ಭಾರತದ ಮೊದಲ ಮಂಗಳಮುಖಿ ವಕೀಲೆ ಸತ್ಯಾಶ್ರೀ ಶರ್ಮಿಳಾ !

ಚೆನ್ನೈ: ಮುಖ್ಯವಾಹಿನಿಗೆ ಬರಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಮಂಗಳಮುಖಿಯರಿಗೆ ಸತ್ಯಾಶ್ರೀ ಶರ್ಮಿಳಾ ಅವರು ಮಾದರಿಯಾಗಿ ನಿಂತಿದ್ದಾರೆ. ಅನೇಕ ಕೊರತೆಗಳ ನಡುವೆಯೂ ಭಾರತದ ಮೊದಲ ಮಂಗಳಮುಖಿ ವಕೀಲೆ ಎಂಬ ಕೀರ್ತಿಗೆ ಭಾಜನರಾಗಿ, ಇತಿಹಾಸ ನಿರ್ಮಿಸಿದ್ದಾರೆ.

ಶರ್ಮಿಳಾ ಅವರು ಈ ಸಾಧನೆ ಮಾಡಲು ಸಾಕಷ್ಟು ಏಳು ಬೀಳುಗಳನ್ನು ದಾಟಿದ್ದಾರೆ. 2004 ರಿಂದ 2007ರವರೆಗೆ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಿ, ಈ ಮಟ್ಟಕ್ಕೆ ಬೆಳೆದಿದ್ದಾರೆ. ಈ ಮೂಲಕ ಅವರ ಸಮುದಾಯದವರು ಉನ್ನತ ಸ್ಥಾನಕ್ಕೇರಿ ದೇಶಾದ್ಯಂತ ಸೇವೆ ಮಾಡುವಂತೆ ಶರ್ಮಿಳಾ ಅವರು ನೆರವಾಗಲಿದ್ದಾರೆ.

ಶನಿವಾರ ತಮಿಳುನಾಡು ಹಾಗೂ ಪಾಂಡಿಚೇರಿ ಬಾರ್​ ಕೌನ್ಸಿಲ್​ನಲ್ಲಿ ನನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದೇನೆ.​ ನಾನು ಭಾರತದ ಮೊದಲ ಮಂಗಳಮುಖಿ ವಕೀಲೆ. ನನ್ನ ಜೀವನದಲ್ಲಿ ಸಾಕಷ್ಟು ಹೋರಾಡಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಸಮುದಾಯದವರು ಉನ್ನತ ಸ್ಥಾನಕ್ಕೇರಿ ದೇಶಾದ್ಯಂತ ಸೇವೆ ಮಾಡುತ್ತಾರೆಂಬ ನಿರೀಕ್ಷೆ ಇದೆ ಎಂದು ಶರ್ಮಿಳಾ ಸಂತೋಷವನ್ನು ವ್ಯಕ್ತಪಡಿಸಿದರು.

ರಾಮನಾಥಪುರಂ ಜಿಲ್ಲೆಯ ಪರಮಕುಡಿ ಗ್ರಾಮದ ನಿವಾಸಿಯಾಗಿರುವ ಶರ್ಮಿಳಾ, ಉದಯ ಕುಮಾರ್​ ಎಂಬ ಹೆಸರಿನಲ್ಲಿ ಜನಿಸಿದ್ದರು. ಆದರೆ, ನೆರೆಹೊರೆಯವರ ಬೈಗುಳ ಹಾಗೂ ಅವಮಾನವನ್ನು ಸಹಿಸದೇ ಹದಿನೆಂಟನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದು ಹೆಸರು ಬದಲಾಯಿಸಿಕೊಂಡರು.

ಇದೇ ಶನಿವಾರ 2018ರ ಮಿಸ್​ ಇಂಡಿಯಾ ವಿಜೇತೆ ಅನುಕೀರ್ತಿ ವಾಸ್​ ಮಾತನಾಡಿ, ಸಮಾಜದಲ್ಲಿ ಮಂಗಳಮುಖಿ ಸಮುದಾಯ ವಿರುದ್ಧದ ಪಕ್ಷಪಾತ ಧೋರಣೆಯ ವಿರುದ್ಧ ಕೆಲಸ ಮಾಡುವುದಾಗಿ ಹೇಳಿದ್ದರು. (ಏಜೆನ್ಸೀಸ್​)