ಕ್ರೈಸ್ತರ ಮನೆಗೊಂದು ಸಸಿ

ಭರತ್‌ರಾಜ್ ಸೊರಕೆ ಮಂಗಳೂರು

ಸಮುದಾಯದ ಎಲ್ಲ ಮನೆಗಳಲ್ಲಿ ಗಿಡ ನೆಡಲು ಕರೆ ನೀಡುವ ಮೂಲಕ ಮಂಗಳೂರು ಧರ್ಮಪ್ರಾಂತ ಈ ವರ್ಷ ಹಸಿರು ಕ್ರಾಂತಿಗೆ ಪಣ ತೊಟ್ಟಿದೆ.

ಬಿಷಪರು ಅಧಿಕಾರ ಸ್ವೀಕರಿಸುವಾಗಲೇ ಹಸಿರು ಯೋಜನೆಯ ಪ್ರತಿಜ್ಞೆ ತೊಟ್ಟಿದ್ದರು. ಕಳೆದ ವರ್ಷ ಎಲ್ಲ ಚರ್ಚ್‌ಗಳ ಆವರಣದಲ್ಲಿ ಬಿಷಪರ ಕೋರಿಕೆಯಂತೆ ಗಿಡ ನೆಡಲಾಗಿತ್ತು. ಕೆಲವು ಮನೆಗಳಲ್ಲೂ ನಾಟಿ ನಡೆದಿತ್ತು. ಈ ವರ್ಷ ಸಮರೋಪಾದಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕ್ರೈಸ್ತ ಮನೆಗಳಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಡಬೇಕೆಂದು ತಿಳಿಸಿದ್ದಾರೆ. ಕಳೆದ ಭಾನುವಾರ ಎಲ್ಲ ಚರ್ಚ್‌ಗಳಲ್ಲಿ ಈ ಮಾಹಿತಿ ನೀಡಲಾಗಿದೆ.

ಆಯ್ಕೆಯ ಗಿಡ ಪೂರೈಕೆ: ಸಾರ್ವಜನಿಕವಾಗಿ ವಿತರಿಸುವಾಗ ತಮ್ಮ ಆಯ್ಕೆಯ ಗಿಡಗಳು ಸಿಗುವುದಿಲ್ಲ. ಇಷ್ಟವಿಲ್ಲದ ಗಿಡ ನೀಡಿದಾಗ ಜನ ನಿಷ್ಠೆಯಿಂದ ಆರೈಕೆ ಮಾಡುವುದಿಲ್ಲ. ಹೀಗಾಗಿ ಜನರ ಇಚ್ಛೆಯ ಗಿಡಗಳನ್ನು ವಿತರಿಸಲು ಯೋಜಿಸಲಾಗಿದೆ. ಯಾವ ಗಿಡ ಬೇಕೆಂದು ಧರ್ಮಪ್ರಾಂತ್ಯಕ್ಕೆ ಮೊದಲೇ ತಿಳಿಸಿದರೆ ಆ ಗಿಡಗಳನ್ನು ಚರ್ಚ್‌ಗಳಿಗೆ ತಲುಪಿಸಲಾಗುತ್ತದೆ. ಗಿಡ ನಾಟಿಯ ಮಾಹಿತಿ ಸಂಗ್ರಹಣೆಗೆ ಧರ್ಮಪ್ರಾಂತದಿಂದ ಆಯಾ ಪ್ರದೇಶದ ಚರ್ಚ್ ಮೂಲಕ ಕುಟುಂಬಗಳಿಗೆ ಅರ್ಜಿ ನಮೂನೆ ರವಾನೆಯಾಗಿದೆ. ಮನೆಗಳ ಮಾಹಿತಿಯೊಂದಿಗೆ ಎಷ್ಟು ಗಿಡ ಬೇಕು, ಯಾವ ಗಿಡ ಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ. ವಿವಿಧ ಹಣ್ಣುಗಳ ಗಿಡ, ಅಲಂಕಾರಿಕಾ ಗಿಡ, ವಾಣಿಜ್ಯೋದ್ದೇಶದ ಗಿಡಗಳನ್ನು ನೆಡಲು ಅವಕಾಶವಿದೆ. ಬೇಕಾದುದನ್ನು ಚರ್ಚ್‌ಗೆ ರವಾನಿಸಲಾಗುತ್ತದೆ. ದಾಖಲೆ ಸಂಗ್ರಹಿಸಿದ್ದರಿಂದ ಚರ್ಚ್‌ಗಳ ಮೂಲಕ ನೆಟ್ಟ ಗಿಡಗಳ ಬಗ್ಗೆ ಫಾಲೋ ಅಪ್ ಮಾಡಲಾಗುತ್ತದೆ.

