ನಾನು ಮಾಡಿದ ಕೆಲಸ ಎಲ್ಲಿಗೆ ಬಂತು

ಸಾವಳಗಿ: ಕಳೆದ ಬಾರಿ ಕೆರೆಗಳನ್ನು ತುಂಬಿದ್ದರಿಂದ ಈ ಬಾರಿ ಬರ ಅಷ್ಟೊಂದು ಭೀಕರವಾಗಿಲ್ಲ ಎಂದು ಸುಮ್ಮನಿರಬೇಡಿ. ಈ ಬಾರಿ ನೀರು ಬಂದ ತಕ್ಷಣ ಎಲ್ಲ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಗೃಹ ಸಚಿವ ಎಂ.ಬಿ. ಪಾಟೀಲ ತಾಕೀತು ಮಾಡಿದರು.

ಜಮಖಂಡಿ ತಾಲೂಕಿನ ಕವಟಗಿ ಜಾಕ್‌ವೆಲ್‌ನಲ್ಲಿ ನೀರಾವರಿ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.

ನಾನು ಮಾಡಿರುವ ನೀರಾವರಿ ಕೆಲಸ ಎಲ್ಲಿಗೆ ಬಂತು. ಅರ್ಧಕ್ಕೆ ನಿಂತಿದ್ದರೆ ತಿಳಿಸಿ ಎನ್ನುತ್ತಿದ್ದಂತೆ ಅಧಿಕಾರಿಗಳು ಕೆಲಸ ಪ್ರಗತಿಯಲ್ಲಿವೆ ಎಂದರು. ಗದ್ಯಾಳ ಗ್ರಾಮದಲ್ಲಿ 1500 ಎಕರೆ ನೀರಾವರಿಗೆ ಒಳಪಡದೆ ಉಳಿದಿದ್ದ ಭೂಮಿಯನ್ನು ಹೇಗಾದ್ರೂ ಸೇರ್ಪಡೆ ಮಾಡಿ ಜಾಕ್‌ವೆಲ್‌ನಿಂದ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಬಾರಿ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಾರದು ಎಂದರು.

ತುಬಚಿ-ಬಬಲೇಶ್ವರ ಏತ ನೀರಾವರಿ, ಕವಟಗಿ ಜಾಕ್‌ವೆಲ್, ಗೋಠೆ ಜಾಕ್‌ವೆಲ್‌ಗೆ ಭೇಟಿ ನೀಡಿದರು.
ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ಅರ್ಜುನ ದಳವಾಯಿ, ಶಂಕರ ರಾಠೋಡ, ಆರ್.ಮಗದುಮ್ ಇತರರಿದ್ದರು.