More

    ಸಂಕ್ರಾಂತಿ ವಿಶೇಷ|ಆರೋಗ್ಯವರ್ಧನೆಯ ಹಬ್ಬ ಸಂಕ್ರಾಂತಿ

    ಸಂಕ್ರಾಂತಿ ವಿಶೇಷ|ಆರೋಗ್ಯವರ್ಧನೆಯ ಹಬ್ಬ ಸಂಕ್ರಾಂತಿಸಂಭ್ರಮದ ಸಂಕ್ರಾಂತಿ ಬಂತು. ಭಾರತೀಯ ಹಬ್ಬ- ಹರಿದಿನಗಳಲ್ಲೊಂದು ಮುಖ್ಯವಾದ ಪರ್ವ. ಈ ಹಬ್ಬದ ಆಚರಣೆ ಪ್ರವೃತ್ತಿ-ನಿವೃತ್ತಿಗಳ ಸಮತೋಲನದಲ್ಲಿ ಭಗವಂತನೆಡೆಗೆ ನಮ್ಮನ್ನು ಸಾಗಿಸುವ ಮಹಾಪರ್ವ. ಜ್ಞಾನ ಮಾರ್ಗ ಸಂಚಾಲಕರಿಗೆ ಬಹುಪ್ರಿಯವಾದ ಕಾಲ. ಜ್ಞಾನ ಪ್ರಕಾಶವು ಸಹಜವಾಗಿಯೇ ಕಾಣಬರುವ ಕಾಲ. ದೇಹದ ಒಳಗೂ, ಹೊರಗೂ ಉತ್ತರಾಯಣವಾಗುವ ಸಂದರ್ಭ. ಸಂಕ್ರಾಂತಿಯ ಕಾಲಘಟ್ಟವು ದೈಹಿಕವಾಗಿ, ಭೌಗೋಳಿಕವಾಗಿ ಹಲವಾರು ಮುಖ್ಯ ಬದಲಾವಣೆಗಳಾಗುವ ಪ್ರಮುಖ ಋತುಕಾಲ. ಸೂರ್ಯನ ದಿಕ್ಕು , ಆರೋಗ್ಯದ ದಿಕ್ಕು ಬದಲಾಗುವ ಸಮಯ. ಸಂಕ್ರಾಂತಿ ಪರ್ವಕಾಲದ ಆಚರಣೆಗಳನ್ನು ಗಮನಿಸಿದಾಗ ಆರೋಗ್ಯದ ದೃಷ್ಟಿಕೋನದಲ್ಲಿ ಹೆಣೆಯಲಾಗಿದೆ ಎಂಬುದನ್ನು ಅರಿಯಬಹುದು.

    ಭಾರತೀಯ ಹಬ್ಬದ ಕ್ರಮಾಚರಣೆಗಳು ದೇಹ, ಇಂದ್ರಿಯ ಹಾಗೂ ಮನಸ್ಸುಗಳ ಆರೋಗ್ಯ ಕಾಪಾಡಿ ದೇಹದಲ್ಲಿ ಹವಾಮಾನದಿಂದಾಗಬಹುದಾದ ವೈಪರೀತ್ಯಗಳನ್ನು ತಡೆಗಟ್ಟುವುದಲ್ಲದೆ ದೇಹದಲ್ಲಿನ ಅತೀ ಮುಖ್ಯ ಕ್ರಿಯಾಕಲಾಪಗಳು ಸರಾಗವಾಗಿ ನಡೆದು ಸ್ವಾಸ್ಥ್ಯ ಪಾಲನೆಗೆ ಸಹಾಯ ಮಾಡುತ್ತವೆ. ಆಚರಣೆಗಳೆಲ್ಲವೂ ದೇಹವೆಂಬ ಕಟ್ಟಡದ ಅಡಿಪಾಯವಾಗಿವೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಹೇಮಂತ ಋತುವಿನಿಂದ ಶಿಶಿರ ಋತುವಿಗೆ ಬದಲಾಗುವ ಸಂಧಿಕಾಲವಿದು. ಈ ದಿನ ಗೋವು-ಪೂಜೆ, ಎಳ್ಳು-ಬೆಲ್ಲ ಹಂಚುವುದು, ಸಹಭೋಜನ, ಪಶುಪಕ್ಷಿಗಳಿಗೆ ಆಹಾರ ನೀಡುವುದು, ಒಳ್ಳೆಯ ಮಾತನಾಡುವುದು, ಶಿಶುಗಳಿಗೆ ವಿಶೇಷವಾಗಿ ಎಳ್ಳು-ಎಲಚಿಹಣ್ಣು (ಬೋರೆಹಣ್ಣು) ತಲೆಯಮೇಲೆ ಸುರಿದು ಸ್ನಾನ ಮಾಡಿಸುವುದು, ಮಕ್ಕಳಿಗೆ ಆರತಿ, ಗುರುಸೇವೆಗಳೆಲ್ಲವೂ ಆನಂದ ತಂದುಕೊಡುವ ಆಚರಣೆ. ‘ವಸುಧೈವ ಕುಟುಂಬಕಂ’ ಎಂಬ ಋಷಿವಾಣಿಯನ್ನು ಎತ್ತಿಹಿಡಿಯುವ ಯುಗಾಂತರ ಸಂಪ್ರದಾಯ.

    ಹೇಮಂತಋತುವಿನ ಹಿಮದ ವಾತಾವರಣ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿನ ವೇಗದಲ್ಲಿಟ್ಟಿದ್ದು, ನಮ್ಮ ಹಸಿವು ಹಾಗೂ ಜೀರ್ಣಕ್ರಿಯೆಗಳು ಅತಿಕ್ಲಿಷ್ಟವಾದ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಸುಲಭವಾಗಿ ಅರಗಿಸುವ ಶಕ್ತಿಹೊಂದಿರುತ್ತದೆ. ಹೇಮಂತ ಋತು ದೇಹಕ್ಕೆ ಸಹಜವಾಗಿಯೇ ಒಲವನ್ನು ನೀಡುವ ಋತುಗಳಲ್ಲಿ ಒಂದು. ಈ ಕಾಲದಲ್ಲಿ ಉತ್ತಮ ಪೌಷ್ಟಿಕಾಂಶಗಳಿರುವ ರಸವತ್ತಾದ ಆಹಾರ ಸೇವಿಸುವುದು ಮುಖ್ಯ. ಶಿಶಿರ ಋತುವಿನಲ್ಲಿ ಹೇಮಂತದ ಶೀತವು ಇನ್ನೂ ಹೆಚ್ಚಾಗಿ ಚಳಿಗಾಳಿಯಿಂದ ಚರ್ಮ ಒಣಗಿ ದೇಹ ಬಲಹೀನವಾಗಲು ಕಾರಣವಾಗುತ್ತದೆ. ಹಾಗಾಗಿ ಎಣ್ಣೆಯ ಅಂಶವಿರುವ ಎಳ್ಳು, ಸಿಹಿಯಾದ ಬೆಲ್ಲ, ಪೌಷ್ಟಿಕವಾದ ಕಡ್ಲೆಕಾಯಿ ಬೀಜ, ಸಕ್ಕರೆ, ಕಬ್ಬು, ಸಿಹಿಗೆಣಸು ಆಹಾರದಲ್ಲಿ ಬಳಸಬೇಕು. ಈ ಹಿಂದೆ ಶರತ್​ಕಾಲ, ಹೇಮಂತಕಾಲದಲ್ಲಿ ಉಂಟಾಗಿರಬಹುದಾದ ಚರ್ಮವ್ಯಾಧಿಗಳು, ಅಸ್ತಮ, ಕೀಲುನೋವುಗಳು, ಜ್ವರ (Infectious Fevers), ತಲೆನೋವು (Migraine), ಸರ್ಪಸುತ್ತು (Herpes), ದದ್ರ (Urticaria), ನಾವು ಸೇವಿಸುವ ಪ್ರಸಾದ ರೂಪವಾದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳಿಂದ ನಿವಾರಣೆಯಾಗುವವು. ಸಂಕ್ರಾಂತಿಯಂದು ತಯಾರಿಸಿ ನೈವೇದ್ಯ ಮಾಡಿ ಸೇವಿಸುವ ಹೆಸರುಬೇಳೆ ಹುಗ್ಗಿಯೂ ವಾತಪಿತ್ತಗಳನ್ನು ಹತೋಟಿಗೆ ತರುತ್ತದೆ.

