ಸೆಟಲೈಟ್ ಉಡಾಯಿಸಿರುವುದು ಚುನಾವಣಾ ಗಿಮಿಕ್

ಬೆಳಗಾವಿ: ಕ್ಷಿಪಣಿ ಬಳಸಿ ಸೆಟಲೈಟ್ ಉಡಾಯಿಸಿರುವುದು ಚುನಾವಣಾ ಗಿಮಿಕ್ ಆಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಜ್ಞಾನಿಗಳು ಕ್ಷಿಪಣಿ ಉಡಾಯಿಸಿರುವುದನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಮತದಾನಕ್ಕೆ ಇನ್ನೂ 20 ದಿನಗಳಿದ್ದು, ಇನ್ನುಳಿದ 20 ದಿನದಲ್ಲಿ ಬಿಜೆಪಿಯವರು ಎನೇನು ಗಿಮಿಕ್ ಮಾಡುತ್ತಾರೆ ಎನ್ನುವುದರ ಬಗ್ಗೆ ಜನತೆ ಜಾಗೃತರಾಗಿರಬೇಕು ಎಂದರು. ಐಟಿ ದಾಳಿ ನಡೆಸುವುದಿದ್ದರೆ ಎಲ್ಲರ ಮೇಲೆ ದಾಳಿ ನಡೆಸಲಿ. ಆದರೆ ಬಿಜೆಪಿಯವರು ಕಳೆದ ಮೂರ‌್ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳ ಮುಖಂಡರ ಹಾಗೂ ಬೆಂಬಲಿಗರ ಮೇಲೆ ಮಾತ್ರ ಐಟಿ ದಾಳಿ ನಡೆಸುತ್ತಿದ್ದಾರೆ. ಮಾಡುವುದಿದ್ದರೆ ಎಲ್ಲರ ಮೇಲೆ ದಾಳಿ ಆಗಲಿ ಎನ್ನುವುದು ನಮ್ಮ ಒತ್ತಾಯ ಎಂದರು.

ಕಾಂಗ್ರೆಸ್ ಎಸ್.ಸಿ.ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಮಾತನಾಡಿ, ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿಯವರನ್ನೇ ಬದಲಾಯಿಸ ಬೇಕಾಗಿದೆ ಎಂದರು. ಡಾ. ವಿ.ಎಸ್.ಸಾಧುನವರ್ ಅವರನ್ನು ಗೆಲಿಸುವ ಮೂಲಕ ಬಿಜೆಪಿ ಬದಲಾಯಿಸಬೇಕಾಗಿದೆ. ಬಿಜೆಪಿ ನಡೆಸುತ್ತಿರುವ ಐಟಿ ದಾಳಿ ಹಿನ್ನೆಲೆಯಲ್ಲಿ ಮುಕ್ತ ಚುನಾವಣೆ ನಡೆಯುವುದೇ ಎಂಬ ಆತಂಕ ಕಾಡುತ್ತಿದೆ. ಕಳೆದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ಸಿಬ್ಬಂದಿ ಕರೆ ತಂದು ಐಟಿ ದಾಳಿ ನಡೆಸಿದ್ದರು. ಐಟಿ ದಾಳಿ ಮಾಡುವ ಮೂಲಕ ಎಚ್.ಸಿ.ಮಹಾದೇವಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಈ ಬಾರಿಯೂ ಇದೇ ರೀತಿ ಮಾಡುವ ಆತಂಕವಿದೆ ಎಂದರು. ಪುಲ್ವಾಮಾ ದಾಳಿಯಾದ ತಕ್ಷಣವೇ ಪಾಕಿಸ್ಥಾನದ ಮೇಲೆ ಕ್ಷಿಪಣಿ ದಾಳಿ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ನೀತಿ ಸಂಹಿತೆ ಜಾರಿಯಲ್ಲಿರುವಾಗ, ಸೆಟಲೈಟ್ ಉಡಾಯಿಸಿ ಪ್ರಚಾರ ಪಡೆಯುತ್ತಿರುವುದು ಸರಿಯಲ್ಲ ಎಂದರು. ಸ್ವಾತಂತ್ರಾೃ ನಂತರ ಎಸ್.ಸಿ.ಎಸ್.ಟಿ. ಸಮುದಾಯದವರಿಗೆ ಅತ್ಯಂತ ಕಡಿಮೆ ಹಣವನ್ನು ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ನೀಡಿದೆ. ಮೋದಿಯವರು ಇದಕ್ಕೆ ಉತ್ತರಿಸಬೇಕು. ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ಮೂಲಕ ರಾಷ್ಟ್ರದ್ರೋಹದ ಕೆಲಸ ಮಾಡಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರಿಗೆ ಶಿಕ್ಷೆ ನೀಡುವ ಬದಲು ಟಿಕೆಟ್ ನೀಡಿರುವುದು ಗಮನಿಸಿದರೆ ಬಿಜೆಪಿಯವರಿಗೆ ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಗೌರವವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು. ರಾಣಿ ಚನ್ನಮ್ಮ ಅವರ ಬಲಗೈ ಬಂಟ ಅಮಟೂರು ಬಾಳಪ್ಪ ವಂಶಸ್ಥರಾದ ಡಾ.ವಿ.ಎಸ್.ಸಾಧುನವರ್ ಚುನಾವಣೆಗೆ ಸ್ಪರ್ಧಿಸಿರುವುದು ಹೆಮ್ಮೆಯ ವಿಷಯ ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ವಿ.ಎಸ್.ಸಾಧುನವರ್ ಮಾತನಾಡಿ, ಎಲ್ಲರೂ ತಮಗೆ ಬೆಂಬಲಿಸಿದ್ದು, ಈ ಬಾರಿ ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಎಸ್.ಸಿ.ಎಸ್.ಟಿ. ಘಟಕದ ಪದಾಧಿಕಾರಿಗಳಾದ ಸಿದ್ದರಾಯಿ ಮೇತ್ರಿ, ಅಣ್ಣಾ ಸಾಹೇಬ ಹಂಚಿನಮನೆ, ಮಲ್ಲೇಶ ಚೌಗಲೆ, ನಗರ ಸೇವಕಿ ಜಯಶ್ರೀ ಮಾಳಗಿ ಮತ್ತು ಇತರರು ಇದ್ದರು.