ಸವಣೂರ: ಗ್ಯಾರಂಟಿ ಹೆಸರಿನಲ್ಲಿ 50 ರಿಂದ 60 ಸಾವಿರ ಕೋಟಿ ಹಣ ವ್ಯಯ ಮಾಡಿದರೂ ಯಾವುದೇ ಜನರಿಗೆ ಸರಿಯಾಗಿ ಯೋಜನೆ ಲಾಭ ದೊರೆತಿಲ್ಲ. ಕಾಂಗ್ರೆಸ್ ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ದಿವಾಳಿ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ತೊಂಡೂರು ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪರ ಪ್ರಚಾರ ಕೈಗೊಂಡು ಮಾತನಾಡಿದರು. ಕ್ಷೇತ್ರದ ಜನರ ಆಶೀರ್ವಾದದಿಂದ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ 4 ಬಾರಿ ಶಾಸಕ, ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಕಾಂಗ್ರೆಸ್ ದೇಶವನ್ನು 70 ವರ್ಷಗಳ ಕಾಲ ಆಳ್ವಿಕೆ ಮಾಡಿದರೂ ಮೂಲಸೌಲಭ್ಯಗಳ ಜತೆಗೆ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾದ ಬಳಿಕ ದೇಶದಲ್ಲಿ ಚತುಷ್ಪಥ ಮತ್ತು ಷಟ್ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗಿದೆ ಎಂದರು.
ನೆರೆ ಹಾವಳಿ ಬೆಳೆ ಹಾನಿ, ಮನೆಗಳು ಹಾನಿಯಾದರೆ ಕಾಂಗ್ರೆಸ್ ಸರ್ಕಾರ ಕೇವಲ 50 ಸಾವಿರ ರೂ. ಪರಿಹಾರ ನೀಡಿಲ್ಲ. ಸಿದ್ದರಾಮಯ್ಯ ಮುಂದಿನ ಅವಧಿಯಲ್ಲಿ ಸ್ಪರ್ಧಿಸಲ್ಲ ಎಂಬ ಉದ್ದೇಶದಿಂದ ಮುಡಾ, ವಾಲ್ಮೀಕಿ ನಿಗಮದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಆದ್ದರಿಂದ, ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದರು.
20 ಕೋಟಿಗಿಂತ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ. ನರೇಂದ್ರ ಮೋದಿ ನಾಯಕತ್ವ ಇರುವುದರಿಂದ ದೇಶಕ್ಕೆ ದೊಡ್ಡ ಗೌರವ ಸಿಕ್ಕಂತಾಗಿದೆ. ಅದರಂತೆ, ಕ್ಷೇತ್ರದ ಅಭಿವೃದ್ಧಿಗಾಗಿ ಭರತ್ ಬೊಮ್ಮಾಯಿಗೆ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಗವಿಸಿದ್ದಪ್ಪ ದ್ಯಾಮಣ್ಣನವರ, ಶೇಖರ ಅಂಗಡಿ, ಚನ್ನಪ್ಪ ಮರಡೂರ, ಗುರು ಅಂಗಡಿ, ವೀರಪ್ಪ ಅಂಗಡಿ, ನಾಗಪ್ಪ ಚಂದ್ರಾಪಟ್ಟಣ, ಸುಭಾಷ ಮರಡೂರು, ಮಹಾವೀರ ಕಾಳಪ್ಪನವರ ಇತರರು ಇದ್ದರು.