    ಉತ್ತರ ಎಂದರೆ ಶ್ರೇಷ್ಠವಾದದ್ದು ಎಂಬರ್ಥವುಂಟು. ಇದು ಜ್ಞಾನಮಾರ್ಗಕ್ಕೆ, ಜಪ, ತಪ, ಧ್ಯಾನ, ದೀಕ್ಷೆ, ತರ್ಪಣ, ಪೂಜೆ, ಹೋಮ, ಶ್ರಾದ್ಧ ಕೆಲಸಗಳಿಗೆ ಉತ್ತಮಕಾಲ. ಸಂಕ್ರಾಂತಿಯಲ್ಲಿ ಎಳ್ಳೆಣ್ಣೆ ಅಭ್ಯಂಗಸ್ನಾನ, ಮೂರ್ಧತೈಲ (ನೆತ್ತಿಯ ಮೇಲೆ ಎಣ್ಣೆ ಸುರಿದುಕೊಳ್ಳುವ ಸ್ನಾನ), ಕುಸ್ತಿ ಆಟವಾಡುವುದು, ಪಾದಾಘಾತ (ಪಾದಗಳಿಂದ ತುಳಿದು ಅಂಗ ಮರ್ದನ ವಿಧಾನ) ಇವುಗಳೆಲ್ಲವೂ ದೇಹದ ವಾತದೋಷ ನಿವಾರಿಸಿ, ಬಲನೀಡುತ್ತವೆ. ಅಭ್ಯಂಜನದ ನಂತರ ಅಂಟ್ವಾಳ, ಬೋರೆಹಣ್ಣು, ಔದುಂಬರ (ಅತ್ತಿಮರ)ದ ತೊಗಟೆಯಿಂದ ತಯಾರಿಸಿದ ಕಷಾಯಸ್ನಾನ ಮಾಡಿ, ನಂತರ ಕುಂಕುಮಕೇಸರ, ಅಗರು (ಧೂಪದಮರ,) ಕಸ್ತೂರಿಗಳ ಅಂಗಲೇಪನ ಮಾಡಿಕೊಳ್ಳಬೇಕು. ಸ್ನಾನಲೇಪನಗಳ ನಂತರ ಗೋಧಿ, ಉದ್ದು, ಕಬ್ಬು, ಹಾಲು, ಜೋಳ, ಎಣ್ಣೆ ಇತ್ಯಾದಿ ಪದಾರ್ಥಗಳಿಂದ ತಯಾರಿಸಿದ ಆಹಾರ ಇಡೀ ಋತುವಿನಲ್ಲಿ ಸೇವಿಸಬೇಕು. ಎಳ್ಳು ಹಾಗೂ ಬೆಲ್ಲ, ಉಷ್ಣ ಪದಾರ್ಥಗಳಾಗಿದ್ದು ಚಳಿಗಾಲದ ಶೀತಕ್ಕೆ ಔಷಧಗಳಾಗಿವೆ. ಹಾಲು, ಉದ್ದು, ತೈಲ, ಕಬ್ಬು, ಧಾನ್ಯಗಳು, ಸಿಹಿಗೆಣಸು, ಕಡಲೇಕಾಯಿಬೀಜ ಇವುಗಳೆಲ್ಲವೂ ದೇಹಕ್ಕೆ ಪುಷ್ಟಿ ನೀಡುವ ಹಾಗೂ ಹಸಿವನ್ನು ತಣಿಸುವ ಪದಾರ್ಥಗಳು.

    ಪ್ರತ್ಯೇಕವಾಗಿ ಎಳ್ಳನ್ನು ಹೆಚ್ಚು ಸೇವಿಸಿದಾಗ ಮನಸ್ಸಿನ ಪ್ರವೃತ್ತಿ ಹೆಚ್ಚಾಗುತ್ತದೆ, ಕಫ ಹಾಗೂ ಪಿತ್ತಗಳು ಕೆರಳುತ್ತವೆ. ಹಾಗಾಗಿ ಎಳ್ಳನ್ನು ಹುರಿದು ಅದಕ್ಕೆ ಬೆಲ್ಲ, ಕೊಬ್ಬರಿಚೂರು, ಹುರಿದ ಕಡಲೇಬೀಜ, ಹುರಿಕಡಲೆ ಇವುಗಳನ್ನು ಸೇರಿಸಿ ಸೇವನೆ ಮಾಡಬೇಕೆಂದು ಋಷಿಗಳು ತಿಳಿಸಿ ಕೊಟ್ಟಿರುವ ವಿಷಯ.

    (ಲೇಖಕರು ಆಯುರ್ವೆದ ವೈದ್ಯರು, ಆಧ್ಯಾತ್ಮಿಕ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts