ಅರಕಲಗೂಡು: ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಗೆ ಅನೇಕ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ರುದ್ರಪಟ್ಟಣ ನೆಲದ ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅರ್ಥೈಸಿಕೊಳ್ಳಲು ಸಂಸ್ಕಾರ ಬೇಕು ಎಂದು ವಿದ್ವಾನ್ ಆರ್.ಕೆ. ಪದ್ಮನಾಭ ನುಡಿದರು.
ತಾಲೂಕಿನ ರುದ್ರಪಟ್ಟಣದ ರಾಮ ಮಂದಿರದಲ್ಲಿ ಭಾರತೀಯ ಪ್ರವಾಸೋದ್ಯಮ ಇಲಾಖೆ, ಸಂಸ್ಕೃತಿ ಸಚಿವಾಲಯ, ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕೊಳಲು ವಾದನ ಕಾರ್ಯಕ್ರಮದಲ್ಲಿ ಮಾತನಾಡಿ, ರುದ್ರಪಟ್ಟಣ ನೆಲದ ಪ್ರತಿಕಣದಲ್ಲೂ ಶಾಸ್ತ್ರೀಯ ಸಂಗೀತ ಪರಂಪರೆ ಉಸಿರಿದ್ದು ಈ ಪವಿತ್ರ ಜಾಗದಲ್ಲಿ ಚೌಡಯ್ಯ, ಕೃಷ್ಣಮೂರ್ತಿ ಭಾಗವತ ಸೇರಿದಂತೆ ದಕ್ಷಿಣ ಭಾರತದ ಅನೇಕ ದಿಗ್ಗಜರು ಸಂಗೀತ ಪ್ರಾಕಾರಗಳನ್ನು ನುಡಿಸಿದ್ದಾರೆ ಎಂದು ತಿಳಿಸಿದರು.
ಭಾರತೀಯ ಪ್ರವಾಸೋದ್ಯಮ ಇಲಾಖೆ ಕೊಳಲು ವಾದನ ಕವೇರಿಗೆ ಅವಕಾಶ ನೀಡಿರುವುದು ಪುಣ್ಯದ ಕಾರ್ಯವಾಗಿದೆ. ವಿಶ್ವ ವಿಖ್ಯಾತಿ ಗಳಿಸಿರುವ ಅಮಿತ್ ನಾಡಿಗ್ ಅವರ ಕೊಳಲು ವಾದನ ಸಂಗೀತಕ್ಕೆ ಬೆಲೆ ಕಟ್ಟಲಾಗದು. ಶೃತಿ ಮತ್ತು ಧ್ವನಿ ಧ್ವೈತ ಭಾವದಲ್ಲಿ ವಾದ್ಯದ ಮೇಲೆ ಹತೋಟಿ ಸಾಧಿಸಿ ಹಿತಮಿತವಾಗಿ ಮದ್ರಾಸಿನ ಮ್ಯೂಸಿಯಂ ಅಕಾಡೆಮಿಯಲ್ಲಿ ನುಡಿಸಿದಂತೆ ಒಂದು ಕಾಲು ತಾಸು ನುಡಿಸಿ ತಮ್ಮ ಸುಜ್ಞಾನವನ್ನು ಧಾರೆ ಎರೆದು ಭಕ್ತಿಪೂರ್ವಕವಾಗಿ ಶ್ರೀರಾಮನಿಗೆ ಅರ್ಪಣೆ ಮಾಡಿದ್ದಾರೆ. ಸಮಕಾಲಿನರಲ್ಲಿ ಶ್ರೇಷ್ಠ ಕಲಾವಿದರಾದ ಇವರ ಸಂಗೀತ ಪಯಣ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.
ವಿದ್ವಾನ್ ಅಮಿತ್ ನಾಡಿಗ್ ಮಾತನಾಡಿ, ಸಂಗೀತ ಕಲೆಗೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಇದೆ. ಪ್ರತಿವರ್ಷ ಇಲ್ಲಿ ಅನೇಕ ವಿದ್ವಾಂಸರನ್ನು ಕರೆಸಿ ಸಂಗೀತೋತ್ಸವ ಹಮ್ಮಿಕೊಂಡು ಎಲ್ಲರಿಗೂ ಸಂಗೀತ ಅನುಭವಿಸುವ, ಕೇಳುವ ಸದಾವಕಾಶ ಮಾಡಿಕೊಡುತ್ತಿರುವ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಶ್ರಮ ಪ್ರಶಂಸನೀಯ ಎಂದರು.
ಭಾರತೀಯ ಪ್ರವಾಸೋದ್ಯಮ ಇಲಾಖೆ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶನ್ ದತ್ತಾತ್ರೇಯ ಅವರು ಕೊಳಲು ವಾದನ ಕಛೇರಿ ನಡೆಸಿಕೊಟ್ಟ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ, ಮೈಸೂರಿನಲ್ಲಿ ನ. 8ರಿಂದ 10 ವರೆಗೆ ಆಯೋಜಿಸಿರುವ ಮೈಸೂರು ಸಂಗೀತ ಸುಗಂಧ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಪೂರ್ವಭಾವಿಯಾಗಿ ಕೊಳಲು ವಾದನ ಆಯೋಜಿಸಲಾಗಿದೆ ಎಂದು ತಿಳಿಸಿದರು.