ಹಸಿರಿನಿಂದ ಕಂಗೊಳಿಸುತ್ತಿವೆ ಸಸಿಗಳು

ಶಿವು ಹುಣಸೂರು
ತಾಲೂಕಿನ ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ವಿಭಾಗದ ವತಿಯಿಂದ ವಿವಿಧ ಜಾತಿಯ ಸಸಿಗಳ ಪೋಷಣೆ ಮಾಡಲಾಗುತ್ತಿದ್ದು, ಇಡೀ ಪರಿಸರ ಹಚ್ಚಹಸಿರಿನ ಸಸ್ಯಕಾಶಿಯಾಗಿ ಕಂಗೊಳಿಸುತ್ತಿದೆ.

2019-20ನೇ ಸಾಲಿನ ತಾಲೂಕು ಹಸಿರೀಕರಣಕ್ಕಾಗಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ 82 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗುತ್ತಿದ್ದು, ಎಳೆಯ ಸಸಿಗಳಿಗೆ ನೀರುಣಿಸಿ, ಗೊಬ್ಬರ ನೀಡಿ ದಷ್ಟಪುಷ್ಟವಾಗಿ ಬೆಳೆಸುವ ಮೂಲಕ ರೋಗ ಬಾರದಂತೆ ಇಲಾಖೆಯ ಸಿಬ್ಬಂದಿ ಎಚ್ಚರವಹಿಸುತ್ತಿದ್ದಾರೆ.
ವಿವಿಧ ಜಾತಿಯ ಸಸಿಗಳು: ಅರಣ್ಯ ಇಲಾಖೆಯ ನರ್ಸರಿಯಲ್ಲಿ ಶ್ರೀಗಂಧ, ತೇಗ, ಮಾವು, ಹಲಸು, ಗೋಣಿ, ಹಿಪ್ಪೆ, ಬೀಟೆ, ಹೊನ್ನೆ, ನೆಲ್ಲಿ, ನಿಂಬೆ, ದಾಳಿಂಬೆ, ಕರಿಬೇವು, ಕಹಿಬೇವು, ಮಹಾಗನಿ, ಹೊಂಬೆ, ನೇರಳೆ, ಹುಣಸೆ, ಬಿಲ್ವಾರ, ಹೆಬ್ಬೇವು, ಹತ್ತಿ, ಸಿಲ್ವಾರ ಸೇರಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲು ಡಿಆರ್‌ಎಫ್‌ಒ ಸಂಪತ್‌ಕುಮಾರ್ ಹಾಗೂ ಸಿಬ್ಬಂದಿ ಮಹದೇವ್ ಹೆಚ್ಚು ಶ್ರಮಿಸುತ್ತಿದ್ದಾರೆ.

ಕೃಷಿ ಪ್ರೋತ್ಸಾಹ ಯೋಜನೆ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 25 ಸಾವಿರ ಸಿಲ್ವಾರ, 25 ಸಾವಿರ ಹೆಬ್ಬೇವು ಸಸಿಗಳನ್ನು ಬೆಳೆಸಲಾಗಿದೆ.
ಆಗ್ರೋ ಫಾರೆಸ್ಟರಿ ಯೋಜನೆಗಾಗಿ 10,200 ಸಸಿಗಳನ್ನು ಪೋಷಿಸಲಾಗುತ್ತಿದೆ. ರಸ್ತೆಬದಿ ನಡುತೋಪು ಯೋಜನೆಗಾಗಿ 7840 ಮತ್ತು ಕೆರೆಯಂಗಳದ ನಡುತೋಪು ಅಭಿವೃದ್ಧಿಗಾಗಿ 6600 ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ. ಅರಸು ಕಲ್ಲಹಳ್ಳಿಯ ಕೆರೆಯಂಗಳ ಅಭಿವೃದ್ಧಿಗೆ 1 ಸಾವಿರ ಹಾಗೂ ಚಿಲ್ಕುಂದದ ಸುಂಡಿಕೆರೆಯಂಗಳ ಅಭಿವೃದ್ಧಿಗೆ 5500 ಸಸಿಗಳನ್ನು ನೆಡಲಾಗುತ್ತಿದೆ. ನರೇಗಾ ಯೋಜನೆಯಡಿ 3090 ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಿದೆ.

ಪ್ರೋತ್ಸಾಹಕ್ಕೆ 100 ರೂ.: ಈ ಬಾರಿಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಫಲಾನುಭವಿಗಳಿಗೆ ಹಿಂದೆ ನೀಡುತ್ತಿದ್ದ 45 ರೂ. ಬದಲಿಗೆ 100 ರೂ. ನೀಡಲಾಗುತ್ತಿದೆ ಎಂದು ಡಿಆರ್‌ಎಫ್‌ಒ ಸಂಪತ್‌ಕುಮಾರ್ ತಿಳಿಸಿದ್ದಾರೆ.

ನಡುತೋಪುಗಳ ವೈಫಲ್ಯ: ಇಲಾಖೆ ಪ್ರತಿವರ್ಷ ರಸ್ತೆಬದಿ ಹಾಗೂ ಕೆರೆಯಂಗಳದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟರು ಅವುಗಳ ಜೀವಂತಿಕೆ ಅತ್ಯಂತ ಕಡಿಮೆಯಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸರ್ಕಾರದ ಯೋಜನೆಯಂತೆ 25 ಹೆಕ್ಟೇರ್ ಭೂಮಿಯಲ್ಲಿ (ಒಂದೇ ಪ್ಲಾಟ್) ತೋಪು ಮಾಡಿದಲ್ಲಿ ಮಾತ್ರ ಒಬ್ಬ ಕಾವಲುಗಾರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ಸ್ಥಳೀಯ ಗ್ರಾಮಸ್ಥರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಬಾರಿ ಕೆರೆಯಂಗಳಗಳಲ್ಲಿ ಸಿಮರೂಬ ಮತ್ತು ಹೊಂಗೆಯಂತಹ ಗಿಡಗಳನ್ನು ಹೆಚ್ಚಾಗಿ ನೆಡಲು ಅರಣ್ಯ ಇಲಾಖೆ ಉದ್ದೇಶಿಸಿದೆ.

ಕೆರೆಯಂಗಳಗಳಲ್ಲಿ ನಡುತೋಪು ನಿರ್ಮಾಣ ವೇಳೆ ರೈತರ ಸಹಕಾರ ಅತ್ಯಗತ್ಯವಾಗಿದೆ. ಕೆರೆಯಂಗಳದ ಬಳಿ ಸಸಿ ನೆಡಲು ಹೋದಾಗ ಸಹಕಾರ ಕೋರುತ್ತೇವೆ. ಜೂ.1ರೊಳಗೆ ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಿ ಸಸಿಗಳನ್ನು ಪಡೆದುಕೊಳ್ಳಬಹುದು.
ಜಿ.ರುದ್ರೇಶ್, ಆರ್‌ಎಫ್‌ಒ, ಸಾಮಾಜಿಕ ಅರಣ್ಯ ವಿಭಾಗ, ಹುಣಸೂರು

Leave a Reply

Your email address will not be published. Required fields are marked *