ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ

ಕೊಪ್ಪಳ: ಆಡು ಮುಟ್ಟದ ಸೊಪ್ಪಿಲ್ಲ, ಕವಿ ಸರ್ವಜ್ಞ ಹೇಳದ ವಚನಗಳಿಲ್ಲ. ಇಂದಿಗೂ ಅವರ ವಚನಗಳು ಸರ್ವ ಶ್ರೇಷ್ಠತೆಯಿಂದ ಕೂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ವಜ್ಞನ ತ್ರಿಪದಿಗಳು ಸರ್ವರಿಂದ ಮೆಚ್ಚುಗೆ ಪಡೆದಿವೆ. ಮನುಷ್ಯರಾಗಿ ಬಾಳುವುದು ಮುಖ್ಯ ಎಂದು ಮನುಕುಲಕ್ಕೆ ತ್ರಿಪದಿಗಳಿಂದ ಸಂದೇಶ ನೀಡಿದ್ದಾರೆ. ತ್ರಿಪದಿಗಳ ಮೂಲಕ ಬದುಕಿನ ಸತ್ಯವನ್ನು ಅತ್ಯಂತ ಸರಳವಾಗಿ ಜಗತ್ತಿಗೆ ಪರಿಚಯಿಸಿದ್ದಾರೆ. ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಜನರಿಗೆ ಪರಿಚಯಿಸುವ ಉದ್ಧೇಶದಿಂದ ಸರ್ಕಾರ ಈ ಜಯಂತಿ ಹಮ್ಮಿಕೊಂಡಿದೆ. ಬಡ ಮತ್ತು ಹಿಂದುಳಿದ ಸಣ್ಣ ಸಮುದಾಯಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಸಮುದಾಯದವರು ಇವುಗಳ ಉಪಯೋಗ ಪಡೆಯುವಂತೆ ಸಲಹೆ ನೀಡಿದರು.

ಹಂಪಿ ವಿವಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಕನ್ನಡ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞ ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಸರ್ವಜ್ಞರು ರಾಜ್ಯದಲ್ಲಿ ನೀತಿ ಶಾಸ್ತ್ರ ಬೋಧಿಸಿದ್ದು, ನೀತಿ ಶಾಸ್ತ್ರದ ಮೂಲಕ ಧರ್ಮ, ಜಾತಿ, ಮತಗಳನ್ನು ದ್ವೇಷಿಸಿದ್ದಾರೆ. ಯಜ್ಞ-ಯಾಗಗಳು, ಹರಕೆ, ಪೂಜೆ ಮಾಡುವುದು ಮೂಡನಂಬಿಕೆ. ತೋರಿಕೆಯ ಭಕ್ತಿಯನ್ನು ನಿರಾಕರಿಸಬೇಕೆಂದು ವಚನಗಳ ಮೂಲಕ ಸಾರಿದ್ದಾರೆ. ಜಾತಿ ಭೇದ ಮಾಡದೆ ಸರ್ವರೂ ನಮ್ಮವರೆಂಬ ಭಾವನೆ ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಆಚರಣೆ ಜಯಂತಿಗಳಿಗೆ ಸಿಮೀತವಾಗದೆ, ಅವರ ತತ್ವಾದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಸಂತಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಗುರುರಾಜ, ಅಜೀಮ್ ಅಖ್ತರ್, ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್, ತಹಸೀಲ್ದಾರ್ ಜೆ.ಬಿ. ಮಜ್ಜಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಮುಖಂಡರಾದ ಕಳಕಪ್ಪ ಕುಂಬಾರ, ಮಲ್ಲಪ್ಪ ಕುಂಬಾರ ಕುಣಿಕೇರಿ, ನಿಂಗಪ್ಪ ಕುಂಬಾರ ಇರಕಲ್‌ಗಡ, ಗವಿಸಿದ್ದಪ್ಪ ಕುಂಬಾರ ಕರ್ಕಿಹಳ್ಳಿ, ಪ್ರಭು ಕುಂಬಾರ ಮತ್ತಿತರರಿದ್ದರು.