ಚಂದನವನದಲ್ಲೀಗ ಚಿಣ್ಣರ ಚಿಲಿಪಿಲಿ

ಕನ್ನಡದ ಸಿನಿಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರಗಳ ಪೈಕಿ ‘ಒಂದಲ್ಲಾ ಎರಡಲ್ಲಾ’ ಮತ್ತು ‘ಸ.ಹಿ.ಪ್ರಾ.ಶಾಲೆ. ಕಾಸರಗೋಡು’ ಮುಂಚೂಣಿಯಲ್ಲಿವೆ. ಕಮರ್ಷಿಯಲ್ ಚಿತ್ರವೊಂದರಲ್ಲಿ ಇರಬಹುದಾದ ಎಲ್ಲ ಅಂಶಗಳನ್ನು ಇಟ್ಟುಕೊಂಡೇ ಈ ಮಕ್ಕಳ ಸಿನಿಮಾಗಳು ತಯಾರಾಗಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಎಂದಿನ ಲವ್​ಸ್ಟೋರಿ, ಕ್ರೖೆಂ ಸ್ಟೋರಿ, ಹಾರರ್ ಹಾವಳಿ ನಡುವೆ ಚಿಣ್ಣರ ಮನಸ್ಸಿಗೆ ಮುದ ನೀಡುವ ಇಂಥ ಚಿತ್ರಗಳ ಮಹತ್ವದ ಕುರಿತು ಹೀಗೊಂದು ಲೇಖನ.

| ಮದನ್

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರ ಯಾವ ಮಟ್ಟಕ್ಕೆ ಹೆಸರು ಮತ್ತು ಹಣ ಮಾಡಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆ ಬಳಿಕ ಬೇರೆ ಯಾವುದೇ ನಿರ್ದೇಶಕನಾಗಿದ್ದರೂ ಮುಂದಿನ ಚಿತ್ರಕ್ಕೆ ದೊಡ್ಡ ಸ್ಟಾರ್ ನಟನ ಕಾಲ್​ಶೀಟ್ ಪಡೆದು ಬೀಗುತ್ತಿದ್ದರೇನೋ. ಆದರೆ ರಿಷಬ್ ಶೆಟ್ಟಿ ಹಾಗೆ ಮಾಡಲಿಲ್ಲ. ಅವರು ನೇರವಾಗಿ ಕೈ ಹಾಕಿದ್ದು ಮಕ್ಕಳ ಕಥಾಹಂದರಕ್ಕೆ. ‘ಸ.ಹಿ.ಪ್ರಾ.ಶಾಲೆ, ಕಾಸರಗೋಡು’ ಶೀರ್ಷಿಕೆಯಲ್ಲಿ ರಿಷಬ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಅವರಂತೆಯೇ ಸದ್ದು ಮಾಡುತ್ತಿದ್ದಾರೆ ಮತ್ತೊಬ್ಬ ನಿರ್ದೇಶಕ ಡಿ. ಸತ್ಯಪ್ರಕಾಶ್. ‘ರಾಮಾ ರಾಮಾ ರೇ’ ಚಿತ್ರದಿಂದ ಪ್ರಖ್ಯಾತಿ ಪಡೆದ ಅವರಿಗೆ ‘ಹೆಬ್ಬುಲಿ’ ಖ್ಯಾತಿಯ ನಿರ್ವಪಕ ಉಮಾಪತಿ ಅವರಿಂದ ಬುಲಾವ್ ಬಂತು. ಮನಸ್ಸು ಮಾಡಿದ್ದರೆ ಸತ್ಯಪ್ರಕಾಶ್ ಕೂಡ ಕಣ್ಣುಕುಕ್ಕುವಂತೆ ಒಂದು ಕಮರ್ಷಿಯಲ್ ಸಿನಿಮಾ ಮಾಡಬಹುದಿತ್ತು. ಹಾಗಿದ್ದರೂ ಅವರ ಕಣ್ಣಿಗೆ ಬಿದ್ದಿದ್ದು ಮಕ್ಕಳ ಕಹಾನಿ. ಆ.24ರಂದು ಬಿಡುಗಡೆ ಆಗಲಿರುವ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಸಮೀರನೆಂಬ ಬಾಲಕನ ಕಥೆ ಹೇಳಲು ಬರುತ್ತಿದ್ದಾರೆ ಸತ್ಯ. ಯಾವುದೇ ಸ್ಟಾರ್ ನಾಯಕನ ಕಮರ್ಷಿಯಲ್ ಸಿನಿಮಾಗೆ ಕಡಿಮೆ ಇಲ್ಲದಷ್ಟು ನಿರೀಕ್ಷೆ ಸೃಷ್ಟಿಸಿರುವುದು ಈ ಚಿತ್ರಗಳ ಹೆಚ್ಚುಗಾರಿಕೆ.

ಇಂದಿನ ಮಕ್ಕಳೇ ನಾಳಿನ ಪ್ರೇಕ್ಷಕರು..

ಅಷ್ಟಕ್ಕೂ ಒಬ್ಬ ನಿರ್ದೇಶಕ ಮಕ್ಕಳ ಸಿನಿಮಾ ಮಾಡಲೇಬೇಕೆಂದು ಯಾರೂ ನಿಯಮ ವಿಧಿಸಿಲ್ಲ. ಅದೆಲ್ಲ ಸಾಧ್ಯವಾಗುವುದು ಅವರವರ ಆಸಕ್ತಿಯಿಂದ. ಕನ್ನಡದ ದೊಡ್ಡ ಲೇಖಕರು ಕೂಡ ಈ ವಿಚಾರದಲ್ಲಿ ಮಾದರಿಯಾಗಿ ನಿಲ್ಲುತ್ತಾರೆ. ಕುವೆಂಪು, ಶಿವರಾಮ ಕಾರಂತ ಮುಂತಾದವರು ಜ್ಞಾನಪೀಠ ಪ್ರಶಸ್ತಿ ಪಡೆಯುವಂತಹ ಸಾಹಿತ್ಯಕೃಷಿ ಮಾಡಿದ್ದರೂ ಮಕ್ಕಳಿಗಾಗಿ ಚಿಕ್ಕ-ಚಿಕ್ಕ ಕಥೆ-ಕವನಗಳನ್ನು ಬರೆಯುವುದನ್ನು ಮರೆಯಲಿಲ್ಲ. ಹೊಸ ಪೀಳಿಗೆಯ ಓದುಗರನ್ನು ಹುಟ್ಟುಹಾಕುವ ಮುಖ್ಯ ಉದ್ದೇಶ ಅವರದ್ದಾಗಿತ್ತು. ಈ ಮಾತು ಓರ್ವ ನಿರ್ದೇಶಕನಿಗೂ ಅನ್ವಯ ಆಗುತ್ತದೆ. ಮಕ್ಕಳಿಗಾಗಿ ಸಿನಿಮಾ ಮಾಡುವುದೆಂದರೆ, ಹೊಸ ತಲೆಮಾರಿನ ಪ್ರೇಕ್ಷಕರನ್ನು ಹುಟ್ಟುಹಾಕುವುದೆಂದೇ ಅರ್ಥ. ಈ ಮಾತನ್ನು ಸತ್ಯಪ್ರಕಾಶ್ ವಿವರಿಸುವುದು ಹೀಗೆ; ‘ಇಂದಿನ ಕಾಲಮಾನದ ಮಕ್ಕಳು ಹಿಂದಿ, ಇಂಗ್ಲಿಷ್ ಕಾರ್ಟೂನ್​ಗಳನ್ನು ನೋಡಿಕೊಂಡೇ ಬೆಳೆಯುತ್ತಾರೆ. ಅವರು ದೊಡ್ಡವರಾದ ಬಳಿಕ ಸಜಹವಾಗಿಯೇ ಹಿಂದಿ, ಇಂಗ್ಲಿಷ್ ಸಿನಿಮಾಗಳತ್ತ ಆಕರ್ಷಣೆ ಬೆಳೆಸಿಕೊಳ್ಳುತ್ತಾರೆ. ಅದರ ಬದಲಿಗೆ ಈಗಿನ ಮಕ್ಕಳಿಗೆ ಕನ್ನಡದಲ್ಲೇ ಒಂದಷ್ಟು ಮನರಂಜನಾ ಸರಕು ಸಿಗುವಂತಿದ್ದರೆ ಕನ್ನಡದ ಬಗ್ಗೆ ಅವರ ಆಸಕ್ತಿ ಸದಾ ಜೀವಂತವಾಗಿರುತ್ತದೆ. ದೊಡ್ಡವರಾದ ಮೇಲೂ ಅವರಲ್ಲಿ ಕನ್ನಡ ಸಿನಿಮಾಗಳನ್ನು ನೋಡುವ ಹವ್ಯಾಸ ಮುಂದುವರಿದಿರುತ್ತದೆ. ಆ ಮೂಲಕ ಕನ್ನಡ ಭಾಷೆ ಉಳಿಯುತ್ತದೆ’. ಒಂದು ವೇಳೆ ಇಂದು ಮಕ್ಕಳನ್ನು ನಾವು ಪರಭಾಷೆ ಕಡೆಗೆ ಆಕರ್ಷಿತರಾಗಲು ಬಿಟ್ಟರೆ ಮುಂದಿನ 10-15 ವರ್ಷಗಳ ಬಳಿಕ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಸತ್ಯ.

ಪರದೆ ಮೇಲೂ ಪಾಠ ಮಾಡಬೇಕೆ?

ಮಕ್ಕಳ ಸಿನಿಮಾ ಎಂದರೆ ಮೂಗು ಮುರಿಯುವ ಒಂದು ವರ್ಗವಿದೆ. ಅದಕ್ಕೆ ಕಾರಣವೂ ಹಲವು. ಈವರೆಗೂ ಬಂದ ಬಹುಪಾಲು ಸಿನಿಮಾಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಿದ್ದೇ ಹೆಚ್ಚು. ಈಗಲೂ ವರ್ಷಕ್ಕೆ ಅಂಥ ಹತ್ತಾರು ಮಕ್ಕಳ ಚಿತ್ರಗಳು ತಯಾರಾಗುತ್ತವೆ. ಆದರೆ ಚಿತ್ರಮಂದಿರದಲ್ಲೂ ಮಕ್ಕಳಿಗೆ ನೀತಿ ಪಾಠ ಮಾಡುವ ಅಗತ್ಯ ಏನಿದೆ? ಈಗಾಗಲೇ ಶಾಲೆಯಲ್ಲಿ, ಮನೆಯಲ್ಲಿ ಬುದ್ಧಿಮಾತು ಕೇಳಿಸಿಕೊಂಡ ಚಿಣ್ಣರು ಸಿನಿಮಾದಲ್ಲೂ ಅದನ್ನೇ ಬಯಸುತ್ತಾರೆಯೇ? ಖಂಡಿತ ಇಲ್ಲ. ಒಂದಷ್ಟು ಮನರಂಜನೆಯನ್ನು ಇಟ್ಟುಕೊಂಡು ಸೆಳೆಯಬೇಕಾದ್ದು ಮೊದಲ ಹಂತ. ಅದರ ಜತೆಗೆ ಗೊತ್ತೇ ಆಗದಂತೆ ಕೆಲವು ಒಳ್ಳೆಯ ಅಂಶಗಳನ್ನು ನೀಡಿದರೆ ಮಕ್ಕಳ ಮನಸ್ಸಿಗೆ ಸುಲಭವಾಗಿ ನಾಟುತ್ತದೆ. ಸದ್ಯ ‘ಸ.ಹಿ.ಪ್ರಾ. ಶಾಲೆ..’ ಮತ್ತು ‘ಒಂದಲ್ಲಾ..’ ಮೂಲಕ ರಿಷಬ್ ಹಾಗೂ ಸತ್ಯ ಇದನ್ನೇ ಮಾಡಲು ಹೊರಟಿದ್ದಾರಂತೆ. ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ರಿಷಬ್ ವಿವರಿಸಿದರೆ, ಮುಗ್ಥತೆಯ ಕುರಿತು ಕಥೆ ಹೆಣೆದಿದ್ದಾರಂತೆ ಸತ್ಯ. ರಸವತ್ತಾಗಿ ಮಕ್ಕಳ ಸಿನಿಮಾ ಮಾಡುವ ಪರಂಪರೆ ಮೊದಲಿನಿಂದಲೂ ಕನ್ನಡದಲ್ಲಿ ಜಾರಿಯಲ್ಲಿತ್ತು. ಟಿ.ಎಸ್. ನಾಗಾಭರಣ ಅವರ ‘ಚಿನ್ನಾರಿ ಮುತ್ತ’, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಕೊಟ್ರೇಶಿ ಕನಸು’ ಇಂದಿಗೂ ಫೇಮಸ್. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದ ‘ಸಿಂಹದ ಮರಿ ಸೈನ್ಯ’ ಯಾವುದೇ ಕಮರ್ಷಿಯಲ್ ಸಿನಿಮಾಗೂ ಕಮ್ಮಿ ಇರಲಿಲ್ಲ. ರವಿಚಂದ್ರನ್ ಆಕ್ಷನ್-ಕಟ್ ಹೇಳಿದ್ದ ‘ಕಿಂದರಿ ಜೋಗಿ’, ‘ಶಾಂತಿ ಕ್ರಾಂತಿ’ ಸಿನಿಮಾಗಳಲ್ಲಿ ಮಕ್ಕಳೇ ಪ್ರಧಾನವಾಗಿ ಕಾಣಿಸಿಕೊಂಡರು. ಆಮೀರ್ ಖಾನ್ ನಿರ್ವಣದಲ್ಲಿ ಮೂಡಿಬಂದ ‘ತಾರೆ ಜಮೀನ್ ಪರ್’, ‘ಸೀಕ್ರೆಟ್ ಸೂಪರ್ ಸ್ಟಾರ್’ನಲ್ಲಿ ಆಮೀರ್​ಗಿಂತಲೂ ಹೆಚ್ಚು ಮಿಂಚಿದ್ದು ಮಕ್ಕಳ ಪಾತ್ರಗಳೇ. ತಮಿಳಿನಲ್ಲಿ ಧನುಷ್ ನಿರ್ವಣದ ‘ಕಾಕಾ ಮುಟ್ಟೈ’ಗೆ ಕಮರ್ಷಿಯಲ್ ಸಕ್ಸಸ್ ದಕ್ಕಿತ್ತು. ಯಾವುದೇ ಚಿತ್ರರಂಗಕ್ಕೆ ಅದರದೇ ಆದ ಏರಿಳಿತಗಳು ಇರುವಂತೆ ಕನ್ನಡದಲ್ಲೂ ಇಂಥ ಸಿನಿಮಾಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಬಂದರೆ, ಮತ್ತೆ ಕೆಲವೊಮ್ಮೆ ವಿರಳವಾದವು. ಈಗ ಮತ್ತೆ ಒಳ್ಳೆಯ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ.

ಜವಾಬ್ದಾರಿ ಕಡಿಮೆಯೇನಲ್ಲ!

