Thursday, 22nd November 2018  

Vijayavani

ಶುಗರ್ ಫ್ಯಾಕ್ಟರಿ ಮಾಲೀಕರ ಪ್ರತ್ಯೇಕ ಸಭೆ-ಸಭೆ ಬಳಿಕ ಸಿಎಂ ಗೃಹ ಕಚೇರಿಗೆ ಸಕ್ಕರೆ ಧಣಿಗಳ ಆಗಮನ        ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಡೌಟ್-ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಬ್ಯುಸಿ-ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರು        ದಿಢೀರ್ ಪಾತಾಳ ಕಂಡ ಈರುಳ್ಳಿ ಬೆಲೆ-ರೈತರ ಸಂಕಷ್ಟದ ಬಗ್ಗೆ ಪಿಎಂಗೆ ಟ್ವೀಟ್​ ಮಾಡಿದ ಬೆಳೆಗಾರ        ‘ಬಡವರ ಬಂಧು’ ಯೋಜನೆಗೆ ಸಿಎಂ ಚಾಲನೆ-ಆಯ್ದ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ವಿತರಣೆ        ಹಾಸನದಲ್ಲಿ ಮಿತಿಮೀರಿದ ಕಾಡಾನೆ ಹಾವಳಿ-ಸಿಎಂ ಎಚ್ಡಿಕೆಗೆ ಮನವಿ ಮಾಡಿದ ಸಕಲೇಶಪುರದ ಬಾಲಕಿ ವಿಸ್ಮಯ        10 ಕಿಮೀ ಉದ್ದ ಕೆಂಪು-ಬಿಳಿ ರೈಲ್ವೆ ಟ್ರ್ಯಾಕ್-ದೇಶದಲ್ಲೇ ಮಾದರಿ ಧಾರವಾಡದ ಮುಗದ ರೈಲ್ವೆ ನಿಲ್ದಾಣ-ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್​​​       
Breaking News

ಪಾಂಡವರ ಅರಣ್ಯಗಮನ

Thursday, 08.11.2018, 7:14 AM       No Comments

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಧೃತರಾಷ್ಟ್ರನ ಅಪ್ಪಣೆಯಂತೆ ಪ್ರತಿಗಾಮಿಯು ಪಾಂಡವರ ಬಳಿ ತೆರಳಿ, ‘ಎರಡನೆಯ ಬಾರಿ ದ್ಯೂತವಾಡಲು ಧೃತರಾಷ್ಟ್ರ ಸಂಕಲ್ಪಿಸಿದ್ದಾನೆ. ಅದಕ್ಕಾಗಿ ನಿಮ್ಮನ್ನು ಬರಲು ಹೇಳಿಕಳುಹಿಸಿದ್ದಾರೆ’ ಎಂದು ತಿಳಿಸಿದನು.

ದ್ರೌಪದಿ ಬೇಡಿ ಪಡೆದ ರಾಜ್ಯವನ್ನು ಅನುಭವಿಸಲು ಇಷ್ಟವಿಲ್ಲದ ಧರ್ಮರಾಜ ಇಂತಹ ಸಂದರ್ಭಕ್ಕಾಗಿಯೇ ಕಾಯುತ್ತಿದ್ದನು. ಕುದುರೆಪಂದ್ಯದ ವ್ಯಸನಕ್ಕೆ ಸಿಲುಕಿದ ವ್ಯಕ್ತಿ ತಾನು ಎಷ್ಟು ಸೋತರೂ ಹೇಗಾದರೂ ಮಾಡಿ ಕಳೆದುಕೊಂಡ ಹಣವನ್ನು ಪುನಃ ಪಡೆಯಬಹುದೆಂದು ಮತ್ತೆ ತಾನು ಸೋತ ಸ್ಥಳದಲ್ಲಿಯೇ ಹಣವನ್ನು ಸುರಿಯುತ್ತಾನೆ. ಅದರಂತೆ ಧರ್ಮರಾಜನೂ ಒಮ್ಮೆ ಸೋತರೂ ಎಚ್ಚೆತ್ತುಕೊಳ್ಳದೆ – ಹೇಗಾದರೂ ಮಾಡಿ ದ್ರೌಪದಿಯ ಹಂಗಿಲ್ಲದೆ ರಾಜ್ಯವನ್ನು ಪುನಃ ಪಡೆಯಬಹುದೆಂದು ಕಲಿಯ ಆವೇಶಕ್ಕೊಳಗಾಗಿ ಒಪ್ಪಿಗೆ ನೀಡಿದನು. ಆದರೆ ಹೊರಗೆ ಮಾತ್ರ ‘ದೊಡ್ಡಪ್ಪನ ಆದೇಶವನ್ನು ಮೀರುವುದುಂಟೇ?’ ಎಂಬ ಮಾತುಗಳನ್ನಾಡಿದನು.

ಭೀಮಸೇನನಂತೆ ಹೋರಾಟದ ಕಿಚ್ಚಿಲ್ಲದ, ದ್ರೌಪದಿಯಿಂದಾಗಿ ಬೇಡಿ ಪಡೆದದ್ದನ್ನು ಅನುಭವಿಸಲೂ ಇಷ್ಟವಿಲ್ಲದ ಧರ್ಮರಾಜನು ಭೀಮಸೇನ, ಅರ್ಜುನ ಮುಂತಾದವರೆಲ್ಲ ವಿರೋಧಿಸುತ್ತಿದ್ದರೂ ಯಾರ ಮಾತಿಗೂ ಕಿವಿಗೊಡದೆ ಹಸ್ತಿನಾವತಿಯ ದಾರಿ ಹಿಡಿದನು. ಬೇರೆ ಉಪಾಯವಿಲ್ಲದೆ ಉಳಿದ ಪಾಂಡವರೂ ಅವನನ್ನೇ ಹಿಂಬಾಲಿಸಿದರು.

ಧರ್ಮರಾಜ ಪುನಃ ದ್ಯೂತಕ್ಕೆ ಸಿದ್ಧನಾಗಿರುವುದನ್ನು ಕಂಡು ಹಿರಿಯರಾದ ಭೀಷ್ಮಾದಿಗಳೆಲ್ಲ – ‘ಮತ್ತೊಮ್ಮೆ ಜೂಜಾಡುವುದು ಬೇಡ’ ಎಂದು ಪರಿಪರಿಯಾಗಿ ಉಪದೇಶಿಸಿದರು. ಹಿರಿಯರಾದ ಭೀಷ್ಮಾದಿಗಳು ಹಾಗೂ ತನ್ನ ಅನುಜರೆಲ್ಲ ತಡೆಯುತ್ತಿದ್ದರೂ ಧರ್ಮರಾಜ ಮಾತ್ರ ಮೇಲ್ನೋಟಕ್ಕೆ, ‘ಧೃತರಾಷ್ಟ್ರನ ಅಪ್ಪಣೆಯಾಗಿದೆ’ ಎಂದು ಹೇಳುತ್ತಾ, ‘ತಾನು ಜೂಜಿನಲ್ಲಿ ಕಳೆದುಕೊಂಡದ್ದನ್ನು ಮರಳಿ ಪಡೆದು ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಬೇಕೆಂದು’ ಜೂಜಿಗೆ ಕುಳಿತೇಬಿಟ್ಟನು.

ಶಕುನಿ ಎದ್ದು ನಿಂತು ಜೂಜಿನ ನಿಯಮಗಳನ್ನು ಹೇಳಲಾರಂಭಿಸಿದನು;

‘ಈ ಬಾರಿ ಜೂಜಿನಲ್ಲಿ ಸೋತವರು ಹಿಂದಿನಂತೆ ಗುಲಾಮರಾಗಬೇಕಾಗಿಲ್ಲ. ಜೂಜಿನಲ್ಲಿ ನಾವು ಸೋತರೆ ಹನ್ನೆರಡು ವರುಷ ಅರಣ್ಯವಾಸ ಹಾಗೂ ಒಂದು ವರ್ಷದ ಅಜ್ಞಾತವಾಸವನ್ನು ಕೈಗೊಳ್ಳುತ್ತೇವೆ; ಆಗ ಪಾಂಡವರೇ ಹಸ್ತಿನಾವತಿಯ ಸಮಗ್ರ ಒಡೆತನಕ್ಕೆ ಒಳಪಡುತ್ತಾರೆ. ಒಂದುವೇಳೆ ಅಜ್ಞಾತವಾಸದ ಸಂದರ್ಭದಲ್ಲಿ ಯಾರಾದರೂ ನಮ್ಮನ್ನು ಗುರುತಿಸಿದರು ಪುನಃ ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸವನ್ನು ಕೈಗೊಳ್ಳುತ್ತೇವೆ. ನೀವು (ಪಾಂಡವರು) ಸೋತರೆ ನಿಯಮದಂತೆ ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸವನ್ನು ಕೈಗೊಳ್ಳಬೇಕಾಗುತ್ತದೆ. ಹನ್ನೆರಡು ವರ್ಷಗಳಾದ ಬಳಿಕ ನಾವಾಗಲಿ ಅಥವಾ ನೀವಾಗಲಿ ಮರಳಿ ನಮ್ಮ ನಮ್ಮ ಹಕ್ಕಿನ ರಾಜ್ಯವನ್ನು ಪಡೆಯೋಣ. ಹೀಗೆ ಸೋತವರು ಯಾವುದೇ ವಿಧದ ಗುಲಾಮಗಿರಿಗೆ ಒಳಗಾಗದಂತೆ ಹೊಸ ರೀತಿಯ ನಿಯಮವನ್ನು ಜಾರಿಗೆ ತಂದಿದ್ದೇವೆ.’

ಶಕುನಿ ಇಷ್ಟು ಹೇಳಿದ್ದೇ ತಡ, ಸಭೆಯಲ್ಲಿ ನೆರೆದ ಜನರೆಲ್ಲ ಎದ್ದು ನಿಂತು ತಮ್ಮ ಕೈಗಳನ್ನು ಮೇಲಕ್ಕೆತ್ತಿ ‘ಕುರುಕುಲ ಕ್ಷಯಕಾರಿಯಾದ ಮಹಾ ಅನರ್ಥವನ್ನು ಉಂಟುಮಾಡುವಂತಹ ಇಂತಹ ಜೂಜಿನಿಂದ ಖಂಡಿತವಾಗಿಯೂ ಒಳಿತಾಗದು’ ಎಂದು ಧರ್ಮರಾಜನನ್ನು ತಡೆಯಲು ಪ್ರಯತ್ನಿಸಿದರು. ಅಂತಿಮವಾಗಿ ಭೀಷ್ಮ, ದ್ರೋಣ, ಕೃಪ ಮುಂತಾದವರೆಲ್ಲ ದ್ಯೂತ ಬೇಡವೆಂದು ತಡೆದರು. ಆದರೆ ಧರ್ಮರಾಜ ಮಾತ್ರ ತಾನು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಲಿಲ್ಲ. ಶಕುನಿ ತನ್ನ ಕುತಂತ್ರದಿಂದ ಒಂದೇ ಪೆಟ್ಟಿಗೆ ಅನಾಯಾಸವಾಗಿ ಧರ್ಮರಾಜನನ್ನು ಸೋಲಿಸಿದನು. ಜೂಜಿನ ನಿಯಮದಂತೆ ಸೋತವರು ಕಾಡಿಗೆ ತೆರಳಬೇಕು. ಪಾಂಡವರು ಸೋತು ಕೃಷ್ಣಾಜಿನವನ್ನು ಧರಿಸಿ ಕಾಡಿಗೆ ಹೊರಟದ್ದನ್ನು ಕಂಡು ದುಶ್ಶಾಸನ ಸಂತೋಷದಿಂದ ಅಟ್ಟಹಾಸ ಮಾಡುತ್ತಾ ಭೀಮಸೇನನನ್ನು ‘ಗೊಡ್ಡು ಎತ್ತು’ ಎಂದು ಅಪಹಾಸ್ಯ ಮಾಡಿದನು. ಬಳಿಕ ದುಶ್ಶಾಸನ ದ್ರೌಪದಿಯನ್ನು ಕುರಿತು ತನ್ನ ನಿಕೃಷ್ಟವಾದ ಮಾತುಗಳಿಂದ ಇಂತೆಂದನು;

