ಹಾವೇರಿಯ ಸತೀಶ ಕುಲಕರ್ಣಿ ಸರ್ವಾಧ್ಯಕ್ಷ

ಹಾವೇರಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಡಿ. 8ರಂದು ಜರುಗಲಿರುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಲ್ಲಿಯ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಗಣ್ಯರು ಭಾನುವಾರ ಹಾವೇರಿ ನಗರದಲ್ಲಿರುವ ಸತೀಶ ಕುಲಕರ್ಣಿ ಅವರ ಮನೆಗೆ ಬಂದು ಅಧಿಕೃತವಾಗಿ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಖಾನಾಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯ ಬಡಿಗೇರ ಮಾತನಾಡಿ, 70ರ ದಶಕದಲ್ಲಿ ಕೆಇಬಿ ಉದ್ಯೋಗಿಯಾಗಿ ಖಾನಾಪುರದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸುತ್ತ ಕನ್ನಡದ ಕೆಲಸಗಳನ್ನು ಮಾಡಿದ ಹಾವೇರಿಯ ಸತೀಶ ಕುಲಕರ್ಣಿ ಅವರನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ಖಾನಾಪುರದಲ್ಲಿರುವಾಗ ಅವರ ಮೊದಲ ಮಹತ್ವದ ಕೃತಿ ಒಡಲಾಳ ಕಿಚ್ಚು ಕವನ ಸಂಕಲನ ಪ್ರಕಟವಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತ ಗಡಿಯಲ್ಲಿ ವೈಚಾರಿಕತೆಯನ್ನು ಬಿತ್ತಿದವರು. ಇವರಿಗೆ ಗಡಿ ಭಾಷಿಕರ ಪರವಾಗಿ ಈ ಗೌರವ ನೀಡಲಾಗಿದೆ ಎಂದು ಹೇಳಿದರು.

ಸತೀಶ ಕುಲಕರ್ಣಿ ಮತ್ತು ಅವರ ಪತ್ನಿ ಕಾಂಚನಾ ಅವರನ್ನು ಖಾನಾಪುರ ತಾಲೂಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಎಸ್.ಎಸ್. ಹಿರೇಮಠ, ಬಿ.ಎನ್. ಬನೋಶಿ, ಆರ್.ಬಿ. ಹುಣಸಿಕಟ್ಟಿ, ಅಶೋಕ ಬೆಂಡಿಗೇರಿ, ನಾರಾಯಣ ಜೋಶಿ, ಇತರರು ಸನ್ಮಾನಿಸಿದರು.

ಜಿಲ್ಲೆಯ ಸಾಹಿತಿ ಸಂಕಮ್ಮ ಸಂಕಣ್ಣನವರ, ಜಿಲ್ಲಾ ಕಾರಾಗೃಹ ಅಧಿಕಾರಿ ಟಿ.ಬಿ. ಭಜಂತ್ರಿ, ಕಸಾಪ ಮಾಜಿ ಅಧ್ಯಕ್ಷ ವಿ.ಎಂ. ಪತ್ರಿ, ಸಿ.ಎ. ಕೂಡಲಮಠ, ಪರಿಮಳಾ ಜೈನ್, ಅಶೋಕ ಕೊಂಡ್ಲಿ, ರಾಜೇಶ್ವರಿ ಸಾರಂಗಮಠ, ಎಸ್.ಆರ್. ಹಿರೇಮಠ, ಸಿ.ಎಚ್. ರ್ಬಾ, ಪೃಥ್ವಿರಾಜ ಬೆಟಗೇರಿ, ಜಿ.ಎಂ. ಓಂಕಾರಣ್ಣನವರ ಇತರರಿದ್ದರು.