More

    ಅಳುತ್ತ ಕೂತರೆ ಉತ್ತರ ಸಿಗುವುದಿಲ್ಲ..; ವಿದ್ಯೆಗೆ ಮಾಡುತ್ತಿರುವ ಅವಮಾನವಲ್ಲವೇ?

    • ನಾನು 38 ವರ್ಷದ ಎಂಬಿಎ ಪದವೀಧರೆ. ವಧೂವರರ ಕಾಲಂ ನೋಡಿ ದೂರದ ಊರಿನ ವರನನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾದೆ. ಮದುವೆಗೆ ಮೊದಲು ಒಳ್ಳೆಯ ಕೆಲಸದಲ್ಲಿದ್ದೆ. ಗಂಡ ‘ನಮ್ಮದೇ ವ್ಯಾಪಾರ ವ್ಯವಹಾರವಿದೆ, ಅದನ್ನೇ ನೋಡಿಕೋ’ ಎಂದು ನಂಬಿಸಿದ್ದರಿಂದ ಕೆಲಸವನ್ನು ಬಿಟ್ಟು ಬಂದೆ. ನಮ್ಮವರದು ಒಂದು ಅಂಗಡಿಯೇನೋ ಇದೆ. ಆದರೆ ಅವರ ತಮ್ಮಂದಿರೇ ಅದನ್ನು ನೋಡಿಕೊಳ್ಳುತ್ತಿದ್ದಾರೆ. ನನಗೇನೂ ಇಲ್ಲಿ ಕೆಲಸವಿಲ್ಲ. ಇವರು ದೊಡ್ಡ ಮಗ, ಇಬ್ಬರು ತಮ್ಮಂದಿರಿಗೂ ಮೊದಲೇ ಮದುವೆಯಾಗಿ ಮಕ್ಕಳಿದ್ದಾರೆ. ಇವರಿಗೆ ಯೌವನದಲ್ಲಿ ಏನೋ ಕಾಯಿಲೆ ಇತ್ತಂತೆ. ಅದಕ್ಕೇ ಮೊದಲು ಮದುವೆಯಾಗಲಿಲ್ಲವಂತೆ. ಈಗಲೂ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ನಮ್ಮದು ಒಟ್ಟು ಕುಟುಂಬ. ಇಲ್ಲಿ ನಾನು ಕಸಕ್ಕಿಂತ ಕಡೆ. ನನ್ನ ಗಂಡನಿಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲ. 4 ವರ್ಷಗಳಿಂದ ದೇಹ ಸಂಪರ್ಕವೂ ಇಲ್ಲ. ಮಕ್ಕಳಾಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಕೇಳಿದರೆ ಬರೀ ಜಗಳ. ಹೋಗಲಿ ಕೆಲಸಕ್ಕಾದರೂ ಹೋಗುತ್ತೇನೆಂದರೆ ಅದಕ್ಕೂ ಗಂಡ ಒಪ್ಪುವುದಿಲ್ಲ. ನನ್ನ ಗಂಡನ ತಾಯಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ. ಅವರು ನನ್ನ ಗಂಡನಿಗೆ ಏನೇನೋ ಚಾಡಿ ಹೇಳಿಕೊಟ್ಟು ಮನೆಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಚ್ಛೇದನ ಕೊಡುತ್ತೇನೆಂದು ಹೆದರಿಸುತ್ತಾರೆ. ನಾನು ಈ ವಯಸ್ಸಿನಲ್ಲಿ ಎಲ್ಲಿಗೆ ಹೋಗಲಿ? ಕೈಯಲ್ಲಿ ಪುಡಿಗಾಸೂ ಇಲ್ಲ. ವಕೀಲರ ಮುಖಾಂತರ ನ್ಯಾಯಕ್ಕಾಗಿ ಹೋರಾಡಲು ಹಣವಿಲ್ಲ. ಬದುಕಿಗೆ ಏನು ಮಾಡಲಿ? ನನ್ನ ವಯಸ್ಸಿಗೆ ಸರ್ಕಾರಿ ಕೆಲಸವೂ ಸಿಗುವುದಿಲ್ಲ.

    ಅಳುತ್ತ ಕೂತರೆ ಉತ್ತರ ಸಿಗುವುದಿಲ್ಲ..; ವಿದ್ಯೆಗೆ ಮಾಡುತ್ತಿರುವ ಅವಮಾನವಲ್ಲವೇ?ನಿಮ್ಮ ನಾಲ್ಕು ಪುಟದ ಪತ್ರ ಓದಿ ತುಂಬ ಬೇಸರವಾಯಿತು. ಅಲ್ಲ ವಿದ್ಯೆಯೆನ್ನುವುದು ನಮಗೆ ಗಟ್ಟಿ ವ್ಯಕ್ತಿತ್ವವನ್ನು ಕೊಡುತ್ತದೆಯಲ್ಲವೇ? ನೀವು ನೋಡಿದರೆ ಎಂಬಿಎ ಪದವೀಧರೆ! ಅದೂ ಫೈನಾನ್ಸ್ ವಿಷಯದಲ್ಲಿ! ಇಂಥಾ ನೀವು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆದರುತ್ತಾ ವಿದ್ಯೆಯೇ ಇಲ್ಲದವರ ಹಾಗೆ ಪತ್ರದ ತುಂಬಾ ಏನು ಮಾಡಲಿ? ಎಲ್ಲಿಗೆ ಹೋಗಲಿ ಎಂದು ದುಃಖಿಸಿದ್ದೀರಲ್ಲ? ಇದು ನೀವೇ ನಿಮ್ಮ ವಿದ್ಯೆಗೆ ಮಾಡುತ್ತಿರುವ ಅವಮಾನವಲ್ಲವೇ? ಸ್ವಲ್ಪ ನಿಧಾನವಾಗಿ ಯೋಚಿಸಿ.

    ನಿಮಗಿನ್ನೂ 38 ವರ್ಷ. 45 ಅಲ್ಲ, 50 ಅಲ್ಲ. ಕೇವಲ 38. ಈ ವಯಸ್ಸಿಗೆ ದೇಹದಲ್ಲಿ ಶಕ್ತಿ, ತಲೆಯಲ್ಲಿ ವಿದ್ಯೆಯ ಶಕ್ತಿ ಎರಡೂ ಧಾರಾಳವಾಗಿ ನಿಮ್ಮ ಹತ್ತಿರ ಇದೆಯಲ್ಲವೇ? ಇಷ್ಟು ಶಕ್ತಿವಂತರಾದ ನೀವು ಗಂಡ ಡೈವೋರ್ಸ್ ಕೊಡುತ್ತೇನೆಂದು ಹೆದರಿಸುತ್ತಾರೆ ಎಂದು ಬರೆಯುತ್ತೀರಲ್ಲ? ನಿಜವಾಗಿ ನೋಡಿದರೆ ನೀವೇ ಅವರನ್ನು ಹೆದರಿಸಬಹುದು. ಆ ಶಕ್ತಿ ನಿಮ್ಮಲ್ಲಿ ಇದೆ. ನಿಮಗೆ ಮೋಸ ಮಾಡಿರುವವರೇ ಅವರು. ಕಾನೂನಿನ ದೃಷ್ಟಿಯಿಂದಲೂ ಅವರು ಅಪರಾಧಿಗಳು.

    ದಾಂಪತ್ಯವನ್ನು ನಡೆಸಲು ದೈಹಿಕವಾಗಿ ಶಕ್ತಿಯಿಲ್ಲದ ವ್ಯಕ್ತಿ, ತನ್ನ ಕೊನೆಗಾಲಕ್ಕೆ ಮನೆಯ ಕೆಲಸಕ್ಕೆ ಒಬ್ಬ ಆಳಿರಲಿ ಎಂದು ಮೋಸಮಾಡಿ ನಿಮ್ಮನ್ನು ಮದುವೆಯಾಗಿದ್ದಾರೆ. ಅಲ್ಲದೇ ನಿಮ್ಮನ್ನು ಮಾನಸಿಕವಾಗಿ ಅತ್ತೆ ಮತ್ತು ಗಂಡ ಹಿಂಸಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮೂರಿನ ಪೊಲೀಸರಿಗೆ ಕಂಪ್ಲೇಂಟ್ ಕೊಡಿ. ತವರಿನ ಬಗ್ಗೆ ನೀವು ಏನೂ ಬರೆದಿಲ್ಲ. ಮೊದಲು ಆ ಮನೆಯನ್ನು ಬಿಟ್ಟು ಬನ್ನಿ. ನೀವು ಮದುವೆಗೆ ಮುನ್ನ ಮಾಡುತ್ತಿದ್ದ ಉದ್ಯೋಗದ ಕಂಪನಿಯಲ್ಲೇ ಉದ್ಯೋಗ ಸಿಗುತ್ತದಾ ಪ್ರಯತ್ನಿಸಿ.

    ಸರ್ಕಾರಿ ಕೆಲಸವೇ ಏಕೆ ಬೇಕು? ಮೊದಲು ಸಣ್ಣ ಪುಟ್ಟ ಯಾವುದಾದರೂ ಕೆಲಸಕ್ಕೆ ಸೇರಿ. ನಂತರ ನಿಧಾನವಾಗಿ ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಿ. ಎರಡೆರಡು ಪದವಿಗಳನ್ನು ಇಟ್ಟುಕೊಂಡಿರುವ ನೀವು ಬರಿ ಭಾವುಕರಾಗಿ ಯೋಚಿಸಬಾರದು. ನಿಮ್ಮಲ್ಲಿರುವ ಜಾಣತನವನ್ನು ಬಳಸಿ ನಿಮ್ಮ ಕಾಲಮೇಲೆ ನಿಲ್ಲುವ ಪ್ರಯತ್ನ ಮಾಡಿ. ನಿಮ್ಮ ಗಂಡನ ಜತೆ ಬದುಕುವುದರ ಬಗ್ಗೆ ಆ ನಂತರ ಯೋಚಿಸಬಹುದು. ಅದಕ್ಕೆ ವಕೀಲರೂ, ನ್ಯಾಯಾಲಯವೂ ಸಹಾಯ ಮಾಡುತ್ತದೆ.

    ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್​ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts