ಮುಂಡರಗಿ: ಬಸವಾದಿ ಶರಣರು ಸರಳ ಹಾಗೂ ಅತ್ಯದ್ಭುತ ವಿಚಾರಗಳನ್ನೊಳಗೊಂಡ ವಚನಗಳನ್ನು ರಚಿಸಿದ್ದು, ಅವುಗಳ ಅಧ್ಯಯನ ಮಾಡುವ ಮೂಲಕ ಬದುಕಿನಲ್ಲಿ ಸನ್ಮಾರ್ಗ ಕಂಡುಕೊಳ್ಳಬೇಕು ಎಂದು ವೈದ್ಯ ಡಾ. ಅನ್ನದಾನಿ ಮೇಟಿ ಹೇಳಿದರು.
ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಸಾಪ, ಶಸಾಪ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶರಣ ಚಿಂತನ’ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಎನ್ನುವುದು ಪಂಡಿತರ ಸೊತ್ತಾಗಿದ್ದು, ಸಂಸ್ಕೃತ ಸಾಹಿತ್ಯವು ವ್ಯಾಕರಣ, ಅಲಂಕಾರ, ಛಂದಸ್ಸುಗಳನ್ನು ಒಳಗೊಂಡಿದ್ದು, ಜನಸಾಮಾನ್ಯರಿಗೆ ನಿಲುಕದ ಸಾಹಿತ್ಯವಾಗಿತ್ತು. ನೂರೆಂಟು ಹೆಸರಿನ ದೇವತೆಗಳು ದೇವಸ್ಥಾನಗಳಲ್ಲಿ ವಿಗ್ರಹ ರೂಪದಲ್ಲಿ ವಾಸವಾಗಿ ಬೆಳ್ಳಿ ಬಂಗಾರಗಳನ್ನು ಧರಿಸಿ ಭದ್ರ ಬೀಗ ಹಾಕಿಸಿಕೊಂಡು ಮೆರೆಯುತ್ತಿದ್ದ ಕಾಲದಲ್ಲಿ ದೇವರನ್ನು ಅಂಗೈಯಲ್ಲಿ ತಂದು ಏಕದೇವೋಪಾಸನೆಗೆ ದಾರಿ ತೋರಿದವರು ಬಸವಾದಿ ಶಿವ ಶರಣರಾಗಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಎಂ.ಎಸ್. ಹೊಟ್ಟಿನ್ ಮಾತನಾಡಿ, ‘ಅಂಬಿಗರ ಚೌಡಯ್ಯನವರು ರಚಿಸಿದ ವಚನಗಳು ಸಮಾಜದ ವಿಡಂಬನಾತ್ಮಕ ನಡವಳಿಕೆಗಳ ಓರೆ ಕೋರೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅವುಗಳು ಸಮಾಜವನ್ನು ತಿದ್ದುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀಣಾ ಪಾಟೀಲ ಮಾತನಾಡಿ, ಸಮಾಜದ ಕೆಳ ವರ್ಗದವರ ಅಸಹಾಯಕತೆ, ಬಡತನ, ಕೀಳರಿಮೆಗಳು ಆತನಲ್ಲಿ ಉಂಟು ಮಾಡುವ ನೋವಿನಿಂದಲೇ ಅವರು ನಿಷ್ಟುರ ಮತ್ತು ನಿರ್ಭೀತ ವಚನಕಾರರಾದರು ಎಂದರು.
ಪಾಲಾಕ್ಷಿ ಗಣದಿನ್ನಿ ಮಾತನಾಡಿದರು. ಕಾವೇರಿ ಬೋಲಾ, ಸುವರ್ಣ ಸುತಾರ್, ಲಕ್ಷ್ಮಿದೇವಿ ಗುಬ್ಬಿ, ಪಾರ್ವತಿ ಕುಬಸದ, ತೇಜಸ್ವಿನಿ ಹೊಸಪೇಟಿ, ಮಧುಮತಿ ಇಳಕಲ್, ಶೋಭಾ ಹೊಟ್ಟಿನ್, ಡಾ.ನಿಂಗು ಸೊಲಗಿ, ವಿ.ಎಫ್. ಗುಡ್ಡದಪ್ಪವರ, ವಿ.ಸಿ. ಅಲ್ಲಿಪುರ, ಲಿಂಗರಾಜ ದಾವಣಗೆರೆ, ಸಂಗಣ್ಣ ಲಿಂಬಿಕಾಯಿ, ಡಾ.ಸಂತೋಷ ಹಿರೇಮಠ, ಮಂಜುನಾಥ ಆಳವಂಡಿ, ಆರ್.ಎಂ. ಕುಲಕರ್ಣಿ, ನಿಂಗಪ್ಪ ಬಡಿಗೇರ, ಕೊಟ್ರೇಶ ಜವಳಿ, ಎಂ.ಐ. ಮುಲ್ಲಾ, ಕೃಷ್ಣ ಸಾಹುಕಾರ, ಮಲ್ಲಿಕಾರ್ಜುನ ಬಾರಕೇರ, ಇತರರು ಉಪಸ್ಥಿತರಿದ್ದರು. ಕಸಾಪ ಸದಸ್ಯ ಆರ್.ವೈ. ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹಾಗೂ ಶಸಾಪ ತಾಲೂಕಾಧ್ಯಕ್ಷ ಆರ್.ಎಲ್. ಪೋಲೀಸ್ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.