ಸವಣೂರ: ಸವಣೂರ ಉಪವಿಭಾಗ ಅಧಿಕಾರಿ ಮೊಹಮ್ಮದ ಖಿಜರ್ ಅವರಿಗೆ 2024ನೇ ಸಾಲಿನ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸವಣೂರ ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅವರು ಮೂಲತಃ ಭದ್ರಾವತಿ ತಾಲೂಕಿನ ಡೋಣಬಘಟ್ಟ ಗ್ರಾಮದವರು. 2013ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿ, 2015ರಲ್ಲಿ ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2020ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕೆಎಎಸ್ ತೇರ್ಗಡೆ ಹೊಂದಿದ ಖಿಜರ್ ಅವರಿಗೆ ಸರ್ಕಾರ 2021ರಲ್ಲಿ ಪ್ರೊಬೇಷನರಿಯಾಗಿ ಕಂಪ್ಲಿಯ ತಾಪಂ ಇಒ ಹುದ್ದೆ ನಿರ್ವಹಿಸಿದರು. 2022ರಲ್ಲಿ ಬಳ್ಳಾರಿ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. 2023ರ ಜುಲೈ 18ರಂದು ಸವಣೂರ ಉಪ ವಿಭಾಗಾಧಿಕಾರಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರದ ಯೋಜನೆಗಳಾದ ಸರ್ಕಾರಿ ಜಮೀನುಗಳನ್ನು ಗುರುತಿಸುವುದು, ಮೊಬೈಲ್ ಆಪ್ಗಳಲ್ಲಿ ಒಂದಾದ ಲ್ಯಾಂಡ್ಬೀಟ್, ಆಧಾರ್ ಸೀಡಿಂಗ್ ಹಾಗೂ ಆರ್ಸಿಸಿಎಂಎಸ್ ಮತ್ತು ಕಂದಾಯ ಇಲಾಖೆ ಆಪ್ಗಳ ಸೂಕ್ತ ಮೇಲ್ವಿಚಾರಣೆ ನಡೆಸಿ ಸವಣೂರ ಉಪವಿಭಾಗದ ಪ್ರಗತಿಗೆ ಕಾರಣರಾಗಿದ್ದಾರೆ. 2023-24ನೇ ಸಾಲಿನಲ್ಲಿ ಉತ್ತಮ ನಿರ್ವಹಣೆ ಮಾಡುವಲ್ಲಿ ರಾಜ್ಯದಲ್ಲಿಯೇ ಉತ್ತಮ ರ್ಯಾಂಕ್ ಪಡೆದಿರುವುದನ್ನು ಗುರುತಿಸಿ ಸರ್ಕಾರದ ವತಿಯಿಂದ ಪ್ರಸಕ್ತ ಸಾಲಿನಿಂದ ನೀಡುತ್ತಿರುವ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಜಿಲ್ಲೆಯ ಸವಣೂರ ಉಪವಿಭಾಗದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಕಾರ್ಯಕ್ಷಮತೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ದೊರೆಯಲು ಕಾರಣಿಕರ್ತರಾದ ಇಲಾಖೆಯ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು. ವಿಶೇಷವಾಗಿ ಜಿಲ್ಲಾಧಿಕಾರಿ, ಎಡಿಸಿ ಸೇರಿ ಹಿರಿಯ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಿಂದ ಉಪವಿಭಾಗವು ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆಯ ಸರ್ವ ಕಂದಾಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಅರ್ಪಿಸುತ್ತೇನೆ.
ಮೊಹಮ್ಮದ ಖಿಜರ್ಪ್ರ ಶಸ್ತಿ ಪುರಸ್ಕೃತ ಸವಣೂರ ಉಪ ವಿಭಾಗಾಧಿಕಾರಿ