ರಸ್ತೆ ಸಂಚಾರ ತಡೆದು ರೈತರ ಪ್ರತಿಭಟನೆ

ಸಾವಳಗಿ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದ ಆಕ್ರೋಶಗೊಂಡ ಸಾವಳಗಿ ಗ್ರಾಮದ ರೈತರು ಸಾವಳಗಿ-ತೊದಲಬಾಗಿ ರಸ್ತೆ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

ನಾಲ್ಕೈದು ದಿನಗಳಿಂದ ವಸತಿ ತೋಟಗಳಿಗೆ ವಿದ್ಯುತ್ ಕಡಿತಗೊಂಡಿದೆ. ದ್ರಾಕ್ಷಿ, ದಾಳಿಂಬೆ ಸೇರಿ ಅನೇಕ ಬೆಳೆಗಳಿಗೆ, ದನಕರುಗಳಿಗೆ ನೀರಿಲ್ಲದಂತಾಗಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಒಂದು ದಿನ ಕಾಲಾವಕಾಶ ನೀಡಲಾಗಿತ್ತು. ಆದರೂ ಸರಿಪಡಿಸಲು ಮುಂದಾಗಿಲ್ಲ. ಅನಿವಾರ್ಯವಾಗಿ ರಸ್ತೆ ಸಂಚಾರ ಬಂದ್ ಮಾಡಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪೊಲೀಸರು ಸ್ಥಳಕ್ಕಾಗಮಿಸಿ ರೈತರ ಮನವೊಲಿಸಲು ಮುಂದಾದಾಗ, ನಾಲ್ಕೈದು ದಿನಗಳಿಂದ ಕರೆಂಟ್ ಇಲ್ಲ. ನಮ್ಮ ಸ್ಥಿತಿ ಹೇಳ ತೀರದಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಕಾಯ್ದೆ, ಕಾನೂನು ನಮಗ ಗೊತ್ತಿಲ್ಲರ‌್ರೀ, ನಮ್ಮನ್ನ ಜೈಲಿಗೆ ಹಾಕಿದರೂ ಪರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ನೋವು ನಮಗೂ ಗೊತ್ತಾಗುತ್ತದೆ. ರಸ್ತೆ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿ ಪೊಲೀಸರು ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ರೈತರಾದ ತವಣಪ್ಪ ಆಲಗೂರ, ಉಮೇಶ ಜಾಧವ ಇತರರು ಇದ್ದರು.

Leave a Reply

Your email address will not be published. Required fields are marked *