ಮಾತೃಭಾಷೆಯಾಗಲಿ ಸಂಸ್ಕೃತ

>
ವಿಜಯವಾಣಿ ಸುದ್ದಿಜಾಲ ಉಡುಪಿ
ಸಂಸ್ಕೃತವನ್ನು ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡಿದರೆ, ಭಾಷೆ ಸರ್ವತ್ರ ವ್ಯಾಪಿಸಲು ಸಾಧ್ಯವಿದೆ. ಮಗುವಿನ ಜತೆಗೆ ತಾಯಿ ಸಂಸ್ಕೃತದಲ್ಲೇ ಮಾತನಾಡುವುದರೆ, ಅದು ಮಾತೃಭಾಷೆಯಾಗಿ ಪರಿವರ್ತನೆಯಾಗುತ್ತದೆ. ಇಂಥ ವಿದ್ವತ್‌ಗೋಷ್ಠಿಗಳು ಇದಕ್ಕೆ ಪೂರಕ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಭಾರತೀಯ ವಿದ್ವತ್ ಪರಿಷತ್ ಹಾಗೂ ತತ್ವ ಸಂಶೋಧನ ಸಂಸತ್ತು ವತಿಯಿಂದ ಮೂರು ದಿನ ನಡೆದ ಅಂತಾರಾಷ್ಟ್ರೀಯ ವಿದ್ವತ್ ಗೋಷ್ಠಿಯ ಸಮಾರೋಪದಲ್ಲಿ ಮಾತನಾಡಿದರು.
ಭಾರತೀಯ ತತ್ವಜ್ಞಾನ, ಸಂಸ್ಕೃತಿ, ಸಂಸ್ಕೃತದ ಪುನರುತ್ಥಾನದಿಂದ ಭಾರತ ವಿಶ್ವಗುರು ಹಾಗೂ ಸಂಸ್ಕೃತ ವಿಶ್ವಭಾಷೆಯಾಗಲಿದೆ. ಕೃಷ್ಣನ ಒಂದು ಕೈಯಲ್ಲಿರುವ ಕಡೆಗೋಲು ಸಂಸ್ಕೃತದ ರಕ್ಷಣೆ ಮತ್ತು ಇನ್ನೊಂದು ಕೈಯಲ್ಲಿರುವ ಪಾಶ ಸಂಸ್ಕೃತಿಯತ್ತ ಆಕರ್ಷಿಸುವ ಪ್ರೇಮ ಪಾಶದ ಸಂಕೇತ ಎಂದರು.
ಕೆನಡಾ ದೇಶದ ಬ್ರಿಟೀಷ್ ಕೊಲಂಬಿಯಾ ವಿವಿ ಪ್ರಾಧ್ಯಾಪಕ ಪ್ರೊ. ಅಶೋಕ ಅಕ್ಲೂಜಕರ ಮಾತನಾಡಿ, ಹಳೆ ವಿದ್ಯಾರ್ಥಿಗಳು ವಿವಿಗಳಲ್ಲಿ ಸಂಸ್ಕೃತ ಶಿಕ್ಷಕರಿಗೆ ಸಂಬಳ ನೀಡಲು ದತ್ತಿನಿಧಿ ಸ್ಥಾಪಿಸಿದರೆ ಮಾತ್ರ ವಿದ್ಯಾರ್ಥಿಗಳ ಕೊರತೆಯಿಂದ ತರಗತಿಗಳನ್ನು ಮುಚ್ಚುವುದನ್ನು ತಡೆಯಬಹುದು ಎಂದರು.
ಕೇರಳ ಚಿನ್ಮಯ ವಿವಿ ಕುಲಪತಿ ಪ್ರೊ. ಗೌರಿ ಮಾಹುಲಿಕರ್, ಹೈದರಾಬಾದ್ ಡಾಸ್ ಯುನಿವರ್ಸಿಟಿಯ ಜೆ.ಎಸ್.ಆರ್.ಪ್ರಸಾದ್, ಹೈದರಾಬಾದ್‌ನ ಇಂಡಿಕ್ ಸಂಸ್ಥೆಯ ಪ್ರೊ.ನಾಗರಾಜ್ ಪಟೂರಿ, ಕೊರಡ ಸುಬ್ರಹ್ಮಣ್ಯಂ, ಹಿರಿಯ ವಿದ್ವಾಂಸ ಲಕ್ಷ್ಮೀತಾತಾಚಾರ್, ಭಾರತೀಯ ವಿದ್ವತ್ ಪರಿಷತ್ ಅಧ್ಯಕ್ಷ ಹಾಗೂ ಸಂಸ್ಕೃತ ವಿವಿ ನಿರ್ದೇಶಕ ಡಾ. ವೀರನಾರಾಯಣ ಪಾಂಡುರಂಗಿ, ತತ್ವ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವಂಶಿಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಸಂಸ್ಕೃತ ವ್ಯಾವಹಾರಿಕ ಭಾಷೆ: ಸಮಾರೋಪ ಭಾಷಣ ಮಾಡಿದ ನಾಗಪುರ ಕಾಳಿದಾಸ ಸಂಸ್ಕೃತ ವಿವಿ ಕುಲಪತಿ ಪ್ರೊ.ಶ್ರೀನಿವಾಸ ಮರಖೇಡಿ, ಸಂಸ್ಕೃತ ಶಾಸ್ತ್ರೀಯ ಭಾಷೆಯಲ್ಲ. ಈಗಲೂ ಸಂಸ್ಕೃತದಲ್ಲಿ ಮಾತನಾಡುವವರು, ಕೃತಿಗಳನ್ನು ಬೆರೆಯುವವರು ಇರುವುದರಿಂದ ಅದೊಂದು ಸಹಜ ಮತ್ತು ವ್ಯಾವಹಾರಿಕ ಭಾಷೆ. ಯಾವ ಲಿಪಿ ಪುಸ್ತಕದಲ್ಲಿ ಮಾತ್ರ ಜೀವಿಸುತ್ತಿದೆಯೋ ಅದು ಶಾಸ್ತ್ರೀಯ ಭಾಷೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಇದಕ್ಕೆ ಉದಾಹರಿಸಬಹುದು ಎಂದರು.

