ಲಂಡನ್​ನಲ್ಲಿ ನಾಪತ್ತೆಯಾದ ಬಿಜೆಪಿ ಅಧ್ಯಕ್ಷನ ಮಗ; ಬೀಚ್​ ಬಳಿ ಸಿಕ್ಕ ಮೊಬೈಲ್​ನಲ್ಲಿ ಇದ್ದ ಮೆಸೇಜ್​ ಇದು…

ತೆಲಂಗಾಣ: ಖಮ್ಮಮ್​ ಮೂಲದ 23 ವರ್ಷದ ಯುವಕ ಲಂಡನ್​ನಲ್ಲಿ ನಾಪತ್ತೆಯಾಗಿದ್ದಾರೆ. ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆ ಯುವಕನ್ನು ಹುಡುಕಲು ಪ್ರಾರಂಭಿಸಿದ್ದಾರೆ.

ಖಮ್ಮಮ್​ ಬಿಜೆಪಿ ಅಧ್ಯಕ್ಷ ಸನ್ನೆ ಉದಯ ಪ್ರತಾಪ್​ ಅವರ ಪುತ್ರ ಸನ್ನೆ ಹರ್ಷ (23) 2018ರಿಂದ ಲಂಡನ್​ನ ಮೇರಿ ಲ್ಯಾಂಡ್​ ವಿಶ್ವವಿದ್ಯಾಲಯದಲ್ಲಿ ಎಂಎಸ್​ ಓದುತ್ತಿದ್ದಾರೆ. ಮೂರು ದಿನಗಳಿಂದ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಲ್ಲದೆ, ಹರ್ಷ ಯೂನಿವರ್ಸಿಟಿಗೂ ಹೋಗುತ್ತಿಲ್ಲದ ಕಾರಣ ಆತ ನಾಪತ್ತೆಯಾಗಿದ್ದಾನೆಂದು ಅಲ್ಲಿನ ವಿವಿ ಆಡಳಿತ ಮಂಡಳಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಹರ್ಷನ ಪಾಲಕರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.

ಹರ್ಷನ ಬ್ಯಾಗ್​, ಸೆಲ್​ಫೋನ್​ಗಳು ನಗರದ ಬೀಚ್​ ಬಳಿ ಸಿಕ್ಕಿವೆ. ಆತನ ಮೊಬೈಲ್​ನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ನನಗೆ ಸಂಬಂಧಪಟ್ಟ ವಸ್ತುಗಳನ್ನೆಲ್ಲ ನನ್ನ ಪಾಲಕರಿಗೆ ತಲುಪಿಸಿಬಿಡಿ ಎಂದು ಮೆಸೇಜ್​ ಬರೆದಿಟ್ಟಿದ್ದು ಕಂಡುಬಂದಿದೆ ಎಂದು ಲಂಡನ್​ ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿ.ಕಿಶನ್​ ರೆಡ್ಡಿಯವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್​ನೊಂದಿಗೆ ಚರ್ಚಿಸಿದ್ದಾರೆ. ಹರ್ಷ ಅವರನ್ನು ಹುಡುಕಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಬಿಜೆಪಿ ತೆಲಂಗಾಣ ಮುಖಂಡ ಕೊಂಡಪಲ್ಲಿ ಶ್ರೀಧರ್​ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *