ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ಸತ್ಯಪ್ಪ ಕಾಂಬಳೆ

ಸಾವಳಗಿ: ನೀರು ಖಾಲಿಯಾಗುತ್ತಿದ್ದಂತೆ ಕೃಷ್ಣಾ ನದಿ ಪಾತ್ರದಲ್ಲಿಯ ಮಣ್ಣು ಹಾಗೂ ಮರಳನ್ನು ಜೆಸಿಬಿ, ಟ್ರಾೃಕ್ಟರ್, ಎತ್ತಿನ ಗಾಡಿಗಳ ಸಹಾಯದಿಂದ ಅಕ್ರಮವಾಗಿ ಸಾಗಿಸುವ ಕಾರ್ಯದಲ್ಲಿ ದಂಧೆಕೋರರು ತೊಡಗಿದ್ದಾರೆ.

ಚಿಕ್ಕಪಡಸಲಗಿ ಸಮೀಪ ನದಿ ತಟದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಹಾಗೂ ಮಣ್ಣು ಸಾಗಣೆ ಬಗ್ಗೆ ಅಧಿಕಾರಿಗಳು ಕೂಡ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ದಂಧೆಕೋರರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ನಡುವಿನ ಹೊಂದಾಣಿಕೆಯಿಂದ ಅಕ್ರಮಕ್ಕೆ ಕಡಿವಾಣ ಬೀಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ವಿಜಯಪುರದ ಟಾಕಳೆ ಬಳಿ 6 ಬ್ರಾಸ್ ಮರಳಿಗೆ 53 ಸಾವಿರ ರೂ. ಬೆಲೆ ಇದೆ. ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಯಲ್ಲಿಯ 6 ಬ್ರಾಸ್ ಮರಳು 48 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಗೆ ಮಾರಾಟವಾಗುವ ಇಲ್ಲಿಯ ಮರಳಿಗೆ ಬೇಡಿಕೆ ಅಧಿಕವಾಗಿದ್ದರಿಂದ ದಂಧೆಕೋರರು ಇಲ್ಲಿಂದಲೇ ಸಾಗಣೆ ಮಾಡುತ್ತಿದ್ದಾರೆ. ನದಿ ದಡದಲ್ಲಿರುವವರು ಅಕ್ಕ-ಪಕ್ಕದ ಸಂಬಂಧಿಕರ ಹೊಲಗಳಲ್ಲಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಬಡವರು ಮರಳು, ಇಟ್ಟಂಗಿ, ಖಡಿ ಸೇರಿ ಅನೇಕ ವಸ್ತುಗಳನ್ನು ಖರೀದಿಸಿ ಮನೆ ಕಟ್ಟಿಕೊಳ್ಳುವ ಸ್ಥಿತಿ ಇಲ್ಲದಂತಾಗಿದೆ. ದಬ್ಬಾಳಿಕೆ ಮಾಡಿ ಮನೆ ಕಟ್ಟಿಕೊಳ್ಳುವವರಿಗೆ ಸಲಾಂ ಹೊಡೆಯುವ ಕಾಲ ಬಂದಿದೆ.
– ಪಿಂಟು ಪಾಟೋಳಿ ಜಂಬಗಿ ಗ್ರಾಮಸ್ಥ

ಈಗಾಗಲೇ ಅಕ್ರಮವಾಗಿ ಮಣ್ಣು, ಮರಳು ಸಾಗಣೆ ಕಂಡು ಬಂದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ನದಿ ಪಾತ್ರದಲ್ಲಿ ಮತ್ತೆ ಅಕ್ರಮ ಚಟುವಟಿಕೆ ಮುಂದುವರಿದಿದ್ದರೆ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿ ಅದನ್ನು ತಡೆಯಲು ಕ್ರಮ ಕೈಗೊಳ್ಳುವೆ.
– ಮಹ್ಮದ್ ಇಕ್ರಂ ಉಪವಿಭಾಗಾಧಿಕಾರಿ ಜಮಖಂಡಿ