More

    ಉತ್ತರಾಖಂಡ ರೈಲ್ವೆ ನಿಲ್ದಾಣಗಳಲ್ಲಿ ಗೋಚರಿಸಲಿವೆ ಉರ್ದು ಬದಲು ಸಂಸ್ಕೃತದ ನಾಮಫಲಕಗಳು

    ಡೆಹ್ರಾಡೂನ್: ಉತ್ತರಾಖಂಡದ ರೈಲ್ವೆ ನಿಲ್ದಾಣಗಳಲ್ಲಿ ಭವಿಷ್ಯದಲ್ಲಿ ಉರ್ದು ಭಾಷೆಯ ನಾಮಫಲಕಗಳ ಬದಲು ಸಂಸ್ಕೃತ ಭಾಷೆಯ ನಾಮಫಲಕಗಳು ಗೋಚರಿಸಲಿವೆ. ಈ ಸಂಬಂಧ ರೈಲ್ವೆ ಸಚಿವಾಲಯವು ನಿರ್ಧಾರ ತೆಗೆದುಕೊಂಡಿದೆ. ಪರಿಣಾಮ, ಉತ್ತರಾಖಂಡದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಇನ್ನು ನಾಮಫಲಕಗಳು ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಗೋಚರಿಸಲಿವೆ.

    ಸಂಸ್ಕೃತವನ್ನು ಉತ್ತೇಜಿಸುವ ಸಲುವಾಗಿ ರಮೇಶ್ ಪೋಖ್ರಿಯಾಲ್ ನಿಶಂಕ್ ರಾಜ್ಯದಲ್ಲಿ ಈ ಹಿಂದೆ ಕ್ರಮ ತೆಗೆದುಕೊಂಡಿದ್ದರು. ಇದನ್ನು 2019ರಲ್ಲಿ ಹಿಮಾಚಲ ಪ್ರದೇಶ ಅನುಸರಿಸಿದೆ. ಈಗ ರೈಲ್ವೆ ಸಚಿವಾಲಯ ಈ ಕೆಲಸ ಮುಂದುವರಿಸಿದ್ದು, ಪ್ಲಾಟ್​ಫಾರಂಗಳಲ್ಲಿ ಇರುವ ಉರ್ದು ಭಾಷೆಯ ಫಲಕಗಳನ್ನು ಸಂಸ್ಕೃತ ಭಾಷೆಯ ಫಲಕದೊಂದಿಗೆ ಬದಲಾಯಿಸಲು ನಿರ್ಣಯ ತೆಗೆದುಕೊಂಡಿದೆ. ಸ್ಥಳೀಯ ನಾಯಕರೊಬ್ಬರು ಸರ್ಕಾರಕ್ಕೆ ನೆನಪಿನೋಲೆ ಕಳುಹಿಸಿದ ಬಳಿಕ ಮೊರಾದಾಬಾದ್ ರೈಲ್ವೆ ವಿಭಾಗದಲ್ಲಿ ಈ ನಿರ್ಣಯ ಜಾರಿಯಾಗಿದೆ.

    ರೈಲ್ವೆ ಮಾರ್ಗದರ್ಶಿ ನಿಯಮ ಪ್ರಕಾರವೇ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಂತೆ, ಹಿಂದಿ, ಇಂಗ್ಲಿಷ್ ಮತ್ತು ರಾಜ್ಯದಲ್ಲಿರುವ ಎರಡನೇ ಭಾಷೆಯನ್ನು ನಾಮಫಲಕಗಳಲ್ಲಿ ಅಳವಡಿಸುವುದಕ್ಕೆ ಅವಕಾಶವಿದೆ. ಉತ್ತರಾಖಂಡ ರಾಜ್ಯ ರಚನೆಗೂ ಮೊದಲು ಉತ್ತರ ಪ್ರದೇಶದ ಭಾಗವಾದ ಕಾರಣ ಇಲ್ಲೂ ಉರ್ದು ಭಾಷೆಯಲ್ಲಿ ಫಲಕ ಅಳವಡಿಸುವ ಸೂಚನೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ.

    ಉತ್ತರಾಖಂಡ ಸರ್ಕಾರ 2010ರಲ್ಲಿ ಸಂಸ್ಕೃತಕ್ಕೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿದೆ. ಈ ರೀತಿ ಮಾಡಿದ ಮೊದಲ ರಾಜ್ಯ ಎಂಬ ಕೀರ್ತಿಗೂ ಅದು ಭಾಜನವಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts