ಸನ್ಯಾಸ ದೀಕ್ಷೆ ಪೂರ್ವಭಾವಿಯಾಗಿ ಆತ್ಮಶ್ರಾದ್ಧ

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬಳಕಟ್ಟ ಶೈಲೇಶ ಉಪಾಧ್ಯಾಯರ ಸನ್ಯಾಸ ದೀಕ್ಷೆಯ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕ್ರಿಯೆಗಳು ಗುರುವಾರ ಸಂಪನ್ನಗೊಂಡವು.

ಶೈಲೇಶ ಉಪಾಧ್ಯಾಯರು ತಂದೆ, ತಾಯಿ ಮತ್ತು ತನಗೆ ಶ್ರಾದ್ಧಾದಿಗಳನ್ನು (ಆತ್ಮಶ್ರಾದ್ಧ) ನಡೆಸಿಕೊಂಡರು. ಆತ್ಮಶ್ರಾದ್ಧಾದಿಗಳ ನಂತರ ತುರೀಯಾಶ್ರಮವಾದ ಸನ್ಯಾಸ ಅಧಿಕಾರ ಯೋಗ್ಯತಾ ಸಿದ್ಧಿಗೋಸ್ಕರವಾಗಿ ಪ್ರಾಯಶ್ಚಿತ್ತಪೂರ್ವಕ ಸತ್ಪಾತ್ರರಿಗೆ ಗೋದಾನ ಹಾಗೂ ದಶದಾನಗಳನ್ನು ಮಾಡಿ ದಕ್ಷಿಣೆ ನೀಡಿದರು. ಕೇಶ ಮುಂಡನ ಬಳಿಕ ಮಧ್ವ ಸರೋವರದಲ್ಲಿ ಸ್ನಾನ ಮಾಡಿದರು. ರಾತ್ರಿ ಶಾಕಲ ಸಂಹಿತೆಯ ಮಂತ್ರದ ಹೋಮ ನಡೆದು, ರಾತ್ರಿ ಉಪವಾಸವಿದ್ದು ಜಾಗರಣೆ ಮಾಡಿದರು.

ಇಂದು ಸನ್ಯಾಸ ದೀಕ್ಷೆ: ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಮೇ 10ರಂದು ಶೈಲೇಶ ಉಪಾಧ್ಯಾಯರು ಸನ್ಯಾಸಾಶ್ರಮ ಸ್ವೀಕರಿಸಲಿದ್ದಾರೆ. ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರಣವ ಮಂತ್ರೋಪದೇಶ ನೆರವೇರಿಸುವರು. ಶನಿವಾರ ವಾಯುಸ್ತುತಿ ಪುರಶ್ಚರಣೆ, ವಿವಿಧ ಹೋಮಗಳು ನಡೆಯಲಿವೆ. ಮೇ 12ರವರೆಗೆ ಅವರು ಸನ್ಯಾಸಿಯಾಗಿರಲಿದ್ದು, ಅಂದು ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಕವಾಗುತ್ತಾರೆ. ಮಠದಲ್ಲಿ ಪೂಜೆಗೊಂಡ ಸಾಲಿಗ್ರಾಮ, ವಿಗ್ರಹಗಳನ್ನು ಹರಿವಾಣದಲ್ಲಿರಿಸಿ ಅದನ್ನು ತಲೆ ಮೇಲಿಟ್ಟು ಅಭಿಷೇಕ ಮಾಡಲಿದ್ದಾರೆ. ಬಳಿಕ ಅಭಿಷೇಕ ಮಾಡಿದ ತೀರ್ಥದಲ್ಲಿ ಮೈ ಪೂರ್ಣ ಒದ್ದೆಯಾಗಬೇಕು. ಈ ಕ್ರಮ ಪೂರ್ಣಗೊಂಡ ಬಳಿಕ ಅವರು ಪಲಿಮಾರು ಮಠದ ಮಠಾಧಿಪತಿ ಆಗುತ್ತಾರೆ.