ಹಂಸ-ಡಿಬಿಕರು ಲೋಕಕಂಟಕರು. ಅವರು ದೂರ್ವಾಸ ಮಹಾಮುನಿಗಳಿಗೆ ತುಂಬ ತೊಂದರೆ ಉಂಟುಮಾಡುತ್ತಾರೆ. ದೂರ್ವಾಸರು ನೂರು ಜನ ಸಂನ್ಯಾಸಿಗಳ ಜೊತೆ ಸಂಚಾರ ಮಾಡುತ್ತ ತಪಸ್ಸು ಮಾಡುತ್ತಿರುವಾಗ ಅವರ ಕೌಪೀನ, ಶಾಟಿ, ಪಾತ್ರೆಗಳು ಎಲ್ಲವನ್ನೂ ನಾಶಮಾಡಿ ಅವರಿಗೆ ಪೀಡೆ ಕೊಟ್ಟವರು ಇವರು. ಅಂತಹ ಲೋಕಕಂಟಕರಾದರಿಗೆ ಶ್ರೀಕೃಷ್ಣಪರಮಾತ್ಮ ಬಹಳ ಉಗ್ರ ಶಿಕ್ಷೆ ಕೊಡುತ್ತಾನೆ.
ಆ ಹಂಸ-ಡಿಬಿಕರು ರುದ್ರದೇವರನ್ನು ಕುರಿತು ತಪಸ್ಸು ಮಾಡಿ, ರುದ್ರದೇವರಿಂದ ‘ಅಜೇಯರಾಗಿರಬೇಕು, ಅವಧ್ಯರಾಗಿರಬೇಕು’ ಎಂಬ ವರವನ್ನು ಪಡೆದು ಉನ್ಮತ್ತರಾದವರು. ಈ ದೂರ್ವಾಸರು ಬೇರೆ ಯಾರೂ ಅಲ್ಲ. ಸಾಕ್ಷಾತ್ ರುದ್ರದೇವರ ಅವತಾರ. ವಿಚಿತ್ರ ನೋಡಿ! ಯಾರ ಅನುಗ್ರಹದಿಂದ ಇಂತಹ ಶಕ್ತಿ ತಮಗೆ ಬಂದಿದೆ ಅಂತಹ ರುದ್ರದೇವರಿಗೇ ಇವರು ತೊಂದರೆ ಕೊಟ್ಟಿದ್ದಾರೆ. ‘ಉಪಕಾರ ಮಾಡಿದವರಿಗೇ ಅಪಕಾರ ಮಾಡಿ ಕೃತಘ್ನರಾದ ಇವರಿಗೆ ಏನು ಶಿಕ್ಷೆ ಕೊಟ್ಟರೂ ಕಡಿಮೆಯೇ’ ಎಂಬ ದೃಷ್ಟಿಯಿಂದ ಶ್ರೀಕೃಷ್ಣಪರಮಾತ್ಮ ಅವರಿಗೆ ಘೊರ ಶಿಕ್ಷೆ ಕೊಟ್ಟು ಸಂಹರಿಸಿದ್ದಾನೆ. ‘ಯಾರ ಅನುಗ್ರಹದಿಂದ, ಉಪಕಾರದಿಂದ ನೀವು ಮೇಲೆ ಬಂದಿರುತ್ತೀರಿ ಅಂತಹವರಿಗೇ ದ್ರೋಹ ಮಾಡಲು ಹೋಗಬೇಡಿ. ಅನ್ಯಾಯ ಮಾಡಬೇಡಿ. ಕೃತಘ್ನರಾಗಬೇಡಿ. ನಿಮಗೆ ಒಳ್ಳೆಯದಾಗುವುದಿಲ್ಲ. ಕೃತಘ್ನರಾದರೆ ನಾನು ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನು ಕೃಷ್ಣಪರಮಾತ್ಮ ಈ ಮೂಲಕ ಜಗತ್ತಿಗೆ ಕೊಡುತ್ತಿದ್ದಾನೆ.
ಒಂದು ಬಹಳ ಪ್ರಸಿದ್ಧ ಉದಾಹರಣೆ: ಒಬ್ಬ ವ್ಯಕ್ತಿ ಸ್ಮಶಾನದಲ್ಲಿ ಅಡುಗೆ ಮಾಡುತ್ತಿದ್ದನಂತೆ. ಅದು ಹೇಗೆ? ಕಟ್ಟಿಗೆಯ ಸ್ಥಾನದಲ್ಲಿ ಎಲುಬುಗಳನ್ನು ಇಟ್ಟಿದ್ದಾನೆ. ಅದು ಅನ್ನದ ಅಡುಗೆ ಅಲ್ಲ. ಕಿಂತು ರಕ್ತಮಾಂಸದ ಅಡುಗೆ. ಮಾಂಸ ಬೇಯಿಸಲು ಪಾತ್ರೆಯಿಲ್ಲ. ಹೀಗಾಗಿ ತಲೆಬುರುಡೆಯನ್ನೇ ಪಾತ್ರೆಯಾಗಿಟ್ಟುಕೊಂಡು ಅದರಲ್ಲಿ ರಕ್ತ, ಮಾಂಸ ಹಾಕಿ ಬೇಯಿಸುತ್ತಿದ್ದಾನೆ. ಇಷ್ಟೆಲ್ಲ ಹಾಕಿ ಅದರ ಮೇಲೆ ಮತ್ತೊಂದು ತಲೆಬುರುಡೆಯನ್ನು ಇಟ್ಟು ಮುಚ್ಚಿಟ್ಟಿದ್ದ. ಹಾಗೆ ತಲೆಬುರುಡೆಯನ್ನು ಇಟ್ಟು ಯಾಕೆ ಮುಚ್ಚಿಟ್ಟಿದ್ದಿ? ಎಂಬುದಾಗಿ ಪಕ್ಕದವರು ಕೇಳಿದರು. ‘ಅಡುಗೆ ಮೈಲಿಗೆಯಾಗಬಾರದು’ ಅನ್ನುವುದಕ್ಕಾಗಿ ಮುಚ್ಚಿಟ್ಟಿದ್ದೇನೆ ಎಂದ. ಅದಕ್ಕೆ ಅವರು ‘ಇನ್ನೇನು ಮೈಲಿಗೆಯಾಗಬೇಕು? ಅಡುಗೆ ಮಾಡುತ್ತಿರುವುದೇ ಸ್ಮಶಾನದಲ್ಲಿ. ಕಟ್ಟಿಗೆಗಳಿಲ್ಲ, ಎಲುಬುಗಳನ್ನಿಟ್ಟಿದ್ದಿ. ಬೇಯಿಸುತ್ತಿರುವುದು ಅಕ್ಕಿಯನ್ನಲ್ಲ, ರಕ್ತ-ಮಾಂಸಗಳನ್ನು ಬೇಯಿಸುತ್ತಿದ್ದಿ. ಈ ಎಲುಬು-ರಕ್ತ-ಮಾಂಸಗಳನ್ನು ಮುಟ್ಟಿದರೇನೇ ಸ್ನಾನ ಮಾಡಬೇಕು ಎಂಬುದಾಗಿ ಶಾಸ್ತ್ರ ಹೇಳುತ್ತದೆ. ಅಂದಮೇಲೆ ಎಲ್ಲ ಅಪವಿತ್ರ ಪದಾರ್ಥಗಳೇ ತುಂಬಿರುವಾಗ, ಇನ್ನೇನು ಮೈಲಿಗೆಯಾಗಬೇಕು?’ ಎಂಬುದಾಗಿ ಕೇಳಿದರು. ಅದಕ್ಕೆ ಅವನು – ‘ಹಾಗಲ್ಲ, ಅಡುಗೆ ಮಾಡುವಾಗ ಯಾರಾದರೂ ಕೃತಘ್ನರು ಪಕ್ಕದಲ್ಲಿ ಹೋದರೆ, ಅವರ ನೆರಳು ಅಡುಗೆಗೆ ಬಿದ್ದರೆ, ಅದು ಇನ್ನೂ ಹೆಚ್ಚಿನ ಮೈಲಿಗೆ. ಆ ಕೃತಘ್ನರಿಗಿಂತ ಈ ಅಡುಗೆ ಎಷ್ಟೋ ಪವಿತ್ರ. ಅಂತಹ ಕೃತಘ್ನರ ನೆರಳೂ ಬೀಳಬಾರದೆಂದು ತಲೆಬುರುಡೆ ಮುಚ್ಚಿದ್ದೇನೆ’ ಎಂದು ಉತ್ತರಿಸಿದನಂತೆ. ತಾತ್ಪರ್ಯ, ಕೃತಘ್ನತೆಗೆ ಸಮಾನವಾದ ಮಹಾಪಾಪ ಇನ್ನೊಂದಿಲ್ಲ.