‘ಇಡೀ ಲೋಕದಲ್ಲಿಯೇ ನಮ್ಮಂತಹ ವೀರರು ಮತ್ತೊಬ್ಬರಿಲ್ಲವೆಂದು ಅಹಂಕಾರದಿಂದ ಬೀಗುತ್ತಿದ್ದ ಪಾಂಡವರು ಇಂದು ಷಂಡರಂತೆ ಸೋತು ಅರಣ್ಯಕ್ಕೆ ಹೋಗುತ್ತಿದ್ದಾರೆ. ದ್ರೌಪದಿಯೇ! ನಿನ್ನ ತಂದೆ ಸ್ವಲ್ಪವೂ ವಿಚಾರ ಮಾಡದೆ ಮಹಾಪ್ರಾಜ್ಞನಂತೆ ನಿನ್ನನ್ನು ಷಂಡರಾದ ಪಾಂಡವರಿಗೆ ಕೊಟ್ಟು ಮದುವೆ ಮಾಡಿದ್ದಾನೆ. ಇಂದು ರಾಜ್ಯವನ್ನು ಕಳೆದುಕೊಂಡು ಭಿಕ್ಷುಕರಂತೆ ಅಜಿನಗಳನ್ನು ಧರಿಸಿ ನಿರ್ಧನರಾಗಿ ಒಂದು ನೆಲೆ ಇಲ್ಲದೆ ಕಾಡಿನಲ್ಲಿ ಅಲೆದಾಡುವ ನಿನ್ನ ಗಂಡಂದಿರಿಂದ ಎಂಥ ಸುಖವನ್ನು ಪಡೆಯುವೆ? ಈ ಕ್ಷಣವೇ ಇವರನ್ನು ತೊರೆದು ನಮ್ಮನ್ನು ವರಿಸು. ವೈಭವೋಪೇತವಾದ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ನಿನ್ನನ್ನು ಮೆರೆಸುತ್ತೇವೆ. ನಪುಂಸಕರಾದ ಪಾಂಡವರ ಹಿಂದೆ ಹೋಗಬೇಡ.’

ದುಶ್ಶಾಸನನ ಇಂತಹ ನಿಕೃಷ್ಟವಾದ ಮಾತುಗಳನ್ನು ಕೇಳಿ ರೋಷದಿಂದ ಕನಲಿದ ಭೀಮಸೇನ ‘ಯುದ್ಧದಲ್ಲಿ ನಿನ್ನ ಎದೆಯನ್ನು ಬಗೆದು ರಕ್ತವನ್ನು ಕುಡಿಯದಿದ್ದರೆ ನಾನು ಕುಂತಿಯ ಪುತ್ರನೇ ಅಲ್ಲ’ ಎಂದು ಪ್ರತಿಜ್ಞೆಗೈದನು. ಆಗ ದುರ್ಯೂೕಧನ ತಿರಸ್ಕಾರದಿಂದ ಭೀಮಸೇನನ ನಡಿಗೆಯನ್ನು ಅನುಕರಿಸುತ್ತ ಅಪಹಾಸ್ಯ ಮಾಡಿದನು. ಹೊರನಡೆಯುತ್ತಿದ್ದ ಭೀಮಸೇನ ಹಿಂದೆ ತಿರುಗಿ ‘ಶೀಘ್ರದಲ್ಲಿಯೇ ನಿನ್ನನ್ನೂ ನಿನ್ನ ಅನುಚರರನ್ನೂ ಸಂಹರಿಸದೆ ಬಿಡುವುದಿಲ್ಲ’ ಎಂದು ಪುನಃ ಪ್ರತಿಜ್ಞೆಗೈದನು.

Leave a Reply

Your email address will not be published. Required fields are marked *

Back To Top