ಬೇರೆ ಚಿತ್ರಗಳಿಗೆ ಹೋಲಿಸಿದರೆ, ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಒಂದೇ ಒಂದು ತಪು್ಪ ಸಂದೇಶ ರವಾನೆಯಾದರೂ ಅದು ಕೊನೆವರೆಗೂ ಮಕ್ಕಳ ಮನಸಿನಲ್ಲಿ ಅಚ್ಚೊತ್ತುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಒಂದು ಡೈಲಾಗ್ ಕೂಡ ಸಭ್ಯತೆಯ ಗೆರೆ ದಾಟಬಾರದು ಎಂಬುದು ಸತ್ಯಪ್ರಕಾಶ್ ಅಭಿಪ್ರಾಯ. ಕ್ಯಾಮರಾ ಹಿಂದೆ ನಿಂತು ಆಕ್ಷನ್-ಕಟ್ ಹೇಳುವವರಿಗೆ ಅಗಾಧ ತಾಳ್ಮೆ ಇರಬೇಕಾದ್ದೂ ಅಗತ್ಯ. ‘ಮಕ್ಕಳು ನಟಿಸುವಾಗ 50 ಟೇಕ್​ಗಳಾದರೂ ನಾವು ತಾಳ್ಮೆ ಕಳೆದುಕೊಳ್ಳುವಂತಿಲ್ಲ. 50ನೇ ಟೇಕ್​ನಲ್ಲೂ ನಾವು ಮೊದಲನೇ ಟೇಕ್​ನಷ್ಟೇ ಸಮಾಧಾನದಿಂದ ವರ್ತಿಸಬೇಕು. ಈ ಸಿನಿಮಾ ಮಾಡುವಾಗ ನಾನು ಅದನ್ನೆಲ್ಲ ಎಂಜಾಯ್ ಮಾಡಿದ್ದೇನೆ’ ಎನ್ನುತ್ತಾರೆ ರಿಷಬ್. ಅದಲ್ಲದೆ, ಇಂದಿನ ಮಕ್ಕಳು ಆಲೋಚನೆ ಮಾಡುವ ರೀತಿಯೇ ಬದಲಾಗಿದೆ. ಅವರ ಕಾಲಕ್ಕೆ ತಕ್ಕಂತೆ ಅಪಡೇಟ್ ಆಗಬೇಕಾದ್ದು ನಿರ್ದೇಶಕರ ಕರ್ತವ್ಯ ಎಂಬುದು ಸತ್ಯಪ್ರಕಾಶ್ ಅಭಿಪ್ರಾಯ.

ರಂಗಾಗಿರಲಿ ಬಾಲ್ಯದ ನೆನಪು…

ಬಾಲ್ಯದಲ್ಲಿ ನಾವು ನೋಡಿ ಎಂಜಾಯ್ ಮಾಡಿದ ಚಿತ್ರವನ್ನು ಕೊನೇವರೆಗೂ ನೆನಪಿನಲ್ಲಿಟ್ಟುಕೊಂಡಿರುತ್ತೇವೆ. ಇಂದಿನ ಮಕ್ಕಳ ನೆನಪಿನ ಭಿತ್ತಿಯನ್ನು ಸಿಂಗರಿಸುವ ಸಲುವಾಗಿಯಾದರೂ ಇಂಥ ಒಂದಷ್ಟು ಸಿನಿಮಾಗಳು ತಯಾರಾಗಬೇಕಿರುವುದು ಅನಿವಾರ್ಯ. ‘ನಾವು ಈಗಲೂ ‘ಚಿನ್ನಾರಿ ಮುತ್ತ’ನನ್ನು ನೆನಪಿಸಿಕೊಳ್ಳುತ್ತೇವೆ. ಅದೇ ರೀತಿ ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ‘ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ಜ್ಞಾಪಿಸಿಕೊಳ್ಳುವಂತಾಗಬೇಕು’ ಎಂಬ ಆಶಯದೊಂದಿಗೆ ಸಿನಿಮಾ ಕಟ್ಟಿದ್ದಾರಂತೆ ಸತ್ಯ. ‘ಸ.ಹಿ.ಪ್ರಾ. ಶಾಲೆ..’ ಚಿತ್ರವನ್ನೂ ಪ್ರತಿ ಊರುಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿನ ಮಕ್ಕಳಿಗೆ ತೋರಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದಾರೆ ರಿಷಬ್.

Leave a Reply

Your email address will not be published. Required fields are marked *