ಸವಣೂರ: ದೊರೆತ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಪ್ರತಿಭೆಗಳು ಮಾತ್ರ ಉನ್ನತ ಸಾಧನೆಗೈಯಲು ಸಾಧ್ಯ ಎಂದು ದೊಡ್ಡ ಹುಣಸೆಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಭವನದಲ್ಲಿ ಜಿಪಂ, ತಾಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪ್ರತಿ ಮಗುವಿನಲ್ಲಿರುವ ವಿಶೇಷ ಕಲೆಯನ್ನು ಶಿಕ್ಷಕ ಗುರುತಿಸಬೇಕು. ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆದು ಪ್ರೋತ್ಸಾಹ ನೀಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಡಯಟ್‌ನ ಹಿರಿಯ ಉಪನ್ಯಾಸಕ ಗುರುಪ್ರಸಾದ ಮಾತನಾಡಿ, ಜಿಲ್ಲೆಯಿಂದ ಪ್ರತಿ ಬಾರಿ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿ ಉತ್ತಮ ಸಾಧನೆ ತೋರಿದ್ದಾರೆ. ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ ಎಂದರು.
ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ಅಧ್ಯಕ್ಷತೆ ವಹಿಸಿದ್ದ ಬಿಇಒ ಎಂ.ಎಫ್. ಬಾರ್ಕಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಆಸೀಫಅಹ್ಮದ ದುಕಾನದಾರ, ಉಪಾಧ್ಯಕ್ಷ ಮಂಜುನಾಥ ಗಾಣಗೇರ, ಬಿಸಿಯೂಟ ಸಹಾಯಕ ನಿರ್ದೇಶಕ ಕಲ್ಮೇಶ ಸುಣಧೋಳಿ, ಶಿವಯೋಗಿ ಆಲದಕಟ್ಟಿ, ಸಿ.ಎನ್. ಲಕ್ಕನಗೌಡ್ರ, ಎಂ.ಬಿ. ಶಾಂತಗಿರಿ, ಎನ್.ಕೆ. ಪಾಟೀಲ ಪಾಲ್ಗೊಂಡಿದ್ದರು. ಸಿಆರ್‌ಸಿ ವಿಜೇಂದ್ರಾಚಾರಿ ಎನ್. ನಿರ್ವಹಿಸಿದರು.