ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸತೀಶ ಅಭಿಮಾನ ಬಳಗ ಹಾಗೂ ವಿವಿಧ ಸಮುದಾಯಗಳಿಂದ ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಈ ಭಾಗದ ಪ್ರಭಾವಿ ನಾಯಕ, ಜನಪರ ಕಾಳಜಿ ಇರುವ ಶಾಸಕ ಸತೀಶ ಜಾರಕಿಹೊಳಿ ಅವರು ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ ಸೇರಿ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷ ಸಂಘಟಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಕಾರಣ ಕಾಂಗ್ರೆಸ್ ಹೈಕಮಾಂಡ್ ಸತೀಶ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಸುರೇಶ ಗೌವಣ್ಣವರ ಮಾತನಾಡಿ, ಸತೀಶ ಜಾರಕಿಹೊಳಿ ಪ್ರಯತ್ನದಿಂದ ಜಿಲ್ಲೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆದ್ದಿದೆ. ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿರುವ ಜಾರಕಿಹೊಳಿ ಅವರಿಗೆ ಉನ್ನತ ಹುದ್ದೆ ನೀಡಬೇಕು. ದಲಿತರಿಗೆ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿರುವುದರಿಂದ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸತೀಶ ಜಾರಕಿಹೊಳಿ ಅವರಿಗೆ ನೀಡಬೇಕು ಎಂದರು.
ಮೆಥೋಡಿಸ್ಟ್ ಚರ್ಚ್ ಪಾದ್ರಿ ಶಾಂತಪ್ಪ ಅಂಕಲಗಿ, ಮುಖಂಡರಾದ ಬಸವರಾಜ ಡುಮ್ಮನಾಯಕ, ಮುಸ್ತಾಕ್ ಜಮಾದಾರ್, ಲಗಮಣ್ಣ ಮಾಳಂಜಿ, ಆನಂದ ಸಿರೋರ, ಎಸ್.ಡಿ. ಮಲ್ಲಣ್ಣವರ, ಪ್ರಭಾಕರ ಹುಲಿಕವಿ ಇತರರಿದ್ದರು.

