ಮಹಾಲಿಂಗಪುರ: ಭೌತಿಕ ಸಂಪತ್ತಿಗಿಂತ ಜ್ಞಾನದ ಸಂಪತ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನುಷ್ಯ ಹುಟ್ಟು ಸಾವುಗಳೆಂಬ ಭವಬಂಧನದಿಂದ ಮುಕ್ತರಾಗಲು ಸತ್ಸಂಗವು ಪ್ರಮುಖ ಸಾಧನವಾಗಿದೆ ಎಂದು ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಬುಧವಾರ ರಾತ್ರಿ ನಡೆದ ಪ್ರಕರಣ ಪ್ರವೀಣ ಬಸವಾನಂದ ಮಹಾಸ್ವಾಮಿಗಳ 51ನೇ ವೇದಾಂತ ಪರಿಷತ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಮನ್ ನಿಜಗುಣರ ಕೆಡುವ ಶರೀರದ ಸಲತೆ ಯಾವುದು ಎಂಬ ವಿಷಯದ ಕುರಿತು ಆಶೀರ್ವಚನ ನೀಡಿದರು.
ಮಾನವ ತನ್ನ ನಿಜಸ್ವರೂಪ ಅರಿತಾಗ ಮಾತ್ರ ಮೋಕ್ಷ ಸಾಧನೆ ಸಾಧ್ಯ. ಜ್ಞಾನವೇ ನಿಜವಾದ ಸಂಪತ್ತು. ಹಿಂದಿನ ಜನ್ಮಗಳ ಕರ್ಮಾನುಸಾರ ಈ ಜನ್ಮದಲ್ಲಿ ಬಡತನ ಸಿರಿತನ ಬಂದಿರುತ್ತದೆ. ಮನುಷ್ಯ ಸದಾ ಸತ್ಸಂಗದಲ್ಲಿ ಇದ್ದು, ಜ್ಞಾನದ ಬಲದಿಂದ ಭವಬಂಧನಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಮಹಾತ್ಮರ ದರ್ಶನ, ವಾಣಿಯಿಂದ ಮುಮುಕ್ಷುಗಳ ಪಾಪನಾಶವಾಗಿ ಪುಣ್ಯಪ್ರಾಪ್ತಿಯಾಗುತ್ತದೆ. ಮೋಕ್ಷ ಸಾಧನೆಗೆ ಮಾನವ ಜನ್ಮವೇ ಶ್ರೇಷ್ಠ. ಆದ್ದರಿಂದ ಸದಾ ಭಗವಂತನ ಚಿಂತನೆ, ಸತ್ಸಂಗ, ದಾನ, ಧರ್ಮಗಳ ಮೂಲಕ ಪುಣ್ಯವನ್ನು ಗಳಿಸಿ ಮಾನವ ಜನ್ಮದ ಸಾರ್ಥಕತೆ ಕಾಣಬೇಕು ಎಂದರು.
ಕಲಬುರಗಿಯ ಪೂರ್ಣಪ್ರಜ್ಞ ಆಶ್ರಮದ ಮಾತೋಶ್ರೀ ಲಕ್ಷ್ಮೀತಾಯಿ, ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಕಲಬುರಗಿಯ ಮಾತೋಶ್ರೀ ವರದಾದೇವಿ, ಜಮಖಂಡಿ ರುದ್ರಾವಧೂತಮಠದ ಕೃಷ್ಣಾನಂದ ಅವಧೂತರು ಪ್ರವಚನ ನೀಡಿದರು.
ಮಹಾಲಿಂಗಪುರದ ಭಕ್ತರು ಮತ್ತು ಪೂಜ್ಯರು ಇಂಚಲದ ಡಾ. ಶಿವಾನಂದ ಭಾರತಿಸ್ವಾಮಿಗಳಿಗೆ ನಾಣ್ಯಗಳ ತುಲಾಭಾರ ನಡೆಸಿ, ಕಿರೀಟ ಪೂಜೆಯೊಂದಿಗೆ ಸನ್ಮಾನಿಸಿ ಗೌರವಿಸಿದರು.
ಹೊಸೂರಿನ ಪರಮಾನಂದ ಸ್ವಾಮೀಜಿ, ಸಿದ್ದಾರೂಢ ಆಶ್ರಮದ ಸಿದ್ದಾನಂದ ಭಾರತಿ ಸ್ವಾಮೀಜಿ, ಮಲ್ಲೇಶಪ್ಪ ಕಟಗಿ, ಡಾ.ಬಿ.ಡಿ. ಸೋರಗಾಂವಿ, ಬಸವರಾಜ ಢಪಳಾಪೂರ, ಅಲ್ಲಪ್ಪ ಗುಂಜಿಗಾಂವಿ, ಎಂ.ಪಿ. ಅಂಗಡಿ, ಕೆ.ಸಿ. ಚಿಂಚಲಿ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಭಾವಿಕಟ್ಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಸಂಗಪ್ಪ ತುಪ್ಪದ, ಎಸ್.ಕೆ. ಗಿಂಡೆ, ಮಲಕಾಜಪ್ಪ ಅಂಬಿ, ಮಹಾಲಿಂಗಪ್ಪ ಜಿಟ್ಟಿ, ಈಶ್ವರಪ್ಪ ವಂದಾಲ, ನಾರಾಯಣ ಕಿರಗಿ, ಬಸವರಾಜ ಪಾಶ್ಚಾಪೂರ, ಈರಣ್ಣ ಹಲಗತ್ತಿ ಇತರರಿದ್ದರು.