ಶಿಡ್ಲಘಟ್ಟ ನ್ಯಾಯಾಲಯದಲ್ಲಿ 345 ಪ್ರಕರಣಗಳ ಇತ್ಯರ್ಥ
ಶಿಡ್ಲಘಟ್ಟ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 345 ಪ್ರಕರಣಗಳು ಇತ್ಯರ್ಥಗೊಂಡು, 52,87,921 ರೂ. ಸಂಗ್ರಹಿಸಲಾಯಿತು. ಅದರಲ್ಲೂ ಏಳು ವರ್ಷಗಳಿಂದ ಬಾಕಿಯಿದ್ದ ದಂಪತಿಯ ವಿಚ್ಛೇದನ, ಜೀವನಾಂಶ ಪ್ರಕರಣ ರಾಜಿ, ಸಂಧಾನ ಮೂಲಕ ಇತ್ಯರ್ಥಗೊಂಡಿದ್ದು, ನ್ಯಾಯಾಧೀಶರ ಸಮ್ಮುಖ ಸವಿತಾ ಮತ್ತು ಸೋಮ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾದರು.
ಅದಾಲತ್ ಬಳಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಮಾತನಾಡಿ, ಸುಮಾರು ಏಳು ವರ್ಷಗಳಿಂದ ಬಾಕಿ ಇದ್ದ ದಂಪತಿಯ ವಿಚ್ಛೇದನ ಪ್ರಕರಣ ಸಂಬಂಧ ಜೀವನಾಂಶದ ವ್ಯಾಜ್ಯದಲ್ಲಿ ಗಂಡ-ಹೆಂಡತಿ ಸ್ವ-ಇಚ್ಛೆಯಿಂದ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಈ ಮೂಲಕ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆ. ವೈಮನಸ್ಸು ಮರೆತರೆ ಎಲ್ಲರೂ ನೆಮ್ಮದಿ, ಸಂತೋಷ, ಪರಿಹಾರ ಪಡೆಯಲು ಸಾಧ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 278 ಪ್ರಕರಣಗಳಲ್ಲಿ 166 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.
ಇವುಗಳಿಂದ 11,87,480 ರೂ ಹಣ ಸಂದಾಯವಾದರೆ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 176 ಪ್ರಕರಣಗಳ ಪೈಕಿ 114 ಪ್ರಕರಣಗಳು ತೀರ್ಮಾನವಾಗಿ, 37,96,641 ರೂ.ಸಂಗ್ರವಾಯಿತು. ಇನ್ನು ಅಪರ ಸಿವಿಲ್ ನ್ಯಾಯಾಲಯದಲ್ಲಿನ 95 ಪ್ರಕರಣಗಳ ಪೈಕಿ 58 ಪ್ರಕರಣಗಳು ತೀರ್ಮಾನವಾಗಿ, 75,200 ರೂ. ಸಂದಾಯವಾಗಿದ್ದು, ಒಟ್ಟಾರೆ ಶಿಡ್ಲಘಟ್ಟ ನ್ಯಾಯಾಲಯದಲ್ಲಿ 345 ಪ್ರಕರಣಗಳು ಇತ್ಯರ್ಥಗೊಂಡು, 52,87,921 ರೂ.ಸಂದಾಯವಾಗಿದೆ.