ಪ್ರಧಾನಿ ಮೋದಿಯಿಂದ ದೇಶಕ್ಕೆ ಅಪಾಯ

ಸಾವಳಗಿ: ಪ್ರಧಾನಿ ಮೋದಿ ಸುಳ್ಳುಗಾರ, ಮೋಸಗಾರ ಹಾಗೂ ವಚನಭ್ರಷ್ಟ. ಇಂತಹ ವ್ಯಕ್ತಿಯಿಂದ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ನಿತ್ಯ ದೇಶ ಲೂಟಿ ಮಾಡುವುದೇ ಇವರ ಕೆಲಸವಾಗಿದೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಸಾವಳಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡ ಕಾಂಗ್ರೆಸ್ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ರಫೇಲ್ ಯುದ್ಧ ವಿಮಾನದಲ್ಲಿ 40 ಸಾವಿರ ಕೋಟಿ ಹಗರಣ ಮಾಡಿದ್ದಾರೆ. ದೇಶ ಲೂಟಿ ಮಾಡಿ ಓಡಿ ಹೋಗಿರುವ ನೀರವ ಮೋದಿಯಂತಹ ವ್ಯಕ್ತಿಗಳ ಜತೆಗೆ ಪ್ರಯಾಣ ಮಾಡಲು, ಅಂಬಾನಿಯಂತಹ ಉದ್ಯಮಿಗಳ ಸಾಲ ಮನ್ನಾ ಮಾಡಲು ನಿಮ್ಮ ಬಳಿ ದುಡ್ಡಿದೆ. ಹಗಲು-ರಾತ್ರಿ ದುಡಿಯುತ್ತಿರುವ ಬಡ ರೈತರ ಸಾಲಮನ್ನಾ ಮಾಡಲು ದುಡ್ಡಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಪ್ರತಿ ರೈತನ 50 ಸಾವಿರ ರೂ. ಬೆಳೆ ಸಾಲಮನ್ನಾ ಮಾಡಿದ್ದಲ್ಲದೆ, ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಸಿದ್ದು ನ್ಯಾಮಗೌಡರು ಕ್ಷೇತ್ರದಲ್ಲಿ ಹಲವಾರು ಶಾಶ್ವತ ನೀರಾವರಿ ಯೋಜನೆ ಮಾಡಿದ್ದಾರೆ. ಕಾಂಗ್ರೆಸ್​ಗೆ ಮತ ನೀಡಿ ಮೋದಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮಾತನಾಡಿ, ದಿ.ಸಿದ್ದು ನ್ಯಾಮಗೌಡರ ಕನಸು ನನಸು ಮಾಡಲು ಆನಂದ ನ್ಯಾಮ ಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಮ್ಾನ್, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ಜೆ.ಟಿ. ಪಾಟೀಲ, ಶ್ರೀಮಂತ ಪಾಟೀಲ, ರಾಜು ಆಲಗೂರ ಮತ್ತಿತರರು ಇದ್ದರು.