ಮಹಾಭಾರತದಲ್ಲಿ ಬರುವ ಗೌತಮನ ಕಥೆ ‘ಕೃತಘ್ನತೆಯ ಘೊರಪಾಪ ಮಾಡಬಾರದು’ ಎನ್ನುವುದಕ್ಕೆ ದೊಡ್ಡ ನೀತಿಕಥೆಯಾಗಿದೆ. ಗೌತಮ ಎಂಬ ವ್ಯಕ್ತಿ ಹಣಸಂಪಾದನೆಗಾಗಿ ಹೊರಟಾಗ ನಾಡೀಜಂಘ ಎಂಬ ಪಕ್ಷಿಯ ಪರಿಚಯವಾಗುತ್ತದೆ. ಅದು ದೈವೀಶಕ್ತಿ ಪಡೆದ ವಿಶಿಷ್ಟ ಪಕ್ಷಿ. ಅದಕ್ಕೊಬ್ಬ ಗೆಳೆಯನಿರುತ್ತಾನೆ. ಹೆಸರು ವಿರೂಪಾಕ್ಷ. ಅವನೊಬ್ಬ ರಾಕ್ಷಸರಾಜ. ಭಾರೀ ಸಂಪತ್ತಿನ ಒಡೆಯ. ಈ ಗೌತಮ ಬಂದಾಗ ನಾಡೀಜಂಘ ಪಕ್ಷಿ ಒಳ್ಳೆಯ ಆದರ-ಆತಿಥ್ಯ ಮಾಡಿ, ಅವನ ಸಮಸ್ಯೆ ವಿಚಾರಿಸಿದಾಗ, ದಾರಿದ್ರ್ಯ ಹೊಡೆತದಿಂದ ಹತಾಶನಾಗಿ ಹಣಸಂಪಾದನೆಗಾಗಿ ಬಂದ ವಿಚಾರ ತಿಳಿಸುತ್ತಾನೆ. ತನ್ನ ಗೆಳೆಯ ವಿರೂಪಾಕ್ಷನ ಬಳಿ ಹೋಗಿ, ತಾನು ಕಳಿಸಿಕೊಟ್ಟಿರುವುದಾಗಿ ತಿಳಿಸು, ನಿನಗೆ ಸಾಕಷ್ಟು ಸಂಪತ್ತು ಕೊಡುತ್ತಾನೆ ಎಂದು ಉಪಾಯ ಹೇಳಿ, ಗೌತಮನನ್ನು ವಿರೂಪಾಕ್ಷನ ಹತ್ತಿರ ಕಳಿಸುತ್ತದೆ ನಾಡೀಜಂಘ ಪಕ್ಷಿ. ವಿರೂಪಾಕ್ಷ ತನ್ನ ಗೆಳೆಯ ಕಳಿಸಿಕೊಟ್ಟಿದ್ದಾನೆಂದು ಪ್ರೀತಿ-ವಿಶ್ವಾಸಗಳಿಂದ ಆ ಗೌತಮನನ್ನು ಆದರಿಸಿ ಸಂಪತ್ತು ಕೊಟ್ಟುಕಳಿಸುತ್ತಾನೆ. ಗೌತಮನು ಸಂಪತ್ತು ತೆಗೆದುಕೊಂಡು