More

    ಶತೀರ್ಥ ಸ್ವಾಮೀಜಿಯವರಿಗೆ ನುಡಿನಮನ

    ಮೈಸೂರು: ಅಪರೂಪದ ಸಂತರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಆಚಾರ-ವಿಚಾರಕ್ಕೆ ಕುಂದುಂಟು ಮಾಡಲಿಲ್ಲ. ಜತೆಗೆ, ವೈಚಾರಿಕ ನಿಲುವುಗಳಿಂದಲೂ ಹಿಂದೆ ಸರಿಯಲಿಲ್ಲ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.
    ನಗರದ ನೂರಾರು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗಣಪತಿಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಪೇಜಾವರಶ್ರೀ ಅವರಿಗೆ ಭಾವ ಪುಷ್ಪಾಂಜಲಿ’ ಸಮಾರಂಭದಲ್ಲಿ ಮಾತನಾಡಿದರು.

    ಉಡುಪಿಯಲ್ಲಿರುವ ಕೃಷ್ಣ ಮೂರ್ತಿ ಸ್ವರೂಪವಾದರೆ, ಪೇಜಾವರ ಶ್ರೀಗಳು ನಡೆದಾಡುವ ಕೃಷ್ಣ ರೂಪಿಯಾಗಿದ್ದರು. ಕೃಷ್ಣದೇವರ ಮೇಲೆ ಅವರಿಗೆ ಆತ್ಮಪೂರ್ವಕ ನಂಬಿಕೆ ಇತ್ತು. ಅವರು ಕೂಡ ಹಾಗೆ ಬದುಕಿದರು. ಅಷ್ಟಮಠದಲ್ಲಿ ಹೊಸ ಅಧ್ಯಾಯ ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಅನೇಕ ಸುಧಾರಣಾ ಕ್ರಮ ಕೈಗೊಂಡರು. ಅದು ಆ ಮಠಗಳ ಬಹಳಷ್ಟು ಕಿರಿಯ ಸ್ವಾಮೀಜಿಗಳಿಗೆ ಇಷ್ಟವಾಗುತ್ತಿರಲಿಲ್ಲ ಎಂದರು.

    ಸಾಂಪ್ರದಾಯಿಕ ಮತ್ತು ವೈಚಾರಿಕ ಸಂಘರ್ಷವನ್ನು ಶ್ರೀಗಳು ಅನೇಕ ಸಲ ಎದುರಿಸಿದ್ದರು. ಅವರನ್ನು ವಿರೋಧಿಸಿದವರನ್ನು ಗೌರವದಿಂದ ಕಾಣುತ್ತಿದ್ದರು. ಅವರ ವಿರುದ್ಧದ ಟೀಕೆ-ಆರೋಪಗಳನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದರು. ‘ಸ್ವಾಮೀಜಿಗಳು ಕೇವಲ ಆಯಾ ಮಠಕ್ಕೆ ಸೀಮಿತವಾಗಿದ್ದರೆ, ಪೇಜಾವರಶ್ರೀಗಳು ಮಾತ್ರ ದೇಶಕ್ಕೆ ಸ್ವಾಮೀಜಿಯಾಗಿದ್ದರು’ ಎಂಬ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿರುವ ಮಾತು ಅಕ್ಷರಶಃ ಸತ್ಯ ಎಂದರು.

    ದಲಿತ ಕೇರಿಗೆ ಭೇಟಿ, ಸಂಕಷ್ಟದಲ್ಲಿರುವವರಿಗೆ ಸಹಾಯ ಮತ್ತು ಮುಸ್ಲಿಮರಿಗೆ ಮಠದಲ್ಲಿ ಔತಣಕೂಟ ಆಯೋಜನೆ ಶ್ರೀಗಳು ಕೈಗೊಂಡ ಸುಧಾರಣಾ ಕ್ರಮಗಳಲ್ಲಿ ಪ್ರಮುಖವಾದವುಗಳು. ಮಾನವೀಯತೆ ಇರುವ ಕಡೆ ಧರ್ಮ ಇರುತ್ತದೆ. ಇದಕ್ಕೆ ಅರ್ಥ ಬರುವಂತೆ ಶ್ರೀಗಳು ನಡೆದುಕೊಂಡರು. ಬಹಳ ಸೂಕ್ಷ್ಮಮತಿಯಾದ ಅವರು, ತಮ್ಮ ಮೇಲಿನ ಆರೋಪಗಳ ಕಡೆಗೆ ಅಷ್ಟಾಗಿ ಲಕ್ಷೃ ವಹಿಸುತ್ತಿರಲಿಲ್ಲ ಎಂದರು.
    ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಯಲು ಶ್ರಮಿಸಿದ ಯತಿಗಳು, ಹಿಂದು ಸಮಾಜವನ್ನು ಜಾಗೃತಗೊಳಿಸುತ್ತಿದ್ದರು. ಅಲ್ಲದೆ, ಹಿಂದು ಧರ್ಮದೊಳಗಿನ ಅನೇಕ ನ್ಯೂನ್ಯತೆಯನ್ನು ಸರಿಪಡಿಸುವ ಕೆಲಸವನ್ನೂ ಮಾಡಿದ್ದರು. ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಅವರ ಸಂಕಲ್ಪವಾಗಿತ್ತು. ಸುಪ್ರೀಂಕೋರ್ಟ್ ಇದಕ್ಕೆ ಅವಕಾಶ ಮಾಡಿಕೊಟ್ಟಿತು. ಬಳಿಕವೇ ಅವರು ತಮ್ಮ ಕರ್ತವ್ಯ ಮುಗಿಯಿತು ಎಂಬಂತೆ ಭಾವಿಸಿ ನಿಟ್ಟುಸಿರುಬಿಟ್ಟಿರಬಹುದು ಎಂದರು.

    ಅವಧೂತದತ್ತ ಪೀಠದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಮಾತನಾಡಿ, ನಾವುಗಳೆಲ್ಲ ಸನ್ಯಾಸತ್ವವನ್ನು ಹುಡುಕಿಕೊಂಡು ಹೋಗಿ ಸ್ವೀಕರಿಸಿದ್ದವು. ಆದರೆ, ಪೇಜಾವರಶ್ರೀಗಳನ್ನು ಸನ್ಯಾಸತ್ವವೇ ಹುಡುಕಿಕೊಂಡು ಬಂದಿತ್ತು. 8 ವರ್ಷದಲ್ಲೇ ಸನ್ಯಾಸತ್ವ ದೀಕ್ಷೆ ಸ್ವೀಕಾರವನ್ನು ಊಹಿಸಲು ಅಸಾಧ್ಯ. ಆ ವಯಸ್ಸಿನಲ್ಲೇ ಅದನ್ನು ಅವರು ಸಾಧಿಸಿದರು. ಸಮಾಜದ ಹಿತಕ್ಕಾಗಿ ಹೋರಾಟ, ಚಿಂತನೆ ಮಾಡಿದ ಯತಿಗಳು ಎಂದರು.

    ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಚಿತ್ರದುರ್ಗ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts