ಕಾರ್ಗಲ್: ಜೀವನದಲ್ಲಿ ಲೋಭವನ್ನು ತಡೆಗಟ್ಟಿ ಪ್ರತಿಯೊಂದು ಆಚರಣೆಯ ಮೇಲೆ ಮಿತವನ್ನು ಹೊಂದಿದ್ದಾಗ ಮಾತ್ರ ಸಂಯಮ ಧರ್ಮವನ್ನು ಸಂಪಾದನೆ ಮಾಡಲು ಅವಕಾಶವಿದೆ. ಆದ್ದರಿಂದ ಮೋಕ್ಷವನ್ನು ಪ್ರಾಪ್ತಿ ಮಾಡಿಕೊಳ್ಳಲು ಜೈನಧರ್ಮದಲ್ಲಿ ದಶಲಕ್ಷಣ ಮಹಾಪರ್ವ ಪೂಜಾ ವಿಧಾನದಲ್ಲಿ ಆರನೇ ಮೆಟ್ಟಿಲಾದ ಸಂಯಮ ಧರ್ಮದ ಪೂಜೆಯು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬಿದರೂರು ಶ್ರಿವರ್ಧಮಾನ ದಿಗಂಬರ ಜೈನ ಬಸದಿಯ ಸಮಿತಿ ಅಧ್ಯಕ್ಷ ಶಾಂತರಾಜ್ ನೇಸಲಮನೆ ತಿಳಿಸಿದರು.
ಸೋಮವಾರ ಸಮೀಪದ ಮರಬಿಡಿ ಸೀಮೇಯ ಬಿದರೂರು ಶ್ರೀ ವರ್ಧಮಾನ ದಿಗಂಬರ ಜೈನ ಬಸದಿಯಲ್ಲಿ ನಡೆಯುತ್ತಿರುವ ದಶಲಕ್ಷಣ ಮಹಾಪರ್ವದ 6ನೇ ದಿನದ ಪೂಜಾ ಕಾರ್ಯದಲ್ಲಿ ಅವರು ಮಾತನಾಡಿ, ಸಂಯಮ ಧರ್ಮದಲ್ಲಿ ಇಂದ್ರಿಯ ಸಂಯಮ ಮತ್ತು ಪ್ರಾಣಿ ಸಂಯಮ ಎಂದು ಎರಡು ಬಗೆ ಇದೆ. ಪಂಚೇಂದ್ರಿಯಗಳ ಗತಿ ಮತ್ತು ಮನಸ್ಸಿನ ಮಿತಿಮೀರಿದ ಅಪೇಕ್ಷೆಗಳನ್ನು ತಡೆಗಟ್ಟುವುದು ಇಂದ್ರಿಯ ಸಂಯಮವೆನಿಸುತ್ತದೆ. ಪೃಥ್ವಿ ಕಾಯಿಕ, ಜಲ ಕಾಯಿಕ, ವಾಯು ಕಾಯಿಕ, ವನಸ್ಪತಿ ಕಾಯಿಕ ಮತ್ತು ತ್ರಸ ಜೀವಿಗಳಲ್ಲಿ ದಯೆಯನ್ನು ತೋರಿ ರಕ್ಷಿಸುವುದು ಪ್ರಾಣಿಸಂಯಮ ಎನ್ನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಬಸದಿಯಲ್ಲಿ ಹತ್ತು ದಿನಗಳ ಕಾಲ ನಿತ್ಯ ನಡೆಯಲಿರುವ ಪೂಜಾ ಕಾರ್ಯದಲ್ಲಿ ಮರಬಿಡಿ ಸೀಮೆಯ ಬೇರೆ ಬೇರೆ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ. ಆ ಪೈಕಿ ಸೋಮವಾರ ನಡೆದ ಪೂಜಾ ಕಾರ್ಯದಲ್ಲಿ ಯಡ್ಡಳ್ಳಿ, ಮಳಲಿ, ಕುಳಕಾರು ಮತ್ತು ಲಿಂಗನಮಕ್ಕಿ ಜೈನ ಸಮುದಾಯದವರು ಪಾಲ್ಗೊಂಡು ಸಂಯಮ ಧರ್ಮದ ಪೂಜೆಯನ್ನು ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಬಿದರೂರು ಜೈನ ಬಸದಿಯ ಆಡಳಿತ ಸಮಿತಿ ಸದಸ್ಯರು, ಮರಬಿಡಿ ಸೀಮೆಯ ಶ್ರಾವಕ ಹಾಗೂ ಶ್ರಾವಕಿಯರು ಇದ್ದರು.