ಸಮ್ಮೇಳನ ನಿರ್ಣಯಗಳು: ಭಾರತದ ಸಂಸ್ಕೃತಿ ಮತ್ತು ಇತಿಹಾಸ ಅಧ್ಯಯನಕ್ಕೆ ಎಲ್ಲ ವಿವಿಗಳಲ್ಲಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ, ವಿದೇಶಗಳಲ್ಲಿರುವ ತಾಳೆಗರಿ ಹಸ್ತಪ್ರತಿಗಳ ನಕಲು ಪ್ರತಿಗಳನ್ನು ಪಡೆಯಲು ವಿದೇಶಾಂಗ ಇಲಾಖೆ ಸಹಕರಿಸಬೇಕು, ದೇಶದ ಅನೇಕ ಗ್ರಂಥಾಲಯಗಳಲ್ಲಿ ಸಂಗ್ರಹಿಸಿರುವ ತಾಳೆಗರಿಗಳನ್ನು ಅಧ್ಯಯನಕ್ಕಾಗಿ ನೀಡಬೇಕು, ಮೈಸೂರು ವಿವಿ ಅಧೀನದಲ್ಲಿರುವ ಓರಿಯಂಟಲ್ ರಿಸರ್ಚ್ ಸೆಂಟರನ್ನು ಕರ್ನಾಟಕ ಸಂಸ್ಕೃತ ವಿವಿ ವ್ಯಾಪ್ತಿಗೆ ಸೇರಿಸಬೇಕು ಎಂಬುದು ಸಮ್ಮೇಳನದ ಪ್ರಮುಖ 4 ನಿರ್ಣಯಗಳು.

ರಹಸ್ಯ ಸಂದೇಶ ಸೂತ್ರ!: ಮೂಡುಬಿದ್ರೆಯ ಜೈನ ಬಸದಿಯಲ್ಲಿರುವ ಶ್ರೀ, ಭೂ, ವಲಯ ಮ್ಯಾಟ್ರಿಕ್ಸ್ ಕಾಂಸೆಪ್ಟ್ ಮತ್ತು ವೇದಾಂತ ದೇಶಿಕೇಂದ್ರ ರಚಿಸಿದ ಪಾದುಕಾ ಸಹಸ್ರ ಗ್ರಂಥದ ಬಂಧಿಗಳು, ಏಕಾಕ್ಷರ ಕೋಶದಿಂದ 1 ಪದವನ್ನು 1 ಅಕ್ಷರದಿಂದ ತಿಳಿಸುವ ಸೂತ್ರಗಳನ್ನು ಸಂಗ್ರಹಿಸಿ ದೇಶದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಗೆ ನೀಡಿದ್ದೇನೆ. ಡಿಆರ್‌ಡಿಒ ಈಗಲೂ ಸೇನೆಗೆ ರಹಸ್ಯ ಸಂದೇಶಗಳನ್ನು ಕಳುಹಿಸಲು ಉಪಯೋಗಿಸುತ್ತಿದೆ. ಇದು ಅತ್ಯಂತ ಸುರಕ್ಷಿತ. ಇಂಥ ಅನೇಕ ಜ್ಞಾನಗಳು ನಮ್ಮಲ್ಲಿ ಇವೆ. ಅದನ್ನು ಬಳಸಿಕೊಳ್ಳಬೇಕಿದೆ ಎಂದು ಮೇಲುಕೋಟೆಯ ಹಿರಿಯ ವಿದ್ವಾಂಸ ಲಕ್ಷ್ಮೀ ತಾತಾಚಾರ್ಯ ವಿಜಯವಾಣಿಗೆ ತಿಳಿಸಿದರು.