ಬರುವಾಗ ಪುನಃ ಆ ನಾಡೀಜಂಘ ಪಕ್ಷಿಯ ಬಳಿ ಬಂದು ಅಂದು ರಾತ್ರಿ ಅಲ್ಲಿಯೇ ವಿಶ್ರಮಿಸುತ್ತಾನೆ. ಪ್ರಯಾಣದ ಆಯಾಸ-ಹಸಿವುಗಳಿಂದ ರಾತ್ರಿ ನಿದ್ದೆ ಬರದೆ, ಈ ಪಕ್ಷಿಯನ್ನೇ ಕೊಂದು ತಿಂದು ಹಸಿವು ಪರಿಹರಿಸಿಕೊಳ್ಳಬೇಕೆಂದು ದುರಾಲೋಚನೆ ಬಂತು ಗೌತಮನಿಗೆ. ಯಾವ ಪಕ್ಷಿ ತನಗೆ ಇಷ್ಟು ಆದರ-ಉಪಚಾರ ಮಾಡಿ, ಸಂಪತ್ತು ಕೊಡಿಸಿ ಬಹಳ ಉಪಕಾರ ಮಾಡಿದೆಯೋ ಆ ಪಕ್ಷಿಯನ್ನೇ ಸಂಹಾರ ಮಾಡಿ ತಿಂದುಬಿಟ್ಟ ಗೌತಮ. ವಿರೂಪಾಕ್ಷನಿಗೆ ಅನುಮಾನ ಮೂಡಿ ಭಟರನ್ನು ಕಳಿಸಿದಾಗ ವಿಷಯ ತಿಳಿಯುತ್ತದೆ. ಕೃತಘ್ನನಾದ ಆ ಪಾಪಿಯನ್ನು ಕೂಡಲೇ ಸಂಹರಿಸುವಂತೆ ಭಟರಿಗೆ ಆದೇಶಿಸಿದ. ಅವನ ಭಟರು ಮೊದಲೇ ರಾಕ್ಷಸರು, ಕ್ರೂರಿಗಳು. ಗೌತಮನನ್ನು ಹಿಡಿದು ಸಂಹರಿಸಿದರು. ಅವನ ಮೃತದೇಹ ಕಾಡಿನಲ್ಲಿ ಬಿದ್ದರೆ ಕಾಗೆ, ಹದ್ದು ಮುಂತಾದ ಪಕ್ಷಿಗಳು ಹಾಗೂ ನರಿ, ನಾಯಿ ಮುಂತಾದ ಪ್ರಾಣಿಗಳು ಇವನ ಮಾಂಸವನ್ನು ತಿನ್ನಲು ಹತ್ತಿರ ಬಂದು, ವಾಸನೆ ನೋಡಿ ‘ಅಯ್ಯೋ! ಕೃತಘ್ನನ ಮಾಂಸ! ತಿನ್ನಬಾರದು’ ಎಂದು ತಿಳಿದು ಇವನ ದೇಹವನ್ನು ಮುಟ್ಟದೆ ದೂರ ಹೋಗುತ್ತಿದ್ದವಂತೆ.
ನೋಡಿ! ಕೃತಘ್ನನಾದ ಕಾರಣ ಪಶು-ಪಕ್ಷಿಗಳೂ ಇವನ ಮಾಂಸವನ್ನು ಮುಟ್ಟಲಿಲ್ಲ ಎಂದರೆ ಕೃತಘ್ನತೆ ಎಂತಹ ದೊಡ್ಡ ಪಾಪವಿರಬೇಕು? ಧರ್ಮಶಾಸ್ತ್ರದಲ್ಲಿ ಬ್ರಹ್ಮಹತ್ಯೆ, ಪ್ರಾಣಿಹತ್ಯೆ, ಸುರಾಪಾನ, ಕಳ್ಳತನ ಮುಂತಾದ ಎಲ್ಲ ಪಾಪಗಳಿಗೂ ಒಂದೊಂದು ಪ್ರಾಯಶ್ಚಿತ್ತಗಳನ್ನು ಹೇಳುತ್ತ ಕೊನೆಯಲ್ಲಿ ಹೇಳುತ್ತಾರೆ, ‘ಕೃತಘ್ನೇ ನಾಸ್ತಿ ನಿಷ್ಕೃತಿಃ’. ನಾನಾ ವಿಧವಾದ ಉಪಕಾರಗಳನ್ನು ಮಾಡಿಸಿಕೊಂಡು, ಕೊನೆಗೆ ಆ ಎಲ್ಲ ಉಪಕಾರಗಳನ್ನೂ ಮರೆತು, ಅಪಕಾರ ಮಾಡುವ ಕೃತಘ್ನತೆಗೆ ಪ್ರಾಯಶ್ಚಿತ್ತವೇ ಇಲ್ಲ ಎನ್ನುತ್ತಾರೆ. ಪ್ರಾಯಶ್ಚಿತ್ತವೇ ಇಲ್ಲದ ಮಹಾಪಾಪ ಎಂದರೆ ಅದೆಂತಹ ದೊಡ್ಡ ಅಪರಾಧ? ವಿಚಾರ ಮಾಡಿ!
ಮುಖ್ಯವಾಗಿ ನಾವು ತಿಳಿಯಬೇಕಾದದ್ದು; ಹಣದ ಉಪಕಾರವೋ, ಊಟ-ಉಪಚಾರಗಳ ಉಪಕಾರವೋ, ಅನೇಕ ವಿಧ ಕೆಲಸಗಳ ಉಪಕಾರವೋ ಇಂತಹ ಸಾಮಾನ್ಯ ಉಪಕಾರ ಮಾಡಿದ ವ್ಯಕ್ತಿಗಳ ಉಪಕಾರಗಳನ್ನು ಮರೆತರೇನೇ ಅದೊಂದು ಪ್ರಾಯಶ್ಚಿತ್ತವಿಲ್ಲದ ದೊಡ್ಡ ಅಪರಾಧವಾಗುವುದಾದರೆ, ಇನ್ನು ದೇವರು ನಮಗೆ ಮಾಡುವ ಅವಿಸ್ಮರಣೀಯ ಅನಂತ ಉಪಕಾರಗಳನ್ನು ಮರೆತು ಕೃತಘ್ನರಾದರೆ, ನಮ್ಮದು ಅದೆಂತಹ ದೊಡ್ಡ ಅಪರಾಧ?
ಒಮ್ಮೆ ಆಸ್ಪತ್ರೆಗಳಿಗೆ ಹೋಗಿ, ಜನರು ನಾನಾರೀತಿಯ ರೋಗಗಳಿಂದ ನರಳುತ್ತಿರುವ ದೃಶ್ಯ ನೋಡಿಬಂದರೆ ‘ದೇವರು ನಮಗೆ ಅದೆಷ್ಟು ಆರೋಗ್ಯಭಾಗ್ಯ ಕೊಟ್ಟಿದ್ದಾನೆ’ ಎಂಬ ವಿಚಾರ ಮನವರಿಕೆಯಾಗುತ್ತದೆ. ಅಂಗವಿಕಲರನ್ನು ಕಂಡಾಗ ‘ನಮ್ಮ ಕೈಕಾಲುಗಳನ್ನು ದೇವರು ಎಷ್ಟು ಗಟ್ಟಿಯಾಗಿ ಇಟ್ಟಿದ್ದಾನೆ’ ಎಂಬ ಅರಿವಾಗುತ್ತದೆ. ಒಪ್ಪೊತ್ತು ಊಟಕ್ಕೆ ಗತಿಯಿಲ್ಲದ ದೀನರನ್ನು ಕಂಡಾಗ ‘ಕುಟುಂಬದವರೊಂದಿಗೆ ಆನಂದದಿಂದ ಹೊಟ್ಟೆತುಂಬ ಉಣ್ಣುವ ನಮ್ಮನ್ನು ದೇವರು ಎಷ್ಟು ಉತ್ತಮಸ್ಥಿತಿಯಲ್ಲಿಟ್ಟಿದ್ದಾನೆ’ ಎಂಬ ಎಚ್ಚರ ಬಾರದಿರದು. ಮದುವೆಯಾಗದೆ ಪರಿತಪಿಸುವ ಅನೇಕರನ್ನು ಕಂಡಾಗ ‘ಮದುವೆಯಾಗಿ ಮಕ್ಕಳಾಗಿ ಸುಖಸಂಸಾರ ನಡೆಸುವವರಿಗೆ ಆ ಭಗವಂತ ಅದೆಷ್ಟು ಅನುಗ್ರಹ ಮಾಡಿದ್ದಾನೆ’ ಎಂಬ ಭಾವನೆ ಮೂಡದೆ ಇರಲಾರದು. ಇಷ್ಟಲ್ಲದೆ ಸಮಾಜದಲ್ಲಿ ಒಂದು ಗೌರವ, ಕೆಲಸದಲ್ಲಿ ಕೀರ್ತಿ, ಓಡಾಡಲು ವಾಹನಗಳು, ಕಷ್ಟಕ್ಕೆ ಆಗುವ ಸ್ನೇಹಿತರು, ಬಂಧುಗಳು ಇದೆಲ್ಲ ದೇವರಿತ್ತ ವರದಾನವಲ್ಲವೇ? ಇಷ್ಟು ಉಪಕಾರಗಳನ್ನು ಮಾಡಿದ ದೇವರಿಗೆ ನಾವೇನು ಕೃತಜ್ಞತೆ ಸಲ್ಲಿಸುತ್ತೇವೆ? ಯೋಚಿಸಿ! ಕೃತಜ್ಞತೆ ಹೇಳುವುದಿಲ್ಲ ಅಷ್ಟೇ ಅಲ್ಲ, ಇಷ್ಟೆಲ್ಲ ಅನುಕೂಲತೆ ಕೊಟ್ಟಾಗ ‘ನನ್ನಷ್ಟು ಸುಖಿ ಯಾರಿಲ್ಲ’ ಎಂಬ ಅಹಂಕಾರದಿಂದ ನಾವು ಆ ದೇವರನ್ನೇ ಮರೆಯುವುದಿಲ್ಲವೇ? ಹಾಗಾಗಬಾರದು. ದೇವರು ಮಾಡುವ ಅಷ್ಟು ಉಪಕಾರಗಳನ್ನು ಮರೆತು ನಾವು ಕೃತಘ್ನರಾದರೆ ದೇವರು ಅದೆಂತಹ ಶಿಕ್ಷೆ ಕೊಟ್ಟಾನು? ಊಹಿಸಲೂ ಸಾಧ್ಯವಿಲ್ಲ. ಶಾಸ್ತ್ರ ಹೇಳುವಂತೆ ಬಾರಿಬಾರಿಯೂ ದೇವರ ಉಪಕಾರಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಬೇಕು. ಅದು ಕಷ್ಟಸಾಧ್ಯವಾದರೆ ದಿನಕ್ಕೊಮ್ಮೆಯಾದರೂ ಕಣ್ಣುಮುಚ್ಚಿ, ದೇವರು ಮಾಡಿದ ಎಲ್ಲ ಉಪಕಾರಗಳನ್ನು ಆಲೋಚಿಸಿ, ಮನಸ್ಸು ಕರಗಿ, ಪ್ರೀತಿಯಿಂದ ಗೌರವದಿಂದ ಆ ಭಗವಂತನಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯದಿರೋಣ. ಕೃತಘ್ನರಾಗದೆ ಕೃತಜ್ಞರಾಗೋಣ.