶಿಕಾರಿಪುರ: ಟಿವಿ, ಮೊಬೈಲ್, ಇಲೆಕ್ಟ್ರಾನಿಕ್ಸ್ ವಸ್ತುಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ನಮ್ಮ ಮಣ್ಣಿನ ಸೊಗಡಿನ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಶ್ರೀ ಮಾರಿಕಾಂಬಾ ರಂಗಮಂದಿರ ಆವರಣದಲ್ಲಿ ಅಘೋರ ಅಭಿಮಾನಿ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕುರಿ ಕಾಳಗ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿ, ಕುರಿ ಕಾಳಗ ಜನಪದ ಕ್ರೀಡೆಯಾಗಿದೆ. ಅದನ್ನು ನೋಡುವುದೇ ರಣರೋಚಕ ಎಂದು ತಿಳಿಸಿದರು.
ತರಬೇತಿ ಪಡೆದ ಕುರಿಗಳು ಗೆಲುವಿಗೆ ಪ್ರಯತ್ನಿಸುವ ರೀತಿ ವಿಶೇಷವಾಗಿರುತ್ತದೆ. ಕೆಲ ಜನಪ್ರಿಯ ಕ್ರೀಡೆಗಳ ನಡುವೆ ಗ್ರಾಮೀಣ ಕ್ರೀಡೆಗಳು ಸ್ಪರ್ಧೆ ಮಾಡಲು ಆಗದೆ ಸೊರಗುತ್ತಿವೆ. ನಮ್ಮ ಮಣ್ಣಿನ ಕ್ರೀಡೆಗಳನ್ನು ಉಳಿಸಬೇಕಿದೆ ಎಂದರು.
ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ನಮ್ಮ ಗ್ರಾಮೀಣ ಕ್ರೀಡೆಗಳ ಬಗ್ಗೆ ಜನರಲ್ಲಿ ಅರಿವು ಮೂಡುತ್ತದೆ. ಜನಪದರ ಸ್ಪರ್ಧೆಯನ್ನು ಪ್ರೋತ್ಸಾಹಿಸಿ ಕ್ರಿಕೆಟ್‌ನಂತೆ ಜನಪ್ರಿಯಗೊಳಿಸಬೇಕಿದೆ. ಕ್ರೀಡೆಗಳು ನಮ್ಮನ್ನು ಆರೋಗ್ಯವಾಗಿರುವಂತೆ ಮಾಡುತ್ತವೆ ಎಂದು ಹೇಳಿದರು.
ಪ್ರಮುಖರಾದ ಎಂ.ಶ್ರೀಕಾಂತ್, ಗೋಣಿ ಮಾಲತೇಶ್, ಹುಲ್ಮಾರ್ ಮಹೇಶ್, ಗೋಣಿ ಸಂದೀಪ್, ಈರಣ್ಣ, ಪ್ರಶಾಂತ್, ಗಿರೀಶ್, ನಗರದ ಮಹಾದೇವಪ್ಪ, ಅೋರ ಅಭಿಮಾನಿ ಬಳಗದ ಸದಸ್ಯರು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.