70 ಸಾವಿರ ಗುರಿ: ಧರ್ಮಪ್ರಾಂತ್ಯದಲ್ಲಿ 1 ಲಕ್ಷಕ್ಕೂ ಅಧಿಕ ಕುಟುಂಬಗಳಿವೆ. ಪೇಟೆಗಳಲ್ಲಿ ಕೆಲವರು ಫ್ಲಾೃಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಈ ವರ್ಷ ಕನಿಷ್ಠ 50ರಿಂದ 70 ಸಾವಿರ ಗಿಡ ನಾಟಿಯ ಗುರಿ ಹೊಂದಲಾಗಿದೆ. ಜಾಗವಿರುವವರು ಒಂದಕ್ಕಿಂತ ಹೆಚ್ಚು ಗಿಡ ನೆಡಬಹುದು. ಮಿತಿ ಹಾಕಿಕೊಂಡಿಲ್ಲ ಎಂದು ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ವಿಕ್ಟರ್ ವಿಜಯ್ ಲೋಬೊ ಹೇಳಿದ್ದಾರೆ.

ಧರ್ಮಪ್ರಾಂತದ ಬಿಷಪ್ ಪೀಟರ್ ಪೌಲ್ ಸಲ್ದಾನ ಅವರ ಸೂಚನೆಯಂತೆ ಎಲ್ಲ ಮನೆಗಳಲ್ಲಿ ಗಿಡ ನೆಡಲಾಗುವುದು. ಚರ್ಚ್‌ನಲ್ಲಿ ಈ ಬಗ್ಗೆ ಸಂದೇಶ ರವಾನಿಸಲಾಗಿದೆ. ಪರಿಸರದ ಸಮತೋಲನ ತಪ್ಪಿರುವುದು ಈ ವರ್ಷ ಗಮನಕ್ಕೆ ಬಂದಿದ್ದು, ಸಮರೋಪಾದಿಯಲ್ಲಿ ಹಸಿರಿನ ರಕ್ಷಣೆಗೆ ಒಂದಾಗಬೇಕು.
ಸ್ಟಾೃನಿ ಡಿಸೋಜ ಉರ್ವ ಚರ್ಚ್ ಧರ್ಮಗುರು

ಗಿಡ ವಿತರಣೆಗೆ ಸಮಿತಿ ರಚಿಸಲಾಗಿದೆ. 70 ಸಾವಿರ ಗಿಡ ನಾಟಿ ಗುರಿ ಇದೆ. ಮಳೆ ಚುರುಕಾದ ಬಳಿಕ ಜೂನ್ 15ರ ವೇಳೆಗೆ ಎಲ್ಲ ಮನೆಗಳಿಗೆ ಗಿಡ ತಲುಪಲಿದೆ. ಅರಣ್ಯ ಇಲಾಖೆ ಕಾರ್ಯಕ್ರಮಕ್ಕೆ ಸಹಕರಿಸುತ್ತಿದೆ.
ಫಾದರ್ ವಿಕ್ಟರ್ ವಿಜಯ್ ಲೋಬೊ ಸಾರ್ವಜನಿಕ ಸಂಪರ್ಕಾಧಿಕಾರಿ, ಮಂಗಳೂರು ಧರ್ಮಪ್ರಾಂತ