ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣ ಹಾಗೂ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ ಪ್ರತ್ಯೇಕವಾಗಿ ಮೂರು ಪ್ರತಿಭಟನೆ ನಡೆದವು.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ,ನಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಜಾರಕಿಹೊಳಿ ಚುನಾವಣಾ ಪ್ರಚಾರ ಮಾಡುವಾಗ ‘ದೇಶದ ಸೇನೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚಾಗಿ ಪ್ರಾಣತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಬ್ರಾಹ್ಮಣರು ಸೇನೆಗಾಗಿ ಪ್ರಾಣ ಬಿಟ್ಟ ಇತಿಹಾಸವಿಲ್ಲ’ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯಿಂದ ಬ್ರಾಹ್ಮಣ ಸಮಾಜಕ್ಕೆ ನೋವಾಗಿದ್ದು, ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹರೀಶ್, ಬಾಲಕೃಷ್ಣ, ಸೌಭಾಗ್ಯಮೂರ್ತಿ ಇತರರು ಹಾಜರಿದ್ದರು.

ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ : ನ್ಯಾ. ರಂಜನ್ ಗೊಗೊಯಿ ಅವರ ಮೇಲಿನ ಲೈಂಗಿಕ ಕಿರುಕುಳ ಆರೋಪವು ಷಡ್ಯಂತ್ರದಿಂದ ಕೂಡಿದೆ ಎಂದು ಆರೋಪಿಸಿ ಮೈಸೂರು ನಗರ ಕಾನೂನು ವಿದ್ಯಾರ್ಥಿಗಳ ಒಕ್ಕೂಟ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿತು.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಒಂದು ವೇಳೆ ಆರೋಪ ನಿಜವಾದರೆ ಮಹಿಳೆಗೆ ಸೂಕ್ತ ನ್ಯಾಯ ದೊರಕಬೇಕು. ಈ ಆರೋಪದ ಸತ್ಯಾಸತ್ಯತೆಗಳು ಆದಷ್ಟು ಬೇಗ ಹೊರಬರಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಎನ್.ಪುನೀತ್, ಜಯಶಂಕರ್, ಅವಿನಾಶ್, ಆರ್.ಸುರೇಶ್ ಇತರರಿದ್ದರು.

ಮಧು ಹತ್ಯೆ ಖಂಡಿಸಿ ಪ್ರತಿಭಟನೆ: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ಖಂಡಿಸಿ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಮುಂಭಾಗ ಗಂಧದ ಗುಡಿ ಫೌಂಡೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಧು ಪತ್ತಾರ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಫೌಂಡೇಷನ್‌ನ ಪದಾಧಿಕಾರಿಗಳಾದ ಆರ್ಯನ್, ನಯನ ಗೌಡ ಇತರರಿದ್ದರು.

ಮಧು ಪತ್ತಾರ್ ಹತ್ಯೆ ಖಂಡಿಸಿ ಪ್ರತಿಭಟನೆ: ರಾಯಚೂರು ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ಖಂಡಿಸಿ ರಾಮಸ್ವಾಮಿ ವೃತ್ತದಲ್ಲಿ ಆಲ್ ಇಂಡಿಯಾ ಎಂಎಸ್‌ಎಸ್, ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಮೇಣದ ಬತ್ತಿ ಬೆಳಗಿಸಿ ಮಧು ಪತ್ತಾರ್ ಆತ್ಮಕ್ಕೆ ಶಾಂತಿ ಸಲ್ಲಿಸಿ, ಆರೋಪಿಗಳ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ, ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಜೆಡಿಎಸ್ ಕಂಬನಿ: ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರ ಬಾಂಬ್ ದಾಳಿ ಖಂಡಿಸಿ ಜೆಡಿಎಸ್ ಕೃಷ್ಣರಾಜ ಯುವ ಘಟಕದ ವತಿಯಿಂದ ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಮೆಣದಬತ್ತಿ ಬೆಳಗಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗಿರೀಶ್‌ಗೌಡ ಮಾತನಾಡಿ, ಬಾಂಬ್ ದಾಳಿಯಲ್ಲಿ ಪ್ರಾಣ ತೆತ್ತವರ ಪೈಕಿ ಬೆಂಗಳೂರಿನ 7 ಜನ ಜೆಡಿಎಸ್ ಮುಖಂಡರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ. ಉಗ್ರಗಾಮಿ ಸಂಘಟನೆಗಳ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ನಗರ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಉಪಾಧ್ಯಕ್ಷ ಬೋರೇಗೌಡ, ಯುವ ಮುಖಂಡ ಸತೀಶ್‌ಗೌಡ, ಅಜಯ್ ಶಾಸ್ತ್ರಿ, ರಮೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *