ಮತ್ತೆ ಸೌದೀಕರಣ, ಕರಾವಳಿ ಉದ್ಯೋಗಿಗಳು ತಲ್ಲಣ

ಹರೀಶ್ ಮೋಟುಕಾನ, ಮಂಗಳೂರು
ಸೌದಿ ಅರೇಬಿಯಾದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತಿರುವ ಸೌದೀಕರಣದಿಂದ ಕರಾವಳಿ ತಲ್ಲಣಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ತವರಿಗೆ ಮರಳುತ್ತಿದ್ದಾರೆ. ನ.9ರಂದು ಎರಡನೇ ಹಂತದ ಸೌದೀಕರಣ ನಡೆಯುತ್ತಿದ್ದು, ಮತ್ತೆ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಮರಳಲು ಅಣಿಯಾಗಿದ್ದಾರೆ.

ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮತ್ತೆ ಸ್ವದೇಶದ 12 ವಲಯದ ಉದ್ಯೋಗಗಳನ್ನು ಸೌದೀಕರಣ ಮಾಡಲಿದೆ. ಇದರಿಂದ ವಿದೇಶೀಯರು ಮತ್ತೊಮ್ಮೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಎರಡು ವರ್ಷದ ಹಿಂದೆ ಸೌದೀಕರಣ ನಡೆದಾಗ ಸಾವಿರಾರು ಮಂದಿ ಸ್ವದೇಶಕ್ಕೆ ಮರಳಿದ್ದರು. ಆ ಬಳಿಕ ವಿದೇಶೀಯರಿಗೆ ತೆರಿಗೆ ವಿಧಿಸಿದ್ದರಿಂದ ಮಧ್ಯಮ, ಶ್ರೀಮಂತ ವರ್ಗದವರೂ ಸ್ವದೇಶಕ್ಕೆ ಮರಳಲಾರಂಭಿಸಿದರು.

ಸೆ.11ರಂದು ಆರಂಭ 

ಮೊದಲ ಹಂತದ ಸೌದೀಕರಣ ಸೆ.11ರಿಂದ ಆರಂಭಗೊಂಡಿದೆ. ವಾಹನಗಳ ಶೋರೂಂ, ಆಟೋಮೊಬೈಲ್, ಸಿದ್ಧ ಉಡುಪು, ಪೀಠೋಪಕರಣ ಹಾಗೂ ಮನೆ ಬಳಕೆ ವಸ್ತುಗಳ ಮಾರಾಟ ಮಳಿಗೆಗಳು ಪ್ರಥಮ ಹಂತದಲ್ಲಿ ಸೌದೀಕರಣಕ್ಕೆ ಒಳಪಟ್ಟಿವೆ. ದ್ವಿತೀಯ ಹಂತದಲ್ಲಿ ನ.9ರಿಂದ ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್, ವಾಚ್ ಅಂಗಡಿಗಳು, ಆಪ್ಟಿಕಲ್ಸ್ ಮತ್ತು ಮೆಡಿಕಲ್ ಶಾಪ್‌ಗಳು ಹಾಗೂ 2019ರ ಜ.7ರಿಂದ ತೃತೀಯ ಹಂತದದಲ್ಲಿ ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ ಮಳಿಗೆಗಳು, ವಾಹನದ ಬಿಡಿ ಭಾಗ ಮಾರಾಟ ಮಳಿಗೆ, ಚಾಕಲೇಟ್ ತಯಾರಿ ಅಂಗಡಿಗಳು ಸೌದೀಕರಣಗೊಳ್ಳಲಿವೆ.

ಮೊದಲ ಹಂತದಲ್ಲಿ ಸೌದಿಯಿಂದ ಊರಿಗೆ ಮರಳಿದ ಮಂದಿ ಇಲ್ಲಿಯೂ ಸಮರ್ಪಕವಾಗಿ ನೆಲೆ ಕಂಡುಕೊಳ್ಳಲಾಗದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪರ್ಯಾಯ ಉದ್ಯೋಗ ಮಾಡುವ ಕೌಶಲವೂ ಇಲ್ಲದ ಕಾರಣ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಇಲ್ಲಿನ ಸರ್ಕಾರ ಅವರಿಗೆ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬುದು ಸಂತ್ರಸ್ತರ ಒತ್ತಾಯ.

ಸೌದಿ ಯುವಕ-ಯುವತಿಯರಿಗೆ ತರಬೇತಿ

ಸೌದೀಕರಣ ನೀತಿ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಸೌದಿ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲ ಉದ್ಯೋಗ ವಲಯಗಳಲ್ಲೂ ಸೆ.11ರಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ. ಕಾನೂನು ಉಲ್ಲಂಘನೆ ಮಾಡಿದವರಿಗೆ ಭಾರಿ ದಂಡದೊಂದಿಗೆ ಗಡೀಪಾರು ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಅನಿವಾರ್ಯವಾಗಿ ಕೆಲಸ ಕಳೆದುಕೊಳ್ಳಬೇಕಾಗಿದೆ ಎನ್ನುತ್ತಾರೆ ಸೌದಿಯಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಹಸೈನಾರ್.
ಎಲ್ಲ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲಿ ಸೌದಿ ಪ್ರಜೆಗಳೇ ಕಾರ್ಯನಿರ್ವಹಿಸಬೇಕಿದ್ದು, ಅವರಿಗೆ ತರಬೇತಿ ಹಾಗೂ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುತ್ತಿದೆ. ಅಧಿಕಾರಿಗಳು ದಾಳಿ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಪ್ರದರ್ಶಿಸಬೇಕಾಗುತ್ತದೆ. ಸಚಿವಾಲಯ ಆರಂಭದಲ್ಲಿ ಖಾಸಗಿ ವಲಯದಲ್ಲಿ ಶೇ.100 ರಷ್ಟು ಪ್ರಮಾಣದಲ್ಲಿ ಸೌದಿ ಪ್ರಜೆಗಳೇ ಕೆಲಸ ಮಾಡಬೇಕು ಎನ್ನುವ ಆದೇಶವನ್ನು ಪ್ರಸ್ತುತ ಶೇ.70ಕ್ಕೆ ಇಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಕರಾವಳಿಯ ಅತಿ ಹೆಚ್ಚಿನ ಸಂಖ್ಯೆಯ ಜನರು ವಿವಿಧ ಉದ್ಯೋಗದಲ್ಲಿದ್ದಾರೆ. ಈಗಾಗಲೇ ಹಲವರು ಉದ್ಯೋಗ ಕಳೆದುಕೊಂಡು ಊರಿಗೆ ಮರಳಿದ್ದಾರೆ. ಎರಡನೇ ಹಂತದ ಸೌದೀಕರಣ ಜಾರಿಯಾಗುತ್ತಿರುವುದರಿಂದ ಇನ್ನೊಂದಷ್ಟು ಮಂದಿ ಸ್ವದೇಶಕ್ಕೆ ಮರಳುವುದು ಅನಿವಾರ್ಯ.
– ಖಲಂದರ್ ಶಾಫಿ, ಸೌದಿ ಅರೇಬಿಯಾ ಉದ್ಯೋಗಿ

 

One Reply to “ಮತ್ತೆ ಸೌದೀಕರಣ, ಕರಾವಳಿ ಉದ್ಯೋಗಿಗಳು ತಲ್ಲಣ”

  1. xಕರ್ನಾಟಕ ಸರ್ಕಾರ ಕೇಳಬೇಕು.. ನೆಲೆ..ತೋರಿಸಿ, ಭೂ ಸ್ವಾಧೀನ ಮಾಡಿ, ನೆಲೆ ಕೊಡಿ ಅಂತ.. ಬೇರೆ ಮಾರ್ಗ ಯಾವುದೂ ಇಲ್ಲ.

Comments are closed.