ಗಾಯಕನನ್ನು ಆಲಿಂಗಿಸಿದ್ದಕ್ಕೆ ಮಹಿಳೆ ಬಂಧನ

ಸೌದಿ ಅರೇಬಿಯಾ: ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕನ್ನು ಆಲಿಂಗಿಸಿದ್ದಕ್ಕೆ ಮಹಿಳೆಯನ್ನು ಬಂಧಿಸಿರುವ ಘಟನೆ ನಡೆದಿದೆ.

ಮಜೀದ್​ ಅಲ್​ ಮೊಹಾಂದಿಸ್​ ಎಂಬ ಖ್ಯಾತ ಗಾಯಕ ತಾಯಿಫ್​ ನಗರದಲ್ಲಿ ಶುಕ್ರವಾರ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ, ವೇದಿಕೆ ಮೇಲೆ ತೆರಳಿದ ಮಹಿಳೆ ಆತನನ್ನು ಆಲಿಂಗಿಸಿದ್ದಾಳೆ. ಭದ್ರತಾ ಸಿಬ್ಬಂದಿ ಬಿಡಿಸಲು ಯತ್ನಿಸಿದರೂ ಮಹಿಳೆಯು ಗಾಯಕನನ್ನು ಬಿಡದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಅಪರಿಚಿತ ಪುರುಷರ ಜತೆ ಹೀಗೆಲ್ಲ ವರ್ತಿಸುವುದು ನಿಷಿದ್ಧವಾಗಿದೆ. ಕಿರುಕುಳದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಯಬೇಕಿದ್ದು, ಬಂಧಿಸಿರುವ ಮಹಿಳೆಯನ್ನು ಅಲ್​-ತಾಇಫ್​ ವುಮೆನ್​ ಕೇರ್​ ಸಂಸ್ಥೆಯಲ್ಲಿರಿಸಲಾಗಿದೆ ಎಂದು ಮೆಕ್ಕ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಗಾಯಕ ಇರಾಕ್​ ಮೂಲದವರಾಗಿದ್ದು, ಸೌದಿ ಅರೇಬಿಯಾ ಪ್ರಜೆ. ದಿ ಪ್ರಿನ್ಸ್​ ಆಫ್​ ಅರಬ್​ ಸಿಂಗಿಂಗ್​ ಎಂಬ ವೆಬ್​ಸೈಟ್​ ಹೊಂದಿದ್ದಾನೆ. ಮಹಿಳೆಯನ್ನು ಬಂಧಿಸಿದ್ದರೂ ಗಾಯಕ ಪ್ರಕರಣದ ಕುರಿತೂ ಇನ್ನು ಪ್ರತಿಕ್ರಿಯಿಸಿಲ್ಲ.

ಕಳೆದ ವರ್ಷವಷ್ಟೇ ಸೌದಿ ಮಹಾರಾಜ ಮೊಹಮ್ಮದ್​ ಬಿನ್​ ಸಲ್ಮಾನ್​, ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಮಹಿಳೆಯರ ವಿರುದ್ಧ ಇದ್ದ ನಿರ್ಬಂಧವನ್ನು ಸಡಿಲಗೊಳಿಸಿದ್ದರು. ಕಳೆದ ತಿಂಗಳಷ್ಟೇ ಮಹಿಳೆಯರಿಗೆ ವಾಹನ ಚಲಾಯಿಸಲು ಸಹ ಅವಕಾಶ ನೀಡಲಾಗಿದೆ. (ಏಜೆನ್ಸೀಸ್​)