
ಬೆಂಗಳೂರು: ಮಕ್ಕಳಲ್ಲಿ ಸರ್ವ ಧರ್ಮ ಸಮನ್ವಯದ ಮೂಲಕ ಜೀವನವನ್ನು ಪಾರದರ್ಶಕಗೊಳ್ಳುವಂತೆ ಚಿಂತನೆ ಮೂಡಿಸಲು ಸರ್ವಧರ್ಮ ಕಾರ್ಯಕ್ರಮ ಏರ್ಪಡಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಾಂಬೋರೇಟ್ ಶಿಬಿರ ಅಂಗವಾಗಿ ಏರ್ಪಡಿಸಲಾದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರಾಜ್ಯದಲ್ಲಿ 7 ಲಕ್ಷ ವಿದ್ಯಾರ್ಥಿಗಳಿರುವುದು ಹಾಗೂ ಈ ಶಿಬಿರದಲ್ಲಿ 5ಸಾವಿರ ವಿದ್ಯಾರ್ಥಿಗಳು ಒಂದೆಡೆ ಸೇರಿ ಎಲ್ಲರೂ ಸರ್ವಧರ್ಮ ಪ್ರಾರ್ಥನೆ ಮಾಡುವ ಮೂಲಕ ಎಲ್ಲ ಧರ್ಮಗಳ ಸಮಾನತೆ, ಏಕತೆ ಸಾರುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಶಿಸ್ತು ಬದ್ಧವಾದ ಶಿಬಿರವಾಗಿದೆ, ಹೊಸ ವರ್ಷದಲ್ಲಿ ದೇಶದಲ್ಲಿರುವ ಬಿಕ್ಕಟ್ಟು ದೂರವಾಗಲಿ, ಸುಖ, ಶಾಂತಿ ನೆಲಸಲಿ ಎಂದು ಹಾರೈಸಿದರು.
ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವರ್ಷದ ಪ್ರಾರಂಭದ ದಿನ, ಸರ್ವಧರ್ಮ ಪ್ರಾರ್ಥನೆ ಮಾಡಿರುವುದು ಉತ್ತಮ ಬೆಳವಣೆಗೆ. ಹೊಸ ವರ್ಷದ ಸಂಭ್ರಮಾಚಾರಣೆ ತಾತ್ಕಾಲಿಕವಾದದ್ದು, ಸ್ಕೌಟ್ಸ್‌ನ ಮುಖ್ಯಸ್ಥ ಬೇಡನ್ ಪೊವೆಲ್ ಹೇಳಿರುವಂತೆ, ಬದುಕಿನಲ್ಲಿ ಒಳ್ಳೆಯ ಕೆಲಸ ಮಾಡಿ, ಭವಿಷ್ಯ ಚಿಂತಿಸುವುದಕ್ಕಿಂತ, ಪ್ರಸ್ತುತ ಸಮಾಜಕ್ಕೆ ಒಳ್ಳೆಯದು ಮಾಡಿ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹೊಂದಲು ರಾಜ್ಯ ಜಾಂಬೋರೇಟ್ ಸೂಕ್ತ ವೇದಿಕೆಯಾಗಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಕಟಣಾ ಸಮಿತಿ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ, ಶ್ರವಣಬೆಳಗೊಳದ ಜೈನ ಮಠದ ಜಗದ್ಗುರು ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತತರಿದ್ದರು.